Site icon Vistara News

Lok Sabha Election: ಬಿಜೆಪಿ 200 ಸ್ಥಾನಗಳನ್ನೂ ಗೆಲ್ಲಲ್ಲ; ಭವಿಷ್ಯ ನುಡಿದ ಸಿದ್ದರಾಮಯ್ಯ

Lok Sabha Election

BJP Will Not Win Even 200 Lok Sabha Constitutions: Says CM Siddaramaiah

ಮೈಸೂರು: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಅಬ್ಬರದ ಪ್ರಚಾರದಲ್ಲಿ ತೊಡಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಸೋಮವಾರ (ಏಪ್ರಿಲ್‌ 1) ಬಿಜೆಪಿ ವಿರುದ್ಧ ಹರಿಹಾಯ್ದರು. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಲೋಕಸಭೆ ಚುನಾವಣೆಯಲ್ಲಿ 200 ಕ್ಷೇತ್ರಗಳಲ್ಲೂ ಗೆಲ್ಲುವುದಿಲ್ಲ ಎಂಬುದು ಬಿಜೆಪಿಯೇ (BJP) ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಸ್ಪಷ್ಟವಾಗಿದೆ. ಹಾಗಾಗಿ, ಬಿಜೆಪಿಯು ಇನ್ನಿಲ್ಲದ ರಣತಂತ್ರ ಮಾಡುತ್ತಿದೆ” ಎಂದು ಹೇಳಿದರು.

“ತಂತ್ರಗಾರಿಕೆ ಕಾರಣದಿಂದ 400 ಸೀಟು ಗೆಲ್ಲುವುದಾಗಿ ಬಿಜೆಪಿ ಹೇಳುತ್ತಿದೆ. ದೇಶದ ಜನರನ್ನು ನಿರಂತರವಾಗಿ ಮೂರ್ಖರನ್ನಾಗಿಸುತ್ತೇವೆ ಎಂದು ಹೊರಟವರೇ ಜನರ ಎದುರು ಮೂರ್ಖರಾಗುತ್ತಾರೆ. ಬಿಜೆಪಿಯದ್ದು ಅಭಿವೃದ್ಧಿ ಶೂನ್ಯ ಸಾಧನೆ. ಮೋದಿಯವರ ಸುಳ್ಳಿನ ಪಿಕ್ಚರ್ ಇನ್ನೂ ಬಾಕಿ ಇದೆ. ಸುಳ್ಳಿನ ಕನಸುಗಳನ್ನು ಬಿತ್ತುತ್ತಾ ಬಂದಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ 20 ಸೀಟುಗಳನ್ನು ಗೆದ್ದೇ ಗೆಲ್ಲುತ್ತದೆ. ಸೋಲುವ ಭಯಕ್ಕೆ ಒಳಗಾಗಿರುವ ಬಿಜೆಪಿಯವರು ಕರ್ನಾಟಕದಲ್ಲಿ ಬಿಜೆಪಿ 28 ಸೀಟುಗಳನ್ನು ಗೆಲ್ಲುತ್ತೇವೆ ಎಂದು ಸುಳ್ಳು ಹೇಳುತ್ತಿದ್ದಾರೆ” ಎಂದರು.

ಬಿಜೆಪಿಯವರಿಗೆ ಸಂಸ್ಕಾರವಿಲ್ಲ

ಕೇಂದ್ರ ಗೃಹ ಸಚಿವರ ಕುರಿತ ಹೇಳಿಕೆಗೆ ಸಂಬಂಧಿಸಿದಂತೆ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಸಂಸ್ಕಾರದ ಪಾಠವನ್ನು ಬಿಜೆಪಿ ಹೇಳುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, “ಬಿಜೆಪಿಯವರಿಗೆ ಸಂಸ್ಕಾರವಿಲ್ಲ. ಯತೀಂದ್ರ ಅವರು ಸಿಬಿಐ ಕೊಟ್ಟಿರುವ ರಿಪೋರ್ಟ್ ಆಧಾರದ ಮೇಲೆ ಹೇಳಿಕೆಯನ್ನು ನೀಡಿದ್ದಾರೆಯೇ ಹೊರತು, ಅಮಿತ್ ಶಾ ಅವರಿಗೆ ಅವಮಾನ ಮಾಡುವ ಉದ್ದೇಶ ಅವರಿಗೆ ಇಲ್ಲ” ಎಂದು ಹೇಳಿದರು.

ಕಾಂಗ್ರೆಸ್‌ಗೆ ಬರುವವರಿಗೆ ಸ್ವಾಗತ

ಕಾಂಗ್ರೆಸ್ ಪಕ್ಷಕ್ಕೆ ಇತರೆ ಪಕ್ಷಗಳಿಂದ ಜನರು ಬರುವ ಸಾಧ್ಯತೆಯಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ,
“ಕಾಂಗ್ರೆಸ್ ಪಕ್ಷಕ್ಕೆ ಬಹಳಷ್ಟು ಜನರು ಸೇರ್ಪಡೆಯಾಗಲು ಉತ್ಸುಕರಿದ್ದಾರೆ. ಕಾಂಗ್ರೆಸ್ ಸಿದ್ಧಾಂತವನ್ನು ಒಪ್ಪಿ ಬರುವ ಎಲ್ಲರಿಗೂ ಪಕ್ಷದಲ್ಲಿ ಸ್ವಾಗತವಿದೆ” ಎಂದು ತಿಳಿಸಿದರು.

ರಾಜ್ಯದಲ್ಲಿ ಪ್ರಧಾನಿ ಮೋದಿ ರ‍್ಯಾಲಿ ಪ್ರಾರಂಭಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ವಿಧಾನಸಭಾ ಚುನಾವಣೆಯಲ್ಲಿಯೂ ಮೋದಿಯವರು ಪ್ರಚಾರ ಕೈಗೊಂಡಿದ್ದರೂ ಬಿಜೆಪಿ ಗೆಲ್ಲಲು ಸಾಧ್ಯವಾಗಲಿಲ್ಲ. ಕೇಂದ್ರದಲ್ಲಿ ಮೋದಿ ಸರ್ಕಾರದ ವೈಫಲ್ಯಗಳು ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆಗಳು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಗೆಲುವನ್ನು ಖಾತ್ರಿಪಡಿಸಿದೆ” ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಜನರ ಮೇಲೆ ಹೊರೆ

2014 ರಲ್ಲಿ 47 ರೂ. ಇದ್ದ ಡೀಸೆಲ್ ಬೆಲೆ ಈಗ 97 ರೂ. ಆಗಿದೆ. 77ರೂ. ಇದ್ದ ಪೆಟ್ರೋಲ್ ಬೆಲೆ ಈಗ 105 ರೂ. ಆಗಿದೆ. ಅಡುಗೆ ಅನಿಲ ಬೆಲೆಯನ್ನು ಚುನಾವಣೆ ಸಂದರ್ಭದಲ್ಲಿ ಇಳಿಸಿದ್ದಾರೆ. ಈ ಬೆಲೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 414 ರೂ. ಆಗಿತ್ತು. ನಮ್ಮ ಕಾಲಕ್ಕಿಂತಲೂ ಬಿಜೆಪಿ ಕಾಲದಲ್ಲಿ ಬೆಲೆ ಹೆಚ್ಚಾಗಿದೆ ಎಂದರು. ಜನರ ಮೇಲೆ ಇದು ಭಾರವಾಗಿಲ್ಲವೆ” ಎಂದು ಪ್ರಶ್ನಿಸಿದರು.

ಇದನ್ನೂ ಓದಿ: Congress Nominations: ಸೌಮ್ಯಾ ರೆಡ್ಡಿ ಸೇರಿ ಕೈ ಅಭ್ಯರ್ಥಿಗಳಿಂದ ನಾಮಪತ್ರ; ಶಕ್ತಿ ಪ್ರದರ್ಶನ

ನನಗೆ ಗರ್ವ ಇಲ್ಲ ಎಂದ ಸಿಎಂ

ಮಾಜಿ ಪ್ರಧಾನಿ ದೇವೇಗೌಡರು ಮುಖ್ಯಮಂತ್ರಿಗಳ ಗರ್ವಭಂಗವಾಗಬೇಕೆಂದು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, “ನನಗೆ ಯಾವ ಗರ್ವವೂ ಇಲ್ಲ. ದೇವೇಗೌಡರು ಹೇಳಿದ್ದಕ್ಕೆ ಹೇಳಿಕೆ ನೀಡಿದ್ದೇನೆ ಎಂದರು. ದೇವೇಗೌಡರು ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟುತ್ತೇನೆ ಎಂದು ಹೇಳಿದ್ದು ನಿಜ. ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂದಿದ್ದರು. ಅದನ್ನು ಹೇಳಿದರೆ ತಪ್ಪೇ” ಎಂದು ಪ್ರಶ್ನಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version