Site icon Vistara News

BJP-JDS Padayatra: ನಿಮ್ಮನ್ನು ಮನೆಗೆ ಕಳುಹಿಸುವವರೆಗೂ ಹೋರಾಟ ನಿಲ್ಲಲ್ಲ: ಸಿಎಂ, ಡಿಸಿಎಂ ವಿರುದ್ಧ ಬಿಎಸ್‌ವೈ ಗುಡುಗು

ಮೈಸೂರು: ನನ್ನನ್ನು ರಾಜಕೀಯದಿಂದ ನಿವೃತ್ತಿ ಆಗಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ, ನಾನು ಬದುಕಿರುವವರೆಗೂ ಸಕ್ರಿಯವಾಗಿರುತ್ತೇನೆ. ನಿಮ್ಮ ಆಡಳಿತದಿಂದ ಜನ ಬೇಸರ ಗೊಂಡಿದ್ದಾರೆ. ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ನಿಮ್ಮ ಸರ್ಕಾರ ದಿವಾಳಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ (BJP-JDS Padayatra) ಕಿಡಿಕಾರಿದರು.

ನಗರದಲ್ಲಿ ಆಯೋಜಿಸಿದ್ದ ಬಿಜೆಪಿ-ಜೆಡಿಎಸ್‌ ಪಾದಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ಕಲ್ಲುಬಂಡೆ ಅಂತ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಏಯ್ ವಿಜಯೇಂದ್ರ ಅಂತ ಮಾತನಾಡುತ್ತೀರಾ? ಒಬ್ಬ ರಾಜ್ಯಾಧ್ಯಕ್ಷನಿಗೆ ಕೊಡುವ ಮರ್ಯಾದೆ ಇದೇನಾ? ನಿಮ್ಮ ಯೋಗ್ಯತೆಗೆ ಒಂದು ಅಭಿವೃದ್ಧಿ ಕೆಲಸ ತೋರಿಸಿ ಎಂದು ಸವಾಲು ಹಾಕಿದರು.

ಮುಡಾದಿಂದ 14 ನಿವೇಶನ ಹೇಗೆ ತೆಗೆದುಕೊಂಡಿದ್ದೀರಿ? ಪರಿಹಾರ ಕೊಟ್ಟರೆ ವಾಪಸು ಕೊಡುತ್ತೀನಿ ಎಂದು ಹೇಳುತ್ತಾರೆ. ಅದು ಹೇಗೆ ತಗೊಂಡಿದ್ದಿರಿ, ಯಾರಪ್ಪನ ದುಡ್ಡು ಪರಿಹಾರ ಕೊಡಕ್ಕೆ. ನಿಮ್ಮ ಮೈಯೆಲ್ಲಾ ಕಪ್ಪು ಚುಕ್ಕೆ ಇವೆ. ನಿಮ್ಮ ಪಾಪದ ಕೊಡ ತುಂಬಿದೆ, ತಾಕತ್ ಇದ್ದರೆ ವಿಧಾನ ಸಭೆ ವಿಸರ್ಜನೆ ಮಾಡಿ ಬನ್ನಿ. ಸೂರ್ಯಚಂದ್ರರಷ್ಟೇ ಸತ್ಯ ಮೈತ್ರಿ ಪಕ್ಷಗಳು 140-150 ಗೆಲ್ಲೋದು ನಿಶ್ಚಿತ ಎಂದು ಹೇಳಿದರು.

ಭ್ರಷ್ಟ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯನ್ನು ಕ್ಷಮಿಸಲು ಸಾಧ್ಯವಿಲ್ಲ. ಐತಿಹಾಸಿಕ ಪಾದಯಾತ್ರೆ ನಡೆದಿದೆ, ನನಗೆ ಕೈಕಾಲು ಗಟ್ಟಿ ಇದೆ. ನಿಮ್ಮನ್ನು ಮನೆಗೆ ಕಳುಹಿಸುವವರೆಗೂ ಹೋರಾಟ ಮಾಡ್ತೀನಿ ಎಂದ ಅವರು, ನನಗೆ ಈಗ 82 ವರ್ಷ, ಆದರೂ ಚಿಂತೆ ಇಲ್ಲ. ಬಿಜೆಪಿ, ಜೆಡಿಎಸ್ ಒಂದಾಗಿ ನಿಮ್ಮನ್ನು ಮನೆಗೆ ಕಳುಹಿಸುವುದು ನಿಶ್ಚಿತ. ಮೋದಿ ಅವರನ್ನು ಪ್ರಪಂಚವೇ ಸ್ವೀಕರಿಸಿದೆ, ಅವರ ಬಗ್ಗೆ ಒಳ್ಳೆಯ ಮಾತನಾಡುತ್ತಿದ್ದಾರೆ. ನೀವು ಅವರನ್ನು ಟೀಕೆ ಮಾಡ್ತೀರಾ ಎಂದು ಪ್ರಶ್ನಿಸಿದರು.

ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡ್ತೀರಾ? ಕರ್ನಾಟಕ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಹೇಳಿದರು.

ಇದನ್ನೂ ಓದಿ | Bangladesh Unrest: ಬಾಂಗ್ಲಾದೇಶದ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ; ಹಿಂದು ಕಾರ್ಯಕರ್ತರು ವಶಕ್ಕೆ

ಆರೋಪಗಳ ವಿರುದ್ಧ ರಾಜಕೀಯ, ಕಾನೂನು ಹೋರಾಟಕ್ಕೆ ಸಿದ್ಧ: ಸಿಎಂ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು: ರಾಜಕೀಯ ಲಾಭಕ್ಕಾಗಿ ಬಿಜೆಪಿ- ಜೆಡಿಎಸ್ ನವರು ಮಾಡುತ್ತಿರುವ ಸುಳ್ಳು ಆರೋಪಗಳಿಗೆ ನಾನು ಹೆದರುವುದಿಲ್ಲ ಹಾಗೂ ಈ ಆರೋಪಗಳ ವಿರುದ್ಧ ರಾಜಕೀಯವಾಗಿ ಹಾಗೂ ಕಾನೂನಾತ್ಮಕವಾಗಿ ಹೋರಾಡಲು ಸಿದ್ದವಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು.

ಬಿಜೆಪಿ ಹಾಗೂ ಜೆಡಿಎಸ್‌ ಆರೋಪಗಳ ಬಗ್ಗೆ ಸರ್ಕಾರದ ಮುಂದಿನ ನಡೆಯ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಜೆಡಿಎಸ್ ಹಾಗೂ ಬಿಜೆಪಿಯ ಪಾದಯಾತ್ರೆಗೆ ಪ್ರತ್ಯುತ್ತರವಾಗಿ ಕಾಂಗ್ರೆಸ್ ಬೃಹತ್ ಜನಾಂದೋಲನವನ್ನು ಮಾಡಿದೆ. ಬಿಜೆಪಿ ಹಾಗೂ ಜೆಡಿಎಸ್ ನವರು ಸುಳ್ಳು ಆರೋಪಗಳನ್ನು ಆಧರಿಸಿ ಮಾಡುತ್ತಿರುವ ಪಾದಯಾತ್ರೆ ಮಾಡುತ್ತಿದ್ದು, ನನಗೆ ಕಪ್ಪು ಬಳಿಯಲು ಪ್ರಯತ್ನಿಸುತ್ತಿದ್ದಾರೆ. ಅವರ ಆರೋಪಗಳು ಸುಳ್ಳು ಎಂದು ಜನರಿಗೆ ಮನವರಿಕೆ ಮಾಡಲು ಜನಾಂದೋಲನ ಮಾಡಲಾಗಿದೆ ಎಂದರು.

ರಾಜಕೀಯವಾಗಿ ಮಣಿಸಲು ಬಿಜೆಪಿ ಜೆಡಿಎಸ್ ತಂತ್ರ

ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿರುವ ಸರ್ಕಾರವನ್ನು ಅಸ್ಥಿರಗೊಳಿಸಲು ಸಂಚು ಹೂಡಿದ್ದಾರೆ. ಸುಳ್ಳು ಆರೋಪಗಳಿಂದ ನನ್ನ ಮೇಲೆ ಕಪ್ಪು ಬಳಿದರೆ, ರಾಜಕೀಯವಾಗಿ ನನ್ನನ್ನು ಮಣಿಸಿ ಲಾಭ ಪಡೆಯಬಹುದು ಎಂಬ ಭ್ರಮೆಯಲ್ಲಿದ್ದಾರೆ. ಬಿಜೆಪಿ ಜೆಡಿಎಸ್‌ನವರ ಹಗರಣಗಳು ಬೇಕಾದಷ್ಟಿದ್ದು, ಅವುಗಳನ್ನು ಬಯಲಿಗೆಳೆಯುತ್ತೇವೆ. ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ, ಯಡಿಯೂರಪ್ಪ ಸೇರಿದಂತೆ ಹಲವರ ಮೇಲೆ ಇರುವ ಹಗರಣಗಳ ವಿರುದ್ಧ ತನಿಖೆ ಕೈಗೊಳ್ಳಲಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಇದನ್ನೂ ಓದಿ | Hindenburg: ಶೀಘ್ರದಲ್ಲೇ ಭಾರತದಲ್ಲಿ ಬಹುದೊಡ್ಡ ಸಂಚಲನ ಸೃಷ್ಟಿಯಾಗಲಿದೆ; ಹೊಸದೊಂದು ಬಾಂಬ್‌ ಸಿಡಿಸಿದ ಹಿಂಡನ್‌ಬರ್ಗ್‌

ಸುಳ್ಳು ಆರೋಪಗಳ ವಿರುದ್ಧ ಹೋರಾಟ

ಮುಖ್ಯಮಂತ್ರಿಗಳು ರಾಜೀನಾಮೆ ನೀಡುವವರೆಗೂ ಹೋರಾಟ ಮುಂದುವರಿಸುವುದಾಗಿ ಬಿಜೆಪಿ ಜೆಡಿಎಸ್ ನಾಯಕರು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಸುಳ್ಳು ಆರೋಪಗಳನ್ನಾಧರಿಸಿದ ಹೋರಾಟಗಳಿಗೆ ನಾನು ಹೆದರುವುದಿಲ್ಲ. ಬಿಜೆಪಿ-ಜೆಡಿಎಸ್‌ ಹೋರಾಟದ ಸತ್ಯಾಸತ್ಯತೆಗಳು ಜನರಿಗೆ ತಿಳಿದಾಗ , ಅವರೇ ಈ ಹೋರಾಟನ್ನು ಹತ್ತಿಕ್ಕುತ್ತಾರೆ. ಸರ್ಕಾರ ಹಾಗೂ ನನ್ನ ಮೇಲೆ ಬಂದಿರುವ ಆರೋಪಗಳನ್ನು ರಾಜಕೀಯವಾಗಿ ಹಾಗೂ ಕಾನೂನಾತ್ಮಕವಾಗಿ ಹೋರಾಡುತ್ತೇವೆ ಎಂದು ತಿಳಿಸಿದರು.

Exit mobile version