ಬೆಂಗಳೂರು: ಮುಡಾ (MUDA) ಸೈಟ್ ಪ್ರಕರಣದ ಬಗ್ಗೆ ಬಿಜೆಪಿ (BJP) ನಡೆಸುತ್ತಿರುವ ಆರೋಪಗಳ ಸುರಿಮಳೆ ಹಾಗೂ ಪ್ರತಿಭಟನೆಗೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ (CM Siddaramaiah) ಇಂದು ಸಚಿವ ಸಂಪುಟ (Cabinet) ಸಭೆಯಲ್ಲಿ ಸ್ಪಷ್ಟನೆ ನೀಡಿದರು. ಮುಡಾ ಹಗರಣದ ಕುರಿತು ಕೇಳಿಬರುತ್ತಿರುವ ಆರೋಪಗಳೆಲ್ಲ ಊಹಾಪೋಹಗಳು ಎಂದು ಸ್ಪಷ್ಟನೆ ನೀಡಿದರಲ್ಲದೆ, ʼನಾನು ಸಿಎಂ ಅನ್ನುವ ಕಾರಣಕ್ಕೆ ನನ್ನ ಸೈಟ್ ಬಿಡೋಕೆ ಆಗುತ್ತಾ?ʼ ಎಂದು ಪ್ರಶ್ನಿಸಿದರು.
ʼಕಾನೂನಿನ ಅನ್ವಯ ಪರಿಹಾರ ರೂಪದ ನಿವೇಶನ ಪಡೆದಿರುವುದು ಸ್ಪಷ್ಟ. ಬಿಜೆಪಿ ಸರ್ಕಾರದ ಕಾಲದಲ್ಲೇ ಇದರ ನಡಾವಳಿ ಆಗಿದೆ, ಪರಿಹಾರಕ್ಕೆ ಒಪ್ಪಿಗೆ ಸಿಕ್ಕಿದೆ. ನಮ್ಮ ಸರ್ಕಾರ ಬಂದ ಮೇಲೆ ಅಂದರೆ 2023, ಅಕ್ಟೋಬರ್‌ನಲ್ಲೇ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದ್ದು, ಅದಕ್ಕೂ ಮುನ್ನವೇ ಪರಿಹಾರ ರೂಪದ ನಿವೇಶನ ನೀಡಲಾಗಿದೆ. ಯಾವುದೇ ಕಾನೂನು ಮೀರಿಲ್ಲ. ನಮ್ಮ ಮೇಲೆ ಬರುತ್ತಿರುವ ಆರೋಪಗಳೆಲ್ಲವೂ ಸುಳ್ಳುʼ ಎಂದು ಕ್ಯಾಬಿನೆಟ್‌ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.
ನಂತರ ಅವರು ಮಾಧ್ಯಮಗಳ ಮುಂದೆ ಮಾತನಾಡಿದರು. ʼಬಿಜೆಪಿಯವರಿಗೆ ಏನೂ ವಿಷಯ ಇಲ್ಲ. ಅವರು ಆರ್. ಎಸ್.ಎಸ್ ಹೇಳಿದಂತೆ ಕೇಳ್ತಾರೆ. ಮುಡಾದಲ್ಲಿ ಏನು ವಿಷಯ ಇದೆ? ಬಿಜೆಪಿ ಅವರೇ ಕೊಟ್ಟು ಅವರೇ ಆರೋಪ ಮಾಡಿದರೆ, ಕಾನೂನು ಬಾಹಿರ ಎಂದು ಹೇಳಿದರೆ ಹೇಗೆ? ನಾನೇಕೆ ರಾಜೀನಾಮೆ ನೀಡಲಿ? ಎಂದು ಸಿಎಂ ಪ್ರಶ್ನಿಸಿದರು.
ನಾವೇನು ಇಂತಹ ಕಡೆ ಕೊಡಿ ಎಂದು ಕೇಳಿದ್ದೇವಾ? ನಾವು ಇಂತಹ ಕಡೆ ಎಂದು ಕೇಳಿಲ್ಲ. ಅದು ಕೊಟ್ಟಿರುವುವರ ತಪ್ಪು. ಹಾಗಾದರೆ ಪರಿಹಾರ ಕೊಟ್ಟು ಬಿಡಲಿ. 62 ಸಾವಿರ ಕೋಟಿ ಬೆಲೆ ಬಾಳುವ ಜಮೀನು ಹೋಗಿದೆ. ನಮ್ಮ ಕೇಸ್ ಪ್ರತ್ಯೇಕ. ನನಗೆ ಕಡಿಮೆ ಸಿಕ್ಕಿದೆ. ನಾನು ಸಿಎಂ ಅಂತ ಸುಮ್ಮನೆ ಬಿಡಲು ಆಗುತ್ತಾ?ʼ ಎಂದು ಪ್ರಶ್ನಿಸಿದರು.
ʼಮುಡಾದವರು ನಮ್ಮ 3 ಎಕರೆ 16 ಗುಂಟೆ ಜಮೀನು ಒತ್ತುವರಿ ಮಾಡಿದ್ದಾರೆ. ಕಾನೂನು ಬಾಹಿರವಾಗಿ ಒತ್ತುವರಿ ಮಾಡಿದ್ದಾರೆ ಅವರು. ನಮ್ಮ ಜಮೀನು ಸೈಟ್, ಪಾರ್ಕ್ ಮಾಡಿದ್ದಾರೆ. ಇದು ಮುಡಾದ ತಪ್ಪು. ಆ ತಪ್ಪನ್ನು ಮುಡಾದವರು ಸಭೆಯಲ್ಲಿ ಒಪ್ಪಿಕೊಂಡಿದ್ದಾರೆ. ನಾನು ಸಿಎಂ ಅಂತ ಬಿಡಲು ಆಗುತ್ತಾ? ನಾವು 50:50 ನಿಯಮ ಒಪ್ಪಿಕೊಂಡಿದ್ದೇವೆ. ನಾವೇನು ಇಂತಹ ಕಡೆ ಕೊಡಿ ಎಂದು ಕೇಳಿಲ್ಲ. ನಾವೇನು ವಿಜಯನಗರದ 3-4ನೇ ಹಂತದಲ್ಲಿ ಕೊಡಿ ಎಂದು ಕೇಳಿಲ್ಲ. ಅಲ್ಲಿ ಜಾಗ ಇಲ್ಲ ಅಂತ ಇಲ್ಲಿ ಕೊಟ್ಟಿದ್ದಾರೆ. ಈಗ ಕೊಟ್ಟ ಸೈಟ್ ದರ ಎಷ್ಟಿದೆ ಎಂದು ಕೂಡ ನನಗೆ ಗೊತ್ತಿಲ್ಲ. ನಂತರ 50:50 ರದ್ದು ಮಾಡಿ ಎಂದು ಆದೇಶ ಮಾಡಿದ್ದಾರೆ. ಹಾಗಾದರೆ ಸೈಟ್ ವಾಪಸ್ ತೆಗೆದುಕೊಂಡು ಪರಿಹಾರ ನೀಡಲಿ. ನನಗೆ 62 ಕೋಟಿ ಪರಿಹಾರ ಕೊಟ್ಟು ಬಿಡಲಿ. ಒಂದು ಎಕರೆಗಿಂತ ಕಡಿಮೆ ಕೊಟ್ಟಿದ್ದಾರೆ. ಸಚಿವರು ಯಾವ ಫೈಲೂ ತಂದಿಲ್ಲ. ಇದೆಲ್ಲ ರಾಜಕೀಯ ಪ್ರೇರಿತ ಆರೋಪಗಳುʼ ಎಂದು ಸಿಎಂ ವಿವರಿಸಿದರು.
ಇದನ್ನೂ ಓದಿ: MUDA site scandal: ಮುಡಾ ಸೈಟ್ ಅಕ್ರಮ; ನಾನು ಯಾಕಪ್ಪ ರಾಜೀನಾಮೆ ಕೊಡಲಿ, ನನ್ನ ಪಾತ್ರ ಏನಿದೆ ಎಂದ ಸಿಎಂ!