ಪಂಜಾಬ್‌ನ ಭಟಿಂಡಾದಲ್ಲಿರುವ ಭಾರತೀಯ ಸೇನಾ ನೆಲೆ ಮೇಲೆ ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳು ದಾಳಿ ನಡೆಸಿ ನಾಲ್ವರು ಯೋಧರನ್ನು ಬರ್ಬರವಾಗಿ ಕೊಂದುಹಾಕಿರುವ ಘಟನೆ ಕಳವಳಕಾರಿಯಾಗಿದೆ. ಬಲಿಯಾದ ನಾಲ್ವರು ಯೋಧರಲ್ಲಿ ಇಬ್ಬರು ಕರ್ನಾಟಕದವರೇ ಆಗಿದ್ದಾರೆ. ಜಮ್ಮು-ಕಾಶ್ಮೀರದ ಬಳಿಕ ಪಂಜಾಬ್ ಭಯೋತ್ಪಾದಕರ ಆಡುಂಬೊಲವಾಗುವ ಸೂಚನೆಗಳನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ.
ಜಮ್ಮು- ಕಾಶ್ಮೀರದಲ್ಲಿದ್ದ ಆರ್ಟಿಕಲ್ 370ನ್ನು ಹಿಂತೆಗೆದುಕೊಂಡು, ಅದನ್ನು ಕೇಂದ್ರಾಡಳಿತ ಪ್ರದೇಶವಾಗಿಸಿ, ಅಲ್ಲಿ ಕಠಿಣವಾದ ಮಿಲಿಟರಿ ನಿಗಾ ಇಟ್ಟ ಬಳಿಕ ಪ್ರತ್ಯೇಕತಾವಾದಿ ಉಗ್ರರ ದಾಳಿಗಳು ಬಹುಪಾಲಿಗೆ ಕಡಿಮೆಯಾಗಿವೆ. ಇಲ್ಲಿ ತನ್ನ ಆಟ ನಡೆಯುವುದಿಲ್ಲ ಎಂದು ಗೊತ್ತಾದ ಬಳಿಕ ಪಕ್ಕದ ದೇಶ ಪಾಕಿಸ್ತಾನ ತನ್ನ ದೃಷ್ಟಿಯನ್ನು ಪಕ್ಕದ ಪಂಜಾಬ್‌ನತ್ತ ನೆಟ್ಟಿದೆ. ಪಾಕಿಸ್ತಾನದ ಜತೆ ಪಂಜಾಬ್ ಸುಮಾರು 425 ಕಿಲೋಮೀಟರ್ ಗಡಿಯನ್ನು ಹಂಚಿಕೊಂಡಿದೆ. ಈ ಗಡಿಯುದ್ದಕ್ಕೂ ಈಗ ಕಟ್ಟೆಚ್ಚರ ವಹಿಸಲಾಗಿದ್ದರೂ, ರಾಜ್ಯದೊಳಗೆ ಅಶಾಂತಿ ಸೃಷ್ಟಿಸುವ ಪಾಕಿಸ್ತಾನದ ಹುನ್ನಾರದ ವಿಷವೃಕ್ಷಕ್ಕೆ ನೀರೆರೆಯುವ ಶಕ್ತಿಗಳು ಸಾಕಷ್ಟಿವೆ. ಹೀಗಾಗಿ ಇಲ್ಲಿ ಪಾಕ್ ಪ್ರೇರಿತ ಖಲಿಸ್ತಾನ್ ಉಗ್ರರು ಮತ್ತೆ ಚಿಗಿತುಕೊಂಡಿದ್ದಾರೆ. ಇತ್ತೀಚೆಗೆ ಇವರ ವಿಧ್ವಂಸಕಾರಿ ಕೃತ್ಯಗಳು ಹೆಚ್ಚುತ್ತಿವೆ.
ಪಂಜಾಬ್‌ನ ಸೇನಾ ನೆಲೆ ಮೇಲೆ ಈ ಹಿಂದೆಯೂ ದಾಳಿ ನಡೆದಿತ್ತು. ಪೊಲೀಸ್ ಠಾಣೆ ಮೇಲೆಯೇ ರಾಕೆಟ್ ದಾಳಿ ನಡೆಸಲಾಗಿತ್ತು. ಪಂಜಾಬ್ ಗಡಿಯಲ್ಲಿ ಪಾಕಿಸ್ತಾನದಿಂದ ಆಗಾಗ ಡ್ರೋನ್ ಮೂಲಕ ಶಸ್ತ್ರಾಸ್ತ್ರ ಬಂದು ಬೀಳುತ್ತಲೇ ಇರುತ್ತವೆ. ಖಲಿಸ್ತಾನ ಹೋರಾಟಕ್ಕೆ ಶಕ್ತಿ ತುಂಬುವ ಉದ್ದೇಶದಿಂದ ಸಂಘಟನೆ ನಡೆಸುತ್ತಿದ್ದ ಅಮೃತಪಾಲ್ ಸಿಂಗ್ ವಿಧ್ವಂಸಕನಾಗಿ ಬೆಳೆಯುತ್ತಿದ್ದು, ಸದ್ಯ ಪೊಲೀಸರ ಕೈಗೆ ಸಿಗದೆ ಪರಾರಿಯಾಗಿದ್ದಾನೆ. ಅರ್ಶದೀಪ್ ಸಿಂಗ್ ಗಿಲ್ ಎಂಬಾತ ಪಂಜಾಬ್‌ನಲ್ಲಿ ಸಶಸ್ತ್ರ ಬಂಡಾಯ ನಡೆಸುವ ಉದ್ದೇಶದಿಂದ ಖಲಿಸ್ತಾನ್ ಟೈಗರ್ ಫೋರ್ಸ್ ಎಂಬ ಸಂಘಟನೆಯನ್ನು ರಚಿಸಿಕೊಂಡು, ಯುವಕರಿಗೆ ತರಬೇತಿ ನೀಡಿ ಪಂಜಾಬ್‌ನೊಳಗೆ ಅಶಾಂತಿ ಸೃಷ್ಟಿಸಲು ಛೂ ಬಿಡುತ್ತಿದ್ದಾನೆ. ಈತನನ್ನು ಭಯೋತ್ಪಾದಕ ಎಂದು ಕೇಂದ್ರ ಗೃಹ ಸಚಿವಾಲಯ ಘೋಷಿಸಿದ್ದು, ಕೆನಡಾದಲ್ಲಿ ಈತ ನೆಲೆಸಿದ್ದಾನೆ. ಈತನಂತೆಯೇ ಇನ್ನೂ ಹಲವು ಖಲಿಸ್ತಾನ್ ಸಹಾನುಭೂತಿಪರರು, ಪ್ರತ್ಯೇಕತಾವಾದಿಗಳು, ಉಗ್ರರು ಕೆನಡಾ ಹಾಗೂ ಬ್ರಿಟನ್‌ಗಳಲ್ಲಿ ನೆಲೆಸಿದ್ದಾರೆ. ಇವರನ್ನು ಅಲ್ಲಿನ ಸರ್ಕಾರಗಳೂ ಕಣ್ಣು ಮುಚ್ಚಿ ಪೋಷಿಸುತ್ತಿವೆ.
ಆದ್ದರಿಂದ, ಪಂಜಾಬ್‌ನಲ್ಲಿ ಸರಣಿಯಾಗಿ ನಡೆಯುತ್ತಿರುವ ಭಯೋತ್ಪಾದಕ ಕೃತ್ಯಗಳಿಗೂ ಭಟಿಂಡಾ ಸೇನಾ ನೆಲೆಯ ಮೇಲೆ ನಡೆದ ದಾಳಿಗೂ ಸಂಬಂಧವಿಲ್ಲ ಎಂದು ತಿಳಿಯುವಂತೆಯೇ ಇಲ್ಲ. ಭಟಿಂಡಾ ಘಟನೆ ಮತ್ತೊಮ್ಮೆ ಅಪಾಯದ ಕರೆಗಂಟೆ ಬಾರಿಸಿದೆ. ಕಾಶ್ಮೀರದಲ್ಲಿ ಕೆಲ ದಶಕಗಳ ಹಿಂದೆ ನಡೆದಂಥ ಹಿಂದೂಗಳ ನರಮೇಧ ಪಂಜಾಬ್‌ನಲ್ಲಿ ನಡೆಯಬಾರದು ಎಂದಿದ್ದರೆ ಈಗಲೇ ಎಚ್ಚೆತ್ತುಕೊಳ್ಳಬೇಕಿದೆ. ಅನಾದಿ ಕಾಲಗಳಿಂದಲೂ ಸಿಕ್ಖರು ಹಿಂದೂಗಳೊಂದಿಗೆ ಸಾಮರಸ್ಯದಿಂದ ಬಾಳುತ್ತಿದ್ದಾರೆ ಎಂಬುದು ನಿಜ. ಸಿಖ್ ಹಾಗೂ ಹಿಂದೂ ಧರ್ಮಗಳಿಗೆ ಹೆಚ್ಚಿನ ವ್ಯತ್ಯಾಸವಿಲ್ಲ. ಆದರೆ ಉಭಯ ಧರ್ಮಗಳ ನಡುವೆ ಹುಳಿ ಹಿಂಡುವ ಕೆಲಸವನ್ನು ಖಲಿಸ್ತಾನ್‌ವಾದಿಗಳು ಮಾಡುತ್ತಿದ್ದಾರೆ. ಕೆನಡಾ, ಆಸ್ಟ್ರೇಲಿಯಾ ಮುಂತಾದ ಕಡೆ ಹಿಂದೂ ದೇವಾಲಯಗಳ ಮೇಲೆ ನಡೆಯುತ್ತಿರುವ ದಾಳಿಯಲ್ಲಿ ಕೂಡ ಇದೇ ಸಂದೇಶವಿದೆ.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಮಾಫಿಯಾಗಳ ನಿರ್ಮೂಲನೆಯಲ್ಲಿ ಉತ್ತರ ಪ್ರದೇಶದ ಮಾದರಿ
ಕೇಂದ್ರ ಸರ್ಕಾರ ಮತ್ತು ಭಾರತೀಯ ಸೇನಾ ಪಡೆ ಈಗಲೇ ಈ ದೇಶ ವಿರೋಧಿ ಸಂಚನ್ನು ಸಂಪೂರ್ಣವಾಗಿ ಮಟ್ಟ ಹಾಕಬೇಕಿದೆ. ಇದಕ್ಕೆ ಭಾರತದೊಳಗೆ ಸೇನಾ ಕಾರ್ಯಾಚರಣೆಯೂ, ಭಾರತದಾಚೆ ವಿದೇಶಾಂಗ ನೀತಿಯೂ ಸಮರ್ಪಕವಾಗಿ ಕೆಲಸ ಮಾಡಬೇಕಿದೆ. ಲಂಡನ್‌ನಲ್ಲಿ ಭಾರತೀಯ ಹೈಕಮಿಶನ್‌ಗೆ ಇದ್ದ ಭದ್ರತೆಯನ್ನು ಅಲ್ಲಿನ ಸರ್ಕಾರ ಹಿಂದೆಗೆದುಕೊಂಡ ಕೂಡಲೇ ಭಾರತ ಸರ್ಕಾರ ತಾನೂ ಹಾಗೇ ಮಾಡಿ ಅದಕ್ಕೆ ತಕ್ಕ ಪಾಠ ಕಲಿಸಿದ್ದು, ಬ್ರಿಟನ್ ಎಚ್ಚೆತ್ತುಕೊಂಡಿದೆ. ಇದು ಸರಿಯಾದ ಮಾದರಿ. ಭಟಿಂಡಾ ದಾಳಿಯ ಹಿಂದಿನ ಪಿತೂರಿ ಆದಷ್ಟು ಬೇಗ ಬಯಲಾಗಬೇಕಿದೆ. ಪ್ರತ್ಯೇಕತಾವಾದದ ವಿಷ ಬಲುಬೇಗ ಹಬ್ಬುತ್ತದೆ. ಎಚ್ಚರಿಕೆ ವಹಿಸುವುದು ಅಗತ್ಯ.