Site icon Vistara News

ವಿಸ್ತಾರ ಸಂಪಾದಕೀಯ | ಗಡಿ ವಿವಾದ, ಮಹಾರಾಷ್ಟ್ರದ ಹತಾಶ ಯತ್ನ

Supreme Court

1956ರ ರಾಜ್ಯ ಪುನರ್ವಿಂಗಡನಾ ಕಾಯ್ದೆಯನ್ನೇ ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರವು 2004ರಲ್ಲಿ ಸಲ್ಲಿಸಿರುವ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ಬುಧವಾರ (ನ.23) ವಿಚಾರಣೆಗೆ ಬರಲಿದೆ. ಈ ಗಡಿ ವಿವಾದದ ಅರ್ಜಿ ವಿಚಾರಣೆ(Maintainability)ಯನ್ನು ಸುಪ್ರೀಂ ಕೋರ್ಟ್ ನಡೆಸಬೇಕೇ ಅಥವಾ ಬೇಡವೇ ಎಂಬುದರ ಕುರಿತು ನ್ಯಾಯಾಲಯವು ಬುಧವಾರ ಅಂತಿಮ ವಿಚಾರಣೆ ನಡೆಸಲಿದೆ. ಈ ಹಿನ್ನೆಲೆಯಲ್ಲಿ ಉಭಯ ರಾಜ್ಯಗಳಲ್ಲಿ ಬಿರುಸಿನ ಚಟುವಟಿಕೆಗಳು ನಡೆದಿದ್ದು, ಕಾನೂನು ತಂಡಗಳನ್ನು ಸಿದ್ಧಪಡಿಸಲಾಗಿದೆ. ಮೇಲ್ನೋಟಕ್ಕೆ ಸುಪ್ರೀಂ ಕೋರ್ಟ್‌ಲ್ಲಿ ಕರ್ನಾಟಕದ ವಾದಕ್ಕೆ ಮನ್ನಣೆ ದೊರೆಯುವ ಅವಕಾಶಗಳು ಹೆಚ್ಚು ಎಂಬುದು ಕಾನೂನು ತಜ್ಞರ ಅಭಿಪ್ರಾಯವಾಗಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರವು ತುಸು ಹೆಚ್ಚೇ ಮುತುವರ್ಜಿ ವಹಿಸಿ, ಗಡಿ ವಿವಾದ ಸಂಬಂಧ ಹಿಂಸಾಚಾರದಲ್ಲಿ ಮಡಿದವರಿಗೆ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಮಾತನಾಡುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಇದಕ್ಕೆ ಸಂಬಂಧಿಸಿ ಮಹಾರಾಷ್ಟ್ರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಮಹಾರಾಷ್ಟ್ರದ ಈ ತಂತ್ರವನ್ನು ಕರ್ನಾಟಕ ಸರ್ಕಾರವು ಏಕ ದನಿಯಲ್ಲಿ ಖಂಡಿಸಬೇಕು ಮತ್ತು ಯಾವುದೇ ಕಾರಣಕ್ಕೆ ಮನ್ನಣೆ ದೊರೆಯದಂತೆ ನೋಡಿಕೊಳ್ಳಬೇಕು.

ಬೆಳಗಾವಿಗೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರಗಳ ಮಧ್ಯೆ ಐದು ದಶಕಗಳಿಂದಲೂ ಗಡಿ ವಿವಾದವಿದೆ. ಇದೇನೂ ಬಗೆಹರಿಸಲಾರದಂಥ ವಿವಾದವಲ್ಲ. ಆದರೆ, ಮಹಾರಾಷ್ಟ್ರದಲ್ಲಿನ ವೋಟ್ ಬ್ಯಾಂಕ್ ರಾಜಕಾರಣ ಮತ್ತು ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಈವರೆಗೂ ಜೀವಂತವಾಗಿದೆ. ಮತ್ತೆ, ಸದ್ಯಕ್ಕಂತೂ ಈ ವಿವಾದ ಬಗೆಹರಿಯುವ ಲಕ್ಷಣಗಳಿಲ್ಲ. ಯಾಕೆಂದರೆ, ಒಂದೊಮ್ಮೆ ಸುಪ್ರೀಂ ಕೋರ್ಟ್ ಏನಾದರೂ ಗಡಿ ವಿವಾದ ತನ್ನ ವ್ಯಾಪ್ತಿಗೆ ಸೇರಿದ್ದಲ್ಲ ಎಂದು ತೀರ್ಮಾನಿಸಿದರೆ, ಆಗ ಈ ವಿವಾದವು ಸಂಸತ್ತಿನ ಅಂಗಳಕ್ಕೆ ಬಂದು ಬೀಳುತ್ತದೆ. ರಾಜಕೀಯ ಲಾಭ-ನಷ್ಟವನ್ನು ನೋಡುವ ಆಳುವ ಸರ್ಕಾರಗಳು ಅಷ್ಟು ಸಲೀಸಾಗಿ ಈ ಸಮಸ್ಯೆಗೆ ಮುಕ್ತಿ ಹಾಡಲಾರವು! ಹಾಗೆಯೇ, ಸುಪ್ರೀಂ ಕೋರ್ಟ್ ಏನಾದರೂ ವಿಚಾರಣೆಗೆ ಒಪ್ಪಿಕೊಂಡರೆ, ಇನ್ನಷ್ಟು ವರ್ಷಗಳ ಕಾಲ ವಿಚಾರಣೆಯ ದೆಸೆಯಿಂದಾಗಿ ಈ ವಿವಾದ ಮುಂದುವರಿಯಲಿದೆ!

ಮಹಾರಾಷ್ಟ್ರದಲ್ಲಿ ಈಗ ನಡೆಯುತ್ತಿರುವ ಬೆಳವಣಿಗೆಗಳನ್ನು ವಿಶ್ಲೇಷಿಸಿದರೆ ಖಂಡಿತವಾಗಿಯೂ ಅವರಿಗೆ ವಿವಾದವು ಬಗೆಹರಿಯಬೇಕಿಲ್ಲ. ಹಾಗೆಯೇ, ಬೆಳಗಾವಿಯಲ್ಲಿ ಇದೇ ವಿಷಯವನ್ನು ಇಟ್ಟುಕೊಂಡು ರಾಜಕಾರಣ ಮಾಡುವ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್)ಗೂ ಈ ವಿವಾದ ಜೀವಂತವಾಗಿರಬೇಕು. ಯಾಕೆಂದರೆ, ನವೆಂಬರ್ 23ರಂದು ಸುಪ್ರೀಂ ಕೋರ್ಟ್ ಅರ್ಜಿ ವಿಚಾರಣಾರ್ಹತೆಯ ಕುರಿತು ಅಂತಿಮ ವಿಚಾರಣೆಯನ್ನು ಕೈಗೆತ್ತಿಕೊಳ್ಳುವೆ ಎಂದು ಹೇಳುತ್ತಿದ್ದಂತೆ, ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ(ಇವರೂ ಗಡಿ ವಿವಾದ ಹೋರಾಟದಿಂದಲೇ ಮುಂಚೂಣಿಗೆ ಬಂದವರು!) ಅವರು ಉನ್ನತ ಮಟ್ಟದ ಸಭೆಯನ್ನು ನಡೆಸಿ, ಗಡಿ ವಿವಾದದಲ್ಲಿ ಮೃತಪಟ್ಟ ಮರಾಠಿಗರಿಗೆ ಸ್ವಾತಂತ್ರ್ಯ ಹೋರಾಟಗಾರರ ಪಟ್ಟ ಕಟ್ಟಿ, ಅವರ ಕುಟುಂಬಸ್ಥರಿಗೆ ಪಿಂಚಣಿ ಸೌಲಭ್ಯ ನೀಡುವ ವಾಗ್ದಾನ ಮಾಡಿದ್ದಾರೆ. ಅಲ್ಲದೇ, ಪ್ರಧಾನಿ ಬಳಿಗೆ ನಿಯೋಗ ಕೊಂಡೊಯ್ಯುವ ಭರವಸೆ ನೀಡಿದ್ದಾರೆ. ಖಂಡಿತವಾಗಿಯೂ ಇದು ರಾಜಕೀಯ ಕಾರಣಕ್ಕಾಗಿ ಮತ್ತು ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗೆಗಿನ ಜನರ ಗಮನವನ್ನು ಬೇರೇಡೆಯ ಸೆಳೆಯಲು ಮಾಡಿರುವ ತಂತ್ರ. ಜತೆಗೇ ಮಹಾರಾಷ್ಟ್ರ ಮುಖ್ಯಮಂತ್ರಿಯ ಹತಾಶತಕ್ಕೆ ಸಾಕ್ಷಿಯೂ ಹೌದು. ವಾಸ್ತವದಲ್ಲಿ ಮಹಾರಾಷ್ಟ್ರದಲ್ಲಿನ ರಾಜಕೀಯ ಪಕ್ಷಗಳು ಈ ತಂತ್ರವನ್ನು ಕಾಲಕಾಲಕ್ಕೆ ಅನುಸರಿಸುತ್ತಲೇ ಬಂದಿವೆ. ಅವರ ತಾಳಕ್ಕೆ ಬೆಳಗಾವಿಯಲ್ಲಿರುವ ಎಂಇಎಸ್ ಕುಣಿಯುತ್ತಾ ಬಂದಿದ್ದು, ಇದು ನಾಡದ್ರೋಹದ ಕೆಲಸ ಎಂದು ಹೇಳಬೇಕಾಗುತ್ತದೆ.

ಬೆಳಗಾವಿ, ಖಾನಾಪುರ, ನಿಪ್ಪಾಣಿ, ಬೀದರ್, ಬಾಲ್ಕಿ, ಕಾರವಾರ ಸೇರಿದಂತೆ ಕರ್ನಾಟಕ ಗಡಿಭಾಗದಲ್ಲಿರುವ 865 ಮರಾಠಿ ಭಾಷಿಕ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಎಂಇಎಸ್ ಬೇಡಿಕೆಗೆ ಪ್ರಾಮುಖ್ಯತೆಯೇ ಉಳಿದಿಲ್ಲ. ಆದರೂ, ಅದು ತನ್ನ ರಾಜಕೀಯ ಲಾಭಕ್ಕಾಗಿ ಈ ವಿವಾದವನ್ನು ಜೀವಂತವಾಗಿಡುವ ಪ್ರಯತ್ನವನ್ನು ಮಾಡುತ್ತಲೇ ಇರುತ್ತದೆ. ಕರ್ನಾಟಕ ಸರ್ಕಾರ ಮಾತ್ರವಲ್ಲ ಬೆಳಗಾವಿಯ ಜನರೂ ಎಂಇಎಸ್‌ನ ಈ ವಾದಕ್ಕೆ ದಿವ್ಯ ನಿರ್ಲಕ್ಷ್ಯ ವಹಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.

ಮೊದಲಿನಿಂದಲೂ ಕರ್ನಾಟಕದ ಭಾಗವೇ ಆಗಿರುವ ಬೆಳಗಾವಿಯಲ್ಲಿ ಮರಾಠಿಗರು ಮತ್ತು ಕನ್ನಡಿಗರು ಸಹೋದರತ್ವ ಭಾವನೆಯಿಂದಲೇ ಇದ್ದಾರೆ. ರಾಜಕಾರಣದಿಂದಾಗಿ ಮನಸ್ಸು ಕೊಂಚ ವಿಚಲಿತಗೊಂಡಿದ್ದರೂ, ಈಗ ಗಡಿ ವಿವಾದ ಎಂಬುದು ಅವರಿಗೆ ಮೂಲಭೂತ ವಿಷಯವೇ ಅಲ್ಲ! ಹಾಗಾಗಿ, ಮಹಾರಾಷ್ಟ್ರ ಮುಖ್ಯಮಂತ್ರಿಗಳು ತಮ್ಮ ರಾಜಕೀಯ ಲಾಭಕ್ಕಾಗಿ ಏನೆಲ್ಲ ಆಮಿಷಗಳನ್ನು ಒಡ್ಡಿದರೂ, ಕುತಂತ್ರಗಳನ್ನು ಮಾಡಿದರೂ ಇಲ್ಲಿನ ಜನರು ಸೊಪ್ಪು ಹಾಕಲಾರರು ಎಂಬುದು ಈಗಾಗಲೇ ಸಾಬೀತಾಗಿದೆ. ಹಾಗಾಗಿ ಅವರ ಯೋಜನೆಗಳು ಕೈಗೂಡುವುದಿಲ್ಲ.

ಇಷ್ಟಾಗಿಯೂ ಈ ವಿಷಯದಲ್ಲಿ ಕರ್ನಾಟಕ ಸರ್ಕಾರ ಸುಮ್ಮನೆ ಕೂಡುವಂತಿಲ್ಲ. ಕಾನೂನು ಹೋರಾಟವು ಅದರ ಪಾಡಿಗೆ ಅದು ನಡೆಯಲಿ. ಮತ್ತೊಂದೆಡೆ, ಗಡಿಯಲ್ಲಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅಭಿವೃದ್ಧಿ ಕೆಲಸನ್ನು ಆದ್ಯತೆಯ ಮೇರೆಗೆ ಮಾಡಬೇಕಾದ ಹೊಣೆಗಾರಿಕೆ ಕರ್ನಾಟಕ ಸರ್ಕಾರದ ಮೇಲಿದೆ. ವಿವಾದ ಮುನ್ನೆಲೆಗೆ ಬಂದಾಗ ಮಾತ್ರ ಗಡಿ ಪ್ರದೇಶದ ಅಭಿವೃದ್ಧಿಯೂ ಮುಂಚೂಣಿಗೆ ಬರಬಾರದು! ಬೆಳಗಾವಿ ನಮ್ಮದು ಎಂಬ ಸಂಕೇತವನ್ನು ಪ್ರತಿಬಿಂಬಿಸುವ ಸುವರ್ಣ ವಿಧಾನಸೌಧವನ್ನು ಈ ಕಾರ್ಯಕ್ಕೆ ಸಮರ್ಥವಾಗಿ ಬಳಸಿಕೊಳ್ಳಬೇಕು. ಆ ಮೂಲಕ, ಕಾನೂನಾತ್ಮಕ ಮಾತ್ರವಲ್ಲದೇ, ಗಡಿಯಲ್ಲಿನ ಜನರ ಹೃದಯಗಳನ್ನು ಗೆಲ್ಲುವ ಕೆಲಸ ಮಾಡಿದರೆ, ಮಹಾರಾಷ್ಟ್ರದ ಎಲ್ಲ ತಂತ್ರಗಳು ಸಂಪೂರ್ಣವಾಗಿ ವಿಫಲಗೊಳ್ಳುವುದು ಖಚಿತ.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ಕರ್ನಾಟಕ ಪೊಲೀಸ್ ವ್ಯವಸ್ಥೆ ಬಿಗಿಯಾಗುವುದು ಯಾವಾಗ?

Exit mobile version