ಬೆಂಗಳೂರು: 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ದಾಖಲಾದ ಪೋಕ್ಸೊ ಕೇಸ್‌ನಲ್ಲಿ (POCSO Case) ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa) ಅವರಿಗೆ ಕರ್ನಾಟಕ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಹೈಕೋರ್ಟ್‌ನ ಮುಂದಿನ ವಿಚಾರಣೆವರೆಗೆ ಬಿ.ಎಸ್.ಯಡಿಯೂರಪ್ಪ ಅವರನ್ನು ಬಂಧಿಸಬಾರದು ಎಂದು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರ ಏಕಸದಸ್ಯ ಪೀಠವು ಆದೇಶ ಹೊರಡಿಸಿದೆ. ಇದರಿಂದಾಗಿ, ಸಿಐಡಿ ಅಧಿಕಾರಿಗಳಿಂದ ಬಂಧನದ ಭೀತಿಯಲ್ಲಿ ಯಡಿಯೂರಪ್ಪ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಆದರೆ, ಜೂನ್ 17ರಂದು ಸಿಐಡಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಬೇಕು ಎಂದು ಯಡಿಯೂರಪ್ಪ ಅವರಿಗೆ ಕೋರ್ಟ್ ಸೂಚಿಸಿದೆ. ವಿಚಾರಣೆಯನ್ನು ಎರಡು ವಾರ ಮುಂದೂಡಲಾಗಿದೆ.
ಬಿ.ಎಸ್.ಯಡಿಯೂರಪ್ಪ ಅವರ ಪರವಾಗಿ ಹಿರಿಯ ವಕೀಲ ಸಿ.ವಿ. ನಾಗೇಶ್ ಅವರು ವಾದ ಮಂಡಿಸಿದರು. “ಪೋಕ್ಸೊ ಕೇಸ್‌ಗೆ ಸಂಬಂಧಿಸಿದಂತೆ ಎರಡು ಅರ್ಜಿಗಳನ್ನು ಸಲ್ಲಿಸಲಾಗಿದೆ. ಒಂದು ಪ್ರಕರಣವನ್ನು ರದ್ದುಗೊಳಿಸುವಂತೆ ಹಾಗೂ ಇನ್ನೊಂದು ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ಅರ್ಜಿ ಸಲ್ಲಿಸಲಾಗಿದೆ. ಪ್ರಕರಣದಲ್ಲಿ ದೂರುದಾರೆಗೆ ಬ್ಲ್ಯಾಕ್‌ಮೇಲ್ ಮಾಡುವುದೇ ಕೆಲಸವಾಗಿದೆ. ಪ್ರಕರಣದಲ್ಲಿ ಸಂತ್ರಸ್ತೆಯ ತಾಯಿ ದೂರು ನೀಡಿದ್ದಾರೆ. ಆಕೆಯ ವೃತ್ತಿಯೇ ಬೇರೆಯವರ ವಿರುದ್ಧ ಕೇಸ್ ದಾಖಲಿಸುವುದಾಗಿದೆ. ಇದುವರೆಗೆ ಮಹಿಳೆಯು ಸುಮಾರು 53 ಪ್ರಕರಣಗಳನ್ನು ದಾಖಲಿಸಿದ್ದಾರೆ. ಇಲ್ಲಿ ಭಾವನಾತ್ಮಕ ಅಂಶಗಳಿಗಿಂತ ವಾಸ್ತವಾಂಶಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ” ಎಂದು ಹೇಳಿದರು.
ಆಗ ನ್ಯಾಯಾಧೀಶರು, “ಎಫ್‌ಐಆರ್ ದಾಖಲಿಸಿದ್ದು ಯಾರು?” ಎಂದು ಪ್ರಶ್ನಿಸಿದರು. ಆಗ ನಾಗೇಶ್, “ಸಂತ್ರಸ್ತೆಯ ತಾಯಿ” ಎಂದರು. “ಆಕೆಯ ಉದ್ಯೋಗ ಏನು” ಎಂದು ಜಡ್ಜ್ ಕೇಳಿದ ಪ್ರಶ್ನೆಗೆ, “ಬೇರೆಯವರ ವಿರುದ್ಧ ಕೇಸ್ ಹಾಕುವುದೇ ಆಕೆಯ ಕೆಲಸವಾಗಿದೆ” ಎಂದು ನಾಗೇಶ್ ಹೇಳಿದರು. “ಉದ್ಯೋಗ ಏನು ಅಂತ ನಮೂದಿಸಿದ್ದಾರೆ” ಎಂದು ಜಡ್ಜ್ ಕೇಳಿದ್ದಕ್ಕೆ “ಉದ್ಯಮಿ” ಎಂದು ನಾಗೇಶ್ ಹೇಳಿದರು. ಆಗ ನ್ಯಾಯಾಲಯವು, “ಮಹಿಳಾ ಉದ್ಯಮಿ ಎಂದೇ ಪರಿಗಣಿಸಲಾಗುತ್ತದೆ” ಎಂದಿತು. “ಸಿಐಡಿ ನೋಟಿಸ್ ಬಳಿಕ ವಿಚಾರಣೆಗೆ ಹಾಜರಾಗಿದ್ದಾರೆ. ಧ್ವನಿ ಪರೀಕ್ಷೆಗೂ ಯಡಿಯೂರಪ್ಪ ಅವರು ಸಹಕಾರ ನೀಡಿದ್ದಾರೆ. ಹಾಗಾಗಿ, ಪ್ರಕರಣದಲ್ಲಿ ಯಡಿಯೂರಪ್ಪ ಅವರನ್ನು ಬಂಧಿಸುವ ಅವಶ್ಯಕತೆ ಇಲ್ಲ” ಎಂದು ನಾಗೇಶ್ ಹೇಳಿದರು.
POCSO case against former Karnataka CM and senior BJP leader B.S. Yediyurappa | Coercive proceedings of arrest and detention are kept on hold till the next date of hearing. The petitioner to appear before jurisdictional police on June 17.
— ANI (@ANI) June 14, 2024
ಅಡ್ವೊಕೇಟ್ ಜನರಲ್ ವಾದವೇನಿತ್ತು?
ಅಡ್ವೊಕೇಟ್ ಜನರಲ್ (AG) ಶಶಿಕಿರಣ್ ಶೆಟ್ಟಿ ಅವರು ಸಿಐಡಿ ಪರ ವಾದ ಮಂಡಿಸಿದರು. “ಮಹಿಳೆಯು 53 ಕೇಸ್‌ಗಳನ್ನು ದಾಖಲಿಸಿದ್ದಾರೆ ಎಂಬುದಾಗಿ ಅರ್ಜಿದಾರರು (ಬಿಎಸ್‌ವೈ) ಹೇಳಿದ್ದಾರೆ. ಆದರೆ, ಮಹಿಳೆಯು ಆರು ಕೇಸ್‌ಗಳನ್ನು ಮಾತ್ರ ದಾಖಲಿಸಿದ್ದಾರೆ. ದೂರು ನೀಡಿದ ಮಹಿಳೆಯು ಕೆಲ ದಿನಗಳ ಹಿಂದೆ ಮೃತಪಟ್ಟಿದ್ದಾರೆ” ಎಂದರು. ಆಗ ನ್ಯಾ.ಕೃಷ್ಣ ದೀಕ್ಷಿತ್, “ಮಹಿಳೆ ಯಾವಾಗ ಮೃತಪಟ್ಟರು” ಎಂದು ಪ್ರಶ್ನಿಸಿದರು. “2024ರ ಮೇ 27ರಂದು ಮಹಿಳೆ ಮೃತಪಟ್ಟಿದ್ದಾರೆ” ಎಂದು ಎ.ಜಿ ತಿಳಿಸಿದರು. “ಮೃತಪಡಲು ಕಾರಣವೇನು” ಎಂದು ನ್ಯಾಯಮೂರ್ತಿ ಕೇಳಿದ ಪ್ರಶ್ನೆಗೆ, “ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ” ಎಂದು ಶಶಿಕಿರಣ್ ಶೆಟ್ಟಿ ತಿಳಿಸಿದರು.
“ಅರೆಸ್ಟ್ ವಾರಂಟ್ ಏಕೆ” ಎಂದು ಕೋರ್ಟ್ ಪ್ರಶ್ನೆ ಕೇಳಿತು. “ಆರೋಪಿಯು ದೆಹಲಿಯಲ್ಲಿದ್ದಾರೆ. ಪ್ರಕರಣದ ವ್ಯಾಪ್ತಿಯಿಂದ ಅವರು ಹೊರಗಿದ್ದಾರೆ. ಹಾಗಾಗಿ, ಅರೆಸ್ಟ್ ವಾರಂಟ್” ಎಂದು ಎ.ಜಿ ತಿಳಿಸಿದರು. ಅಷ್ಟೇ ಅಲ್ಲ, “ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದಿದೆ. ಸಿಐಡಿ ನೋಟಿಸ್ ಕಳುಹಿಸಿದರೂ (ಜೂನ್ 11) ಆರೋಪಿಯು ವಿಚಾರಣೆಗೆ ಹಾಜರಾಗಿಲ್ಲ. ಅವರು ದೆಹಲಿಗೆ ತೆರಳಿದ್ದರು” ಎಂದು ಕೋರ್ಟ್ ತಿಳಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು “ಬಿ.ಎಸ್.ಯಡಿಯೂರಪ್ಪ ಅವರು ಮಾಜಿ ಮುಖ್ಯಮಂತ್ರಿಯಾಗಿದ್ದಾರೆ. ಅವರು ಜೂನ್ 17ರಂದು ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದರೂ ಕೋರ್ಟ್ ಹೋಗಿ ಅರೆಸ್ಟ್ ವಾರಂಟ್ ತಂದಿದ್ದೀರಿ. ನಾಲ್ಕು ದಿನ ತಡವಾಗಿ ವಿಚಾರಣೆಗೆ ಹಾಜರಾಗಿದ್ದರೆ ಆಕಾಶವೇನೂ ಕಳಚಿ ಬೀಳುತ್ತಿರಲಿಲ್ಲ. ಹಾಗಾಗಿ, ಅರೆಸ್ಟ್ ವಾರಂಟ್ ಬಗ್ಗೆ ನಮಗೆ ಅನುಮಾನವಿದೆ. ಮುಂದಿನ ವಿಚಾರಣೆವರೆಗೂ ಯಡಿಯೂರಪ್ಪ ಅವರನ್ನು ಬಂಧಿಸಬಾರದು” ಎಂಬುದಾಗಿ ಏಕಸದಸ್ಯ ಪೀಠವು ಆದೇಶ ಹೊರಡಿಸಿತು.
ಏನಿದು ಪ್ರಕರಣ?
2024ರ ಫೆಬ್ರವರಿ 2ರಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಾರ್ಚ್ 14ರಂದು ಪೋಕ್ಸೊ ಕಾಯ್ದೆ ಅಡಿಯಲ್ಲಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಇದಾದ ಬಳಿಕ ಬಿ.ಎಸ್.ಯಡಿಯೂರಪ್ಪ ಅವರು ಸಿಐಡಿ ಅಧಿಕಾರಿಗಳ ವಿಚಾರಣೆಗೂ ಹಾಜರಾಗಿದ್ದರು. ಆದರೆ, ಎಫ್‌ಐಆರ್ ದಾಖಲಾದ ಮೂರು ತಿಂಗಳ ಬಳಿಕ ಪ್ರಕರಣವೀಗ ಮತ್ತೆ ಮುನ್ನೆಲೆಗೆ ಬಂದಿದೆ. ಜೂನ್ 12ರಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಬೇಕು ಎಂಬುದಾಗಿ ಜೂನ್ 11ರಂದೇ ಸಿಐಡಿ ಅಧಿಕಾರಿಗಳು ನೋಟಿಸ್ ನೀಡಿದ್ದರು.
ಇದನ್ನೂ ಓದಿ: BS Yediyurappa: ಪೋಕ್ಸೊ ಕೇಸ್; ಯಡಿಯೂರಪ್ಪ ವಿರುದ್ಧ ಅರೆಸ್ಟ್ ವಾರಂಟ್