ಬೆಂಗಳೂರು: ಬೆಂಗಳೂರಿನ ಆಸ್ತಿ ತೆರಿಗೆದಾರರಿಗೆ ಬಿಬಿಎಂಪಿ (BBMP) ಸದ್ಯಕ್ಕೆ ರಿಲೀಫ್ ನೀಡಿದೆ. ದುಪ್ಪಟ್ಟು ಆಸ್ತಿ ತೆರಿಗೆ (Property Tax) ಕಟ್ಟುವ ಬದಲು ಬಡ್ಡಿ ಕಟ್ಟಲು ಸುತ್ತೋಲೆ ಹೊರಡಿಸಿದೆ.
ಸ್ವಯಂ ಫೋಷಣೆ ಆಸ್ತಿ ತೆರಿಗೆ ಪದ್ಧತಿಯಲ್ಲಿ ವಲಯ ವರ್ಗೀಕರಣವನ್ನು ತಪ್ಪಾಗಿ ಘೋಷಣೆ ಮಾಡಲಾಗಿದ್ದು, ಆಸ್ತಿ ಮಾಲೀಕರಿಗೆ ದುಪ್ಪಟ್ಟು ತೆರಿಗೆ ಕಟ್ಟುವಂತೆ ನೋಟೀಸ್‌ಗಳನ್ನು ಬಿಬಿಎಂಪಿ ನೀಡಿತ್ತು. ಇದರಿಂದ ನಗರದ 78 ಸಾವಿರ ಆಸ್ತಿ ತೆರಿಗೆದಾರರಿಗೆ ಸಂಕಷ್ಟ ಎದುರಾಗಿತ್ತು.
ಬಿಬಿಎಂಪಿ ಎಲ್ಲರಿಗೂ ನೋಟೀಸ್ ಜಾರಿ ಮಾಡಿತ್ತು. ಇದೀಗ ದುಪ್ಪಟ್ಟು ದಂಡ ಮನ್ನಾ ಮಾಡಿ, ವ್ಯತ್ಯಾಸದ ಮೊತ್ತ ಮತ್ತು ಆ ಮೊತ್ತಕ್ಕೆ ಬ್ಯಾಂಕ್ ಬಡ್ಡಿ ದರ ಕಟ್ಟಲು ಸೂಚನೆ ನೀಡಿದೆ. ಬಿಬಿಎಂಪಿ ಮುಖ್ಯ ಆಯುಕ್ತರಿಂದ ಸುತ್ತೋಲೆ ಹೋಗಿದೆ.
ಸ್ವಯಂ ಘೋಷಣೆ ಆಸ್ತಿ ತೆರಿಗೆ ಪದ್ಧತಿಯಲ್ಲಿ ವಯಲಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಆಸ್ತಿ ಮಾಲೀಕರು ತಪ್ಪು ಮಾಡಿದ್ದಾರೆ. ಈ ತಪ್ಪನ್ನು ಬಿಬಿಎಂಪಿ ಸರಿಯಾದ ಸಮಯಕ್ಕೆ ಮಾಲೀಕರಿಗೆ ತಿಳಿಸಿಲ್ಲ. ಹೀಗಾಗಿ ತೆರಿಗೆದಾರರಿಂದ ದುಪ್ಪಟ್ಟು ಆಸ್ತಿ ತೆರಿಗೆ ಹಣವನ್ನು ಸಂಗ್ರಹಿಸುವಂತಿಲ್ಲ. ವ್ಯತ್ಯಾಸದ ಮೊತ್ತ ಮತ್ತು ಅದಕ್ಕೆ ಬ್ಯಾಂಕ್ ಬಡ್ಡಿ ದರವನ್ನು ವಿಧಿಸಬಹುದು ಎಂದು ಸುತ್ತೋಲೆ ನೀಡಲಾಗಿದೆ.
2016-17ನೇ ಸಾಲಿನಿಂದ ತಪ್ಪು ವರ್ಗೀಕಣದಲ್ಲಿ ಆಸ್ತಿ ತೆರಿಗೆ ಪಾವತಿಸಿದ್ದರೆ, ದುಪ್ಪಟ್ಟು ದಂಡದ ಬದಲು ಬ್ಯಾಂಕ್ ಬಡ್ಡಿ ದರ ಕಟ್ಟಬೇಕು. ಅಂದರೆ ಶೇ.6.75ರಷ್ಟನ್ನು ಪೂರ್ಣ ಅವಧಿಗೆ ವಿಧಿಸಬೇಕು ಎಂದು ಬಿಬಿಎಂಪಿ ಸುತ್ತೋಲೆಯಲ್ಲಿ ತಿಳಿಸಿದೆ.
ಇತ್ತೀಚೆಗೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಬೆಂಗಳೂರು ಮಹಾನಗರ ಪಾಲಿಕೆ ಇನ್ನೊಂದು ಗುಡ್ ನ್ಯೂಸ್ ಅನ್ನೂ ಕೊಟ್ಟಿದೆ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಕಟ್ಟಡ ಮಾಲೀಕರಿಗೆ ಶೇಕಡ 50ರಷ್ಟು ತೆರಿಗೆ (Tax) ಪಾವತಿಗೆ ಪಾಲಿಕೆ ಆಫರ್ ನೀಡಿದೆ. ಆರ್ಥಿಕ ವರ್ಷ ಮುಗಿಯುವುದರೊಳಗೆ ಆದಾಯ ಗುರಿ ತಲುಪಲು ಬಿಬಿಎಂಪಿ ಪ್ಲ್ಯಾನ್ ಮಾಡಿದ್ದು ರಿಯಾಯಿತಿ ನೀಡಿದೆ. ಬಾಕಿ ಇರೋ ತೆರಿಗೆಯಲ್ಲಿ ಅರ್ಧದಷ್ಟು ತೆರಿಗೆ ಪಾವತಿ ಮಾಡಿ ಅಪೀಲು ಸಲ್ಲಿಸಿದವರಿಗೆ ಮಾತ್ರ ತೆರಿಗೆ ರಿಯಾಯಿತಿ ನೀಡಲಾಗುತ್ತೆ ಎಂದು ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಇದಕ್ಕೂ ಮುನ್ನ ದುಪ್ಪಟ್ಟು ತೆರಿಗೆ ಪಾವತಿಗೆ ನೀಡಲಾಗಿದ್ದ ಸೂಚನೆಯನ್ನು ಅನೇಕರು ವಿರೋಧಿಸಿದ್ದರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೇ ಇದನ್ನು ಟೀಕಿಸಿದ್ದರು. ಇತ್ತೀಚೆಗೆ ಆಸ್ತಿ ತೆರಿಗೆ ಬಾಕಿದಾರರ ಹೆಸರನ್ನು ಸಾರ್ವಜನಿಕವಾಗಿ ಧ್ವನಿವರ್ಧಕದಲ್ಲಿ ಕೂಗಿ ಹೇಳಿ ಮುಜುಗರ ಸೃಷ್ಟಿಸಲೂ ಬಿಬಿಎಂಪಿ ಸಿದ್ಧತೆ ನಡೆಸಿದೆ.
ಇದನ್ನೂ ಓದಿ: Property Tax: ಆಸ್ತಿ ತೆರಿಗೆ ಬಾಕಿದಾರರ ಮಾನ ಹರಾಜು ಹಾಕಲು ಬಿಬಿಎಂಪಿ ಸಿದ್ಧತೆ! ಸಾರ್ವಜನಿಕವಾಗಿ ಧ್ವನಿವರ್ಧಕದಲ್ಲಿ ಘೋಷಣೆ