ಬಹುನಿರೀಕ್ಷಿತ ೫ಜಿ ಸ್ಪೆಕ್ಟ್ರಮ್ ಹರಾಜು ೨೦೨೨ರ ಆಗಸ್ಟ್ ೧ಕ್ಕೆ ಅಂತ್ಯವಾಗಿದೆ. ಇದರೊಂದಿಗೆ ಬೆಂಗಳೂರು, ದಿಲ್ಲಿ, ಮುಂಬಯಿ, ಚೆನ್ನೈ ಮತ್ತು ಪುಣೆಯಲ್ಲಿ ಅಕ್ಟೋಬರ್ ವೇಳೆಗೆ ೫ಜಿ ಸೇವೆ ಆರಂಭವಾಗುವ ನಿರೀಕ್ಷೆ ಗರಿಗೆದರಿದೆ. ೪ಜಿಗೆ ಹೋಲಿಸಿದರೆ ೧೦ ಪಟ್ಟು ಹೆಚ್ಚಿನ ವೇಗದ ೫ಜಿ ಜಮಾನದ ಬಗ್ಗೆ ದೇಶ ವ್ಯಾಪಿ ಕುತೂಹಲ ಉಂಟಾಗಿದೆ. ಇದರ ಜತೆಯಲ್ಲಿಯೇ, ೫ಜಿಯ ಉಪಯೋಗವೇನು? ೫ಜಿ ಬಂದ ಬಳಿಕ ಈಗಿನ ೩ಜಿ ಮತ್ತು ೪ಜಿ ಕಥೆ ಏನು? ಈಗ ಬಳಸುತ್ತಿರುವ ೪ಜಿ ಸ್ಮಾರ್ಟ್‌ಫೋನ್‌ನಲ್ಲಿಯೇ ೫ಜಿ ನೆಟ್‌ವರ್ಕ್‌ನ ಸೇವೆ ಪಡೆಯಬಹುದೇ? ೫ಜಿ ಸ್ಮಾರ್ಟ್‌ಫೋನ್ ಖರೀದಿಸಿದರೆ, ಅದರಲ್ಲೇ ೪ಜಿ ಬಳಸಬಹುದೇ? ಎಂಬಿತ್ಯಾದಿ ಪ್ರಶ್ನೆಗಳೂ ನಿಮ್ಮಲ್ಲಿ ಉಂಟಾಗಿರಬಹುದು. ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ!
೧. ಈಗ ಬಹುತೇಕ ಮಂದಿ ೪ಜಿ ನೆಟ್‌ವರ್ಕ್ ಇರುವ ಸ್ಮಾರ್ಟ್‌ಫೋನ್ ಬಳಸುತ್ತಾರೆ. ಅದರಲ್ಲೇ ೫ಜಿ ನೆಟ್‌ವರ್ಕ್ ಸೇವೆ ಪಡೆಯಬಹುದೇ?
ಇಲ್ಲ. ೪ಜಿ ನೆಟ್‌ವರ್ಕ್‌ಗೆ ಮೀಸಲಾಗಿರುವ ಸ್ಮಾರ್ಟ್‌ಫೋನ್‌ನಲ್ಲಿ ೫ಜಿ ನೆಟ್ ವರ್ಕ್ ಸೇವೆ ಪಡೆಯಲು ಸಾಧ್ಯವಿಲ್ಲ. ಅದಕ್ಕಾಗಿ ೪ಜಿ ಸ್ಮಾರ್ಟ್‌ಫೋನ್ ಅನ್ನು ಬದಲಿಸಬೇಕಾಗುತ್ತದೆ. ಆದರೆ ೫ಜಿ ಸ್ಮಾರ್ಟ್‌ಫೋನ್‌ನಲ್ಲಿ ೪ಜಿ ತಂತ್ರಜ್ಞಾನವನ್ನು ಬಳಸಬಹುದು. ಎರಡನೆಯದಾಗಿ ೫ಜಿ ಮೊಬೈಲ್ ಖರೀದಿಸುವಾಗ ನಿಮ್ಮ ಪ್ರದೇಶದಲ್ಲಿ ೫ಜಿ ಸೇವೆ ಲಭ್ಯವಿದೆಯೇ ಎಂಬುದನ್ನೂ ಗಮನಿಸುವುದು ಸೂಕ್ತ.
೨. ಹೊಸ ೫ಜಿ ಸೇವೆ ಆರಂಭವಾದ ಬಳಿಕ ಹಳೆಯ ೪ಜಿ ಮತ್ತು ೩ಜಿ ಗತಿ ಏನಾಗಲಿದೆ?
ಆತಂಕಪಡಬೇಕಿಲ್ಲ. ೫ಜಿ ಬಂದ ತಕ್ಷಣ ೪ಜಿ ಅಥವಾ ೩ಜಿ ಸೇವೆ ಏಕ್‌ದಮ್ ಮುಕ್ತಾಯವಾಗುವುದಿಲ್ಲ. ಅದು ಎಂದಿನಂತೆ ಹಲವು ವರ್ಷಗಳ ಕಾಲ ಮುಂದುವರಿಯಲಿದೆ. ಆದರೆ ಈಗಾಗಲೇ ಬಳಕೆ ಕ್ಷೀಣವಾಗಿರುವ ೩ಜಿ ಕಣ್ಮರೆಯಾಗಬಹುದು. ೪ಜಿ ಎಲ್‌ಟಿಇ (4G- Long Term Evolution) ನೆಟ್‌ವರ್ಕ್ ಇನ್ನೂ ೧೦-೧೫ ವರ್ಷ ೪ಜಿ ಸೇವೆಯನ್ನು ಎಂದಿನಂತೆ ಮುಂದುವರಿಸಬಹುದು. ೪ಜಿ ಜತೆಗೆ ೫ಜಿ ಸಾಗಲಿದೆ. ಮತ್ತೊಂದು ಗಮನಿಸಬೇಕಾದ ಅಂಶವೆಂದರೆ, ೫ಜಿ ನೆಟ್ ವರ್ಕ್ ಇರುವ ಸ್ಮಾರ್ಟ್‌ಫೋನ್, ೪ಜಿಗೂ ಸೂಕ್ತವಾಗಿರುತ್ತದೆ.
೩. ಬಳಕೆದಾರರಿಗೆ ೫ಜಿಯಿಂದ ಸಿಗುವ ಪ್ರಯೋಜನವೇನು?
ಇಂಟರ್‌ನೆಟ್ ಸ್ಪೀಡ್ ಅನೂಹ್ಯವಾಗಿ ಹೆಚ್ಚುತ್ತದೆ. ೪ಜಿಗೆ ಹೋಲಿಸಿದರೆ ೫ಜಿಯಲ್ಲಿ ಇಂಟರ್‌ನೆಟ್ ಸ್ಪೀಡ್ ಹತ್ತು ಪಟ್ಟು ಹೆಚ್ಚು ಇರುತ್ತದೆ. ಇದು ಹಲವು ತಂತ್ರಜ್ಞಾನ ಅನುಕೂಲಗಳನ್ನು ಬಳಕೆದಾರರಿಗೆ ನೀಡುತ್ತದೆ. ೨೦೨೧ರಲ್ಲಿ ಭಾರತದಲ್ಲಿ ಇಂಟರ್‌ನೆಟ್ ಬಳಕೆದಾರರ ನೆಲೆ ೮೩ ಕೋಟಿಯನ್ನು ದಾಟಿದೆ. ೨೦೧೫ರಲ್ಲಿ ೫೩ ಕೋಟಿ ಇತ್ತು. ಕೇವಲ ೬ ವರ್ಷಗಳ ತ್ವರಿತ ಬದಲಾವಣೆಯನ್ನು ಗಮನಿಸಬಹುದು. ೨೦೧೮-೨೦೨೧ರ ಅವಧಿಯಲ್ಲಿ ಭಾರತದಲ್ಲಿ ಸರಾಸರಿ ಇಂಟರ್‌ನೆಟ್ ಬಳಕೆ ಮಾಸಿಕ ೧.೨೪ ಜಿಬಿಯಿಂದ ೧೪.೧ ಜಿಬಿಗೆ ಏರಿಕೆಯಾಗಿದೆ. ಭಾರತ ಈಗ ಅತ್ಯಂತ ಅಗ್ಗದ ದರದಲ್ಲಿ ಹೆಚ್ಚು ಡೇಟಾ ಒದಗಿಸುತ್ತದೆ. ೫ಜಿ ಬಂದ ಬಳಿಕ ನೆಟ್ ಬಳಕೆ ಮತ್ತಷ್ಟು ಹೆಚ್ಚಬಹುದು.
5G ನಮ್ಮ ವೃತ್ತಿ, ಉದ್ಯೋಗ, ವೈಯಕ್ತಿಕ ಜೀವನದ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರಬಲ್ಲುದು. ಇಂಡಸ್ಟ್ರಿಯ ಸಮಗ್ರ ಡಿಜಿಟಲೀಕರಣವನ್ನು ಕಾಣಬಹುದು. ಮಾತ್ರವಲ್ಲದೆ ಮೆಶೀನ್ ಟು ಮೆಶೀನ್ ಕಮ್ಯುನಿಕೇಶನ್, ಇಂಟರ್‌ನೆಟ್ ಆಫ್ ಥಿಂಗ್ಸ್, ಕೃತಕ ಬುದ್ಧಿಮತ್ತೆ, ಆಟೊಮೇಟಿವ್, ಆರೋಗ್ಯ, ಕೃಷಿ, ಇಂಧನ, ಶಿಕ್ಷಣ ಮತ್ತಿತರ ಕ್ಷೇತ್ರಗಳ ಲಾಭವನ್ನು ಹೆಚ್ಚಿಸಲಿದೆ. 5G ಸ್ಪೆಕ್ಟ್ರಮ್ ಹರಾಜಿಗೆ ಮೊದಲೇ ಅದನ್ನು ಬೆಂಬಲಿಸಬಲ್ಲ ಸ್ಮಾರ್ಟ್‌ಫೋನ್‌ಗಳನ್ನು ಕಂಪನಿಗಳು ತಯಾರಿಸಿವೆ. ಉದ್ಯಮಸ್ನೇಹಿ ವಾತಾವರಣ ಸೃಷ್ಟಿಗೆ 5G ಅಗತ್ಯ ಎನ್ನುತ್ತಾರೆ ತಜ್ಞರು.
೪. ೫ಜಿ ಬಳಕೆಯ ಅನನುಕೂಲವೇನು?
೫ಜಿ ಸೇವೆಯು ಎಲ್ಲ ಕಡೆಗಳಲ್ಲಿ ಲಭ್ಯವಿಲ್ಲ. ಸದ್ಯಕ್ಕೆ ನಗರಗಳಲ್ಲಿ ಮಾತ್ರ ಹೆಚ್ಚಾಗಿ ಸಿಗಬಹುದು. ಆದ್ದರಿಂದ ಲಭ್ಯ ಇರುವ ಕಡೆಗಳಲ್ಲಿ ಮಾತ್ರ ಬಳಸಬಹುದು. ಗ್ರಾಮೀಣ ಭಾಗದಲ್ಲಿ ೪ಜಿಯನ್ನೇ ಬಳಸಬೇಕಾಗುತ್ತದೆ. ಎತ್ತರದ ಕಟ್ಟಡ, ಮರಗಳು ಇರುವ ಕಡೆಗಳಲ್ಲಿ ೫ಜಿ ನೆಟ್ ವರ್ಕ್‌ಗೆ ಅಡೆತಡೆಗಳು ಉಂಟಾಗಬಹುದು. ಮಳೆ ಕೂಡ ೫ಜಿ ಕವರೇಜ್‌ಗೆ ಅಡ್ಡಿಪಡಿಸಬಹುದು. ೫ಜಿ ಬಳಕೆಯಿಂದ ಸ್ಮಾರ್ಟ್ ಫೋನ್ ಬ್ಯಾಟರಿ ಮೇಲೆ ತೊಂದರೆಯಾಗದಂತೆ ಉತ್ಪಾದಕರು ನಿಗಾ ವಹಿಸಬೇಕಾಗುತ್ತದೆ.
೫. ೫ಜಿ ಬಳಕೆಯಿಂದ ದರ ಹೆಚ್ಚಲಿದೆಯೇ?
ಹೌದು. ಮೊಬೈಲ್ ಬಿಲ್ ವೆಚ್ಚದಲ್ಲಿ ೨೦% ಏರಿಕೆಯಾಗುವ ಸಾಧ್ಯತೆ ಇದೆ. ಇದು ಮೊಬೈಲ್ ಕಂಪನಿಗಳ ನಿರ್ಧಾರವನ್ನೂ ಅವಲಂಬಿಸಿದೆ.
೬. ಬಳಕೆದಾರರು ಬಲವಂತವಾಗಿ ೫ಜಿಗೆ ಬದಲಾಗಬೇಕೇ?
ಇಲ್ಲ. ಇನ್ನೂ ಹತ್ತು ವರ್ಷಗಳ ಕಾಲ ೪ಜಿ ಸಿಗಬಹುದು ಎಂದು ಹೇಳುತ್ತಾರೆ ಟೆಲಿಕಾಂ ವಲಯದ ತಜ್ಞರು.