ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಪ್ರತಿನಿಧಿಸುವ ವರುಣಾ (Varuna) ಕ್ಷೇತ್ರದ ತಗಡೂರು ಗ್ರಾಮದಲ್ಲಿ ಕಾಲರಾ (Cholera) ಪತ್ತೆಯಾದ ಪ್ರಕರಣದಲ್ಲಿ, ಪಿಡಿಒ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (engineer) ಅವರನ್ನು ಅಮಾನತು ಮಾಡಲಾಗಿದೆ.
ವರುಣಾ ವಿಧಾಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ತಗಡೂರು ಗ್ರಾಮದಲ್ಲಿ ಕಲುಷಿತ ನೀರಿನಿಂದ 114ಕ್ಕೂ ಹೆಚ್ಚು ಜನರಿಗೆ ವಾಂತಿಭೇದಿ ಕಾಣಿಸಿಕೊಂಡಿತ್ತು. ಅದರಲ್ಲಿ ಮೂವರಲ್ಲಿ ಕಾಲರಾ ಪತ್ತೆಯಾಗಿತ್ತು. ವಾಂತಿಭೇದಿ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ಗ್ರಾಮಸ್ಥರನ್ನು ಪರೀಕ್ಷೆಗೊಳಪಡಿಸಿದಾಗ ಮೂರಲ್ಲಿ ಕಾಲರಾ ಪತ್ತೆಯಾಗಿದೆ.
ಸಾಕಷ್ಟು ವರ್ಷಗಳಿಂದ ಇಲ್ಲಿ ಕೈ ಪಂಪುಗಳು ಕೆಟ್ಟು ನಿಂತಿದ್ದವಲ್ಲದೆ, ತುಕ್ಕು ಹಿಡಿದಿದ್ದವು. ಕೈಪಂಪುಗಳಿಂದ ಕಲುಷಿತಗೊಂಡ ನೀರು ಸೇವನೆಯಿಂದ ಗ್ರಾಮಸ್ಥರಿಗೆ ವಾಂತಿಭೇದಿ ಬಂದಿದೆ. ಕಲುಷಿತ ನೀರು ಸೇವನೆಯಿಂದ ಕಾಲರಾ ಪತ್ತೆಯಾಗಿದೆ ಎಂದು ಅರೋಗ್ಯ ಇಲಾಖೆ ಸ್ಪಷ್ಟ ಮಾಹಿತಿ ನೀಡಿದೆ.
ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವಲ್ಲಿ ಆಧಿಕಾರಿಗಳು ವಿಫಲಗೊಂಡ ಹಿನ್ನೆಲೆಯಲ್ಲಿ, ತಗಡೂರು ಗ್ರಾಮದ ಸಾರ್ವಜನಿಕ ಗ್ರಾಮಸ್ಥರ ಅನಾರೋಗ್ಯಕ್ಕೆ ಪ್ರಮುಖ ಕಾರಣಕರ್ತರಾದ ಪಿಡಿಒ ದಿವಾಕರ್ ಮತ್ತು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶಿವಕುಮಾರ್ ಅವರನ್ನು ಅಮಾನತು ಮಾಡಿ ಮೈಸೂರು ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಾಯತ್ರಿ ಆದೇಶ ಹೊರಡಿಸಿದ್ದಾರೆ.
ಇತ್ತೀಚೆಗೆ ಅಧಿಕಾರಿಗಳ ಸಭೆ ನಡೆಸಿದ್ದ ಸಿಎಂ ಸಿದ್ದರಾಮಯ್ಯ , ಕಲುಷಿತ ಕುಡಿಯುವ ನೀರಿನಿಂದ ಕಾಲರಾ ಪ್ರಕರಣಗಳು ಪತ್ತೆಯಾದಲ್ಲಿ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು.
ಅಧಿಕಾರಿಗಳೇ ಹುಷಾರ್! ನೀರಿನಿಂದ ಆರೋಗ್ಯ ಕೈಕೊಟ್ರೆ ಶಿಸ್ತು ಕ್ರಮ: ಡಿಕೆಶಿ ವಾರ್ನಿಂಗ್
ಬೆಂಗಳೂರು: ಬೆಂಗಳೂರಿನ ಜನರಿಗೆ ಉತ್ತಮ ಗುಣಮಟ್ಟದ ಕುಡಿಯುವ ನೀರನ್ನು (Drinking Water) ಸರಬರಾಜು ಮಾಡಬೇಕು. ಒಂದು ವೇಳೆ ಕುಡಿಯುವ ನೀರಿನಿಂದ ಯಾವುದೇ ಸಮಸ್ಯೆ ಉಂಟಾದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಎಚ್ಚರಿಕೆ ನೀಡಿದ್ದಾರೆ.
ಈ ವಿಚಾರವಾಗಿ ಬಿಬಿಎಂಪಿ ಆಯುಕ್ತರು, ಬೆಂಗಳೂರಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಬಿಡಬ್ಲ್ಯೂಎಸ್‌ಎಸ್‌ಬಿ ಮುಖ್ಯಸ್ಥರಿಗೆ ಪತ್ರ ಬರೆದಿರುವ ಶಿವಕುಮಾರ್, ಬೆಂಗಳೂರಿನ ನಾಗರಿಕರಿಗೆ ಕುಡಿಯುವ ನೀರಿನಿಂದ ಯಾವುದೇ ಸಮಸ್ಯೆ ಎದುರಾಗಬಾರದು ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ.
ರಾಜ್ಯದ ಕೆಲವು ಕಡೆ ಕಲುಷಿತ ನೀರು ಕುಡಿಯುವ ನೀರಿನ ಜತೆ ಮಿಶ್ರವಾಗಿ ಜನರು ಅಸ್ವಸ್ಥಗೊಂಡು ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂಬ ವರದಿಗಳು ಬರುತ್ತಿವೆ. ಈ ವಿಚಾರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಧಿಕಾರಿಗಳ ವಿಡಿಯೊ ಸಂವಾದ ಸಭೆಯಲ್ಲಿ ಚರ್ಚೆಯಾಗಿದೆ. ಹೀಗಾಗಿ, ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ನೀರಿನ ಘಟಕಗಳ ಸಮರ್ಪಕ ಕಾರ್ಯನಿರ್ವಹಣೆ, ಉತ್ತಮ ಗುಣಮಟ್ಟದ ನೀರಿನ ಬಗ್ಗೆ ಖಾತರಿ ಮಾಡಿಕೊಳ್ಳಬೇಕು. ಆ ಘಟಕಗಳಿಂದ ಸರಬರಾಜಾಗುವ ನೀರನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿ ಕುಡಿಯಲು ಯೋಗ್ಯವೇ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಡಿ.ಕೆ. ಶಿವಕುಮಾರ್ ಸೂಚಿಸಿದ್ದಾರೆ.
ಬೆಂಗಳೂರಿನ ಜನರಿಗೆ ಕುಡಿಯುವ ನೀರಿನಿಂದ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಜನರಿಗೆ ತೊಂದರೆಯಾದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಈ ಪತ್ರದಲ್ಲಿ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Excise revenue: ಇದು ಎಣ್ಣೆ ಮಹಿಮೆ! ಟಾರ್ಗೆಟ್ ಮೀರಿ ಹೋದ ಅಬಕಾರಿ ಇಲಾಖೆ; 15 ಪರ್ಸೆಂಟ್ ಹೆಚ್ಚು ವರಮಾನ
ಬೆಂಗಳೂರು ಸೇರಿದಂತೆ ಎಲ್ಲೆಡೆ ಕುಡಿಯುವ ನೀರಿನ ಪರೀಕ್ಷೆಗೆ ಸೂಚನೆ
ಕುಡಿಯುವ ನೀರಿಗೆ ಕಲುಷಿತ ನೀರು ಬೆರೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಎಲ್ಲೆಡೆ ಕುಡಿಯುವ ನೀರನ್ನು ಪರೀಕ್ಷೆ ಒಳಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಶುಕ್ರವಾರವಷ್ಟೇ ತಿಳಿಸಿದ್ದರು. ಮುಖ್ಯಮಂತ್ರಿಗಳು ನಿನ್ನೆ ನಗರ ಪ್ರದಕ್ಷಿಣೆ ಮಾಡಿ ವಿವಿಧ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದ್ದಾರೆ. ಶೀಘ್ರದಲ್ಲೇ ಕಾರ್ಯಪಡೆ ರಚನೆಗೆ ಸೂಚನೆ ನೀಡಿದ್ದು, ಎಲ್ಲೆಲ್ಲಿ ಯಾವ ಕಾರ್ಯಗಳು ಸಾಗಬೇಕು ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಕೆಲವು ಕಡೆ ಕುಡಿಯುವ ನೀರು ಕಲುಷಿತವಾಗಿ ಕಾಲರಾ ಸಂಭವಿಸಿರುವ ಪ್ರಕರಣಗಳು ಗಮನಕ್ಕೆ ಬಂದಿವೆ. ಹೀಗಾಗಿ ಬೆಂಗಳೂರಿನ ಎಲ್ಲೆಡೆ ಕುಡಿಯುವ ನೀರಿನ ಪರಿಶೀಲನೆ ನಡೆಸಲು ವ್ಯವಸ್ಥೆ ಮಾಡಬೇಕಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಲಾಗಿದೆ ಎಂದು ತಿಳಿಸಿದ್ದರು.
ಇದನ್ನೂ ಓದಿ: CM Siddaramaiah: ತಾಲೂಕು, ಜಿಲ್ಲಾ ಪಂಚಾಯಿತಿ, ಬಿಬಿಎಂಪಿ ಚುನಾವಣೆಗೆ ನಾವು ಸಿದ್ಧ: ಮುಖ್ಯಮಂತ್ರಿ ಸಿದ್ದರಾಮಯ್ಯ