Site icon Vistara News

ವಿಸ್ತಾರ ಸಂಪಾದಕೀಯ | ಬೆಂಗಳೂರಿಗೆ ಕ್ರೈಂ ಸಿಟಿ ಎಂಬ ಕಳಂಕ ಬರುವುದನ್ನು ತಪ್ಪಿಸಿ

Bengaluru

ರಾಜ್ಯ ರಾಜಧಾನಿಯಲ್ಲಿ ಕಳೆದ ವರ್ಷ ನಡೆದ ಅಪರಾಧ ಪ್ರಕರಣಗಳ ಪ್ರಮಾಣ ಬೆಚ್ಚಿ ಬೀಳಿಸುವಂತಿದೆ. ಬೆಂಗಳೂರಿನಲ್ಲಿ 2022ರಲ್ಲಿ 172 ಕೊಲೆಗಳಾಗಿವೆ! 152 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. 151 ಸರಗಳ್ಳತನ ಪ್ರಕರಣಗಳು ನಡೆದಿವೆ. ನಗರ ಪೊಲೀಸ್ ಆಯುಕ್ತರೇ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಅಧಿಕೃತ ವಿವರ ಇದು. ರಾಜ್ಯ ರಾಜಧಾನಿ, ನಿಧಾನವಾಗಿ ಕ್ರೈಂ ರಾಜಧಾನಿಯೂ ಆಗುತ್ತಿದೆ ಎಂಬುದನ್ನು ಈ ಅಂಕಿಅಂಶಗಳು ಸಾರಿ ಹೇಳುತ್ತಿವೆ. ಈ ಮಧ್ಯೆ ದರೋಡೆಯಲ್ಲಿ 22 ಕೇಸ್‌, ಸರಗಳ್ಳತನದಲ್ಲಿ 134 ಪ್ರಕರಣಗಳನ್ನು ಪತ್ತೆ ಮಾಡಿ ಆರೋಪಿಗಳನ್ನು ಜೈಲಿಗಟ್ಟಲಾಗಿದೆ; ಅನೇಕ ವಿದೇಶಿ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿ, ಅಕ್ರಮವಾಗಿ ನೆಲೆಸಿದ್ದ 23 ಜನರನ್ನು ಗಡಿಪಾರು ಮಾಡಲಾಗಿದೆ ಎಂಬುದು ಸಮಾಧಾನಕರ ಮಾಹಿತಿ.

ಹೆಚ್ಚಿರುವ ಅಪರಾಧಗಳ ಸಂಖ್ಯೆಯಷ್ಟೇ, ಬದಲಾಗಿರುವ ಅಪರಾಧಗಳ ಸ್ವರೂಪವೂ ನಮ್ಮನ್ನು ಆತಂಕಕ್ಕೆ ಒಳಪಡಿಸುವಂತಿದೆ. ಮೊದಲಿನಂತೆ ಅಪರಾಧಗಳು ಕದ್ದು ಮುಚ್ಚಿ, ನಾಲ್ಕು ಗೋಡೆಯೊಳಗೆ ಅಥವಾ ನಿರ್ಜನ ಪ್ರದೇಶದಲ್ಲಿ ನಡೆಯುತ್ತಿಲ್ಲ. ಬಿಹಾರ, ಉತ್ತರ ಪ್ರದೇಶ ಮಾದರಿಯಲ್ಲಿ ಕೊಲೆ, ಸುಲಿಗೆಗಳಾಗುತ್ತಿವೆ. ಹಾಡಹಗಲೇ ಕೊಚ್ಚಿ ಕೊಲೆ ಮಾಡುವ ಪ್ರಕರಣಗಳು ನಡೆಯುತ್ತಿವೆ. ಬೀದಿಯಲ್ಲಿ, ಮನೆ ಮನೆಯ ಎದುರಲ್ಲೂ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ ಎಂಬ ಅರಿವಿದ್ದರೂ ಕೊಲೆಗಾರರು ಯಾವುದೇ ಭಯವಿಲ್ಲದೆ ದುಷ್ಕೃತ್ಯ ಎಸಗಿ ಪರಾರಿಯಾಗುತ್ತಿದ್ದಾರೆ. ದಾರಿಹೋಕ ಅಮಾಯಕರನ್ನು ಗಾಂಜಾ ಮತ್ತಿನಲ್ಲಿದ್ದವರು ಸುಖಾಸುಮ್ಮನೆ ತಿವಿದು ಸಾಯಿಸುತ್ತಿದ್ದಾರೆ. ಪಾಗಲ್‌ ಪ್ರೇಮಿಗಳು ತಮ್ಮ ಪ್ರೇಮ ನಿರಾಕರಿಸುವ ಹುಡುಗಿಯರ ಮೇಲೆ ಆಸಿಡ್‌ ಎರಚುವುದು, ಚಾಕುವಿನಿಂದ ತಿವಿದು ಸಾಯಿಸುವುದು ರಾಜಾರೋಷವಾಗಿ ಎಲ್ಲರ ಕಣ್ಣೆದುರೇ ನಡೆಯುತ್ತಿದೆ. ಬೀದಿ ರೌಡಿಗಳು ಲಾಂಗ್‌ ಝಳಪಿಸಿ ಪುಟ್ಟ ಅಂಗಡಿಯವರನ್ನೋ ಸಣ್ಣ ಉದ್ಯಮಿಗಳನ್ನೋ ಬೆದರಿಸಿ ವಸೂಲಿ ಮಾಡುವುದು, ಹಫ್ತಾ ನೀಡದಿದ್ದರೆ ದಾಂಧಲೆ ನಡೆಸುವುದು ಅವ್ಯಾಹತವಾಗಿದೆ. ವೈರಿ ಗ್ಯಾಂಗ್‌ಗಳು ರಸ್ತೆಗಳಲ್ಲೇ ಹೊಡೆದಾಡಿಕೊಳ್ಳುತ್ತವೆ, ರೌಡಿಗಳು ಬೀದಿ ಹೆಣಗಳಾಗುತ್ತಾರೆ. ಇನ್ನು ಬೈಕ್ ವ್ಹೀಲಿಂಗ್ ಮಾಡಿ ಇತರರಿಗೆ ಭಯ ಹುಟ್ಟಿಸುವವರು, ಅದನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್‌ ಮಾಡಿದರೂ ಪೊಲೀಸರ ಭಯವಿಲ್ಲ ಎನ್ನುವಂತಿದ್ದಾರೆ. ಸುಲಿಗೆ ಹಾಗೂ ವೈರತ್ವಕ್ಕಾಗಿ ಕಿಡ್‌ನ್ಯಾಪ್‌ಗಳು ನಡೆಯುತ್ತಿವೆ. ಸೈಬರ್‌ ಕ್ರೈಮ್‌ಗಳ ಸಂಖ್ಯೆ ಅಪರಿಮಿತವಾಗಿದ್ದು, ಸಣ್ಣ ಪುಟ್ಟ ಮೊತ್ತಗಳಿಗೆ ಮೋಸ ಹೋಗುವವರನ್ನು ಕೇಳುವವರೇ ಇಲ್ಲದಂತಾಗಿದೆ. ಮೊಬೈಲ್, ಚೈನ್ ಎಗರಿಸಿ ಪರಾರಿಯಾಗುವ ಪ್ರಕರಣಗಳಂತೂ ಅಸಂಖ್ಯ.

ಹೆಚ್ಚುತ್ತಿರುವ ಅಪರಾಧಗಳ ಸಂಖ್ಯೆಯೇ, ಅಪರಾಧಿಗಳಿಗೆ ಪೊಲೀಸರ ಭಯವಿಲ್ಲ ಎಂಬುದನ್ನು ಸೂಚಿಸುವಂತಿದೆ. ಕಾನೂನು ಸುವ್ಯವಸ್ಥೆ ಕುಸಿಯುವುದು ಅಲ್ಲಿನ ಕಾನೂನು ಜಾರಿ ಸಂಸ್ಥೆಗಳು ದುರ್ಬಲಗೊಂಡಾಗ. ಕಳೆದ ಎರಡು ವರ್ಷಗಳಲ್ಲಿ ಅಪರಾಧಗಳ ಪ್ರಮಾಣ ತುಸು ಮಟ್ಟಿಗೆ ಕುಸಿದಿದ್ದವು. ಕೋವಿಡ್‌ ಪರಿಣಾಮ ಬಹುತೇಕ ಸಮಯ ಜಾರಿಯಲ್ಲಿದ್ದ ಲಾಕ್‌ಡೌನ್‌ನಿಂದಾಗಿ ಸಾರ್ವಜನಿಕ ಮುಖಾಮುಖಿ ಕಡಿಮೆಯಾಗಿ ಈ ಅಪರಾಧಗಳು ಕಡಿಮೆಯಾಗಿರಬಹುದು. ಆದರೆ ಕೋವಿಡ್‌ ಕಾಲದ ಆರ್ಥಿಕ ಕುಸಿತ ಮತ್ತು ಮಾನಸಿಕ ಅಸ್ಥಿರತೆಗಳ ಹೆಚ್ಚಳವೂ ಈ ಬಾರಿ ಅಪರಾಧ ಪ್ರಮಾಣ ಹೆಚ್ಚಾಗಲು ಕಾರಣವಾಗಿರಬಹುದು. ಅದೇನೇ ಇದ್ದರೂ ಕಾನೂನು ಸುವ್ಯವಸ್ಥೆಯನ್ನು ನೋಡಿಕೊಳ್ಳಬೇಕಾದ ಗೃಹ ಇಲಾಖೆ ಇನ್ನಷ್ಟು ಚುರುಕಾಗಿ ಕ್ರಿಯಾಶೀಲವಾಗದಿದ್ದರೆ, ಬೆಂಗಳೂರಿಗೆ ಕ್ರೈಂ ಸಿಟಿ ಎಂಬ ಕಳಂಕ ಶಾಶ್ವತವಾಗಿ ಅಂಟಿಕೊಳ್ಳಲಿದೆ. ಉತ್ತರ ಪ್ರದೇಶದಲ್ಲಿ ಒಂದು ಕಾಲದಲ್ಲಿ ಅವ್ಯಾಹತವಾಗಿದ್ದ ಅಪರಾಧ ಮಾಫಿಯಾ ವ್ಯವಸ್ಥೆಯೇ ಅಲ್ಲಿನ ಆಡಳಿತ ಪಕ್ಷವನ್ನು ನೆಲಕ್ಕಿಳಿಸಲು ಕಾರಣವಾಯಿತು ಎಂಬುದನ್ನು ನೆನಪಿಡಬೇಕು.

ಬೆಂಗಳೂರಿನ ಭೂಗತ ಲೋಕ ಮತ್ತೆ ಸಕ್ರಿಯವಾದಂತಿದೆ. ಇದು ಎಂದೂ ಸಂಪೂರ್ಣ ನಾಶವಾಗಿರಲಿಲ್ಲವಾದರೂ, 80-90ರ ದಶಕದಲ್ಲಿ ಇದ್ದಂತಿರಲಿಲ್ಲ. ಬಿಗಿಯಾದ ಪೊಲೀಸ್‌ ವ್ಯವಸ್ಥೆ ಅದನ್ನು ಮಟ್ಟ ಹಾಕಿತ್ತು. ಆದರೆ ಚುನಾವಣೆ ಮುಂಚಿತವಾಗಿ ರೌಡಿ ಶೀಟರ್‌ಗಳನ್ನು ಠಾಣೆಗೆ ಕರೆತಂದು ಪರೇಡ್‌ ಮಾಡಿಸುವಾಗ ಕಾಣುವ ರೌಡಿಗಳ ಸಂಖ್ಯೆಯನ್ನು ಗಮನಿಸಿದರೆ, ಭೂಗತ ಜಗತ್ತು ಮತ್ತೆ ತುಂಬಿ ತುಳುಕುತ್ತಿದೆಯೇ ಎನ್ನುವ ಅನುಮಾನ ಮೂಡುತ್ತಿದೆ. ಇದರಲ್ಲಿ ಬಡತನದ ಪಾಲೆಷ್ಟು, ಅಶಿಕ್ಷಣ ಹಾಗೂ ಪಕ್ಕದ ರಾಜ್ಯಗಳಿಂದ ವಲಸೆಯ ಪಾಲೆಷ್ಟು ಎಂಬುದೂ ಗಮನಾರ್ಹ.
ಮಹಿಳೆಯರ ವಿರುದ್ಧ ನಡೆಯುತ್ತಿರುವ ಅಪರಾಧಗಳಲ್ಲಿ ಹೆಚ್ಚಳವಾಗಿರುವುದು ಹೆಚ್ಚು ಆತಂಕಕರ. ಇದು ಮಹಿಳೆಯರಿಗೆ ಈ ನಗರ ಅಸುರಕ್ಷಿತ ಎಂಬ ಭಾವನೆ ಮೂಡಿಸದೇ ಇರದು. ಹಾಗೆಯೇ ಗಾಂಜಾ- ಅಫೀಮು ಮುಂತಾದ ಮಾದಕ ದ್ರವ್ಯಗಳು ಎಗ್ಗಿಲ್ಲದೇ ರಾಜ್ಯದೊಳಗೆ ಸರಬರಾಜಾಗುತ್ತಿದ್ದು, ಇದು ನಮ್ಮ ಯುವಜನತೆಯನ್ನು ಶಾಶ್ವತ ಚಿತ್ತವಿಕಲತೆಯತ್ತ ಕೊಂಡೊಯ್ಯಲಿದೆ. ಇದನ್ನು ಮೂಲದಿಂದಲೇ ಪತ್ತೆ ಹಚ್ಚಿ ತಡೆಯದೇ ಹೋದರೆ ಉಳಿಗಾಲವಿಲ್ಲ.

ಇದೆಲ್ಲಕ್ಕೂ ಸಜ್ಜಾಗುವಂತೆ ಪೊಲೀಸ್‌ ವ್ಯವಸ್ಥೆಯನ್ನು ಇನ್ನಷ್ಟು ಆಧುನೀಕರಣಗೊಳಿಸಬೇಕು. ಠಾಣೆ- ಸಿಬ್ಬಂದಿಗಳ ಹೆಚ್ಚಳ ಹಾಗೂ ತರಬೇತಿ, ಅಪರಾಧ ನಡೆದ ನಿಮಿಷಗಳಲ್ಲಿ ಕೃತ್ಯದ ಸ್ಥಳಕ್ಕೆ ಧಾವಿಸುವಂಥ ಸಂಪರ್ಕ- ಸಂವಹನ, ಹೊಯ್ಸಳ- ಚೀತಾ ಮುಂತಾದ ನಿಗಾ ವ್ಯವಸ್ಥೆಗಳ ಹೆಚ್ಚಳ, ಸಾಕ್ಷ್ಯ ಕಲೆಹಾಕಿ ತನಿಖೆಯನ್ನು ಪರಿಣಾಮಕಾರಿಯಾಗಿಸುವಲ್ಲಿ ವರ್ಗಾವಣೆಗಳು ತಡೆಯಾಗದಂತಿರುವುದು, ಡಿಎನ್‌ಎ ಪರೀಕ್ಷೆ ಮುಂತಾದ ಆಧುನಿಕ ತನಿಖಾ ಕ್ರಮಗಳ ಲಭ್ಯತೆ, ಅಪರಾಧಿಗಳ ವಿವರಗಳ ಕೇಂದ್ರಿತ ಡಿಜಿಟಲೀಕರಣ- ಎಲ್ಲವೂ ಇಂದು ಅಗತ್ಯವಾಗಿವೆ. ಎಲ್ಲಕ್ಕಿಂತ ಹೆಚ್ಚಾಗಿ ಸರ್ಕಾರ ಖಡಕ್ ಪೊಲೀಸ್ ಅಧಿಕಾರಿಗಳನ್ನು ಹುಡುಕಿ ನಗರದ ಕಾನೂನು ಸುವ್ಯವಸ್ಥೆಯ ಹೊಣೆಗಾರಿಕೆ ವಹಿಸಬೇಕು. ಅದಕ್ಷ ಪೊಲೀಸ್ ಅಧಿಕಾರಿಗಳು ಪ್ರಭಾವ ಬಳಸಿಯೋ ಅಡ್ಡ ಮಾರ್ಗದಲ್ಲಿಯೋ ಬಂದು ಆಯಕಟ್ಟಿನ ಜಾಗದಲ್ಲಿ ಕೂರುವುದನ್ನು ತಪ್ಪಿಸಬೇಕು.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ಜನತೆಗೆ ತ್ವರಿತ ನ್ಯಾಯ ಮರೀಚಿಕೆಯಾಗದಿರಲಿ

Exit mobile version