Site icon Vistara News

CM Siddaramaiah: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಖಾಸಗಿ ದೂರು ನೀಡಲು ಮುಂದಾದ ಬಿಜೆಪಿ

cm siddaramaiah MUDA scam

ಬೆಂಗಳೂರು: ಮುಡಾ ಹಗರಣದಲ್ಲಿ (MUDA scam) ಪತ್ನಿಯ ಹೆಸರಲ್ಲಿ ಬದಲಿ ನಿವೇಶನ ಪಡೆದ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಖಾಸಗಿ ದೂರು ದಾಖಲು ಮಾಡಲು ಬಿಜೆಪಿ (BJP) ಚಿಂತನೆ ನಡೆಸಿದೆ. ಈ ಕುರಿತು ಇಂದು ಸಂಜೆ ರಾಜ್ಯಪಾಲರನ್ನು (Governar) ಬಿಜೆಪಿ ನಿಯೋಗ ಭೇಟಿ ಮಾಡಲು ಮುಂದಾಗಿದೆ.

ಪತ್ನಿ ಹೆಸರಿನಲ್ಲಿ ಬದಲಿ ನಿವೇಶನ ಪಡೆದಿರುವ ಮಾಹಿತಿಯನ್ನು ಚುನಾವಣಾ ಸಂದರ್ಭದಲ್ಲಿ ನೀಡಲಾದ ಪ್ರಮಾಣ ಪತ್ರದಲ್ಲಿ ಮುಚ್ಚಿಡಲಾಗಿದೆ. ಇದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಎಂದು ಕಾನೂನು ಹೋರಾಟಕ್ಕೆ ಬಿಜೆಪಿ ಪ್ಲಾನ್ ಮಾಡಿದೆ.

ಈ ಬಗ್ಗೆ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡುವಂತೆ ಬಿಜೆಪಿ ನಿಯೋಗ ಮನವಿ ಕೊಡಲಿದೆ. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದರೆ ಬಿಜೆಪಿ ನಾಯಕರು ಖಾಸಗಿ ದೂರು ದಾಖಲು ಮಾಡಲಿದ್ದಾರೆ. 2011ರಲ್ಲಿ ಯಡಿಯೂರಪ್ಪ ವಿರುದ್ಧವೂ ರಾಜ್ಯಪಾಲರು ಖಾಸಗಿ ದೂರು ದಾಖಲು ಮಾಡಲು ಅನುಮತಿ ನೀಡಿದ್ದರು. ಸಿಎಂ ಸಿದ್ದರಾಮಯ್ಯ ಅವರ ವಿರುದ್ಧದ ಈ ಕೇಸ್, ಮುಡಾ ಕುರಿತು ಬಿಜೆಪಿ ಎತ್ತಿರುವ ಅಕ್ರಮದ ಆಪಾದನೆಯ ಹೋರಾಟವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ.

ನ್ಯಾಯಾಂಗ ತನಿಖೆಗೆ ಒಪ್ಪಲ್ಲ: ವಿಜಯೇಂದ್ರ

ಮುಡಾ ಹಗರಣದಲ್ಲಿ ನ್ಯಾಯಾಂಗ ತನಿಖೆಗೆ ನಾವು ಒಪ್ಪುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ. ಮುಡಾ ಹಗರಣ ನ್ಯಾಯಾಂಗ ತನಿಖೆಗೆ ನೀಡಿರುವುದು ಸರಿಯಲ್ಲ. ಸರ್ಕಾರ CBI ತನಿಖೆಗೆ ನೀಡಬೇಕು. ಯಾವುದೇ ಕಾರಣಕ್ಕೂ ನ್ಯಾಯಾಂಗ ತನಿಖೆಯನ್ನು ಒಪ್ಪಲ್ಲ. ಸಿಎಂಗೆ ತಾಕತ್‌ ಇದ್ದರೆ ಇದನ್ನು ಸಿಬಿಐ ತನಿಖೆಗೆ ಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ನ್ಯಾಯಾಂಗ ತನಿಖೆ ಅಂತ ನಾಟಕ‌ಮಾಡುತ್ತಿದ್ದಾರೆ. ಇದೊಂದು ದೊಡ್ಡ ಹಗರಣ. ಸದನದ ಒಳಗೆ ಹೊರಗೆ ನಾವು ಹೋರಾಟ ಮಾಡುತ್ತೇವೆ. ಸಿಎಂ ರಾಜೀನಾಮೆ ಕೋಡಬೇಕು. ದಲಿತರ ಹೆಸರಲ್ಲಿ ಅಧಿಕಾರಕ್ಕೆ ಬಂದು ದಲಿತರ ಹಣ ದೋಚಿದ್ದಾರೆ. ಕಾಂಗ್ರೆಸ್ ಸರ್ಕಾರದ ಬಂಡವಾಳ ಬಯಲಾಗಿದೆ. ಸಿಎಂ ನೈತಿಕತೆ ‌ಕಳೆದುಕೊಂಡಿದ್ದಾರೆ. ವಾಲ್ಮೀಕಿ ನಿಗಮ ಹಗರಣದಲ್ಲಿ ನಾಗೇಂದ್ರ ಈಗಾಗಲೇ ಇಡಿ‌ ಕಸ್ಟಡಿಯಲ್ಲಿದ್ದಾರೆ. ಸಿಎಂ ಇದಕ್ಕೆ ಉತ್ತರ ಕೊಡಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು.

ಡಿಸಿಎಂ ಆರೋಪಿಗಳಿಗೆ ಕ್ಲೀನ್ ಚಿಟ್ ಕೊಡ್ತಾ ಇದ್ದಾರೆ. ಮುಡಾ ಹಗರಣ ಸಿಬಿಐಗೆ ವಹಿಸಬೇಕು. ವಾಲ್ಮೀಕಿ ನಿಗಮದ ಹಗರಣಕ್ಕೆ ಸದನದಲ್ಲಿ ಸಿಎಂ ಉತ್ತರ ಕೋಡಬೇಕು. ವಾಲ್ಮೀಕಿ ನಿಗಮ ಹಗರಣದ ಬಗ್ಗೆ ನಿಲುವಳಿ‌ ಸೂಚನೆ ಕೊಟ್ಟಿದ್ದೇವೆ. ಇವತ್ತು ಚರ್ಚೆಗೆ ಅವಕಾಶ ಕೊಡುತ್ತೇವೆ. ಮುಡಾದಲ್ಲಿ ಯಾರದೇ ಮೇಲೆ ಆರೋಪ ಇರಲಿ, ಸಿಬಿಐ ತನಿಖೆಗೆ ನೀಡಿ ಎಂದು ಸರ್ಕಾರಕ್ಕೆ ವಿಜಯೇಂದ್ರ ಒತ್ತಾಯಿಸಿದರು.

ವಾಲ್ಮೀಕಿ ನಿಗಮ ಹಗರಣಕ್ಕೆ ನಟ ಚೇತನ್‌ ಆಕ್ರೋಶ

ಚಿಕ್ಕಬಳ್ಳಾಪುರ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ವಿಚಾರದಲ್ಲಿ ಸರ್ಕಾರದ ವಿರುದ್ಧ ಚಿಕ್ಕಬಳ್ಳಾಪುರದಲ್ಲಿ ನಟ ಚೇತನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 187 ಕೋಟಿ ರೂಪಾಯಿ ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಆಗಿದೆ. ವಾಲ್ಮೀಕಿ ಹಗರಣವನ್ನು ಮುಚ್ಚಿಹಾಕಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಹಗರಣದ ಬಗ್ಗೆ ಎಸ್.ಐ.ಟಿ. ಒಂದೂವರೆ ತಿಂಗಳಿಂದ ಕ್ರಮ ತೆಗೆದುಕೊಳ್ಳುತ್ತಿಲ್ಲ. ಬಿ.ನಾಗೇಂದ್ರ ಬಳ್ಳಾರಿಯ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಭಾಗಿಯಾಗಿ ಜೈಲಿಗೆ ಹೋಗಿದ್ದ ವ್ಯಕ್ತಿ. ಮಂತ್ರಿ ಆಗಲು ಅರ್ಹತೆ ಇಲ್ಲದ ವ್ಯಕ್ತಿ. ಅಂತಹವರು ಸಚಿವರಾದರು. ಎಸ್.ಐ.ಟಿ. ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಇಡಿ ಪ್ರವೇಶ ಮಾಡಿದ ನಂತರ ತನಿಖೆ ಚುರುಕುಗೊಂಡಿದೆ. ತೆಲಂಗಾಣ-ಆಂಧ್ರಕ್ಕೆ ಆ ಹಣ ಹೋಗಿದೆ ಅನ್ನೋದು ಬೆಳಕಿಗೆ ಬಂದಿದೆ. ಇದರ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: MUDA Scam: ಮುಡಾ ಕೇಸ್ ತನಿಖೆಗೆ ಏಕಸದಸ್ಯ ಆಯೋಗ ರಚಿಸಿದ ರಾಜ್ಯ ಸರ್ಕಾರ; ಅಧಿವೇಶನಕ್ಕೂ ಮುನ್ನವೇ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಯತ್ನ

Exit mobile version