Site icon Vistara News

BY Vijayendra: ʼರಣಹೇಡಿ ಕಾಂಗ್ರೆಸ್‌ ಸರ್ಕಾರ…ʼ ವಿಜಯೇಂದ್ರ ಆಕ್ರೋಶ, ಪೆಟ್ರೋಲ್‌ ಬೆಲೆ ಏರಿಕೆ ವಿರೋಧಿಸಿ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

by vijayendra

ಬೆಂಗಳೂರು: ಪೆಟ್ರೋಲ್-‌ ಡೀಸೆಲ್‌ ಬೆಲೆ ಏರಿಕೆ (Petrol Diesel price hike) ಖಂಡಿಸಿ ಇಂದು ಬೆಳಗ್ಗಿನಿಂದ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ರಸ್ತೆ ತಡೆ, ಪ್ರತಿಭಟನೆ (BJP protest) ನಡೆಸಿದರು. ಈ ಸಂದರ್ಭದಲ್ಲಿ ಹಲವಾರು ಬಿಜೆಪಿ ನಾಯಕರನ್ನು (BJP leaders) ಬಂಧಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಅವರು ಇದನ್ನು ಖಂಡಿಸಿದ್ದು, “ಬಿಜೆಪಿ ಹೋರಾಟ ಹತ್ತಿಕ್ಕಲು ಪೋಲಿಸ್ ಬಳಸಿಕೊಳ್ಳುತ್ತಿರುವ ರಣಹೇಡಿ ಕಾಂಗ್ರೆಸ್ ಸರ್ಕಾರ” ಎಂದು ಎಕ್ಸ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಬೆಂಗಳೂರು ಘಟಕದಿಂದ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿತ್ತು. ಮಲ್ಲೇಶ್ವರ ಜಗನ್ನಾಥ ಭವನದಿಂದ, ಎಂಜಿ ರಸ್ತೆ ಗಾಂಧಿ ಪ್ರತಿಮೆವರೆಗೂ ನಡೆಯಬೇಕಿತ್ತು. ಸೈಕಲ್‌ ರ್ಯಾಲಿ ವಿಜಯೇಂದ್ರ ನೇತೃತ್ವದಲ್ಲಿ ಆರಂಭವಾಗಿ, ನೂರು ಮೀಟರ್‌ಗಳಲ್ಲಿ ಅದನ್ನು ಪೊಲೀಸರು ತಡೆದಿದ್ದು, ಮುಂದುವರಿಯಲು ಬಿಡಲಿಲ್ಲ. ಶಾಸಕ ಅಶ್ವಥ್ ನಾರಾಯಣ್, ವಿಧಾನಪರಿಷತ್ ಸದಸ್ಯ ಸಿ.ಟಿ ರವಿ, ಛಲವಾದಿ ನಾರಾಯಣಸ್ವಾಮಿ ಮುಂತಾದವರು ರ್ಯಾಲಿಯಲ್ಲಿ ಭಾಗಿಗಳಾಗಿದ್ದರು. ಸೈಕಲ್ ಏರಿ ಹೊರಟ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರನ್ನು ಪೊಲೀಸರು ತಡೆದು ಬಂಧಿಸಿದರು.

ಇದನ್ನು ಖಂಡಿಸಿ ವಿಜಯೇಂದ್ರ ಟ್ವೀಟ್‌ ಮಾಡಿದ್ದಾರೆ. “ನಾಡಿನ ಜನರ ಮೇಲೆ ದಿನದಿಂದ ದಿನಕ್ಕೆ ಬೆಲೆ ಏರಿಕೆಯ ಬರೆ ಎಳೆಯುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ. ಜನ ವಿರೋಧಿ ನೀತಿಯನ್ನು ಖಂಡಿಸಿ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಿಂದ ವಿಧಾನಸೌಧದವರೆಗೆ ಸೈಕಲ್‌ ಜಾಥಾ ಹಮ್ಮಿಕೊಳ್ಳಲಾಗಿತ್ತು. ಬಿಜೆಪಿ ಹೋರಾಟಕ್ಕೆ ಬೆದರಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಜಾಥಾ ಆರಂಭಕ್ಕೂ ಮುನ್ನವೇ ಪೊಲೀಸರ ಮೂಲಕ ಬಂಧಿಸಿದ್ದಾರೆ. ಅಧಿಕಾರ ಬಲದಿಂದ ನಮ್ಮ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ನಿಮ್ಮ ಸರ್ಕಾರದ ವಿರುದ್ಧ ರಾಜ್ಯದ ಜನಸಾಮಾನ್ಯರ ಸಹನೆಯ ಕಟ್ಟೆಯೊಡೆದು ಅವರು ಬೀದಿಗಿಳಿದು ಹೋರಾಡುವ ದಿನ ದೂರವಿಲ್ಲ. ದಿನಕ್ಕೊಂದು ದರ ಏರಿಕೆಯ ನಿರ್ಧಾರಗಳನ್ನು ಕೈ ಬಿಡುವ ತನಕ ಅಥವಾ ನೀವು ಅಧಿಕಾರ ಬಿಟ್ಟು ತೊಲಗುವ ತನಕ ಬಿಜೆಪಿ ಹೋರಾಟ ಕೊನೆಗಾಣದು” ಎಂದು ವಿಜಯೇಂದ್ರ Xನಲ್ಲಿ ಪೋಸ್ಟ್ ಮಾಡಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ನಾನಾ ಜಿಲ್ಲಾ ಕೇಂದ್ರಗಳಲ್ಲಿ ಕೂಡ ಆಯಾ ಜಿಲ್ಲಾಧ್ಯಕ್ಷರು, ಬಿಜೆಪಿ ಮುಖಂಡರು ಪ್ರತಿಭಟನೆ, ಸೈಕಲ್‌ ರ್ಯಾಲಿ, ರಸ್ತೆ ತಡೆ ನಡೆಸಿದರು.

ಇದನ್ನೂ ಓದಿ: Petrol Diesel Price: ಪೆಟ್ರೋಲ್ ದರ ಹೆಚ್ಚಳ ಆದೇಶ‌ ವಾಪಸ್ ಪಡೆಯದಿದ್ದರೆ ಉಗ್ರ ಪ್ರತಿಭಟನೆ: ವಿಜಯೇಂದ್ರ ಎಚ್ಚರಿಕೆ

Exit mobile version