Site icon Vistara News

BS Yediyurappa: ಪೋಕ್ಸೊ ಪ್ರಕರಣದಲ್ಲಿ ಮಾಜಿ ಸಿಎಂ ಬಿಎಸ್‌ವೈಗೆ ಮಧ್ಯಂತರ ಜಾಮೀನು ವಿಸ್ತರಣೆ

BS Yediyurappa

ಬೆಂಗಳೂರು: ಪೋಕ್ಸೊ ಕೇಸ್‌ನಲ್ಲಿ ಚಾರ್ಜ್‌ ಶೀಟ್‌ ಸಲ್ಲಿಕೆಯಾದ ಬೆನ್ನಲ್ಲೇ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ (BS Yediyurappa) ಅವರಿಗೆ ಬಿಗ್‌ ರಿಲೀಫ್‌ ಸಿಕ್ಕಿದೆ. ಮುಂದಿನ ವಿಚಾರಣೆವರೆಗೆ ಬಿ.ಎಸ್. ಯಡಿಯೂರಪ್ಪ ಅವರನ್ನು ಬಂಧಿಸಬಾರದು ಎಂದು ಜೂನ್‌ 14ರಂದು ಹೈಕೋರ್ಟ್‌ ತಡೆ ನೀಡಿತ್ತು. ಇದೀಗ ಅವರಿಗೆ ನೀಡಿದ್ದ ಮಧ್ಯಂತರ ಜಾಮೀನನ್ನು ನ್ಯಾಯಾಲಯ ವಿಸ್ತರಣೆ ಮಾಡಿದೆ.

ಬಿ.ಎಸ್‌. ಯಡಿಯೂರಪ್ಪ ಅವರು ಪೋಕ್ಸೊ ಪ್ರಕರಣದಲ್ಲಿ ಎಫ್‌ಐಆರ್‌ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್‌, ವಿಚಾರಣೆಯನ್ನು 2 ವಾರಗಳ ಕಾಲ ಮುಂದೂಡಿದೆ. ಅಲ್ಲದೇ ಪ್ರಕರಣದಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಿ ವಿಶೇಷ ಅಭಿಯೋಜಕರಿಗೆ ಸೂಚನೆ ನೀಡಿದೆ.

17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಅರುಣ್‌ ಎಂವೈ, ಎಂ.ರುದ್ರೇಶ್‌, ಜಿ.ಮರಿಸ್ವಾಮಿ ಎಂಬುವರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿ ಒಂದನೇ ಪೋಕ್ಸೊ ತ್ವರಿತಗತಿ ವಿಶೇಷ ನ್ಯಾಯಾಲಯಕ್ಕೆ ಸಿಐಡಿ ಗುರುವಾರ ಚಾರ್ಜ್‌ ಶಿಟ್‌ ಸಲ್ಲಿಸಿತ್ತು. ಇದರ ಬೆನ್ನಲ್ಲೇ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಮಧ್ಯಂತರ ಜಾಮೀನು ವಿಸ್ತರಣೆಯಾಗಿದೆ.

ಇದನ್ನೂ ಓದಿ | vasavi condiments : ವಾಸವಿ ಕಾಂಡಿಮೆಂಟ್ಸ್‌ಗೆ ಬೀಗ; ನಿದ್ರೆ ಮಾತ್ರೆ ಸೇವಿಸಿ ಮಾಲಕಿ ಗೀತಾ ಆತ್ಮಹತ್ಯೆಗೆ ಯತ್ನ

ಏನಿದು ಪ್ರಕರಣ?

2024ರ ಫೆಬ್ರವರಿ 2ರಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಾರ್ಚ್‌ 14ರಂದು ಪೋಕ್ಸೊ ಕಾಯ್ದೆ ಅಡಿಯಲ್ಲಿ ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಇದಾದ ಬಳಿಕ ಬಿ.ಎಸ್.ಯಡಿಯೂರಪ್ಪ ಅವರು ಸಿಐಡಿ ಅಧಿಕಾರಿಗಳ ವಿಚಾರಣೆಗೂ ಹಾಜರಾಗಿದ್ದರು. ಆದರೆ, ಎಫ್‌ಐಆರ್‌ ದಾಖಲಾದ ಮೂರು ತಿಂಗಳ ಬಳಿಕ ಪ್ರಕರಣವೀಗ ಮತ್ತೆ ಮುನ್ನೆಲೆಗೆ ಬಂದಿದೆ. ಜೂನ್‌ 12ರಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಬೇಕು ಎಂಬುದಾಗಿ ಜೂನ್‌ 11ರಂದೇ ಸಿಐಡಿ ಅಧಿಕಾರಿಗಳು ನೋಟಿಸ್‌ ನೀಡಿದ್ದರು.

ಮಾಜಿ ಶಾಸಕ ಪ್ರೀತಂ ಗೌಡಗೆ ರಿಲೀಫ್‌; ಬಂಧಿಸದಂತೆ ಹೈಕೋರ್ಟ್ ಆದೇಶ

ಬೆಂಗಳೂರು: ಹಾಸನ ಅಶ್ಲೀಲ ವಿಡಿಯೊ ಪ್ರಕರಣದಲ್ಲಿ (Prajwal Revanna Case) ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡಗೆ ರಿಲೀಫ್‌ ಸಿಕ್ಕಿದೆ. ತಮ್ಮ ಮೇಲೆ ಯಾವುದೇ ಆರೋಪವಿಲ್ಲದಿದ್ದರೂ ಕೇಸ್ ದಾಖಲಿಸಲಾಗಿದೆ ಎಂದು ಎಫ್‌ಐಆರ್‌ ಪ್ರಶ್ನಿಸಿ ಪ್ರೀತಂ ಗೌಡ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿರುವ ಕೋರ್ಟ್‌, ಪ್ರೀತಂ ಗೌಡರನ್ನು ಬಂಧಿಸದೆ, ತನಿಖೆ ಮುಂದುವರಿಸಲು ಎಸ್ಐಟಿಗೆ ಸೂಚನೆ ನೀಡಿದೆ.

ಅಶ್ಲೀಲ ವಿಡಿಯೊ ಇರುವ ಪೆನ್​ಡ್ರೈವ್​​ ಹಂಚಿಕೆ ಆರೋಪದಲ್ಲಿ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ನಗರದ ಸಿಐಡಿ ಸೈಬರ್ ಠಾಣೆಯಲ್ಲಿ ಜೆಡಿಎಸ್‌ ಮಾಜಿ ಸಂಸದ ಪ್ರಜ್ವಲ್​​ ರೇವಣ್ಣ, ಕಿರಣ್​, ಶರತ್​ ಹಾಗೂ ಪ್ರೀತಂ ಗೌಡ ವಿರುದ್ಧ ಐಪಿಸಿ ಸೆಕ್ಷನ್ 354(ಎ), 354 (ಡಿ), 354 ಬಿ, 506 ಹಾಗೂ ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಎಫ್‌ಐಆರ್‌ ಪ್ರಶ್ನಿಸಿ ಹೈಕೋರ್ಟ್ ಏಕಸದಸ್ಯ ಪೀಠಕ್ಕೆ ಮಾಜಿ ಶಾಸಕ ಪ್ರೀತಂ ಗೌಡ ರಿಟ್ ಅರ್ಜಿ ಸಲ್ಲಿಸಿದ್ದರು. ಯಾವುದೇ ಆರೋಪವಿಲ್ಲದಿದ್ದರೂ ರಾಜಕೀಯ ದುರುದ್ದೇಶದಿಂದ ಎಫ್ಐಆರ್ ದಾಖಲಿಸಲಾಗಿದೆ. ಜನ ಮಾತನಾಡುತ್ತಿದ್ದಾರೆಂಬ ಆಧಾರದ ಮೇಲೆ ಕೇಸ್ ಹಾಕಿದ್ದಾರೆ ಎಂದು ಪ್ರೀತಮ್ ಗೌಡ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿದರು.

ಇದಕ್ಕೆ ಎಸ್‌ಪಿಪಿ ರವಿವರ್ಮ ಕುಮಾರ್ ಆಕ್ಷೇಪ ವ್ಯಕ್ತಪಡಿಸಿ, ಆರೋಪಿ ವಿರುದ್ಧ ಸಂತ್ರಸ್ತೆಯ ವಿಡಿಯೊ ಹಂಚಿದ ಗಂಭೀರ ಆರೋಪವಿದೆ. ಹೀಗಾಗಿ ಮಧ್ಯಂತರ ಆದೇಶ ನೀಡದಂತೆ ಮನವಿ ಮಾಡಿದರು. ಈ ವೇಳೆ ಪ್ರೀತಮ್ ಗೌಡ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಮಾತನಾಡಿ, ಜನ ಮಾತನಾಡಿಕೊಳ್ಳುತ್ತಿರುವ ಕಾರಣಕ್ಕೆ ದೂರು ನೀಡಿದ್ದಾರೆ. ಸರ್ಕಾರದವರೇ 3 ಲಕ್ಷ ಪೆನ್ ಡ್ರೈವ್ ಹಂಚಿದ್ದಾರೆಂದು ಜನ ಮಾತನಾಡುತ್ತಿದ್ದಾರೆ. ಹಾಗಿದ್ದರೆ ಸರ್ಕಾರದವರ ಮೇಲೂ ಎಫ್ಐಆರ್ ಮಾಡುತ್ತಾರಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ | Road Accident : ಅಂತ್ಯಸಂಸ್ಕಾರ ಮುಗಿಸಿ ಬರುತ್ತಿದ್ದ ದಂಪತಿ ಮೇಲೆ ಮುರಿದು ಬಿದ್ದ ಬೃಹತ್‌ ಮರ!

ವಾದ-ಪ್ರತಿವಾದ ಆಲಿಸಿದ ನ್ಯಾ. ಕೃಷ್ಣ ಎಸ್ ದೀಕ್ಷಿತ್ ಅವರು, ವಿಡಿಯೊ ಹಂಚುವುದರಿಂದ ಮಹಿಳೆಯ ಗೌರವಕ್ಕೆ ಹಾನಿಯಾಗುತ್ತದೆ. ಇದು ಗಂಭೀರ ಅಪರಾಧವಾಗಿದೆ. ಆದರೆ, ಪ್ರಕರಣದಲ್ಲಿ ಮಾಜಿ ಶಾಸಕ ಪ್ರೀತಮ್ ಗೌಡರನ್ನು ಎಸ್‌ಐಟಿ ಬಂಧಿಸದೇ, ತನಿಖೆ ಮುಂದುವರಿಸಬೇಕು. ಅಲ್ಲದೇ ವಿಚಾರಣೆಗೆ ಸಹಕರಿಸಲು ಅರ್ಜಿದಾರ ಪ್ರೀತಂ ಗೌಡಗೆ ಸೂಚಿಸಿದ್ದಾರೆ.

Exit mobile version