ಸ್ಯಾನ್‌ಹೋಸೆ ನಗರ (ಅಮೆರಿಕ): ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಭಾವಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರು ಅಮೆರಿಕದ ಸ್ಯಾನ್ ಹೋಸೆ ನಗರದಲ್ಲಿ ಚಾತುರ್ಮಾಸ್ಯದ ವ್ರತ ಸಂಕಲ್ಪ (Chaturmasya Vrata) ಕೈಗೊಂಡಿದ್ದಾರೆ. ಜುಲೈ 29ಕ್ಕೆ ಈ ವಿಶೇಷ ಸಂಕಲ್ಪವು ಆರಂಭವಾಗಿದೆ. ಸಂಕಲ್ಪದ ಅಂಗವಾಗಿ ಭಕ್ತರೆಲ್ಲರೂ ತಾಳ ತಾಂಬೂರಿಯೊಡನೆ, ಅಲಮೇಡಾ ಮುಖ್ಯ ರಸ್ತೆಯಲ್ಲಿ ವಿಠಲನ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟುಕೊಂಡು ಕೃಷ್ಣ ಬೃಂದಾವನ ಕ್ಷೇತ್ರಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಶ್ರೀಗಳನ್ನು ಪೂರ್ಣ ಕುಂಭದಿಂದ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ಮೆರವಣಿಗೆಯಲ್ಲಿ ಹೆಣ್ಣು ಮಕ್ಕಳ ಕೋಲಾಟವಿತ್ತು, ದಾಸರ ಪೋಷಾಕು ಧರಿಸಿದ ಭಕ್ತಾದಿಗಳು ಗಮನ ಸೆಳೆದರು. ನಂತರ ಅನುಗ್ರಹ ಸಂದೇಶವನ್ನು ನೀಡಿದ ಸುಗುಣೇಂದ್ರ ತೀರ್ಥರು, ಚಾತುರ್ಮಾಸ್ಯದ ಮಹತ್ವವನ್ನು ಜನರಿಗೆ ತಿಳಿಹೇಳಿ, ತಾವು ಸ್ಯಾನ್ ಹೋಸೆ ನಗರಕ್ಕೆ ಬಂದಾಗೆಲ್ಲ ತವರು ಮನೆಗೆ ಬಂದಂತೆ ಆಗುತ್ತದೆ ಎಂಬ ಅನುಭವವನ್ನು ಹಂಚಿಕೊಂಡರು.
ಮುಂದಿನ 45 ದಿನಗಳ ಕಾಲ ಕಾರ್ಯಕ್ರಮದ ಯೋಜನೆಗಳ ರೂಪುರೇಷೆಗಳನ್ನು ತಿಳಿಸಿದ ಅವರು, ಪ್ರಪಂಚದಾದ್ಯಂತ 108 ಕೃಷ್ಣನ ದೇವಾಲಯಗಳನ್ನು ನಿರ್ಮಿಸಬೇಕೆಂಬ ಇಚ್ಛೆಯನ್ನು ಕೂಡ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸ್ಯಾನ್ ಹೋಸೆಯ ಸಾರ್ಜೆಂಟ್ ಆಂಥೋನಿ ಕಿಲ್ಮರ್, ಲೆಫ್ಟಿನೆಂಟ್ ಪೌಲ್ ಹಾಂಬ್ಲಿನ್ ಹಾಗೂ ಸಮುದಾಯದ ಸೇವಾ ಆಫೀಸರ್ ಆದ ಕನಕ ಗುರುಪ್ರಸಾದ್ ಅವರನ್ನು ಪುತ್ತಿಗೆ ಮಠಾಧೀಶರು ಸನ್ಮಾನಿಸಿದರು.
ಇದನ್ನೂ ಓದಿ | Food | ನಮ್ಮ ಖಾಲಿ ದೋಸೆ ಅಮೆರಿಕದ ರೆಸ್ಟೋರೆಂಟ್‌ನಲ್ಲಿ ಚಿತ್ರಾನ್ನ!