Site icon Vistara News

ವಿಸ್ತಾರ ಸಂಪಾದಕೀಯ: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೇ; ವೇಗದ ಜತೆಗೆ ಸುರಕ್ಷತೆಯೂ ಇರಲಿ

Expressway Ban on bike and auto traffic on Bangalore-Mysore expressway soon, what is the reason?

ಬೆಂಗಳೂರು ಹಾಗೂ ಮೈಸೂರು (Bangalore-Mysore Express Highway) ನಗರಗಳ ಜನತೆ ಕಾತರದಿಂದ ಕಾಯುತ್ತಿದ್ದ, ಉಭಯ ನಗರಗಳ ನಡುವಿನ ದಶಪಥ ರಾಷ್ಟ್ರೀಯ ಹೆದ್ದಾರಿ ಮಾರ್ಚ್‌ 11ರಂದು ಲೋಕಾರ್ಪಣೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಇದನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಮೈಸೂರು ಸಂಸದರು ತಿಳಿಸಿದ್ದಾರೆ. ಸುಮಾರು 8000 ಕೋಟಿ ರೂ. ವೆಚ್ಚವಾಗಿರುವ, ಮೂರು ಗಂಟೆಗಳ ಪ್ರಯಾಣದ ಅವಧಿಯನ್ನು ಒಂದೂವರೆ ಗಂಟೆಗೆ ಇಳಿಸಿರುವ ಈ ದಶಪಥ ಹಲವು ವರ್ಷಗಳ ಬೇಡಿಕೆಯಾಗಿತ್ತು. ಇದೇ ಸಂದರ್ಭದಲ್ಲಿ ಮೈಸೂರು ವಿಮಾನ ನಿಲ್ದಾಣಕ್ಕೂ ಭೂಮಿ ಪೂಜೆ ನೆರವೇರಲಿದೆ ಎಂದು ಗೊತ್ತಾಗಿದೆ.

ಮೈಸೂರು ಹಾಗೂ ಬೆಂಗಳೂರುಗಳನ್ನು ಅವಳಿ ನಗರಗಳೆಂದೇ ಕರೆಯಬಹುದು. ಅಂಥ ವಾಣಿಜ್ಯ, ಸಾಂಸ್ಕೃತಿಕ, ಸಾಮಾಜಿಕ ಸಂಬಂಧ ಉಭಯ ಪಟ್ಟಣಗಳಿಗೆ ಇದೆ. ಈಗ ಎಕ್ಸ್‌ಪ್ರೆಸ್‌ವೇ ಮೂಲಕ ಇವುಗಳ ನಡುವಿನ ಅಂತರ ಇನ್ನಷ್ಟು ಕಡಿಮೆಯಾಗುತ್ತಿದೆ. ಎರಡು ನಗರಗಳ ನಡುವೆ ಕಡಿಮೆ ಅವಧಿಯಲ್ಲಿ ತಲುಪುವ ಪ್ರಯಾಣಿಕರ ಕನಸು ನನಸಾಗಿದೆ. ಇದು ಇನ್ನಷ್ಟು ಚಟುವಟಿಕೆಗೂ, ಬೆಳವಣಿಗೆಗೂ ಕಾರಣವಾಗಲಿದೆ.

ಒಂದು ಎಕ್ಸ್‌ಪ್ರೆಸ್‌ವೇ ನಿರ್ಮಾಣವಾಗುವುದು ಎಂದರೆ ಅದರ ಸುತ್ತಮತ್ತ ಹಲವಾರು ಬಗೆಯ ವಾಣಿಜ್ಯ ಚಟುವಟಿಕೆಗಳು ಬೆಳೆಯುತ್ತವೆ; ಸುತ್ತಲಿನವರ ಬದುಕು ಕೂಡ ವಿಕಸಿತಗೊಳ್ಳುವ ಸಾಧ್ಯತೆಗಳು ಹೆಚ್ಚುತ್ತವೆ. ಆದರೆ ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್‌ವೇ ವಿಷಯದಲ್ಲಿ ಇದನ್ನು ಎಷ್ಟರಮಟ್ಟಿಗೆ ಹೇಳಬಹುದೋ ಗೊತ್ತಿಲ್ಲ. ಯಾಕೆಂದರೆ ಉಭಯ ನಗರಗಳ ನಡುವೆ ಹಲವಾರು ಪಾರಂಪರಿಕ ತಾಣಗಳಿವೆ; ಸಾಂಪ್ರದಾಯಿಕ ಗುಡಿಕೈಗಾರಿಕೆಗಳಿವೆ; ಸ್ಥಳೀಯ ಆಹಾರೋದ್ಯಮವಿದೆ. ಉದಾಹರಣೆಗೆ, ದೇಶದಲ್ಲೇ ಹೆಸರಾದ ಚನ್ನಪಟ್ಟಣದ ಗೊಂಬೆ ತಯಾರಿಕೆ ಉದ್ಯಮ. ಪ್ರಸ್ತುತ ಎಕ್ಸ್‌ಪ್ರೆಸ್‌ವೇ ಚನ್ನಪಟ್ಟಣವನ್ನು ಸ್ಪರ್ಶಿಸದೆ ಹಾದುಹೋಗುವುದರಿಂದ ವೇಗವಾಗಿ ಪ್ರಯಾಣಿಸುವವರ್ಯಾರೂ ಇಲ್ಲಿ ನಿಲ್ಲಿಸುವುದಿಲ್ಲ. ಹೀಗಾಗಿ ಈ ಉದ್ಯಮಕ್ಕೆ ಧಕ್ಕೆಯಾಗುವ ಸಂಭವವಿದೆ. ಇಂಥ ಸನ್ನಿವೇಶದಲ್ಲಿ ಇವುಗಳನ್ನು ಉಳಿಸಲು ಏನು ಮಾಡಬಹುದು ಎಂದು ಚಿಂತಿಸಿ, ಆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ. ಕಳೆದ ಮಳೆಗಾಲದಲ್ಲಿ ನಾವು ನೋಡಿದಂತೆ, ಕೆಲವು ಕಡೆಗಳಲ್ಲಿ ಹೆದ್ದಾರಿ ಕಾಮಗಾರಿಯಿಂದಾಗಿ ನೀರು ನಿಂತು ವಾಹನಗಳೇ ಮುಳುಗಿಹೋಗಿವೆ. ಮುಂದಿನ ಮಳೆಯ ವೇಳೆಗೆ ಇಂಥ ದೋಷಗಳು ಇಲ್ಲದಂತೆ ಪರಿಶೀಲಿಸುವುದು ಅಗತ್ಯ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಭಿಕ್ಷಾಟನೆಗೆ ಮಕ್ಕಳ ಬಳಕೆ ಅಪಾಯಕಾರಿ

ಎಕ್ಸ್‌ಪ್ರೆಸ್‌ವೇ ಮುಕ್ತವಾದೊಡನೆಯೇ ಪ್ರಯಾಣಿಕರಿಂದ ಅದಕ್ಕೆ ಸುಂಕ ವಸೂಲಿ ಮಾಡುವುದೂ ಆರಂಭವಾಗುತ್ತದೆ. ಇದನ್ನೂ ವೈಜ್ಞಾನಿಕವಾಗಿ, ನಿತ್ಯ ಓಡಾಡುವವರಿಗೆ ಹೊರೆಯೆನಿಸದಂತೆ ನಿಗದಿಪಡಿಸುವುದು ಅಗತ್ಯ. ಸ್ಥಳೀಯರಿಂದ ಟೋಲ್‌ ಪಡೆಯುವಾಗ ವಿವೇಚನೆ ಅನುಸರಿಸದಿದ್ದರೆ ಅದು ಭವಿಷ್ಯದಲ್ಲಿ ಆಕ್ರೋಶ ಹೆಪ್ಪುಗಟ್ಟಲು ಕಾರಣವಾಗುತ್ತದೆ. ಇಂಥ ಹೆದ್ದಾರಿಗಳಲ್ಲಿ ಮುಕ್ತ ಓಡಾಟಕ್ಕೆ ಆಸ್ಪದವಿರುವುದಿಲ್ಲ ಎಂಬುದು ನಿಜವಾದರೂ, ರಸ್ತೆಯ ಉಭಯ ಪಾರ್ಶ್ವಗಳಲ್ಲಿ ಹೊಲ, ಜಮೀನು, ಮನೆ ಹೊಂದಿರುವ ರೈತರ, ಹೆದ್ದಾರಿ ಹಾದುಹೋದ ಪುಟ್ಟ ಪಟ್ಟಣಗಳ ಜನರ ಓಡಾಟಕ್ಕೆ ಖಂಡಿತವಾಗಿಯೂ ತೊಂದರೆ ಆಗಿಯೇ ಆಗಿರುತ್ತದೆ. ಜನ ದಾಟಬೇಕಾದಂಥ ಕೆಲವು ಪ್ರಮುಖ ಸ್ಥಳಗಳಲ್ಲಿ ಅಂಡರ್ ಪಾಸ್ ನಿರ್ಮಿಸಬೇಕೆಂಬ ಸ್ಥಳೀಯರ ಬೇಡಿಕೆ ಇನ್ನೂ ಈಡೇರಿಲ್ಲ. ಹೀಗಾಗಿ ಜನ, ಜಾನುವಾರುಗಳು ಹೆದ್ದಾರಿಯ ಮಧ್ಯೆ ಬಂದುಬಿಡಬಹುದು; ನಿಧಾನವಾಗಿ ಚಲಿಸುವ ವಾಹನಗಳು ವೇಗವಾಗಿ ಹೋಗುವ ವಾಹನಗಳಿಗೆ ತಡೆಯೊಡ್ಡಬಹುದು. ಈ ರಸ್ತೆಯಲ್ಲಿ ಅತಿ ವೇಗವಾಗಿ ವಾಹನಗಳು ಸಾಗುವುದರಿಂದ ಎಲ್ಲರ ಸುರಕ್ಷತೆಗೂ ಆದ್ಯತೆ ನೀಡಬೇಕಿದೆ. ಸ್ಥಳೀಯರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ರಿಕ್ಷಾ, ಬೈಕ್ ಇತ್ಯಾದಿ ಲಘು ವಾಹನಗಳು, ಸ್ಥಳೀಯರ ವಾಹನಗಳು ಸರಾಗವಾಗಿ ಸಂಚರಿಸಲು ಸರ್ವಿಸ್ ರಸ್ತೆ ನಿರ್ಮಾಣ ಬೇಗ ಆಗಬೇಕು. ಟೋಲ್‌ ಪ್ಲಾಜಾಗಳ ಜತೆಜತೆಗೇ ರೆಸ್ಟ್‌ ರೂಮ್‌ಗಳು, ವಾಹನ ಬದಿಗೆ ನಿಲ್ಲಿಸಲು ಬೇ ಏರಿಯಾಗಳು ನಿರ್ಮಾಣವಾಗಬೇಕು.

ಎಕ್ಸ್‌ಪ್ರೆಸ್‌ವೇಗಳ ಮುಖ್ಯ ಗುಣವೆಂದರೆ ವೇಗ. ಅದು ಬದುಕಿಗೆ ತರಾತುರಿಯನ್ನು ತಂದುಬಿಡುತ್ತದೆ. ಇದರ ಜೊತೆಜೊತೆಗೇ ಸುರಕ್ಷತೆಯನ್ನೂ ಖಾತ್ರಿಪಡಿಸಿಕೊಳ್ಳಲು ಸಾಧ್ಯವಾದರೆ ಮಾತ್ರ ಅದು ಸುಸ್ಥಿರ ಅಭಿವೃದ್ಧಿ ಎನಿಸಿಕೊಳ್ಳುತ್ತದೆ.

Exit mobile version