Site icon Vistara News

Child dead : ಝೀರೋ ಟ್ರಾಫಿಕ್‌ನಲ್ಲಿ ಬಂದ್ರೂ ಬೆಡ್‌ ಇಲ್ಲ ಎಂದ ನಿಮ್ಹಾನ್ಸ್‌; ಎಳೆ ಮಗು ಸಾವು

Child death in Nimhans

ಬೆಂಗಳೂರು: ಸಾವು ಬದುಕಿನ ಹೋರಾಟದಲ್ಲಿದ್ದ (Life and death) ಪುಟ್ಟ ಮಗುವಿನ ಬಗೆಗೂ ಕರುಣೆ ತೋರದೆ, ಬೆಡ್‌ ಇಲ್ಲ ಎಂದು ನಿರ್ಲಕ್ಷ್ಯ ತೋರಿದೆ ಬೆಂಗಳೂರಿನ ಪ್ರತಿಷ್ಠಿತ ನಿಮ್ಹಾನ್ಸ್‌ ಆಸ್ಪತ್ರೆ (Nimhans Hospital). ಹೀಗಾಗಿ ಒಂದುವರೆ ವರ್ಷದ ಪುಟ್ಟ ಮಗುವೊಂದು ಹೆತ್ತವರ ಆಕ್ರಂದನ ನಡುವೆ ಕಣ್ಮುಚ್ಚಿದೆ (Child death).

ಚಿಕ್ಕಮಗಳೂರಿನ ಬಸವನಗುಡಿ ನಿವಾಸಿ ವೆಂಕಟೇಶ್ ಹಾಗೂ ಜ್ಯೋತಿ ದಂಪತಿಯ ಒಂದುವರೆ ವರ್ಷದ ಮಗು ಮೇಲಿಂದ ಬಿದ್ದು ತಲೆಗೆ ಗಾಯವಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಈ ಮಗುವನ್ನು ನಿಮ್ಹಾನ್‌ ಆಸ್ಪತ್ರೆಗೆ ಸ್ಪಷ್ಟ ಮಾಹಿತಿ ನೀಡಿಯೇ ಹಾಸನದ ಆಸ್ಪತ್ರೆಯಿಂದ ಝೀರೋ ಟ್ರಾಫಿಕ್‌ನಲ್ಲಿ ತರಲಾಗಿತ್ತು. ಆದರೆ, ಮಗು ಆಸ್ಪತ್ರೆ ತಲುಪಿ ಗಂಟೆಗಳು ಕಳೆದರೂ ಬೆಡ್‌ ನೀಡದೆ, ಚಿಕಿತ್ಸೆ ನೀಡದೆ ಅಂತಿಮವಾಗಿ ಮಗು ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದು, ಇವರು ವೈದ್ಯರೋ, ರಕ್ಕಸರೋ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಚಿಕ್ಕಮಗಳೂರಿನ ಬಸವನಗುಡಿ ನಿವಾಸಿ ವೆಂಕಟೇಶ್ ಹಾಗೂ ಜ್ಯೋತಿ ಎಂಬವರು ಪುಟ್ಟ ಮಗು ಮಂಗಳವಾರ ಆಟವಾಡುವಾಗ ಹತ್ತು ಅಡಿ ಎತ್ತರದಿಂದ ಕೆಳಗೆ ಬಿದ್ದಿತ್ತು. ಆಟವಾಡುವಾಗ ಮೆಟ್ಟಿಲಿನಿಂದ ಬಿದ್ದಿದೆ ಎಂದು ಕೆಲವರು ಹೇಳಿದರೆ, ತಾಯಿಯ ಕೈಯಿಂದಲೇ ಬಿದ್ದಿದೆ ಎಂದು ಕೆಲವರು ಹೇಳುತ್ತಿದ್ದಾರೆ.

ಹಾಸನದಿಂದ ಹೊರಟ ಆಂಬ್ಯುಲೆನ್ಸ್

ಹೀಗೆ ಬಿದ್ದಾಗ ಮಗುವಿನ ತಲೆಗೆ ಗಂಭೀರವಾದ ಗಾಯಗಳಾಗಿವೆ. ತಕ್ಷಣವೇ ಮಗುವನ್ನು ಹಾಸನದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮಗುವಿನ ಪರಿಸ್ಥಿತಿ ಗಂಭೀರವಾಗಿದ್ದರಿಂದ, ಅದರಲ್ಲೂ ತಲೆಗೆ ಗಾಯವಾದ ಹಿನ್ನೆಲೆಯಲ್ಲಿ ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು.

ಹಾಸನ ಆಸ್ಪತ್ರೆಯ ವೈದ್ಯರು ನಿಮ್ಹಾನ್ಸ್‌ನ ವೈದ್ಯರು ಮತ್ತು ಆಡಳಿತ ವಿಭಾಗಕ್ಕೆ ಕರೆ ಮಾಡಿ ಮಗುವನ್ನು ಕರೆ ತರುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. ಈ ನಡುವೆ, ಹಾಸನ ಪೊಲೀಸರು ಮಗುವಿನ ರವಾನೆಗೆ ಝೀರೋ ಟ್ರಾಫಿಕ್‌ ವ್ಯವಸ್ಥೆ ಮಾಡಿ ಕಳುಹಿಸಿದರು. ಹಾಸನದಿಂದ ಬೆಂಗಳೂರಿಗೆ ಕೇವಲ ಒಂದು ಗಂಟೆ 40 ನಿಮಿಷದಲ್ಲಿ ತಲುಪಿತ್ತು.

Child death Hasan to Nimhans zero traffic

ಇಲ್ಲಿ ಬಂದು ನೋಡಿದರೆ ಬೆಡ್ಡೂ ಇಲ್ಲ, ಚಿಕಿತ್ಸೆಯೂ ಇಲ್ಲ!

ಆಂಬ್ಯುಲೆನ್ಸ್‌ ಏನೋ ಅತ್ಯಂತ ವೇಗವಾಗಿ ಮಗುವನ್ನು ನಿಮ್ಹಾನ್ಸ್‌ ಆಸ್ಪತ್ರೆಗೆ ತಲುಪಿಸಿತು. ಆದರೆ, ಇಲ್ಲಿ ಬಂದು ಕೇಳಿದರೆ ಬೆಡ್‌ ಇಲ್ಲ ಎಂದು ಸಬೂಬು ಹೇಳಲಾಯಿತು. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಪುಟ್ಟ ಕಂದಮ್ಮಗೆ ವೈದ್ಯರು ಚಿಕಿತ್ಸೆ ನೀಡಲೇ ಇಲ್ಲ.

ದಯವಿಟ್ಟು ಮಗುವಿಗೆ ಬೆಡ್‌ ಕೊಡಿ, ಚಿಕಿತ್ಸೆ ಶುರು ಮಾಡಿ ಎಂದು ಪೋಷಕರು ಎಷ್ಟೇ ಬೊಬ್ಬೆ ಹಾಕಿದರೂ, ಕಣ್ಣೀರು ಹಾಕಿದರೂ ಅವಕಾಶ ಸಿಗಲೇ ಇಲ್ಲ. ಬರುವ ಮೊದಲೇ ಮಾಹಿತಿ ನೀಡಿದ್ದರೂ ಬೆಡ್ ಖಾಲಿಯಿಲ್ಲ ಎಂದು ಆಸ್ಪತ್ರೆಯ ಆವರಣದಲ್ಲಿ ಆಂಬ್ಯುಲೆನ್ಸ್‌ನಲ್ಲೇ ಉಳಿಸಲಾಯಿತು. ಅಂತಿಮವಾಗಿ ಮಗು ಪ್ರಾಣವನ್ನೇ ಕಳೆದುಕೊಂಡಿದೆ.

ಆರೋಗ್ಯ ಸಚಿವರು ಹೇಳುವುದೇನು?

ಘಟನೆಯ ಬಗ್ಗೆ, ಸಾರ್ವಜನಿಕವಾಗಿ ಕೇಳಿಬರುತ್ತಿರುವ ಆಕ್ರೋಶದ ಬಗ್ಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು, ನಿಮ್ಹಾನ್ಸ್‌ನಲ್ಲಿ ವ್ಯವಸ್ಥೆಗಳು ಸರಿಯಾಗಿಲ್ಲ. ಅಲ್ಲಿ ಜನಜುಂಗಳಿ ಕೂಡ ಇದೆ. ಒತ್ತಡದ ನಡುವೆಯೂ ಗುಣಮಟ್ಟದ ಆರೋಗ್ಯ ಚಿಕಿತ್ಸೆ ಕೊಡುತ್ತಿದ್ದಾರೆ. ಅವರ ಮೇಲಿನ ಒತ್ತಡ ವನ್ನು ನಾವು ಕಡಿಮೆ ಮಾಡಬೇಕು ಎಂದು ಹೇಳಿದರು. ಮಗು ಮೃತಪಟ್ಟಿರುವ ಬಗ್ಗೆ ಮಾಹಿತಿ ತರಿಸಿಕೊಡುವುದಾಗಿ ತಿಳಿಸಿದರು.

Exit mobile version