Site icon Vistara News

ವಿಸ್ತಾರ ಸಂಪಾದಕೀಯ: ಅಡಿಕೆ ಆರೋಗ್ಯಕ್ಕೆ ಹಾನಿಕರವಲ್ಲ ಎಂದಿದೆ ಸಂಶೋಧನಾ ವರದಿ, ಇನ್ನಾದರೂ ಕೇಂದ್ರ ಸ್ಪಷ್ಟ ನಿರ್ಧಾರಕ್ಕೆ ಬರಲಿ

Betel Nuts

#image_title

ಅಡಿಕೆ ಸೇವನೆಯು ಯಾವುದೇ ರೀತಿಯಲ್ಲೂ ಆರೋಗ್ಯಕ್ಕೆ ಮಾರಕವಲ್ಲ ಮತ್ತು ಇದರಲ್ಲಿ ಔಷಧೀಯ ಗುಣಗಳಿವೆ ಎಂದು ಬೆಂಗಳೂರಿನ ಎಂ.ಎಸ್. ರಾಮಯ್ಯ ವಿಶ್ವವಿದ್ಯಾಲಯ ಕೈಗೊಂಡ ಸಂಶೋಧನೆಯಿಂದ ತಿಳಿದು ಬಂದಿದೆ. ಈ ಹಿಂದೆ ಕೆಲವು ಆಧಾರ ರಹಿತ ವರದಿಗಳು ಅಡಿಕೆ ಸೇವನೆಯು ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿಸಿದ್ದವು. ಹಾಗಾಗಿ, ಈ ಹೊಸ ಸಂಶೋಧನಾ ವರದಿಯು ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ.

ಜತೆಗೆ, ರಾಜ್ಯದ ಅಡಿಕೆ ಕೃಷಿ ಬೆಳೆಗಾರರಿಗೆ ಇದು ಖುಷಿ ಕೊಡುವ ಸಂಗತಿಯಾಗಿದೆ. ಅಡಿಕೆಯು ಆರೋಗ್ಯಕ್ಕೆ ಹಾನಿಕರವೇ, ಆರೋಗ್ಯಕಾರಕವೇ ಎಂಬ ಕುರಿತು ಹಲವು ವರ್ಷಗಳಿಂದಲೂ ಚರ್ಚೆಗಳು, ವಾದ-ವಿವಾದಗಳು ನಡೆಯುತ್ತಲೇ ಇದೆ. ಈಗ ಅಡಿಕೆ ಆರೋಗ್ಯಕಾರಕ ಎಂದು ಸಂಗತಿ ‘ಸತ್ಯ’ವಾಗಿದ್ದು, ಬೆಳೆಗಾರರಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಈ ಹಿಂದೆ ಕೇಂದ್ರ ಸರ್ಕಾರವು ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿತ್ತು. ಹಾಗಾಗಿ, ಬೆಂಗಳೂರಿನ ಎಂ ಎಸ್ ರಾಮಯ್ಯ ವಿಶ್ವವಿದ್ಯಾಲಯಕ್ಕೆ ಈ ಬಗ್ಗೆ ಸಂಶೋಧನೆ ಕೈಗೊಳ್ಳುವಂತೆ ವರ್ಷದ ಹಿಂದೆ ಕೇಳಿಕೊಳ್ಳಲಾಗಿತ್ತು. ಈಗ ಸಂಶೋಧನೆಯ ವರದಿಯು ಕೈ ಸೇರಿದ್ದು, ಅಡಿಕೆ ಬಗೆಗಿನ ಎಲ್ಲ ಆರೋಪಗಳು ಸುಳ್ಳಾಗಿವೆ. ಅಡಿಕೆ ಹಾನಿಕಾರವಲ್ಲ ಎಂದು ಸಾಬೀತಾಗಿದೆ.

ಈಗ ಪ್ರಾಥಮಿಕ ವರದಿಯಷ್ಟೇ ಬಂದಿದ್ದು, ಇನ್ನೂ ವಿವರವಾದ ವರದಿ ಕೈಸೇರಲಿದೆ ಎಂದು ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷರೂ ಆಗಿರುವ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದ್ದಾರೆ. ಬಿ.ಪಿ, ಡಯಾಬಿಟಿಸ್ ನಿಯಂತ್ರಣಕ್ಜೆ, ಹೊಟ್ಟೆ ನೋವು ನಿವಾರಣೆಗೆ ಅಡಿಕೆ ಔಷಧ ರೀತಿಯಲ್ಲಿ ಕೆಲಸ ಮಾಡುತ್ತದೆ. ಜತೆಗೆ, ಗಾಯ ಗುಣಪಡಿಸುವ ಗುಣವೂ ಇದರಲ್ಲಿದೆ ಎಂಬುದು ಸಂಶೋಧನೆಯಲ್ಲಿ ತಿಳಿದು ಬಂದಿದೆ. ಹಾಗಾಗಿ, ಈ ಹೊಸ ಸಂಶೋಧನಾ ವರದಿಯು ಭಾರತದ ಅಡಿಕೆ ಕೃಷಿಗೆ ಹೊಸ ದಿಕ್ಕು, ಹೊಸ ಆಯಾಮ ಕಲ್ಪಿಸಲಿದೆ.

ಈವರೆಗೆ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಮಿಥ್ಯವನ್ನೇ ಬಹುತೇಕರು ನಂಬಿದ್ದರಿಂದ, ಅಡಿಕೆ ಕೃಷಿಗೆ ತುಸು ಹಿನ್ನಡೆಯಾಗಿತ್ತು. ನೆರೆ ಪ್ರವಾಹ, ಹಿಂಗಾರು ಒಣಗುವ ರೋಗ, ಹಿಂಗಾರು ತಿನ್ನುವ ಹುಳು, ಎಲೆ ಚುಕ್ಕೆ ರೋಗ, ಹಳದಿ ಎಲೆ ರೋಗ ಹೀಗೆ ನಾನಾ ಸಂಕಷ್ಟಗಳ ನಡುವೆ ಅಡಿಕೆಯನ್ನು ಬೆಳೆದು, ಮಾರುಕಟ್ಟೆಗೆ ಪೂರೈಸುವಷ್ಟರಲ್ಲಿ ಧಾರಣೆ ಕುಸಿದು, ಬೆಳಗಾರರಿಗೆ ನಷ್ಟವೇ ಆಗುತ್ತಿತ್ತು. ಜತೆಗೆ, ಸರ್ಕಾರವೇ ಮುಂದೆ ನಿಂತು, ಆರೋಗ್ಯಕ್ಕೆ ಹಾನಿಕಾರ ಎಂದು ಆಧಾರ ರಹಿತವಾಗಿ ಹೇಳಿದ್ದು ಗಾಯದ ಮೇಲೆ ಉಪ್ಪು ಸವರಿದಂತಾಗಿತ್ತು. ಬಹುಶಃ ಮುಂದಿನ ದಿನಗಳಲ್ಲಿ ಮಿಥ್ಯಾರೋಪಗಳಿಗೆಲ್ಲ ಅಂತ್ಯ ದೊರೆಯಲಿದೆ.

ಭಾರತದಲ್ಲಿ ಸುಮಾರು 4.45 ಲಕ್ಷ ಹೆಕ್ಟೇರ್‌ ಪ್ರದೇಶಗಳಲ್ಲಿ 7.29 ಲಕ್ಷ ಟನ್‌ ಅಡಿಕೆ ಉತ್ಪಾದನೆಯಾಗುತ್ತದೆ. ಈ ಪೈಕಿ ಕರ್ನಾಟಕದಲ್ಲೇ ಅತಿ ಹೆಚ್ಚು ಅಂದರೆ, 2.18 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ 4.57 ಲಕ್ಷ ಟನ್‌ ಉತ್ಪಾದಿಸಲಾಗುತ್ತಿದೆ. ಎರಡನೇ ಸ್ಥಾನದಲ್ಲಿ ಕೇರಳ ಮತ್ತು ಮೂರನೇ ಸ್ಥಾನದಲ್ಲಿ ಅಸ್ಸಾಂ ರಾಜ್ಯಗಳಿವೆ. ಅಂದರೆ, ಅಡಿಕೆ ಕೃಷಿಯಿಂದ ಲಾಭವಾಗಲೀ, ನಷ್ಟವಾಗಲೀ ಅದು ನಮ್ಮ ರಾಜ್ಯಕ್ಕೆ ಹೆಚ್ಚು ಅನ್ವಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಈಗ ಹೊರ ಬಿದ್ದಿರುವ ಸಂಶೋಧನಾ ವರದಿಯು ಹೆಚ್ಚು ಮಹತ್ವದ ಪಡೆದುಕೊಂಡಿದೆ. ನಮ್ಮ ರಾಜ್ಯ ಸರ್ಕಾರ ಹಾಗೂ ರಾಜ್ಯದ ಅಡಿಕೆ ಟಾಸ್ಕ್‌ ಫೋರ್ಸ್‌, ಕೇಂದ್ರ ಸರ್ಕಾರಕ್ಕೆ ಅಡಿಕೆ ಹಾನಿಕಾರಕವಲ್ಲ ಎಂಬ ಕುರಿತು ಸಾಕ್ಷ್ಯಗಳು, ವರದಿಗಳ ಸಮೇತ ಮನವರಿಕೆ ಮಾಡಿಕೊಡುವ ಕೆಲಸವನ್ನು ಮಾಡಬೇಕು.

ಇದನ್ನೂ ಓದಿ: Areca News: ಅಡಿಕೆ ಆರೋಗ್ಯಕ್ಕೆ ಮಾರಕವಲ್ಲ, ಔಷಧೀಯ ಗುಣವಿದೆ: ರಾಮಯ್ಯ ವಿವಿ ಸಂಶೋಧನೆ

ಕರ್ನಾಟಕದ ಅಡಿಕೆ ಬೆಳೆಗಾರರು ಆತಂಕ ಪಡಲು ಇನ್ನೂ ಹಲವು ಕಾರಣಗಳಿವೆ. ಈ ಪೈಕಿ ಅಡಿಕೆ ಧಾರಣೆ ಮತ್ತು ಆಮದು. ಕಳೆದ ಅಕ್ಟೋಬರ್‌ನಲ್ಲಿ, ಭೂತಾನ್‌ನಿಂದ ಕೇಂದ್ರ ಸರ್ಕಾರವು ಕನಿಷ್ಠ ಆಮದು ಬೆಲೆ (ಎಂಐಪಿ)ಯಲ್ಲಿ ಯಾವುದೇ ಷರತ್ತು ಇಲ್ಲದೆಯೇ 17,000 ಮೆಟ್ರಿಕ್‌ ಟನ್‌ ಹಸಿ ಅಡಿಕೆಯನ್ನು ಮುಕ್ತವಾಗಿ ಆಮದು ಮಾಡಲು ಅವಕಾಶ ನೀಡಿತ್ತು. ಸಹಜವಾಗಿಯೇ ಅತಿ ಹೆಚ್ಚು ಅಡಿಕೆ ಬೆಳೆಯುವ ಕರ್ನಾಟಕ ರೈತರ ಮೇಲೆ ಇದು ದುಷ್ಪರಿಣಾಮ ಬೀರಿತು. ಈ ಬಗ್ಗೆ ಸರ್ಕಾರವನ್ನು ಗಮನ ಸೆಳೆಯುವ ಕೆಲಸವೂ ನಡೆಯಿತು. ಹಾಗೆಯೇ, ಅಡಿಕೆ ಧಾರಣೆಯನ್ನು ಸುಸ್ಥಿರಗೊಳಿಸುವ ಪ್ರಯತ್ನವನ್ನು ಮಾಡಬೇಕು. ಈ ನಿಟ್ಟಿನಲ್ಲಿ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬಹುದು, ಯಾವೆಲ್ಲ ದಾರಿಗಳನ್ನು ಹುಡುಕಬಹುದು ಎಂಬ ಕುರಿತು ಮತ್ತಷ್ಟು ಅಧ್ಯಯನಗಳನ್ನು ಕೈಗೊಂಡು, ಅವುಗಳನ್ನು ಜಾರಿಗೆ ಪ್ರಯತ್ನಿಸಬೇಕು. ಜತೆಗೆ ಕೇಂದ್ರ ಸರ್ಕಾರಕ್ಕೂ ಈ ಬಗ್ಗೆ ಮನವರಿಕೆ ಮಾಡಿಕೊಟ್ಟು, ಆಮದು ಮೇಲಿನ ಸುಂಕವನ್ನು ಇನ್ನಷ್ಟು ಹೆಚ್ಚಿಸಿ, ದೇಶೀಯ ಅಡಿಕೆ ಬೆಳೆಗಾರರ ಹಿತವನ್ನು ಕಾಪಾಡಲು ಮುಂದಾಗಬೇಕು. ಈ ಯಾವ ಕೆಲಸಗಳೂ ಅಸಾಧ್ಯವಲ್ಲ. ರಾಜಕೀಯ ಇಚ್ಛಾಶಕ್ತಿ ಬೇಕಷ್ಟೇ. ಆ ಕೆಲಸವನ್ನು ರಾಜ್ಯ ಸರ್ಕಾರ ಮಾಡಲಿದೆ ಎಂದು ಆಶಿಸೋಣ.

Exit mobile version