Site icon Vistara News

Ayodhya Ram Mandir: ರಾಮ ಮಂದಿರ ವಿಚಾರ ವಿಶ್ವಸಂಸ್ಥೆಯಲ್ಲಿ ಎತ್ತಿ ಕಿರಿಕ್‌ ಮಾಡಲು ಪಾಕಿಸ್ತಾನ ಯತ್ನ

Ayodhya Ram Mandir

Ram Mandir: Devotees Break Through Security Barrier At Ayodhya

ನ್ಯೂಯಾರ್ಕ್‌: ಅಯೋಧ್ಯೆಯಲ್ಲಿ ರಾಮ ಮಂದಿರ (Ayodhya Ram Mandir) ಪ್ರಾಣ ಪ್ರತಿಷ್ಠಾಪನೆಯ (Pran Prathistha) ಭವ್ಯ ಕಾರ್ಯಕ್ರಮದಿಂದ ಭಾರತೀಯರು ಕಣ್ಮನ ತುಂಬಿಕೊಂಡಿದ್ದರೆ, ಅತ್ತ ಪಾಕಿಸ್ತಾನ (Pakistan) ಆಕ್ರೋಶದಿಂದ ಕುದಿಯುತ್ತಿದೆ. ಈ ವಿಚಾರವನ್ನು ವಿಶ್ವಸಂಸ್ಥೆಯಲ್ಲೂ (United nations) ಎತ್ತಲು ಪ್ರಯತ್ನಿಸಿದೆ.

ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆ ನಾಗರಿಕತೆಯ ಒಕ್ಕೂಟ (UN Alliance of Civilisations- UNAOC) ರಾಯಭಾರಿ ಸಭೆಯಲ್ಲಿ ಪಾಕಿಸ್ತಾನ ಮತ್ತೊಮ್ಮೆ ಭಾರತದ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸಲು ಯತ್ನಿಸಿದೆ. ಪಾಕಿಸ್ತಾನದ ವಿಶ್ವಸಂಸ್ಥೆಯ ರಾಯಭಾರಿ ಮುನೀರ್ ಅಕ್ರಮ್, ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆಯ ವಿಷಯವನ್ನು ಪ್ರಸ್ತಾಪಿಸಿದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಭಾರತದಲ್ಲಿನ ಮುಸ್ಲಿಮರ ಯೋಗಕ್ಷೇಮಕ್ಕೆ ಆತಂಕವಿದೆ, ಕಾಪಾಡಿ ಎಂದು ವಿಶ್ವಸಂಸ್ಥೆಯನ್ನು ಕೇಳಿಕೊಂಡರು.

ಎಓಸಿಯ ಅಧಿಕಾರಿ ಮಿಗುಯೆಲ್ ಏಂಜೆಲ್ ಮೊರಾಟಿನೋಸ್ ಅವರಿಗೆ ಬರೆದ ಪತ್ರದಲ್ಲಿ ಅಕ್ರಮ್, ರಾಮ ಮಂದಿರದ ನಿರ್ಮಾಣ ಮತ್ತು ಪ್ರತಿಷ್ಠೆಯನ್ನು ಖಂಡಿಸಿದ್ದಾರೆ. “ಈ ಪ್ರವೃತ್ತಿಯು ಭಾರತೀಯ ಮುಸ್ಲಿಮರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಯೋಗಕ್ಷೇಮಕ್ಕೆ, ಸಾಮರಸ್ಯ ಮತ್ತು ಶಾಂತಿಗೆ ಗಮನಾರ್ಹ ಅಪಾಯವನ್ನುಂಟುಮಾಡುತ್ತದೆ” ಎಂದು ಅವರು ಇಸ್ಲಾಮಿಕ್ ಸಹಕಾರ ಸಂಘಟನೆಯ (Organisation of Islamic Cooperation- OIC) ಸಭೆಯಲ್ಲಿ ಹಂಚಿಕೊಂಡ ಪತ್ರದಲ್ಲಿ ಆರೋಪಿಸಿದ್ದಾರೆ.

ಭಾರತದ ಆಂತರಿಕ ವ್ಯವಹಾರಗಳಲ್ಲಿ ಪಾಕಿಸ್ತಾನವು ಇಂತಹ ಹಸ್ತಕ್ಷೇಪ ನಡೆಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ವಿಶ್ವಸಂಸ್ಥೆಯ ವೇದಿಕೆಯಲ್ಲಿ ಕಾಶ್ಮೀರ ಸಮಸ್ಯೆಯನ್ನು ಅಂತರಾಷ್ಟ್ರೀಯಗೊಳಿಸುವ ಅದರ ಪ್ರಯತ್ನ ವಿಫಲವಾಗಿತ್ತು. ಸೋಮವಾರ ನಡೆದ ಅಯೋಧ್ಯೆಯ ರಾಮ ಮಂದಿರದ ಪ್ರಾಣಪ್ರತಿಷ್ಠೆಯ ಬಳಿಕವೂ ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಈ ಬಗ್ಗೆ ತಗಾದೆ ತೆಗೆದಿತ್ತು.

ಇದಕ್ಕೆ ಉತ್ತರಿಸಿರುವ ನವದೆಹಲಿ, “ಅಯೋಧ್ಯೆಯ ರಾಮಮಂದಿರದಲ್ಲಿ ಪಾಕಿಸ್ತಾನಕ್ಕೆ ಯಾವುದೇ ವ್ಯವಹಾರವಿಲ್ಲʼʼ ಎಂದು ಖಡಕ್ಕಾಗಿ ತಿಳಿಸಿದೆ. “ನಾವು ಪಾಕಿಸ್ತಾನದಂತೆ ಬನಾನಾ ರಿಪಬ್ಲಿಕ್ ಅಲ್ಲ. ಅಲ್ಲಿ ನ್ಯಾಯಾಂಗವೂ ಸ್ಥಿರವಾಗಿಲ್ಲ. ಅಲ್ಲಿ ಸರ್ಕಾರ ಐಎಸ್ಐ ನಿರ್ದೇಶನಗಳ ಮೇಲೆ ಕಾರ್ಯನಿರ್ವಹಿಸುತ್ತದೆ” ಎಂದು ಭಾರತದ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಪಾಕಿಸ್ತಾನದ ನ್ಯಾಯಾಂಗ ವ್ಯವಸ್ಥೆಯನ್ನು ಉಲ್ಲೇಖಿಸಿದ್ದಾರೆ.

“ಈ ಪ್ರಕರಣವು ಹಲವು ದಶಕಗಳಿಂದ ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿದೆ. ಇದು ಸುಪ್ರೀಂ ಕೋರ್ಟ್ ಸೇರಿದಂತೆ ಎಲ್ಲಾ ನ್ಯಾಯಾಲಯಗಳ ಮೂಲಕ ಮುಂದುವರಿದಿದೆ. ಒಂದೇ ಪೀಠದಿಂದ ಯಾವುದೇ ಪ್ರಮುಖ ತೀರ್ಪು ಬಂದಿಲ್ಲ. ಅಲ್ಪಸಂಖ್ಯಾತ ನ್ಯಾಯಾಧೀಶರು ಕೂಡ ತೀರ್ಪಿನಲ್ಲಿ ಭಾಗಿಯಾಗಿದ್ದಾರೆ” ಎಂದು ವಿದೇಶಾಂಗ ಇಲಾಖೆ ಹೇಳಿದೆ.

ಭಾರತವು ಎಲ್ಲಾ ಧರ್ಮಗಳಿಗೆ ಜಾಗವನ್ನು ನೀಡಿದೆ. ಅಯೋಧ್ಯೆಯಲ್ಲಿ ರಾಮದೇವರ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಯಾವುದೇ ಅಹಿತವಿಲ್ಲದೆ ಭಾಗವಹಿಸಿದ ಭಾರತೀಯ ಮುಸ್ಲಿಮರನ್ನು ಪ್ರಚೋದಿಸಲು ಯತ್ನಿಸುವ ಮೂಲಕ ಪಾಕಿಸ್ತಾನವು ತೊಂದರೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ವಿದೇಶಾಂಗ ಇಲಾಖೆ ಟೀಕಿಸಿದೆ.

Exit mobile version