Site icon Vistara News

CM Siddaramaiah: ರೈತರ ಬರ ಪರಿಹಾರ ಸಮಸ್ಯೆಯಾದರೆ ಸಹಿಸುವುದಿಲ್ಲ- ಅಧಿಕಾರಿಗಳಿಗೆ ಸಿಎಂ ಎಚ್ಚರಿಕೆ

cm siddaramaiah meet 2

ಬೆಂಗಳೂರು: ಬರ ಪರಿಹಾರ (drought relief) ಕೆಲವು ಕಡೆ ಸಮಸ್ಯೆ ಆಗಿದೆ. ಅದನ್ನ ಸರಿಪಡಿಸುವ ಜವಾಬ್ದಾರಿ ನಿಮ್ಮದೇ ಆಗಿದೆ. ರೈತರಿಗೆ (farmers) ಯಾವುದೇ ಸಮಸ್ಯೆ ಆದರೂ ಸಹಿಸುವುದಿಲ್ಲ. ಸಂಬಂಧ ಪಟ್ಟ ಅಧಿಕಾರಿಗಳ ಮೇಲೆ ಕ್ರಮ ಜರಗಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಬರ ಹಾಗೂ ಮುಂಗಾರು (monsoon) ಕೃಷಿ ಚಟುವಟಿಕೆ ಕುರಿತು ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ವಿಡಿಯೋ ಸಂವಾದ ನಡೆಸಿದರು. ಮಳೆಗಾಲ ಆರಂಭ ಆಗುತ್ತಿದೆ. ರೈತರಿಗೆ ಗೊಬ್ಬರ (fertilizer) ಮತ್ತು ಬಿತ್ತನೆ ಬೀಜ‌ (seed) ಸಮಸ್ಯೆ ಆಗಬಾರದು. ಸಾಲದ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಿ ಎಂದು ಸೂಚನೆ ನೀಡಿದರು.

ಪೂರ್ವ ಮುಂಗಾರು ಮಳೆ ಪ್ರಾರಂಭವಾಗಿದೆ. ವಾಡಿಕೆಗಿಂತ ಹೆಚ್ಚು ಮಳೆ ಮೇ ತಿಂಗಳಲ್ಲಿ ಆಗಿದೆ. ಬಿತ್ತನೆ ಕೆಲಸವೂ ಪ್ರಾರಂಭವಾಗಿದೆ. ಮೇ ತಿಂಗಳಲ್ಲಿ ಗುರಿ 2.95 ಲಕ್ಷ ಹೆಕ್ಟೇರ್‌ ಪ್ರದೇಶ. ಸಾಧನೆಯಾಗಿರುವುದು 68,000 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಇನ್ನೂ 13 ದಿನ ಬಾಕಿದೆ. ಪೂರ್ವ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚಾಗಿದೆ. ಸಕಾಲದಲ್ಲಿ ರೈತರಿಗೆ ಸಾಲ ಸಿಗುವುದನ್ನು ಖಾತರಿಪಡಿಸಬೇಕು. ಈ ವರ್ಷದ ಸಾಲ ಯೋಜನೆ ಕಳುಹಿಸಲಾಗಿದೆ. ಜಿಲ್ಲಾ ಬ್ಯಾಂಕರುಗಳೊಂದಿಗೆ ಸಮನ್ವಯ ವಹಿಸಿ, ಕ್ರಮ ಕೈಗೊಳ್ಳಿ ಎಂದು ಸಿಎಂ ನಿರ್ದೇಶಿಸಿದರು.

ಬರ ಪರಿಹಾರ ಮೊತ್ತವನ್ನು ರೈತರ ಸಾಲಕ್ಕೆ ವಜಾ ಮಾಡಿಕೊಳ್ಳದಂತೆ ಬ್ಯಾಂಕರುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಬೆಳೆ ವಿಮೆ ಕ್ಲೇಮ್‌ ಮಾಡುವ ಸಂದರ್ಭದಲ್ಲಿ ಕಂಪೆನಿಗಳ ಸ್ಯಾಂಪಲ್‌ ಪರಿಶೀಲನೆಯ ಕುರಿತು ರೈತರು ಹಲವು ಸಂದೇಹಗಳನ್ನು ಹೊಂದಿದ್ದಾರೆ. ಕಂಪನಿಗಳು ಆಡುವ ಆಟದಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುವ ಅಪಾಯವಿದೆ ಎನ್ನುವ ಸಲಹೆ ಸಚಿವ ಲಾಡ್ ಅವರಿಂದ ಬಂತು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಈ ಕುರಿತು ಮುಂಚಿತವಾಗಿಯೇ ವಿಮಾ ಕಂಪೆನಿಗಳೊಂದಿಗೆ ಚರ್ಚಿಸಿ, ರೈತರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.

ಕಾಲರಾ ಕಂಡುಬಂದರೆ ಅಧಿಕಾರಿ ಸಸ್ಪೆಂಡ್‌

ಕುಡಿಯುವ ನೀರಿನಿಂದಾಗಿ ಕಾಲರಾ (cholera) ಉಂಟಾದರೆ ಅದಕ್ಕೆ ಕಾರಣರಾದ ಎಂಜಿನಿಯರ್‌ಗಳನ್ನು ಹಾಗೂ ಅಧಿಕಾರಿಗಳನ್ನು ಸಸ್ಪೆಂಡ್‌ ಮಾಡಲಾಗುತ್ತದೆ ಎಂದು ಕೂಡ ಅವರು ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಮೈಸೂರಿನ ಎರಡು ಗ್ರಾಮಗಳಲ್ಲಿ ಕಾಲರಾ ಕಂಡು ಬಂದಿದೆ. ಇದಕ್ಕೆ ಕಾರಣ ಕಲುಷಿತ ನೀರು. ನೀರು ಕಲುಷಿತಗೊಳ್ಳಲು ಇಂಜಿನಿಯರುಗಳು ಕಾರಣ. ಕುಡಿಯಲು ನೀರು ಯೋಗ್ಯವೇ ಅಲ್ಲವೇ ಎಂಬುದನ್ನು ಪತ್ತೆ ಮಾಡದಿರುವುದು ದೊಡ್ಡ ಅಪರಾಧ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ರೀತಿಯ ಘಟನೆ ಸಂಭವಿಸಿದೆ. ಇದಕ್ಕೆ ಯಾರು ಜವಾಬ್ದಾರಿ. ಕುಡಿಯುವ ನೀರಿನ ಪರೀಕ್ಷೆ ನಿತ್ಯವೂ ಆಗಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳೇ ಇದಕ್ಕೆ ಹೊಣೆ. ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಲಾಗುವುದು. ಇನ್ನು ಮುಂದೆ ಕಲುಷಿತ ನೀರಿನಿಂದ ತೊಂದರೆಯಾದರೆ, ಡಿಸಿಗಳೇ ನೇರ ಹೊಣೆ. ಕಾಲರಾ ಕಂಡು ಬಂದರೆ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಕ್ರಮ ಜರುಗಿಸಲಾಗುವುದು ಎಂದು ಸಿಎಂ ಎಚ್ಚರಿಕೆ ನೀಡಿದರು.

ಬಜೆಟ್ ಘೋಷಣೆಗಳಿಗೆ ಸಂಬಂಧಿಸಿದಂತೆ ಜೂನ್ ಕೊನೆಯ ವೇಳೆಗೆ ಆದೇಶ ಹೊರ ಬರಬೇಕು. ಕಾಮಗಾರಿಗಳಿಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ಕೂಡ ಶೀಘ್ರವಾಗಿ ಆಗಬೇಕು. ಚುನಾವಣೆ ಮುಗಿದಿದೆ. ನೀತಿ ಸಂಹಿತೆ ಸಡಿಲವಾಗಿದೆ. ಹೀಗಾಗಿ ಅಧಿಕಾರಿಗಳು ಅಭಿವೃದ್ಧಿ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ತಾಕೀತು ಮಾಡಿದರು.

ಚುನಾವಣಾ ನೀತಿ ಸಂಹಿತೆ ಸಮಯ ಈ ಬಾರಿ ದೀರ್ಘವಾಗಿತ್ತು. ಇದರಿಂದ ಆಡಳಿತ ಯಂತ್ರ ಸ್ಥಗಿತವಾದಂತೆ ಆಗಿತ್ತು. ಅಭಿವೃದ್ಧಿ ಕೆಲಸಗಳಿಗೆ ಗಮನ ಹರಿಸಲು ಅಧಿಕಾರಿಗಳಿಂದ ಸಾಧ್ಯ ಆಗಿರಲಿಲ್ಲ. ನಮ್ಮ ಮನವಿ ಮೇರೆಗೆ ಚುನಾವಣಾ ಆಯೋಗ ನೀತಿ ಸಂಹಿತೆ ಸಡಿಲಿಸಿದೆ. ಈಗ ಮಳೆ ವಾಡಿಕೆಗಿಂತ ಅಧಿಕವಾಗಿದೆ. ಕೃಷಿ ಚಟುವಟಿಕೆ ಆರಂಭವಾಗಿದೆ. ಚುನಾವಣಾ ಸಿದ್ಧತೆ ಜನವರಿಯಲ್ಲೇ ಶುರುವಾಗಿತ್ತು. ನೀತಿ ಸಂಹಿತೆ ಜೂನ್ 6ರ ವರೆಗೆ ಇದೆ. ಆದರೂ ತುರ್ತು ಕೆಲಸಗಳಿಗೆ ಗಮನ ನೀಡಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಫೆಬ್ರುವರಿಯಲ್ಲಿ ಬಜೆಟ್‌ ಮಂಡಿಸಲಾಗಿದೆ. ಆರ್ಥಿಕ ವರ್ಷದ ಎರಡು ತಿಂಗಳು ಕಳೆದು ಹೋಗುತ್ತಿದೆ. ಒಂದು ವರ್ಷದಲ್ಲಿ ಮಾಡುವ ಕೆಲಸವನ್ನು 10 ತಿಂಗಳಲ್ಲಿ ಮಾಡಿ ಮುಗಿಸುವ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಎಲ್ಲ ಕಾರ್ಯದರ್ಶಿಗಳ ಸಭೆ ನಡೆಸಲಾಯಿತು. ಜೂನ್‌ ಕೊನೆಯ ವರೆಗೆ ಎಲ್ಲ ಹೊಸ ಘೋಷಣೆಗಳಿಗೆ ಸರ್ಕಾರಿ ಆದೇಶ ಹೊರಡಿಸಬೇಕು ಎಂದು ಸೂಚಿಸಲಾಗಿದೆ. ಟೆಂಡರ್‌ ಕರೆಯಲು ಯಾವುದೇ ನೀತಿ ಸಂಹಿತೆ ಅಡ್ಡ ಬರುವುದಿಲ್ಲ. ಟೆಂಡರ್‌ ಕರೆದು, ಅಂತಿಮಗೊಳಿಸಿ, ಕಾರ್ಯಾದೇಶ ನೀಡಲು ಪ್ರಯತ್ನಿಸಬೇಕು. ಇದರಲ್ಲಿ ವಿಳಂಬವಾದರೆ ರಾಜ್ಯದ ಅಭಿವೃದ್ಧಿಯಲ್ಲಿ ವಿಳಂಬವಾಗುತ್ತದೆ ಎಂದರು.

500ಕ್ಕೂ ಹೆಚ್ಚು ಘೋಷಣೆಗಳನ್ನು ಮಾಡಲಾಗಿದೆ. ಈ ಬಗ್ಗೆ ಎಲ್ಲ ಅಧಿಕಾರಿಗಳು ಹೆಚ್ಚು ಗಮನ ಹರಿಸಬೇಕು. ಅಭಿವೃದ್ಧಿ ಕಡೆ ಹೆಚ್ಚು ಗಮನ ಹರಿಸಲು ಸಿಎಂ ಸೂಚಿಸಿದರು.

ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಸಚಿವರಾದ ಹೆಚ್.ಕೆ. ಪಾಟೀಲ್‌, ಕೆ.ಹೆಚ್.‌ ಮುನಿಯಪ್ಪ, ಚೆಲುವರಾಯಸ್ವಾಮಿ, ಬೈರತಿ ಸುರೇಶ್‌, ಶಿವರಾಜ್‌ ತಂಗಡಗಿ, ಪ್ರಿಯಾಂಕ್‌ ಖರ್ಗೆ, ರಹೀಂ ಖಾನ್‌, ಶಿವಾನಂದ ಪಾಟೀಲ, ಎಸ್.‌ ಎಸ್.‌ ಮಲ್ಲಿಕಾರ್ಜುನ್‌, ಸಂತೋಷ್‌ ಲಾಡ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್‌ ಗೋಯೆಲ್‌, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌ ಹಾಗೂ ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ಪಾಸ್‌ಪೋರ್ಟ್‌ ರದ್ದತಿಗಾಗಿ ಪಿಎಂಗೆ ಸಿದ್ದರಾಮಯ್ಯ ಇನ್ನೊಂದು ಪತ್ರ; ಚುರುಕಾದ ವಿದೇಶಾಂಗ ಇಲಾಖೆ

Exit mobile version