Site icon Vistara News

CM Siddaramaiah: ಡಿಸಿಎಂ ವಿಚಾರದಲ್ಲಿ ಮತ್ತೆ ಒಡೆದುಹೋದ ಕಾಂಗ್ರೆಸ್‌; ಸಿದ್ದು- ಡಿಕೆಶಿ ಬಣದ ನಡುವೆ ಡಿಶುಂ ಡಿಶುಂ

cm siddaramaiah DK Shivakumar power fight

ಬೆಂಗಳೂರು: ಲೋಕಸಭೆ ಚುನಾವಣೆಯ (Lok Sabha Election 2024) ಸಂದರ್ಭದಲ್ಲಿ ಮೈತ್ರಿ ಪಕ್ಷಗಳನ್ನು ಎದುರಿಸಲು ತಾತ್ಕಾಲಿಕವಾಗಿ ಒಂದಾಗಿದ್ದ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ (DK Shivakumar) ಬಣ ಮತ್ತೆ ಎರಡಾಗಿ ಹೋಗಿದ್ದು, ಡಿಸಿಎಂ (DCM) ನೇಮಕಾತಿ ವಿಚಾರದಲ್ಲಿ ಗುದ್ದಾಡತೊಡಗಿವೆ.

ರಾಜ್ಯ ಕಾಂಗ್ರೆಸ್ ಸರ್ಕಾರದ ಡಿಸಿಎಂ ಹುದ್ದೆ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿ ಇದೀಗ ಬಣ ಪಾಲಿಟಿಕ್ಸ್ ರಂಗೇರಿದೆ. ಇನ್ನಷ್ಟು ಡಿಸಿಎಂ ಹುದ್ದೆ ಸೃಷ್ಟಿ ಆಗಬೇಕು ಅಂತ ಒಂದು ಬಣ ಪಟ್ಟು ಹಿಡಿದಿದ್ದರೆ, ಅದಕ್ಕೆ ತಡೆ ಹಾಕಲು ಮತ್ತೊಂದು ಬಣ ಬೇರೊಂದು ಪಟ್ಟು ಹಾಕುತ್ತಿದೆ.

ಸಿಎಂ ಸಿದ್ದರಾಮಯ್ಯ ಬಣದಿಂದ ಸಮುದಾಯಕ್ಕೊಂದು ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಕೆ.ಎನ್ ರಾಜಣ್ಣ, ತಿಮ್ಮಾಪುರ್, ಜಮೀರ್ ಅಹಮದ್ ಖಾನ್ ಅವರಿಂದ ಡಿಸಿಎಂ ಹುದ್ದೆ ಜಪ ಮುಂದುವರಿದಿದೆ. ಸಮುದಾಯಕ್ಕೊಂದು ಡಿಸಿಎಂ ಹುದ್ದೆ ಕೊಟ್ಟರೆ ಚುನಾವಣೆ ಸಂದರ್ಭದಲ್ಲಿ ಅನುಕೂಲ. ಅಧಿಕಾರ ಕೆಲ ಸಮುದಾಯಗಳಿಗೆ ಮಾತ್ರ ಸೀಮಿತವಾಗಬಾರದು. ದಲಿತ, ಮುಸ್ಲಿಂ, ಲಿಂಗಾಯತ ಸಮುದಾಯಗಳನ್ನು ಸೆಳೆಯಲು ಡಿಸಿಎಂ ಹುದ್ದೆ ಅನಿವಾರ್ಯ ಎಂದು ಪಟ್ಟು ಹಿಡಿದಿದ್ದಾರೆ.

ದಿನಕ್ಕೊಬ್ಬ ಸಚಿವರು ಈ ಬಗ್ಗೆ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಈ ಮೂವರು ಸಚಿವರು ಸಹ ಸಿದ್ದರಾಮಯ್ಯ ಬಣಕ್ಕೆ ಸೇರಿದವರು. ಇದರ ಹಿಂದೆ, ಡಿಕೆಶಿ ಪ್ರಭಾವವನ್ನು ಕಡಿಮೆ ಮಾಡುವ ಚಿಂತನೆಯೂ ಇದೆ ಎನ್ನಲಾಗಿದೆ.

ಇತ್ತ ಸಿದ್ದರಾಮಯ್ಯ ಬಣದಿಂದ ಹೇಳಿಕೆ ಬಂದ ತಕ್ಷಣ ಡಿಕೆಶಿ ಬಣದಿಂದಲೂ ತಿರುಗೇಟು ಬರಲಾರಂಭಿಸಿದೆ. ಡಿಕೆ ಸುರೇಶ್ ಕೂಡಲೇ ಕೌಂಟರ್ ನೀಡಿದ್ದಾರೆ. ಮೂರಲ್ಲ ಐದಕ್ಕೂ ಹೆಚ್ಚು ಡಿಸಿಎಂ ಹುದ್ದೆ ಸೃಷ್ಟಿ ಆಗಬೇಕು ಎಂದಿದ್ದಾರೆ. ಜಮೀರ್ ಅಹಮದ್ ಖಾನ್, ರಾಜಣ್ಣ, ತಿಮ್ಮಾಪುರ, ಕೃಷ್ಣ ಬೈರೇಗೌಡ, ಚಲುವರಾಯಸ್ವಾಮಿಗೂ ಡಿಸಿಎಂ ಹುದ್ದೆ ಕೊಡಬೇಕು ಎಂದು ವ್ಯಂಗ್ಯವಾಡಿದ್ದಾರೆ.

ಅತ್ತ ಪ್ರಿಯಾಂಕ್ ಖರ್ಗೆ ಅವರಿಂದಲೂ ತಿರುಗೇಟು ಬಂದಿದೆ. ಸಚಿವರಲ್ಲದವರನ್ನೆಲ್ಲ ಡಿಸಿಎಂ ಮಾಡೋಣ, ಕೆಲಸ ಮಾಡೋದು ಬೇಡ- ಡಿಸಿಎಂ ಹುದ್ದೆ ಕೋಡೋಣ ಎಂದು ಪ್ರಿಯಾಂಕ್ ಖರ್ಗೆ ಟಾಂಗ್‌ ಕೊಟ್ಟಿದ್ದಾರೆ.

ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಹೆಚ್ಚಿನ ಡಿಸಿಎಂ ಹುದ್ದೆ ಸೃಷ್ಟಿ ವಿಚಾರ ಗೊಂದಲವೆಬ್ಬಿಸಿದೆ. ಅತ್ತ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ ಆದ ತಕ್ಷಣ ಕಾಂಗ್ರೆಸ್‌ನಲ್ಲಿ ಬಣ ಬಡಿದಾಟ ಭುಗಿಲೆದ್ದಿದೆ. ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಮಾಡಿ ಸಮುದಾಯಗಳಿಗೆ ಮಣೆ ಹಾಕಿ ಅಂತ ಪಟ್ಟು ಹಿಡಿಯಲಾಗಿದೆ. ಪಕ್ಷದ ಪರವಾಗಿ ನಿಲ್ಲದ ಸಮುದಾಯಕ್ಕೆ ಮಣೆ ಹಾಕುವುದಕ್ಕಿಂತಲೂ, ಪಕ್ಷದ ಪರವಾಗಿ ನಿಂತ ಸಮುದಾಯಗಳಿಗೆ ಮಣೆ ಹಾಕುವಂತೆ ಒತ್ತಾಯ

ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಆದರೆ ಡಿಕೆಶಿ ಅವರ ಪ್ರಭಾವವನ್ನು ಕಡಿಮೆ ಮಾಡಬಹುದು ಎನ್ನುವ ಚಿಂತನೆ ಸಿದ್ದರಾಮಯ್ಯ ಬಳಗದಲ್ಲಿದೆ. ಇತ್ತ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಮಾಡದಂತೆ ಡಿಕೆಶಿ ಬಣದಿಂದ ತಿರುಗೇಟು ನೀಡಲಾಗುತ್ತಿದೆ. ಅತ್ತ ಬಿಜೆಪಿ ಕೂಡ ಕಾಂಗ್ರೆಸ್‌ನೊಳಗಿನ ಡಿಸಿಎಂ ವಿವಾದವನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ಮುಂದಾಗಿದ್ದು, ಈ ವಿವಾದವನ್ನು ಜೀವಂತವಾಗಿಡಲು ಶ್ರಮಿಸುತ್ತಿದೆ.

ʼಈ ಸಂಘರ್ಷ ಕೆಲವೇ ತಿಂಗಳಲ್ಲಿ ತಾರ್ಕಿಕ ಅಂತ್ಯ ತಲಪಲಿದೆʼ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. “ಡಿಸಿಎಂ ವಿಚಾರ ಇದೇ ಮೊದಲ ಬಾರಿ ಅಲ್ಲ, ಹಲವು ಬಾರಿ ಚರ್ಚೆ ಆಗಿದೆ. ಆದರೆ ಇವತ್ತು ನಡೆಯುತ್ತಿರುವ ಡಿಸಿಎಂ ಗುದ್ದಾಟ ಆಂತರಿಕ ಗುಂಪಿನದ್ದು. ಕಾಂಗ್ರೆಸ್‌ನಲ್ಲಿ ಎರಡು ಆಂತರಿಕ ಗುಂಪು ಇದೆ. ಒಂದು ಗುಂಪು ಮುಖ್ಯಮಂತ್ರಿಗಳದ್ದು, ಮತ್ತೊಂದು ಗುಂಪು ಉಪಮುಖ್ಯಮಂತ್ರಿಗಳದ್ದು. ಒಂದು ಗುಂಪು ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನ ಮಾಡ್ತಿದೆ. ಮತ್ತೊಂದು ಗುಂಪು ಹೆಚ್ಚಿನ ಅಧಿಕಾರ ಪಡೆದುಕೊಳ್ಳಲು ಪ್ರಯತ್ನ ಮಾಡ್ತಿದೆ. ಈ ಸಂಘರ್ಷ ಕೆಲವೇ ತಿಂಗಳಲ್ಲಿ ತಾರ್ಕಿಕ ಅಂತ್ಯ ತಲಪಲಿದೆ” ಎಂದಿದ್ದಾರೆ.

ಇದನ್ನೂ ಓದಿ: DK Shivakumar: ವಿವಿಧ ಸಮಸ್ಯೆ ಹೊತ್ತು ಬಂದವರಿಗೆ ಸ್ಥಳದಲ್ಲೇ ಪರಿಹಾರ ಒದಗಿಸಿದ ಡಿ.ಕೆ. ಶಿವಕುಮಾರ್

Exit mobile version