ಬೆಂಗಳೂರು: ಮುಡಾ ಹಗರಣದಲ್ಲಿ (MUDA Scam) ಸಿಎಂ ಸಿದ್ದರಾಮಯ್ಯ (CM Siddaramaih) ವಿರುದ್ಧ ಪ್ರಾಸಿಕ್ಯೂಶನ್‌ಗೆ (Prosecution) ಅನುಮತಿ ನೀಡಿರುವ ರಾಜ್ಯಪಾಲರ (Governor Thawar Chand Gehlot) ನಡೆಯ ವಿರುದ್ಧ ಕಾಂಗ್ರೆಸ್ ಸಿಟ್ಟು ಭುಗಿಲೆದ್ದಿದ್ದು, ಗವರ್ನರ್ ಕ್ರಮವನ್ನು ಖಂಡಿಸಿ ಸೋಮವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಕೈ ಪಡೆ ಮುಂದಾಗಿದೆ.
ರಾಜ್ಯದ ಎಲ್ಲಾ ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಜಿಲ್ಲಾಧಿಕಾರಿಗಳಿಗೆ ಪ್ರತಿಭಟನಾ ಪತ್ರ ನೀಡಲು ತೀರ್ಮಾನಿಸಿದೆ. ರಾಷ್ಟ್ರಪತಿಗಳಿಗೆ ಡಿಸಿಗಳ ಮೂಲಕ ಪ್ರತಿಭಟನಾ ಪತ್ರ ನೀಡಲಾಗುತ್ತದೆ. ಈಗಾಗಲೇ ಎಲ್ಲಾ ಶಾಸಕರಿಗೂ ಈ ಬಗ್ಗೆ ಸೂಚನೆ ನೀಡಲಾಗಿದ್ದು, ಕನಿಷ್ಠ ಅರ್ಧ ಕಿಲೋಮೀಟರ್ ನಡೆದು ಹೋಗಿ ಮನವಿ ಸಲ್ಲಿಕೆ ಮಾಡಲಾಗುತ್ತದೆ.
ಶನಿವಾರ ರಾಜ್ಯಪಾಲರು ಪ್ರಾಸಿಕ್ಯೂಶನ್ ಅನುಮತಿ ನೀಡಿದ ಕೂಡಲೇ ರಾಜ್ಯದ ನಾನಾ ಕಡೆ ಪ್ರತಿಭಟನೆಗಳು ಆರಂಭವಾಗಿವೆ. ರಾಜ್ಯಪಾಲರ ನಡೆ ಸಂವಿಧಾನವಿರೋಧಿ, ಕಾನೂನುಬಾಹಿರ ಹಾಗೂ ರಾಜಕೀಯ ಪ್ರೇರಿತ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಕೆಲವೆಡೆ ರಾಜ್ಯಪಾಲರಿಗೆ ʼಗೋ ಬ್ಯಾಕ್ʼ ಚಳವಳಿ ಕೂಡ ನಡೆದಿದೆ.
ಕೇಂದ್ರ ಸರ್ಕಾರದ ವಿರುದ್ಧ ಅಹಿಂದ ಹಾಗೂ ಕನ್ನಡ ಅಸ್ಮಿತೆ ಅಸ್ತ್ರವನ್ನು ಕಾಂಗ್ರೆಸ್ ಪ್ರಯೋಗಿಸಿದೆ. ದೇಶಾದ್ಯಂತ ಇದೇ ವಿಚಾರವನ್ನು ಚರ್ಚೆಯ ಮುನ್ನೆಲೆಗೆ ತಂದು ಹೋರಾಡಲು ಕಾಂಗ್ರೆಸ್ ಮುಂದಾಗಿದೆ. ದೇಶದಲ್ಲಿ ಮುಂದೆ ಬರುತ್ತಿರುವ ಚುನಾವಣೆಗಳ ಲಾಭ ಪಡೆಯಲು ಈ ಪ್ರಕರಣ ಬಳಸಿಕೊಳ್ಳಲು ತೀರ್ಮಾನಿಸಿದೆ.
ಹಿಂದುಳಿದ ವರ್ಗಗಳ ನಾಯಕನನ್ನು ಕೆಳಗಿಳಿಸಲು ಬಿಜೆಪಿ ಸಂಚು ಹೂಡಿದೆ. ರಾಜ್ಯದ ಪರ ಕೇಂದ್ರದ ವಿರುದ್ಧ ಧ್ವನಿ ಎತ್ತಿದ್ದರಿಂದಲೇ ಬಿಜೆಪಿ ನಾಯಕರು ರಾಜ್ಯ ನಾಯಕರಿಗೆ ಸಮಸ್ಯೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆಪಾದಿಸಿದ್ದು, ಈ ಎರಡು ಭಾವನಾತ್ಮಕ ಅಸ್ತ್ರಗಳ ಮೂಲಕ ಹೋರಾಡಲು ಮುಂದಾಗಿದ್ದಾರೆ.
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿತಾರೆ: ಡಿಕೆ ಶಿವಕುಮಾರ್
ಬೆಂಗಳೂರು: ಮುಡಾ ಹಗರಣ ವಿಚಾರದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿದ್ದರೂ, ಸಿದ್ದರಾಮಯ್ಯ ಅವರು ಸಿಎಂ ಆಗಿ ಮುಂದುವರಿಯಲಿದ್ದಾರೆ. ಇಡೀ ಸಚಿವ ಸಂಪುಟ ಹಾಗೂ ಕಾಂಗ್ರೆಸ್ ಪಕ್ಷ ಸಿಎಂ ಅವರ ಹಿಂದೆ ನಿಂತಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ನಡೆಸಲಾದ ಹತ್ತು ಜನ ಸಚಿವರ ಸಾಮೂಹಿಕ ಸುದ್ದಿಗೋಷ್ಠಿಯ ನೇತೃತ್ವ ವಹಿಸಿ ಅವರು ಮಾತನಾಡಿದರು. ರಾಜ್ಯಪಾಲರ ಕ್ರಮ ಪ್ರಜಾಪ್ರಭುತ್ವಕ್ಕೆ ಮಾರಕವಾದ ನಡೆ. ಸಂವಿಧಾನ ವಿರೋಧಿ ಪತ್ರವನ್ನು ರಾಜ್ಯಪಾಲರು ಕಳುಹಿಸಿಕೊಟ್ಟಿದ್ದಾರೆ ಎಂದು ಅವರು ಆಪಾದಿಸಿದರು.
ದ್ವೇಷದ ಪಿತೂರಿ ಒಳಗೊಂಡ ಪ್ರಾಸಿಕ್ಯೂಶನ್ ಕೋರಿ ಸಲ್ಲಿಸಿರುವ ಅರ್ಜಿ ತಿರಸ್ಕರಿಸುವಂತೆ ಮನವರಿಕೆ ಮಾಡಿಕೊಡುವ ಕೆಲಸವನ್ನು ನಾವು ಮಾಡಿದ್ದೆವು. ಇವು ರಾಜಕೀಯ ಪ್ರೇರಿತ ದೂರುಗಳು ಎಂದು ಹೇಳಿದ್ದೆವು. ನಮ್ಮ ಸಿಎಂ ಅವಧಿಯಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ. ಹೀಗಾಗಿ ಪ್ರಾಸಿಕ್ಯೂಶನ್ ಕೋರಿ ಸಲ್ಲಿಸಿರುವ ಅರ್ಜಿ ತಿರಸ್ಕರಿಸಬೇಕು ಎಂದು ಮನವಿ ಮಾಡಿದ್ದೆವು. ಸಾಮಾನ್ಯ ತನಿಖೆ ನಡೆಸಿ ಪ್ರಾಸಿಕ್ಯೂಶನ್‌ಗೆ ಕೇಳಿದರೆ ಕೊಡುವುದು ನೋಡಿದ್ದೇವೆ. ಆದರೆ ಈ ಪ್ರಕರಣದಲ್ಲಿ ಯಾವುದೇ ತನಿಖೆ ಆಗಿಲ್ಲ. ಆದರೂ ಪ್ರಾಸಿಕ್ಯೂಶನ್‌ಗೆ ಅನುಮತಿ ಕೊಟ್ಟಿದ್ದಾರೆ ಎಂದು ಅವರು ಆಪಾದಿಸಿದರು.
ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಗಣಿಗಾರಿಕೆಗೆ ಅನುಮತಿ ನೀಡಿದ ಪ್ರಕರಣದಲ್ಲಿ ಲೋಕಾಯುಕ್ತದವರೇ ಪ್ರಾಸಿಕ್ಯೂಶನ್‌ಗೆ ಅನುಮತಿ ಕೇಳಿದರೂ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ. ಮುರುಗೇಶ ನಿರಾಣಿ, ಜನಾರ್ದನ ರೆಡ್ಡಿ ವಿರುದ್ಧದ ಪ್ರಕರಣದಲ್ಲೂ ಅನುಮತಿ ತೀರ್ಮಾನ ಮಾಡಿಲ್ಲ. ಆದರೆ ಸಿದ್ದರಾಮಯ್ಯ ಕೇಸ್ ಅನ್ನು ತ್ವರಿತವಾಗಿ ತೀರ್ಮಾನ ತೆಗೆದುಕೊಂಡಿದ್ದಾರೆ. ಇದು ಪ್ರಜಾಪ್ರಭುತ್ವ ಸರ್ಕಾರದ ವಿರುದ್ಧ ತೆಗೆದುಕೊಂಡ ತೀರ್ಮಾನ ಎಂದು ಅವರು ಆರೋಪಿಸಿದರು.
ಇದನ್ನೂ ಓದಿ: CM Siddaramaiah: ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿರುವ 6 ಪುಟಗಳ ಪತ್ರದಲ್ಲಿ ಏನೇನಿದೆ? ಕೊಟ್ಟ ಸಮರ್ಥನೆಗಳು ಹೀಗಿವೆ