Site icon Vistara News

Khagen Murmu: ಚುನಾವಣೆ ಪ್ರಚಾರದ ವೇಳೆ ಯುವತಿಗೆ ಕಿಸ್‌ ಕೊಟ್ಟ ಬಿಜೆಪಿ ಸಂಸದ; ಭಾರಿ ಟೀಕೆ

Khagen Murmu

BJP candidate Khagen Murmu kisses woman in West Bengal during campaign, viral pic triggers row

ಕೋಲ್ಕೊತಾ: ಲೋಕಸಭೆ ಚುನಾವಣೆ (Lok Sabha Election 2024) ಇರಲಿ, ವಿಧಾನಸಭೆ ಚುನಾವಣೆ ಇರಲಿ, ಅಭ್ಯರ್ಥಿಗಳು ತುಂಬ ವಿಧೇಯರಾಗಿ ಮತಯಾಚನೆ ಮಾಡುತ್ತಾರೆ. ನೀವೇ ನನ್ನ ತಂದೆ-ತಾಯಿ, ಮತದಾರರೇ ನನ್ನ ಅಕ್ಕ-ತಂಗಿ, ಗೆದ್ದು ಬಂದ ಮೇಲೆ ನಾನು ನಿಮ್ಮ ಮನೆಯ ಮಗನಂತೆ ಕೆಲಸ ಮಾಡುತ್ತೇನೆ ಎಂಬುದು ಸೇರಿ ಹಲವು ರೀತಿಯಲ್ಲಿ ಜನರ ಮನವೊಲಿಸಲು ಯತ್ನಿಸಿದ್ದಾರೆ. ಆದರೆ, ಪಶ್ಚಿಮ ಬಂಗಾಳದಲ್ಲಿ (West Bengal) ಬಿಜೆಪಿಯ ಖಾಗೇನ್‌ ಮುರ್ಮು (Khagen Murmu) ಎಂಬುವರು ಚುನಾವಣೆ ಪ್ರಚಾರದ ಭರಾಟೆಯ ವೇಳೆ ಯುವತಿಯೊಬ್ಬರಿಗೆ ಮುತ್ತು ಕೊಟ್ಟಿದ್ದಾರೆ. ಇದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.

ಹೌದು, ಪಶ್ಚಿಮ ಬಂಗಾಳದ ಮಾಲ್ಡಾ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಖಾಗೇನ್‌ ಮುರ್ಮು ವರು ಶ್ರೀಹಿಪುರ ಗ್ರಾಮದಲ್ಲಿ ಪ್ರಚಾರ ಮಾಡುವ ವೇಳೆ ಯುವತಿಯೊಬ್ಬರ ಕೆನ್ನೆಗೆ ಮುತ್ತು ಕೊಟ್ಟಿದ್ದಾರೆ. ಇದು ಈಗ ಪಶ್ಚಿಮ ಬಂಗಾಳದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. “ನರೇಂದ್ರ ಮೋದಿ ಅವರು ಬೇಟಿ ಬಚಾವೋ ಎಂಬ ಅಭಿಯಾನ ಆರಂಭಿಸುತ್ತಾರೆ. ಆದರೆ, ಬಿಜೆಪಿ ನಾಯಕರು ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಾರೆ. ಇಂತಹವರನ್ನು ಚುನಾವಣೆಯಲ್ಲಿ ಸೋಲಿಸಬೇಕು” ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿವೆ. ಟಿಎಂಸಿ ನಾಯಕರು ಕೂಡ ಬಿಜೆಪಿ ಸಂಸದನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮಿಳುನಾಡಿನಲ್ಲಿ ಗಡ್ಡ ಬೋಳಿಸಿ ಮತಯಾಚನೆ

ತಮಿಳುನಾಡಿನ ರಾಮನಾಥಪುರಂ ಲೋಕಸಭೆ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪರಿರಾಜನ್‌ ಎಂಬುವರು ಚುನಾವಣೆ ಪ್ರಚಾರದ ಭಾಗವಾಗಿ ಒಂದು ದಿನದ ಮಟ್ಟಿಗೆ ಕ್ಷೌರಿಕನ ಕೆಲಸ ಮಾಡಿದ್ದಾರೆ. ಜನರಿಗೆ ಕಟಿಂಗ್‌ ಮಾಡಿ, ಅವರ ಗಡ್ಡ ಬೋಳಿಸಿ, ಅವರು ಸಲೂನ್‌ನಿಂದ ಹೊರಡುವಾಗ ಕೈ ಮುಗಿದು ಮತ ಕೇಳುತ್ತಿದ್ದಾರೆ. ಇದು ಸುತ್ತಮುತ್ತಲಿನ ಭಾಗದ ಜನರ ಗಮನವನ್ನೂ ಸೆಳೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇವರ ಚಟುವಟಿಕೆ ಕುರಿತು ಪರ-ವಿರೋಧ ಚರ್ಚೆ ವ್ಯಕ್ತವಾಗುತ್ತಿದೆ.

“ವೈಟ್‌ ಕಾಲರ್‌ ಅಭ್ಯರ್ಥಿಗಳು, ಶ್ರೀಮಂತರು, ಉದ್ಯಮಿಗಳು ದರ್ಪದಿಂದ ಚುನಾವಣೆ ಎದುರಿಸುತ್ತಿರುವ ಸಂದರ್ಭದಲ್ಲಿ ಜನರಿಗೆ ಕ್ಷೌರ ಮಾಡುವ ಮೂಲಕ ಪ್ರಚಾರ ಕೈಗೊಂಡಿರುವ ಪರಿರಾಜನ್‌ ಅವರ ನಡೆ ಮಾದರಿ” ಎಂದು ಒಂದಷ್ಟು ಜನ ಹೊಗಳಿದ್ದಾರೆ. “ಚುನಾವಣೆ ವೇಳೆ ಜನರ ಗಡ್ಡ ಬೋಳಿಸಿ, ಗೆದ್ದ ನಂತರ ಅವರ ಹಣವನ್ನು ಬೋಳಿಸುವವನೇ ರಾಜಕಾರಣಿ”, “ಈತ ಮತಗಳಿಗಾಗಿ ಜನರ ಎದುರು ಡ್ರಾಮಾ ಮಾಡುತ್ತಿದ್ದಾನೆ. ಇಂತಹವರನ್ನು ನಂಬಬಾರದು” ಎಂಬುದಾಗಿ ಮತ್ತೊಂದಿಷ್ಟು ಜನ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Viral Video: ಮತದಾರರ ಗಡ್ಡ ಬೋಳಿಸಿ, ಕಟಿಂಗ್‌ ಮಾಡಿ ವೋಟ್ ಕೇಳಿದ ಅಭ್ಯರ್ಥಿ; ನೀವೇ ನೋಡಿ

Exit mobile version