Site icon Vistara News

Bill Gates India Visit: “ಯಾವಾಗಲೂ ಸ್ಫೂರ್ತಿದಾಯಕ… ” ಮೋದಿ ಭೇಟಿ ಬಳಿಕ ಬಿಲ್‌ ಗೇಟ್ಸ್‌ ಹೇಳಿದ್ದೇನು?

bill gates pm narendra modi

ಹೊಸದಿಲ್ಲಿ: `ಪ್ರಧಾನ ಮಂತ್ರಿ ಮೋದಿ ಅವರ ಜೊತೆಗಿನ ಭೇಟಿ ಯಾವಾಗಲೂ ಸ್ಫೂರ್ತಿದಾಯಕವಾಗಿರುತ್ತದೆʼ ಎಂದು ಟೆಕ್‌ ದೈತ್ಯ, ಮೈಕ್ರೋಸಾಫ್ಟ್‌ (Microsoft) ಸಂಸ್ಥಾಪಕ ಬಿಲ್‌ ಗೇಟ್ಸ್‌ ಹೇಳಿದ್ದಾರೆ. ಭಾರತ ಪ್ರವಾಸದಲ್ಲಿರುವ ಬಿಲ್‌ ಗೇಟ್ಸ್‌ (Bill gates India visit), ಇಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಭೇಟಿಯಾಗಿ ಹಲವು ವಿಷಯಗಳನ್ನು ಚರ್ಚಿಸಿದರು.

“ಮೋದಿಯವರೊಂದಿಗಿನ ಭೇಟಿ ಯಾವಾಗಲೂ ಸ್ಫೂರ್ತಿದಾಯಕ (inspiring). ನಮ್ಮ ನಡುವೆ ಚರ್ಚಿಸಲು ಬಹಳಷ್ಟು ವಿಷಯ ಇತ್ತು. ನಾವು ಸಾರ್ವಜನಿಕ ಒಳಿತಿಗಾಗಿ AI ಕುರಿತು ಮಾತನಾಡಿದೆವು. ಡಿಪಿಐ (ಡಿಜಿಟಲ್‌ ಮೂಲಸೌಕರ್ಯ); ಅಭಿವೃದ್ಧಿಯಲ್ಲಿ ಮಹಿಳಾ ನೇತೃತ್ವ; ಕೃಷಿ, ಆರೋಗ್ಯ ಮತ್ತು ಹವಾಮಾನ ಹೊಂದಾಣಿಕೆಯಲ್ಲಿ ನಾವೀನ್ಯತೆ; ಮತ್ತು ನಾವು ಭಾರತದಿಂದ ಜಗತ್ತಿಗೆ ಯಾವ ಪಾಠಗಳನ್ನು ತೆಗೆದುಕೊಳ್ಳಬಹುದು ಎಂಬುದನ್ನು ಚರ್ಚಸಿದೆವು” ಎಂದು ಬಿಲ್‌ ಗೇಟ್ಸ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಗೇಟ್ಸ್‌ ಅವರ ಟ್ವೀಟ್‌ ಅನ್ನು ರಿಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ, “ನಿಜಕ್ಕೂ ಅದ್ಭುತ ಭೇಟಿ! ನಮ್ಮ ಗ್ರಹವನ್ನು ಉತ್ತಮಗೊಳಿಸುವ ಮತ್ತು ಜಗತ್ತಿನಾದ್ಯಂತ ಲಕ್ಷಾಂತರ ಜನರಿಗೆ ಚೈತನ್ಯ ನೀಡುವ ಕ್ಷೇತ್ರಗಳ ಬಗ್ಗೆ ಚರ್ಚಿಸಲು ಯಾವಾಗಲೂ ಸಂತೋಷವಾಗುತ್ತದೆ” ಎಂದು ಉತ್ತರಿಸಿದ್ದಾರೆ.

ಇದಕ್ಕೂ ಮುನ್ನ ಗುರುವಾರ ಗೇಟ್ಸ್ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಭೇಟಿ ಮಾಡಿದ್ದರು. ಗೇಟ್ಸ್ ಮಂಗಳವಾರ ರಾತ್ರಿ ಒಡಿಶಾಗೆ ಆಗಮಿಸಿದ್ದು, ಬುಧವಾರ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಭೇಟಿಯಾದರು. ಅವರು ರಾಜ್ಯ ಸರ್ಕಾರಿ ಅಧಿಕಾರಿಗಳೊಂದಿಗೆ ಭುವನೇಶ್ವರದ ಕೊಳೆಗೇರಿಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳ ಯೋಗಕ್ಷೇಮವನ್ನು ವಿಚಾರಿಸಿದರು. ರಾಜ್ಯದಲ್ಲಿರುವ ಮಹಿಳಾ ಸ್ವ-ಸಹಾಯ ಗುಂಪುಗಳ (ಎಸ್‌ಎಚ್‌ಜಿ) ಸದಸ್ಯರೊಂದಿಗೆ ಸಂವಾದ ನಡೆಸಿದರು.

ಬಿಲ್‌ ಗೇಟ್ಸ್‌ ಭಾರತ ಭೇಟಿಯಲ್ಲಿ ಅನೇಕ ಕಾರ್ಯಕ್ರಮಗಳಿವೆ. ಮುಖ್ಯವಾಗಿ, ಗುಜರಾತ್‌ನ ಜಾಮ್‌ನಗರದಲ್ಲಿ ನಡೆಯಲಿರುವ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಲಿದ್ದಾರೆ.

ನಿನ್ನೆ ಅವರು ಡಾಲಿ ಚಾಯ್‌ವಾಲಾ ಎಂಬಾತನ ರಸ್ತೆ ಬದಿಯ ಅಂಗಡಿಯಲ್ಲಿ ಚಹಾ ಸವಿದಿದ್ದರು. “ತುಂಬಾ ಚಾಯ್‌ ಪೆ ಚರ್ಚೆಗಳಿವೆ” ಎಂದು ತಮ್ಮ ಭಾರತ ಭೇಟಿಯ ಬಗ್ಗೆ ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Viral Video: ʼಒನ್‌ ಚಾಯ್‌ ಪ್ಲೀಸ್…‌ʼ ಭಾರತದ ಬೀದಿ ಚಹಾ ಸವಿದ ಬಿಲ್‌ ಗೇಟ್ಸ್! ವಿಡಿಯೋ ವೈರಲ್

Exit mobile version