ಹಾಸನ: ನಿನ್ನೆ ಭವಾನಿ ರೇವಣ್ಣ (Bhavani revanna) ಅವರ ಜಾಮೀನು ಅರ್ಜಿ (bail plea) ರದ್ದಾಗಿದ್ದು, ಇಂದು ಅವರ ಬಂಧನ (Arrest) ಸಾಧ್ಯತೆ ಇದೆ. ಕೆ.ಆರ್ ನಗರದ ಸಂತ್ರಸ್ತ ಮಹಿಳೆ ಕಿಡ್ನಾಪ್ ಕೇಸಿನಲ್ಲಿ (kidnap case) ಎಸ್‌ಐಟಿಗೆ (SIT) ಭವಾನಿ ರೇವಣ್ಣ ಬೇಕಾಗಿದ್ದು, ಇಂದು ಹೊಳೆನರಸೀಪುರದ ಅವರ ಮನೆಗೆ ತನಿಖೆಗೆ ಬರುವುದಾಗಿ ಎಸ್‌ಐಟಿ ನೋಟೀಸ್ (SIT Notice) ನೀಡಿತ್ತು. ಆದರೆ ಭವಾನಿ ಹೊಳೆನರಸೀಪುರದ ಮನೆಯಲ್ಲೂ, ಬೆಂಗಳೂರಿನ ಮನೆಯಲ್ಲೂ ಕಾಣಿಸಿಕೊಂಡಿಲ್ಲ.
ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ನಿನ್ನೆ ರದ್ದಾಗಿರುವ ಹಿನ್ನೆಲೆಯಲ್ಲಿ, ಯಾವುದೇ ಕ್ಷಣದಲ್ಲಿ ಭವಾನಿ ರೇವಣ್ಣ ಬಂಧನ ಸಾಧ್ಯತೆ ಇದ್ದು, ಅದಕ್ಕಾಗಿ ಎಸ್ಐಟಿ ಬಲೆ ಬೀಸಿದೆ. ಇಂದು ಭವಾನಿ ರೇವಣ್ಣ ವಿಚಾರಣೆಗಾಗಿ ಹೊಳೆನರಸೀಪುರಕ್ಕೆ ಎಸ್ಐಟಿ ಟೀಂ ಆಗಮಿಸಲಿದೆ. ಕಿಡ್ನಾಪ್ ಆರೋಪ ಪ್ರಕರಣದಲ್ಲಿ ತಮ್ಮ ತನಿಖೆ ಅವಶ್ಯಕತೆ ಇದ್ದು, ತನಿಖೆಗೆ ಸಹಕರಿಸಬೇಕಾಗಿ ಎಸ್‌ಐಟಿ ಹೇಳಿತ್ತು. ತನಿಖೆಗೆ ಹೊಳೆನರಸೀಪುರದ ನಿವಾಸದಲ್ಲಿ ತಾವು ಲಭ್ಯವಿರುವುದಾಗಿ ಮೇ 15ರಂದು ಎಸ್ಐಟಿಗೆ ಭವಾನಿ ಲಿಖಿತ ಪತ್ರ ನೀಡಿದ್ದರು.
ಭವಾನಿ ಅವರ ಪತ್ರವನ್ನೇ ಉಲ್ಲೇಖಿಸಿ ನಿನ್ನೆ ಎಸ್‌ಐಟಿ ನೋಟೀಸ್ ನೀಡಿತ್ತು. ಪ್ರಕರಣ ಸಂಬಂಧ ತಮ್ಮ ವಿಚಾರಣೆ ಅಗತ್ಯ ಇದೆ, ಹಾಗಾಗಿ ಜೂನ್ 1ರಂದು ವಿಚಾರಣೆಗೆ ಬರುವುದಾಗಿ ತಿಳಿಸಿತ್ತು. ಜೂನ್ 1ರ ಶನಿವಾರ ಮಹಿಳಾ ಅಧಿಕಾರಿ ಜೊತೆ ಹೊಳೆನರಸೀಪುರದ ಚನ್ನಾಂಬಿಕ ನಿವಾಸಕ್ಕೆ ತಾವು ಬರುವುದಾಗಿ ಎಸ್‌ಐಟಿ ಮುಖ್ಯಸ್ಥ ಹೇಮಂತ್ ಕುಮಾರ್ ತಿಳಿಸಿದ್ದರು. ಬೆಳಿಗ್ಗೆ 10ರಿಂದ ಸಂಜೆ 5 ಗಂಟೆ ನಡುವೆ ನೀವು ತಿಳಿಸಿದ ವಿಳಾಸಕ್ಕೆ ಬರುತ್ತೇವೆ. ಈ ಸಮಯದಲ್ಲಿ ನೀವು ಖುದ್ದು ಹಾಜರಿರಬೇಕು ಎಂದು ಸೂಚಿಸಿದ್ದರು. ಆದರೆ ಭವಾನಿ ರೇವಣ್ಣ ತಮ್ಮ ನಿವಾಸದಲ್ಲಿ ಇಲ್ಲ ಎಂದು ತಿಳಿದುಬಂದಿರುವ ಕಾರಣ ಅವರು ಎಲ್ಲಿದ್ದಾರೆ ಎಂದು SIT ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಭವಾನಿ ರೇವಣ್ಣ ಅವರಿಗೆ ಕ್ಯಾನ್ಸರ್ (Cancer) ಇದೆ. ಚಿಕಿತ್ಸೆ ಪಡೆಯಲು ನಿರೀಕ್ಷಣಾ ಜಾಮೀನು ನೀಡಬೇಕೆಂದು ಭವಾನಿ ಪರ ವಕೀಲರು ಕೋರ್ಟ್‌ನಲ್ಲಿ (Bengaluru Court) ವಾದ ಮಾಡಿದ್ದರು. ಲೈಂಗಿಕ ದೌರ್ಜನ್ಯದ ಸಂತ್ರಸ್ತೆಯನ್ನು ಕಿಡ್ನಾಪ್ ಮಾಡಿದ ಆರೋಪ ಎದುರಿಸುತ್ತಿರುವ ಭವಾನಿ ರೇವಣ್ಣ ವಿರುದ್ಧ ದೂರು ದಾಖಲಾಗಿತ್ತು. ಬಂಧನ ಭೀತಿಯಿಂದ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್, ಅರ್ಜಿಯನ್ನು ವಜಾಗೊಳಿಸಿದೆ. ಪ್ರಕರಣದಲ್ಲಿ ದಾಖಲಾಗಿದ್ದ IPC ಸೆಕ್ಷನ್ 120ಬಿ ಕ್ರಿಮಿನಲ್ ಕಾನ್ಸ್‌ಪಿರೆಸಿಯನ್ನು ಗಂಭೀರವಾಗಿ ಪರಿಗಣಿಸಿರುವ ಕೊರ್ಟ್, ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದೆ.
ನಿನ್ನೆ ಅವರ ಪುತ್ರ, ಪ್ರಕರಣದ ಪ್ರಧಾನ ಆರೋಪಿ ಪ್ರಜ್ವಲ್ ರೇವಣ್ಣ (Prajwal Revanna Case) ಅವರನ್ನು ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸಲಾಗಿದ್ದು, ಆರು ದಿನಗಳ ಪೊಲೀಸ್ ಕಸ್ಟಡಿಗೆ ಕೋರ್ಟ್ ನೀಡಿದೆ. ಪ್ರಜ್ವಲ್ ಅವರ ವೈದ್ಯಕೀಯ ತಪಾಸಣೆ ಕೂಡ ನಡೆಸಲಾಗಿದೆ. ಪ್ರಜ್ವಲ್ ಅವರನ್ನು ಕರೆದೊಯ್ದು ಸ್ಥಳ ಮಹಜರು ನಡೆಸಲು ಎಸ್‌ಐಟಿ ಮುಂದಾಗಿದೆ.
ಇದನ್ನೂ ಓದಿ: Prajwal Revanna Case: ಭವಾನಿ ರೇವಣ್ಣ ಕಾರು ಚಾಲಕನನ್ನು ವಶಕ್ಕೆ ಪಡೆದ ಎಸ್‌ಐಟಿ