ಬೆಂಗಳೂರು: ಒಂದೆಡೆ ಮುಡಾ ಹಗರಣಕ್ಕೆ (MUDA Scam) ಸಂಬಂಧಿಸಿ ಹೈಕೋರ್ಟ್ (High Court) ಆದೇಶ ಇಂದು ಹೊರಬೀಳಲಿದ್ದು, ಸಿಎಂ ಸಿದ್ದರಾಮಯ್ಯ (CM Siddaramaiah) ಅದಕ್ಕಾಗಿ ಕಾಯುತ್ತಿದ್ದಾರೆ. ಇನ್ನೊಂದೆಡೆ ಡಿಸಿಎಂ ಡಿಕೆ ಶಿವಕುಮಾರ್‌ಗೆ (DCM DK Shivakumar) ಅವರಿಗೆ ಹೈಕಮಾಂಡ್ ಬುಲಾವ್ ಬಂದ ಹಿನ್ನೆಲೆಯಲ್ಲಿ ದೆಹಲಿ ಪ್ರವಾಸ ಕೈಗೊಂಡಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಬುಲಾವ್ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಇಂದು ಎಲ್ಲಾ ರಾಜ್ಯಗಳ ಪಿಸಿಸಿ ಅಧ್ಯಕ್ಷರಗಳು ಹಾಗೂ ಎಐಸಿಸಿ ಉಸ್ತುವಾರಿ ಕಾರ್ಯದರ್ಶಿಗಳ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇಂದು ಬೆಳಿಗ್ಗೆ 10:30ಕ್ಕೆ ಎಐಸಿಸಿ ಕಚೇರಿಯಲ್ಲಿ ಸಭೆ ಆಯೋಜನೆಗೊಂಡಿದ್ದು, ಕೆಲ ಪ್ರಮುಖ ವಿಚಾರಗಳ ಕುರಿತು ಚರ್ಚೆಯಾಗಲಿದೆ.
ದೇಶಾದ್ಯಂತ ಪಕ್ಷ ಸಂಘಟನೆ ಕುರಿತು, ಎಐಸಿಸಿ ಪುನರ್ ರಚನೆ ಕುರಿತು ಕೂಲಂಕಷ ಚರ್ಚೆ ನಡೆಸುವ ಸಾಧ್ಯತೆಯಿದೆ. ರಾಜ್ಯದ ಯಾವ ನಾಯಕರನ್ನು ಎಐಸಿಸಿ ಪರಿಗಣಿಸಬೇಕು ಎಂಬ ಅಭಿಪ್ರಾಯ ಸಂಗ್ರಹ, ಕೇಂದ್ರ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ರೂಪಿಸುವ ಬಗ್ಗೆ ಮಾತುಕತೆ, ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಿದರೆ ಹೇಗೆ ಎದುರಿಸಬೇಕು, ಜಾತಿ ಜನಗಣತಿ, ಒಳಮೀಸಲಾತಿ ವಿಚಾರದ ಒಂದಷ್ಟು ಮಾತುಕತೆ ನಡೆಯಲಿದೆ. ಕೆಲ ರಾಜ್ಯಗಳ ಪಿಸಿಸಿ ಪ್ರೆಸಿಡೆಂಟ್ ಹಾಗೂ ರಾಜ್ಯ ಉಸ್ತುವಾರಿಗಳ ಬದಲಾವಣೆ ಕುರಿತು ಚರ್ಚೆ ನಡೆಯಲಿದೆ.
ಕೆಪಿಸಿಸಿ ಸಾರಥ್ಯಕ್ಕೆ ಟವೆಲ್
ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ತೀವ್ರಗೊಂಡಿದೆ. ಸಚಿವ ಈಶ್ವರ್ ಖಂಡ್ರೆ, ಶರಣುಪ್ರಕಾಶ್ ಪಾಟೀಲ್, ಬಿಕೆ ಹರಿಪ್ರಸಾದ್, ಸತೀಶ್ ಜಾರಕಿಹೊಳಿ ಹೆಸರು ಮುನ್ನೆಲೆಗೆ ಬಂದಿದೆ. ಲಿಂಗಾಯತ ಸಮುದಾಯಕ್ಕೆ ಪಟ್ಟ ಕಟ್ಟುವ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ಕೆಪಿಸಿಸಿ ಸ್ಥಾನಕ್ಕಾಗಿ ಸತೀಶ್ ಜಾರಕಿಹೊಳಿ ತೀವ್ರ ಲಾಬಿ ನಡೆಸುತ್ತಿದ್ದಾರೆ. ಹೈಕಮಾಂಡ್ ಸೂಚನೆಗೆ ನಾನು ಬದ್ಧ ಎಂಬ ಅಭಿಪ್ರಾಯವನ್ನು ಬಿಕೆ ಹರಿಪ್ರಸಾದ್ ಹೊಂದಿದ್ದಾರೆ. ಹೀಗಾಗಿ, ಕೆಪಿಸಿಸಿ ನೂತನ ಸಾರಥಿ ಯಾರು ಎಂಬುದು ಕುತೂಹಲ ಮೂಡಿಸಿದೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ
ರಾಜ್ಯದಲ್ಲಿ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲರನ್ನು ಬದಲಾಯಿಸಬೇಕು ಎಂಬ ಕೂಗು ಇದೆ. ಪಕ್ಷದ ಆಂತರಿಕ ವಲಯದಲ್ಲಿ ಬದಲಾವಣೆ ಕುರಿತು ಪರ- ವಿರೋಧದ ಚರ್ಚೆಯಿದೆ. ಹೀಗಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿ ಸುರ್ಜೇವಾಲ ಮುಂದುವರೆಯುತ್ತಾರಾ ಅಥವಾ ಬದಲಾಗುತ್ತಾರಾ ಎಂಬ ಕುತೂಹಲವನ್ನು ಎಐಸಿಸಿ ನಡೆ ಮೂಡಿಸಿದೆ.
ಸಿಎಂಗೆ ಮುಡಾ ತೀರ್ಪಿನ ಆತಂಕ
ಇನ್ನೊಂದೆಡೆ ಸಿಎಂ ಸಿದ್ದರಾಮಯ್ಯ ಅವರಿಗೆ ಮುಡಾ ಹಗರಣದ ಟೆನ್ಷನ್ ಮತ್ತೆ ಎದುರಾಗಿದೆ. ಮುಡಾ ಪ್ರಕರಣವನ್ನು ತನಿಖೆಗೆ ಎತ್ತಿಕೊಲ್ಳಬಹುದೇ ಬೇಡವೇ ಎಂಬ ಪ್ರಶ್ನೆಯ ಬಗ್ಗೆ ಇಂದು ಹೈಕೋರ್ಟ್ ಆದೇಶ ನೀಡಲಿದೆ. ಕೋರ್ಟ್ ತೀರ್ಪಿನತ್ತ ರಾಜ್ಯಪಾಲರ ಗಮನ ನೆಟ್ಟಿದ್ದು, ತೀರ್ಪು ನೋಡಿಕೊಂಡು ರಾಜ್ಯಪಾಲರು ಮುಂದುವರಿಯಲಿದ್ದಾರೆ.
ಇದೇ ಸಮಯದಲ್ಲಿ ದೆಹಲಿಗೆ ತೆರಳಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ಚರ್ಚೆ ನಡೆಸಬಹುದು. ಸರ್ಕಾರ ವರ್ಸಸ್ ಗವರ್ನರ್ ಕಚೇರಿ ನಡುವೆ ನಡೆಯುತ್ತಿರುವ ಫೈಟ್ ಬಗ್ಗೆ ಚರ್ಚೆ ನಡೆಸಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಹೈಕಮಾಂಡ್ ನಾಯಕರನ್ನು ಪ್ರತ್ಯೇಕವಾಗಿ ಭೇಟಿಯಾಗಲಿದ್ದಾರೆ. ಕೋರ್ಟ್ ಹಾಗೂ ರಾಜ್ಯಪಾಲರಿಂದ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ಸಮಸ್ಯೆ ಆದರೆ ತಮ್ಮನ್ನ ಪರಿಗಣಿಸುವಂತೆ ಮನವಿ ಮಾಡಬಹುದು ಎಂದು ತರ್ಕಿಸಲಾಗಿದೆ.
ಇದನ್ನೂ ಓದಿ: CM Siddaramaiah: ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಮೇಲೆ ಪ್ರಕರಣ, ಇಂದು ಕೋರ್ಟ್ ತೀರ್ಮಾನ