ಬೆಂಗಳೂರು: ಡಿಕೆ ಶಿವಕುಮಾರ್ (DK Shivakumar) ಅವರನ್ನು ಸಿಎಂ ಮಾಡಿ ಎಂದು ಸ್ವಾಮೀಜಿಯೊಬ್ಬರು ಸಿಎಂ ಸಿದ್ದರಾಮಯ್ಯ (CM Siddaramaiah) ಮುಂದೆ ವೇದಿಕೆಯ ಮೇಲೆಯೇ ಬೇಡಿಕೆ ಇಟ್ಟ ಪ್ರಸಂಗ ಕೆಂಪೇಗೌಡ ಜಯಂತಿ (Kempegowda Jayanthi) ಕಾರ್ಯಕ್ರಮದಲ್ಲಿ ನಡೆಯಿತು. ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ (Chandrashekhara swamiji) ಅವರು ಸಿದ್ದರಾಮಯ್ಯ ಅವರಿಗೆ ವೇದಿಕೆಯಲ್ಲೇ ಬಹಿರಂಗವಾಗಿ ಈ ಬೇಡಿಕೆಯನ್ನು ಇಟ್ಟಿದ್ದಾರೆ.
ಎಲ್ಲರೂ ಮುಖ್ಯಮಂತ್ರಿಗಳಾಗಿ ತಮ್ಮ ತಮ್ಮ ಅಧಿಕಾರ ಅನುಭವಿಸಿದ್ದಾರೆ. ಆದರೆ ಡಿಕೆ ಶಿವಕುಮಾರ್ ಒಬ್ಬರು ಮುಖ್ಯಮಂತ್ರಿ ಆಗಿಲ್ಲ. ಸಿದ್ದರಾಮಯ್ಯ ಅವರು ಈಗಾಗಲೇ ಸಿಎಂ ಸ್ಥಾನ ಅನುಭವಿಸಿದ್ದಾರೆ. ಆ ಕಾರಣಕ್ಕಾಗಿ ಇನ್ನು ಮುಂದೆ ಡಿಕೆ ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಬೇಕು ಎಂದು ಆಗ್ರಹಿಸಿದರು.
ಇದು ಸಿಎಂ ಸಿದ್ದರಾಮಯ್ಯ ಮನಸ್ಸು ಮಾಡಿದರೆ ಇದು ಆಗಲಿದೆ, ಇಲ್ಲಾಂದ್ರೆ ಆಗಲ್ಲ. ಹಾಗಾಗಿ ದಯವಿಟ್ಟು ಡಿಕೆಶಿಯನ್ನು ಸಿಎಂ ಆಗಿ ಮಾಡಿ ಎಂದು ಮನವಿ ಮಾಡುತ್ತೇನೆ ಎಂದು ವೇದಿಕೆಯಲ್ಲಿ ಕೇಳಿಕೊಂಡರು. ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ಸಚಿವರು ಕೂಡಾ ಉಪಸ್ಥಿತರಿದ್ದರು. ಸ್ವಾಮೀಜಿ ನೀಡಿದ ಈ ಹೇಳಿಕೆಯನ್ನು ಸಭಿಕರಲ್ಲಿದ್ದ ಡಿಕೆ ಶಿವಕುಮಾರ್ ಬೆಂಬಲಿಗರು ಚಪ್ಪಾಳೆ ಶಿಳ್ಳೆಗಳ ಮೂಲಕ ಸ್ವಾಗತಿಸಿದರು.
ಸ್ವಾಮೀಜಿ ಹೇಳಿಕೆ ಕುರಿತು ಸಿಎಂ ಆಗಲೀ, ಡಿಕೆಶಿ ಆಗಲೀ ವೇದಿಕೆ ಮೇಲೆ ಯಾವುದೇ ಉತ್ತರ ನೀಡಲಿಲ್ಲ. ಆದರೆ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಿಂದ ಹೊರಬಂದ ಬಳಿಕ ಈ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದರು. “ನಮ್ಮದು ಹೈಕಮಾಂಡ್ ಸಂಸ್ಕೃತಿಯ ಪಕ್ಷ. ಹೈಕಮಾಂಡ್ ನಿರ್ಧಾರವೇ ಅಂತಿಮ” ಎಂದು ಹೇಳಿದರು. ಈ ಮೂಲಕ, ಸಿಎಂ ಸ್ಥಾನ ಅಷ್ಟು ಸುಲಭವಿಲ್ಲ ಎಂಬ ಸಂದೇಶ ರವಾನೆ ಮಾಡಿದರು. ಡಿಕೆಶಿ ಸಿಎಂ ಆಗೋದು ಹೈಕಮಾಂಡ್ ಕೈಯಲ್ಲಿ ಇದೆ ಅನ್ನುವುದನ್ನು ಸ್ಪಷ್ಟಪಡಿಸಿದರು.
ಕಳೆದ ಒಂದು ತಿಂಗಳಿನಿಂದ ಡಿಕೆಶಿ ಸಿಎಂ ಆಗುವ ಕುರಿತು ಮತ್ತು ಹೊಸ ಡಿಸಿಎಂ ಹುದ್ದೆಗಳನ್ನು ಸೃಷ್ಟಿಸುವ ಕುರಿತು ಕಾಂಗ್ರೆಸ್ ನಾಯಕರೊಳಗೇ ಬಣ ರಾಜಕೀಯ ನಡೆಯುತ್ತಿದೆ. ಹಲವಾರು ಕಾಂಗ್ರೆಸ್ ನಾಯಕರು, ಇನ್ನಷ್ಟು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಬೇಕು ಎಂಬ ವಾದ ಮುಂದಿಟ್ಟಿದ್ದಾರೆ. ಇದೀಗ, ಒಕ್ಕಲಿಗರೊಬ್ಬರು ಸಿಎಂ ಆಗಬೇಕು ಎಂದು ಒಕ್ಕಲಿಗ ಸ್ವಾಮೀಜಿಗಳೇ ಹೇಳುವ ಮೂಲಕ ಈ ಬಣ ರಾಜಕೀಯಕ್ಕೆ ಇನ್ನಷ್ಟು ತುಪ್ಪ ಸುರಿದಂತಾಗಿದೆ.
ಡಿಸಿಎಂ ಕೂಗು ಎಬ್ಬಿಸಿದ್ದ ಸಿದ್ದರಾಮಯ್ಯ ಬಣಕ್ಕೆ ಮಾಸ್ಟರ್ ಸ್ಟ್ರೋಕ್ ಕೊಡಲು ಡಿಕೆ ಶಿವಕುಮಾರ್ ಈ ಮೂಲಕ ಮುಂದಾದರೇ ಎಂಬ ಅನುಮಾನವೂ ಮೂಡಿದೆ. ಸಮುದಾಯಕ್ಕೊಂದು ಡಿಸಿಎಂ ಹುದ್ದೆ ಸೃಷ್ಟಿ ಆಗಬೇಕು ಎಂದು ಸಿಎಂ ಆಪ್ತ ಸಚಿವರು ಹೇಳಿದ್ದರು. ನಿನ್ನೆ ಡಿಕೆಶಿ ಬಣದ ಶಾಸಕರಿಂದ, ಡಿಕೆ ಶಿವಕುಮಾರ್ ಸಿಎಂ ಮಾಡಿ ಎಂಬ ಹಕ್ಕೊತ್ತಾಯ ಬಂದಿತ್ತು. ಹತ್ತು ಜನರನ್ನು ಡಿಸಿಎಂ ಮಾಡಿ ಅಂತ ಹೇಳಿಕೆಯೂ ಬಂದಿತ್ತು. ಅದರ ಬೆನ್ನಲ್ಲೇ ಸ್ವಾಮೀಜಿಯಿಂದಲೇ ಡಿಕೆಶಿಗೆ ಸಿಎಂ ಸ್ಥಾನ ಬಿಟ್ಟು ಕೊಡಿ ಅಂತ ಸಲಹೆ ಬಂದಿದೆ. ಆ ಮೂಲಕ ಸಿಎಂ ಬಣದ ಏಟಿಗೆ ಡಿಕೆಶಿ ಬಣ ಎದಿರೇಟು ನೀಡಲಾಗಿದೆ ಎಂದು ತರ್ಕಿಸಲಾಗಿದೆ.
ಇದನ್ನೂ ಓದಿ: HD Kumaraswamy: ನನ್ನ ಹೃದಯದಲ್ಲಿ ಕೆಂಪೇಗೌಡರಿದ್ದಾರೆ, ಆಹ್ವಾನ ಬೇಕಿಲ್ಲ; ಕುಮಾರಸ್ವಾಮಿ