ಢಾಕಾ: ನಿರಂತರ ಪ್ರತಿಭಟನೆ, ಗಲಭೆಗಳ (Bangladesh Unrest, Bangladesh violence) ಬಳಿಕ ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ಬಾಂಗ್ಲಾದೇಶವನ್ನು (Bangladesh) ತೊರೆದು ಪರಾರಿಯಾಗಿರುವ ನಂತರ, ದೇಶದ ಮಧ್ಯಂತರ ಸರ್ಕಾರದ (interim Budget) ಮುಖ್ಯಸ್ಥರಾಗಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನಸ್ ( Nobel laureate Muhammad Yunus) ಅವರನ್ನು ನೇಮಕ ಮಾಡಲಾಗಿದೆ.
ಶೇಖ್ ಹಸೀನಾ ಅವರು ಬಾಂಗ್ಲಾದೇಶದ ಪ್ರಧಾನಿಯಾಗಿ ನಡೆಸಿದ 15 ವರ್ಷಗಳ ಆಡಳಿತ ಸೋಮವಾರ ಕೊನೆಗೊಂಡಿದೆ. ಒಂದು ತಿಂಗಳ ಭಾರೀ ಪ್ರತಿಭಟನೆಯ ನಂತರ ಆಕೆ ದೇಶ ತೊರೆದಿದ್ದು, ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ದೇಶದ ಸೇನೆಯು ಮಧ್ಯಂತರ ಸರ್ಕಾರವನ್ನು ರಚಿಸುವುದಾಗಿ ಘೋಷಿಸಿದೆ.
ಜುಲೈ ಆರಂಭದಿಂದಲೂ ಸರ್ಕಾರದ ವಿರುದ್ಧ ನಡೆದಿದ್ದ ರಾಷ್ಟ್ರವ್ಯಾಪಿ ಪ್ರತಿಭಟನೆಗಳನ್ನು ಹತ್ತಿಕ್ಕಲು ಶೇಖ್ ಹಸೀನಾ ಪ್ರಯತ್ನಿಸಿ ವಿಫಲರಾಗಿದ್ದಾರೆ. ಭಾನುವಾರ ಎಲ್ಲೆಡೆ ಘೋರ ಅಶಾಂತಿ ಉಲ್ಬಣಿಸಿತ್ತು. ಒಟ್ಟಾರೆ ಸುಮಾರು 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಆರಂಭದಲ್ಲಿ ಉದ್ಯೋಗದಲ್ಲಿ ಕೆಲವು ಬಗೆಯ ಮೀಸಲಾತಿ ವಿರೋಧಿಸಿ ಶುರುವಾದ ಪ್ರತಿಭಟನೆ, ಆ ಬಳಿಕ ಹಸೀನಾ ರಾಜೀನಾಮೆಗೆ ಒತ್ತಾಯಿಸಿದ ಚಳುವಳಿಯಾಗಿ ಬೆಳೆದಿತ್ತು.
ಮಧ್ಯಂತರ ಸರಕಾರದ ಆಡಳಿತಕ್ಕೆ ದಾರಿ ಮಾಡಿಕೊಡಲು ಬಾಂಗ್ಲಾದೇಶದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಮಂಗಳವಾರ ಸಂಸತ್ತನ್ನು ವಿಸರ್ಜಿಸಿದರು. ಪ್ರಧಾನಿ ಶೇಖ್ ಹಸೀನಾ ಸರ್ಕಾರದ ವಿರುದ್ಧ ಭಾರೀ ಪ್ರತಿಭಟನೆಗಳ ನಡುವೆ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದ ಒಂದು ದಿನದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಮಂಗಳವಾರ, ಬಾಂಗ್ಲಾದೇಶದ ವಿದ್ಯಾರ್ಥಿ ಮುಖಂಡರು ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ಅವರಿಗೆ ಉಸ್ತುವಾರಿ ಸರ್ಕಾರದ ನೇತೃತ್ವ ವಹಿಸುವಂತೆ ಕರೆ ನೀಡಿದರು. ಇದಕ್ಕೂ ಮುನ್ನ ದೇಶದ ಆಡಳಿತವನ್ನು ಸೈನ್ಯ ಸ್ವಾಧೀನಪಡಿಸಿಕೊಂಡಿದೆ. ಬಾಂಗ್ಲಾದೇಶದ ಮೊದಲ ಮಹಿಳಾ ನಾಯಕಿ ಖಲೀದಾ ಜಿಯಾ ಅವರನ್ನು ಮಂಗಳವಾರ ಗೃಹಬಂಧನದಿಂದ ಬಿಡುಗಡೆ ಮಾಡಲಾಗಿದೆ. ಬಾಂಗ್ಲಾದೇಶದ ಮೇಲಿನ ಪ್ರಾಬಲ್ಯಕ್ಕಾಗಿ ದೀರ್ಘಕಾಲದಿಂದ ನಡೆಯುತ್ತಿರುವ “ಬೇಗಮ್ಸ್ ಕದನ”ದಲ್ಲಿ ಇದು ಮತ್ತೊಂದು ಅಧ್ಯಾಯ ಎನ್ನಬಹುದು.
ರಕ್ಷಣಾ ಮುಖ್ಯಸ್ಥರು ಮತ್ತು ರಾಜಕೀಯ ಮುಖಂಡರೊಂದಿಗಿನ ಚರ್ಚೆಯ ನಂತರ, ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿಯ ಮುಖ್ಯಸ್ಥೆ ಖಲೀದಾ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರ ಕಚೇರಿ ಘೋಷಿಸಿತು. ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್, ಸಂಸತ್ತನ್ನು ವಿಸರ್ಜಿಸಿ ಶೀಘ್ರದಲ್ಲೇ ಮಧ್ಯಂತರ ಸರ್ಕಾರವನ್ನು ರಚಿಸುವುದಾಗಿ ಘೋಷಿಸಿದರು ಮತ್ತು ಖಲೀದಾ ಜಿಯಾ ಅವರನ್ನು ಬಿಡುಗಡೆ ಮಾಡಲು ಆದೇಶಿಸಿದರು.
ಭಾರತ ತನ್ನ ಪಕ್ಕದ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ಕಳವಳಗೊಳ್ಳುತ್ತಿದ್ದು, ಗಡಿ ಭದ್ರತಾ ಪಡೆಗಳನ್ನು ಸನ್ನದ್ಧತೆಯಲ್ಲಿಟ್ಟಿದೆ. ಬಾಂಗ್ಲಾದೇಶ- ಪಶ್ಚಿಮ ಬಂಗಾಳದ ಗಡಿಗಳು ಸುರಕ್ಷಿತವಾಗಿವೆ ಮತ್ತು ಭಾರತಕ್ಕೆ ಅನಧಿಕೃತ ಪ್ರವೇಶವನ್ನು ತಡೆಯಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ಅವರು ಭರವಸೆ ನೀಡಿದರು.
ಹಸೀನಾ ಅವರ ರಾಜೀನಾಮೆ ಮತ್ತು ನಿರ್ಗಮನದ ನಂತರ, ತನ್ನ ಸಾಲ ಕಾರ್ಯಕ್ರಮದ ಮೇಲೆ ಬಾಂಗ್ಲಾದೇಶದ ಘಟನೆಗಳ ಪ್ರಭಾವವನ್ನು ಮೌಲ್ಯಮಾಪನ ಮಾಡಲಾಗುತ್ತಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ. ಅಮೆರಿಕ ಇಲ್ಲಿ ಶಾಂತಿಗಾಗಿ ಕರೆ ನೀಡಿದೆ ಮತ್ತು ಸರ್ಕಾರ ರಚನೆಗೆ ಪ್ರಜಾಪ್ರಭುತ್ವ ಪ್ರಕ್ರಿಯೆಗೆ ಒತ್ತಾಯಿಸಿದೆ.
ಶೇಖ್ ಹಸೀನಾ ಅವರು ಬಾಂಗ್ಲಾದೇಶದ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸೋಮವಾರ ಸಂಜೆ ಭಾರತಕ್ಕೆ ಆಗಮಿಸಿದ್ದಾರೆ. ಗಾಜಿಯಾಬಾದ್‌ನ ಹಿಂಡನ್ ಏರ್ ಬೇಸ್‌ನಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ಬಾಂಗ್ಲಾದೇಶದ ಪ್ರಸ್ತುತ ಪರಿಸ್ಥಿತಿ ಮತ್ತು ತನ್ನ ಭವಿಷ್ಯದ ಯೋಜನೆಗಳ ಕುರಿತು ಅವರು ಚರ್ಚಿಸಿದರು.
ಇದನ್ನೂ ಓದಿ: Bangladesh Unrest: ಶೇಖ್ ಹಸೀನಾ ಬೆಂಬಲಿಗನ ಫೈವ್ ಸ್ಟಾರ್ ಹೊಟೇಲ್‌ಗೆ ಬೆಂಕಿ; 24 ಜನ ಸಜೀವ ದಹನ