Site icon Vistara News

Car Care Tips : ನಿಮ್ಮ ಕಾರಿನ ಈ ಬಿಡಿಭಾಗಗಳಿಗೂ ಇವೆ ಎಕ್ಸ್​ಪೈರಿ ಡೇಟ್​​; ಅವುಗಳು ಯಾವವು ಎಂಬುದು ತಿಳಿದಿರಲಿ

Car Care tips

ಬೆಂಗಳೂರು: ಕೆಲವರಿಗೆ ಈ ಅಭ್ಯಾಸ ಇಲ್ಲ ಹಾಗೂ ಇನ್ನೂ ಕೆಲವರು ಈ ವಿಷಯದ ಬಗ್ಗೆ ನಿಧಾನವಾಗಿ ಜಾಗೃತರಾಗುತ್ತಿದ್ದಾರೆ. ಅದೇನೆಂದರೆ ವಸ್ತುಗಳ ಎಕ್ಸ್​ಪೈರಿ ಡೇಟ್​ (Expiry Date) ಪರಿಶೀಲನೆ ಮಾಡುವುದು. ಅಂದರೆ ತಾವು ಖರೀದಿಸುವ ಯಾವುದೇ ವಸ್ತುವಿನ ಉತ್ಪಾದನಾ ಮತ್ತು ಮುಕ್ತಾಯ ದಿನಾಂಕವನ್ನು ಪರಿಶೀಲಿಸುವುದು. ಸಾಕಷ್ಟು ಮಂದಿ ಮನೆಗೆ ತರುವ ದೀನಸಿ ವಸ್ತುಗಳಿಗೆ ಮಾತ್ರ ಇದು ಸೀಮಿತ ಎಂದು ನಂಬಿ ದ್ದಾರೆ. ಆದರೆ, ಉತ್ಪಾದನಾ ಘಟಕವೊಂದರಲ್ಲಿ ತಯಾರಾಗುವ ಎಲ್ಲ ವಸ್ತುಗಳಿಗೂ ಎಕ್ಸ್​ಪೈರಿ ಡೇಟ್​ ಇರುತ್ತದೆ. ಹೀಗಾಗಿ ಈ ಸಲಹೆಯು ಕಾರಿನ ಬಿಡಿ ಭಾಗಗಳು ಮತ್ತು ಪರಿಕರಗಳಿಗೂ ಅನ್ವಯಿಸುತ್ತದೆ ಎಂದು ಮತ್ತೊಮ್ಮೆ ಹೇಳಬೇಕಾಗಿಲ್ಲ. ಆದರೆ, ಬಹುತೇಕ ಕಾರು ಮಾಲೀಕರು ಈ ಬಗ್ಗೆ ಜಾಗೃತವಾಗಿಲ್ಲ. ಕೆಟ್ಟು ಕಳಚಿ ಬಿದ್ದ ಮೇಲೆ ಮಾತ್ರ ಸರಿಪಡಿಸುತ್ತಾರೆ. (Car Care Tips) ಇದು ಸರಿಯಾದ ಅಭ್ಯಾಸವಲ್ಲ ಎಂಬುದು ಸತ್ಯ.

ಕಾರು ಅಥವಾ ಇನ್ಯಾವುದೇ ವಾಹನವನ್ನು ಸರಿಯಾಗಿ ಮೆಂಟೇನ್​ ಆದರೆ ಅದು ಕೆಲಸ ಮಾಡುತ್ತಲೇ ಇರುತ್ತದೆ ಎಂಬುದು ಒಂದು ನಂಬಿಕೆ. ಆದರೆ ಅವಧಿ ಮುಗಿದ ಬಿಡಿಭಾಗಗಳನ್ನು ಹೊಂದಿರುವ ಕಾರನ್ನು ಓಡಿಸುವುದು ಖಂಡಿತವಾಗಿಯೂ ಅಪಾಯಕಾರಿ. ಹೀಗಾಗಿ ‘ಬಿಡಿಭಾಗಗಳು ಏನೂ ಆಗಿಲ್ಲ. ಸರಿಪಡಿಸಬೇಡ’ ಎಂಬ ಮನಸ್ಥಿತಿಯಿಂದ ಹೊರಕ್ಕೆ ಬರಲೇಬೇಕು. ಯಾಕೆಂದರೆ ಒಂದು ಭಾಗಕ್ಕೆ ಆಗಿರುವ ಹಾನಿಯು ವಾಹನದ ಸಂಪೂರ್ಣ ದಕ್ಷತೆಯನ್ನು ಹಾಳು ಮಾಡುವ ಜತೆಗೆ ಪ್ರಯಾಣವನ್ನು ಅಪಾಯಕ್ಕೆ ತಳ್ಳಬಹುದು. ಹೀಗಾಗಿ ನಿಮ್ಮ ಕಾರಿನಲ್ಲಿ ಯಾವೆಲ್ಲ ವಸ್ತುಗಳನ್ನು ಅವಧಿ ಮುಗಿದ ತಕ್ಷಣ ಬದಲಾಯಿಸಬೇಕು ಎಂಬುದನ್ನು ಈ ಕೆಳಗೆ ತಿಳಿಸಿಕೊಡಲಾಗಿದೆ.

ಎಂಜಿನ್ ಆಯಿಲ್​

ಎಂಜಿನ್ ಆಯಿಲ್ ಎಂಜಿನ್​ ಒಳಗಿನ ಘರ್ಷಣೆಯನ್ನು ನಿಯಂತ್ರಿಸುವ ಬಹುಮುಖ್ಯ ದ್ರಾವಣ. 12ರಿಂದ 18 ತಿಂಗಳ ಒಳಗೆ ಎಂಜಿನ್ ಆಯಿಲ್ ಬದಲಾಯಿಸಬೇಕು ಹಾಗೂ ಬಳಸಲು ಶುರು ಮಾಡಿದ ಮೇಲೆ ಅದರ ಅವಧಿ ಮುಕ್ತಾಯಗೊಳ್ಳುತ್ತದೆ. ಅಥವಾ 10,000 ಕಿ.ಮೀ.ಗೆ ಬದಲಾವಣೆ ಮಾಡಲೇಬೇಕು. ಕೆಲವರು ಇದನ್ನು ನಿರ್ಲಕ್ಷ್ಯ ಮಾಡುತ್ತಾರೆ. ಸರ್ವಿಸ್​ ಮಾಡಿದಾಗ ಮಾಡಿದರಾಯ್ತು ಎಂದು ಅಂದುಕೊಳ್ಳುತ್ತಾರೆ. ಇದು ಎಂಜಿನ್​ ಒಳಗಿನ ಭಾಗಗಳ ಸವೆತ ಹಾಗೂ ಮುರಿತಕ್ಕೆ ಕಾರಣವಾಗುತ್ತದೆ.

ಬ್ರೇಕ್ ಆಯಿಲ್

ಕಾರಿನಲ್ಲಿ ಸುರಕ್ಷತೆ ಎಂದರೆ ಮೊದಲು ಬರುವುದು ಸೂಕ್ತವಾಗಿ ಕಾರ್ಯನಿರ್ವಹಿಸುವ ಬ್ರೇಕಿಂಗ್ ಸಿಸ್ಟಮ್​. ಬ್ರೇಕ್​ ವ್ಯವಸ್ಥೆಯಲ್ಲಿ ಬ್ರೇಕ್​ ಆಯಿಲ್​ ಕೆಲಸ ದೊಡ್ಡದು.. ಪ್ರತಿ 10,000 ಕಿ.ಮೀಗೆ ಬ್ರೇಕ್ ಆಯಿಲ್ ಬಾಳಿಕೆ ಮುಗಿಯುತ್ತದೆ. ಹೀಗಾಗಿ ಪ್ರತಿ ಮೂರು ವರ್ಷಗಳಿಗೊಮ್ಮೆ ಬ್ರೇಕ್ ಆಯಿಲ್ ಅನ್ನು ಸಂಪೂರ್ಣವಾಗಿ ಬದಲಾಯಿಸಬೇಕು. ಆಯಿಲ್ ದಪ್ಪವಾದರೆ ಬ್ರೇಕಿಂಗ್ ದಕ್ಷತೆ ಇಳಿಯುತ್ತದೆ.

ಎಸಿ ರೆಫ್ರಿಜರೇಟರ್ ರೀಫಿಲ್​

ಎಸಿ ರೆಫ್ರಿಜರೇಟರ್ ಗ್ಯಾಸ್​ ರಿಫಿಲ್ ಮಾಡುವ ಕೆಲಸವನ್ನು ಕಾಲಕಾಲಕ್ಕೆ ಮಾಡಬೇಕು. ಎಸಿ ವೆಂಟ್ ಗಳಿಂದ ಹೊರಬರುವ ಗಾಳಿಯು ಸಾಕಷ್ಟು ತಂಪಾಗಿಲ್ಲದಿದ್ದರೆ ವಾಹನದಲ್ಲಿನ ಹವಾನಿಯಂತ್ರಣ ವ್ಯವಸ್ಥೆ ಸರಿಯಿಲ್ಲ ಎಂದು ಅರ್ಥ. ಫಿಲ್ಟರ್ ಜತೆಗೆ ಎಸಿ ಗ್ಯಾಸ್​ ನ ಬಾಳಿಕೆಯೂ ಮುಗಿದಿದೆ ಎಂದರ್ಥ. ಹೀಗಾಗಿ ಅದನ್ನು ಅವಧಿ ಮುಗಿದಾಗ ಬದಲಾಯಿಸಬೇಕು.

ಟೈರ್ ಗಳು

ಕಾರನ್ನು ಓಡಿಸಿಲ್ಲ ಮತ್ತು ಸವೆದಿಲ್ಲ ಎಂದ ತಕ್ಷಣ ಕಾರಿನ ಟೈರಿನ ಬಾಳಿಕೆ ಮುಗಿದಿಲ್ಲ ಎಂದರ್ಥವಲ್ಲ. ಯಾಕೆಂದರೆ ಅದಕ್ಕೂ ಒಂದು ಎಕ್ಸ್​ಪಯರೀ ಡೇಟ್​ ಇದೆ. ಮೊದಲಾಗಿ 3 ಎಂಎಂಗಿಂತ ಕಡಿಮೆ ಥ್ರೆಡ್​ ಇದ್ದರೆ ಸವೆದಿದೆ ಎಂದರ್ಥ. ಆದರೆ, ಟೈರ್​ನ ಮೇಲೆ ಬರೆದಿರುವ ಎಕ್ಸ್​ಪಯರೀ ಡೇಟ್​ ಪರಿಶೀಲನೆ ಮಾಡಲೇಬೇಕು. ಹೊರ ಅಂಚಿ ಉತ್ಪಾದನಾ ವಾರ ಮತ್ತು ಉತ್ಪಾದನೆಯ ವರ್ಷವನ್ನು ಬರೆದಿರಲಾಗುತ್ತದೆ. ಉದಾಹರಣೆಗೆ ಡಾಟ್ ಸಂಖ್ಯೆ 5011 ಇದ್ದರೆ ಟೈರ್ ಅನ್ನು 2011 ರ 50 ನೇ ವಾರದಲ್ಲಿ ತಯಾರಿಸಲಾಗಿದೆ ಎಂದರ್ಥ.

ಕ್ಯಾಬಿನ್ ಏರ್ ಫಿಲ್ಟರ್

ಕ್ಯಾಬಿನ್ ಏರ್ ಫಿಲ್ಟರ್ ಕ್ಯಾಬಿನ್ ಏರ್ ಫಿಲ್ಟರ್ ಬಾಳಿಕೆ ಕಾರು ಚಾಲನೆ ಮಾಡುವ ಪ್ರದೇಶದ ಗಾಳಿಯ ಗುಣಮಟ್ಟ ಅವಲಂಬಿಸಿರುತ್ತದೆ. ಆದರೆ, ಕಾರನ್ನು 25,000 ಕಿ.ಮೀ ನಿಂದ 30,000 ಕಿ.ಮೀ ಓಡಿಸಿದ ನಂತರ ಅದನ್ನು ಬದಲಾಯಿಸಲೇಬೇಕು. ನೀವು ಡಿಫ್ರಾಸ್ಟ್ ಆನ್ ಮಾಡಿದಾಗ ಆದರೆ ಕ್ಯಾಬಿನ್ ನಲ್ಲಿ ಗಾಳಿಯ ಹರಿವು ತುಂಬಾ ದುರ್ಬಲವಾಗಿದ್ದರೆ ಬ್ಲೋವರ್ ಸ್ವಿಚ್ ಮೂಲಕ ಶಬ್ದ ಹೆಚ್ಚಾಗಿದ್ದರೆ ಫಿಲ್ಟರ್ ಬಾಳಿಕೆ ಮುಗಿದಿದೆ ಎಂದರ್ಥ.

ಏರ್ ಬ್ಯಾಗ್ ಗಳು

ಏರ್ ಬ್ಯಾಗ್ ಗಳು ಮತ್ತು ಸೀಟ್ ಟೈಟರ್ ಗಳ ಬಾಳಿಕ 10 ವರ್ಷಕ್ಕೆ ಮುಗಿಯುತ್ತದೆ. ಅದಕ್ಕಿಂತ ಹೆಚ್ಚಾಗಿ ಬೆಲ್ಟ್ ಹರಿದಿದ್ದರೆ ತಕ್ಷಣ ಬದಲಾಯಿಸಬೇಕಾಗುತ್ತದೆ.

ಪ್ರಥಮ ಚಿಕಿತ್ಸಾ ಕಿಟ್

ಪ್ರಥಮ ಚಿಕಿತ್ಸಾ ಕಿಟ್ ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಕಾರುಗಳಲ್ಲಿ ಇರುತ್ತವೆ. ಅದರು ಅಗತ್ಯ ಕೂಡ. ಆದರೆ, ಅದರಲ್ಲಿರುವ ಕೆಲವು ಮುಲಾಮುಗಳು ಮತ್ತು ಅನೇಕ ರೀತಿಯ ಡ್ರೆಸ್ಸಿಂಗ್ ವಸ್ತುಗಳು ಮುಕ್ತಾಯ ದಿನಾಂಕಗಳನ್ನು ಹೊಂದಿರುತ್ತವೆ. ಆದರೆ ಹೆಚ್ಚಿನ ಕಿಟ್​ಗಳು ಉತ್ಪಾದನೆಯ ದಿನಾಂಕದಿಂದ 3 ರಿಂದ 5 ವರ್ಷಗಳ ಜೀವಿತಾವಧಿ ಹೊಂದಿರುತ್ತವೆ.

ಇದನ್ನೂ ಓದಿ: Mahindra XUV 3XO : ಮಹೀಂದ್ರಾದ ವಿಶೇಷ ದಾಖಲೆ; 60 ನಿಮಿಷದಲ್ಲಿ 50 ಸಾವಿರ ಕಾರು ಬುಕಿಂಗ್​!

ಟೈಮಿಂಗ್ ಬೆಲ್ಟ್

ಇದು ಎಂಜಿನ್ ಒಳಗಿನ ಸಾಧನ. ಟೈಮಿಂಗ್ ಬೆಲ್ಟ್ ಬದಲಾಯಿಸುವ ಅವಧಿಯ ಅಂತರವು ಕಂಪನಿ ಮತ್ತು ಕಾರು ಮಾದರಿಯಿಂದ ಬದಲಾಗುತ್ತದೆ. ಸಾಮಾನ್ಯವಾಗಿ ಇದನ್ನು 60,000 ಮತ್ತು 80,000 ಕಿಲೋಮೀಟರ್ ನಡುವೆ ಬದಲಾಯಿಸಬೇಕು. ಕಂಪನಿ ಜತೆ ಈ ಬಗ್ಗೆ ಚರ್ಚೆ ನಡೆಸಬೇಕು. ದೋಷಯುಕ್ತ ಬೆಲ್ಟ್ ಅನ್ನು ಬಳಸಿದರೆ ಅದು ಕಾಲಾನಂತರದಲ್ಲಿ ಎಂಜಿನ್ ಹಾಳಾಗಲು ಕಾರಣವಾಗಬಹುದು.

Exit mobile version