Site icon Vistara News

Bangladesh Protests: ಬಾಂಗ್ಲಾದಲ್ಲಿ ಹಿಂಸಾಚಾರ ಉಲ್ಬಣ, 105 ಸಾವು; 300 ಭಾರತೀಯ ವಿದ್ಯಾರ್ಥಿಗಳು ಸ್ವದೇಶಕ್ಕೆ

bangladesh protests dhaka

ಢಾಕಾ: ಕಳೆದ ಕೆಲದಿನಗಳಿಂದ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ (Bangladesh Protests) ಪ್ರತಿಭಟನೆ ಹಾಗೂ ಹಿಂಸಾಚಾರ (Bangladesh Violence) ಇದೀಗ ಉಲ್ಬಣಿಸಿದ್ದು, ಅಲ್ಲಿರುವ ಸುಮಾರು 300 ಭಾರತೀಯ ವಿದ್ಯಾರ್ಥಿಗಳು (Indian Students) ಸ್ವದೇಶಕ್ಕೆ ಮರಳಿದ್ದಾರೆ. ಹಿಂಸಾಚಾರದಲ್ಲಿ 105 ಮಂದಿ ಮೃತಪಟ್ಟಿದ್ದಾರೆ. ದೇಶವಿಡೀ ಕರ್ಫ್ಯೂ ಹಾಕಲಾಗಿದೆ.

ದೇಶದ ವಿವಿಧ ಸ್ಥಳಗಳಲ್ಲಿ ಪ್ರತಿಭಟನೆಗಳು ಮತ್ತು ಗಲಭೆಗಳು ನಡೆಯುತ್ತಿದೆ. ಸುಮಾರು 15,000 ಭಾರತೀಯ ಪ್ರಜೆಗಳು ಬಾಂಗ್ಲಾದಲ್ಲಿದ್ದು, ಅವರೆಲ್ಲ ಕ್ಷೇಮವಾಗಿದ್ದಾರೆ ಎಂದು ಭಾರತೀಯ ವಿದೇಶಾಂಗ ಇಲಾಖೆ ಹೇಳಿದೆ. ಆದರೆ ಸುಮಾರು 300 ರಷ್ಟು ಆತಂಕಿತ ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ಮರಳಿದ್ದಾರೆ.

ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ವ್ಯವಸ್ಥೆಯಲ್ಲಿ ಸುಧಾರಣೆಗೆ ಒತ್ತಾಯಿಸಿ ಹಲವಾರು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಹಿಂಸಾಸ್ವರೂಪ ಪಡೆದಿದ್ದು, ಸಾವುನೋವಿಗೆ ಕಾರಣವಾಗಿದೆ. ಶುಕ್ರವಾರ ಕೂಡ ಬಾಂಗ್ಲಾದೇಶದಲ್ಲಿ ಘರ್ಷಣೆಗಳು ಮತ್ತು ಹಿಂಸಾತ್ಮಕ ಪ್ರತಿಭಟನೆಗಳು ಮುಂದುವರೆದಿವೆ. ಪ್ರತಿಭಟನಾ ನಿರತರು ನರಸಿಂಗಡಿ ಕೇಂದ್ರ ಕಾರಾಗೃಹದ ಮೇಲೆ ದಾಳಿ ಮಾಡಿ ನೂರಾರು ಕೈದಿಗಳನ್ನು ಬಿಡುಗಡೆ ಮಾಡಿದ್ದಾರೆ. ನಂತರ ಜೈಲಿಗೆ ಬೆಂಕಿ ಹಚ್ಚಿದ್ದಾರೆ. ಗಲಭೆಯ ಬಿಸಿ ಸಾಮಾನ್ಯ ಜನರ ಬದುಕಿಗೂ ತಟ್ಟಿದೆ.

ದೇಶಾದ್ಯಂತ ಹರಡಿರುವ ಅಶಾಂತಿಯನ್ನು ತಡೆಯಲು ಪೊಲೀಸರು ಕೂಡ ವಿಫಲವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಶುಕ್ರವಾರ ಕರ್ಫ್ಯೂ ಮತ್ತು ಮಿಲಿಟರಿ ಪಡೆಗಳ ನಿಯೋಜನೆಯನ್ನು ಘೋಷಿಸಿದೆ. ಆಸ್ಪತ್ರೆಗಳು ನೀಡಿದ ವರದಿಗಳನ್ನು ಉಲ್ಲೇಖಿಸಿ ವಿದ್ಯಾರ್ಥಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವಿನ ಈ ವಾರದ ಘರ್ಷಣೆಯಲ್ಲಿ ಕನಿಷ್ಠ 105 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. 15 ವರ್ಷಗಳ ಅಧಿಕಾರದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿ ಶೇಖ್ ಹಸೀನಾ ಸರ್ಕಾರ ದೊಡ್ಡ ಸವಾಲನ್ನು ಎದುರಿಸಿದೆ.

ಪ್ರತಿಭಟನೆಗಳು ಪ್ರಾರಂಭವಾದ ನಂತರ ಮೊದಲ ಬಾರಿಗೆ ಹೆಚ್ಚಿನ ಹಿಂಸಾಚಾರವನ್ನು ತಡೆಯುವ ಪ್ರಯತ್ನದಲ್ಲಿ ರಾಜಧಾನಿ ಢಾಕಾದಲ್ಲಿ ಪೊಲೀಸರು ಮೊದಲ ದಿನ ಎಲ್ಲಾ ಸಾರ್ವಜನಿಕ ಸಭೆಗಳನ್ನು ನಿಷೇಧಿಸಿದ್ದಾರೆ. ‘ನಾವು ಇಂದು ಢಾಕಾದಲ್ಲಿ ಎಲ್ಲಾ ರ್ಯಾಲಿಗಳು, ಮೆರವಣಿಗೆಗಳು ಮತ್ತು ಸಾರ್ವಜನಿಕ ಸಭೆಗಳನ್ನು ನಿಷೇಧಿಸಿದ್ದೇವೆ’ ಎಂದು ಪೊಲೀಸ್ ಮುಖ್ಯಸ್ಥ ಹಬೀಬುರ್ ರೆಹಮಾನ್ ತಿಳಿಸಿದ್ದಾರೆ.

ರ್ಯಾಲಿಗಳನ್ನು ವಿಫಲಗೊಳಿಸಲು ಇಂಟರ್ನೆಟ್ ಸ್ಥಗಿತ ಮಾಡಲಾಗಿದೆ. ಆದರೆ ನಗರದಲ್ಲಿ ಜನರ ಬೃಹತ್ ಗುಂಪುಗಳು ಜಮಾಯಿಸಿವೆ. ಇದು ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾರಣಾಂತಿಕ ಘರ್ಷಣೆಗೆ ಕಾರಣವಾಯಿತು. ‘ನಮ್ಮ ಪ್ರತಿಭಟನೆ ಮುಂದುವರಿಯುತ್ತದೆ’ ಎಂದು ರಾಜಧಾನಿಯಲ್ಲಿ ನಡೆದ ಮೆರವಣಿಗೆಯಲ್ಲಿ ಭಾಗವಹಿಸಿದವರು ಘೋಷಿಸಿದ್ದಾರೆ. ‘ಈ ಹತ್ಯೆಗಳಿಗೆ ಸರ್ಕಾರವೇ ಹೊಣೆಯಾಗಿರುವುದರಿಂದ ಶೇಖ್ ಹಸೀನಾ ಅವರು ತಕ್ಷಣ ರಾಜೀನಾಮೆ ನೀಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

1971ರಲ್ಲಿ ಪಾಕಿಸ್ತಾನದಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಯೋಧರ ಸಂಬಂಧಿಕರಿಗೆ ಕೆಲವು ಸಾರ್ವಜನಿಕ ವಲಯದ ಉದ್ಯೋಗಗಳನ್ನು ಮೀಸಲಿಡುವ ವ್ಯವಸ್ಥೆಯ ವಿರುದ್ಧ ಢಾಕಾ ಮತ್ತು ಇತರ ನಗರಗಳಲ್ಲಿ ಹಲವಾರು ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ.

ಇದನ್ನೂ ಓದಿ: Bangladesh Violence: ಬಾಂಗ್ಲಾ ಧಗ ಧಗ; ಭುಗಿಲೆದ್ದ ಹಿಂಸಾಚಾರಕ್ಕೆ 35 ಮಂದಿ ಬಲಿ

Exit mobile version