Site icon Vistara News

CM Siddaramaiah: ನಾನು ಡಲ್‌ ಆಗಿಲ್ಲ, ನನ್ನ ಹೋರಾಟದ ಜೋಶ್‌ ಹೆಚ್ಚಾಗಿದೆ: ಸಿಎಂ ಸಿದ್ದರಾಮಯ್ಯ

cm siddaramaiah 12

ಬೆಂಗಳೂರು: ನಿಜೆಪಿ- ಜೆಡಿಎಸ್‌ ಸುಳ್ಳು ದೂರುಗಳ ಮೂಲಕ ನನ್ನನ್ನು ಹಣಿಯುವುದಕ್ಕೆ ಮುಂದಾಗಿವೆ. ನಾನು ರಾಜಕೀಯ ಜೀವನದಲ್ಲಿ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದು, ಮುಂದೆಯೂ ಮಾಡುತ್ತೇನೆ. ಇಂಥ ಹೋರಾಟದ ಸಂದರ್ಭದಲ್ಲಿ ನನ್ನ ಜೋಶ್‌ ಜಾಸ್ತಿಯಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದರು.

ಮುಡಾ ಪ್ರಕರಣದಲ್ಲಿ (MUDA case, MUDA scam) ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿರುವುದು ಹಾಗೂ ರಾಜೀನಾಮೆಗೆ ಬಿಜೆಪಿ ಆಗ್ರಹದ ಕುರಿತು ಅವರು ಮಾಧ್ಯಮಗಳ ಮುಂದೆ ಮಾತನಾಡಿದರು. ನಾನು ಡಲ್ ಆಗಿಲ್ಲ. ಬಹಳ‌ ಆಕ್ಟೀವ್ ಆಗಿಯೇ ಇದ್ದೇನೆ. ನಾನು ಬಡವರ ಪರ ಇದ್ದೇನೆ, ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇನೆ ಎಂಬ ಕಾರಣಕ್ಕಾಗಿ ಸಿದ್ದರಾಮಯ್ಯನನ್ನು ಮುಗಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ನಾನು, ನನ್ನ‌ ರಾಜಕೀಯ ಜೀವನ ತೆರೆದ ಪುಸ್ತಕ. ನಿನ್ನೆಗೆ ನಾನು ಮಂತ್ರಿಯಾಗಿಯೇ ನಲುವತ್ತು ವರ್ಷಗಳಾದವು. ಯಾವತ್ತೂ ತಪ್ಪು ಮಾಡಿಲ್ಲ, ಮಾಡೋದೂ ಇಲ್ಲ. ನನ್ನಲ್ಲಿ ಒಂದು ಕಪ್ಪು ಚುಕ್ಕಿಯೂ ಇಲ್ಲ. ನನ್ನ ಜೀವನದಲ್ಲಿ ಮಸಿ ಬಳಿಯಬೇಕು ಅಂತ ಇದನ್ನೆಲ್ಲ ಮಾಡುತ್ತಿದ್ದಾರೆ. ಬಿಜೆಪಿ ರಾಜಕೀಯ ದುರುದ್ದೇಶದಿಂದ ಪ್ರತಿಭಟನೆ ಮಾಡುತ್ತಿದೆ ಎಂದು ಅವರು ಆಪಾದಿಸಿದರು.

ಸುಳ್ಳು ಆಪಾದನೆ, ಕೇಸ್‌ ಇತ್ಯಾದಿಗಳ ಬಗ್ಗೆ ರಾಜಕೀಯವಾಗಿಯೂ ಹೋರಾಡುತ್ತೇನೆ; ಕಾನೂನಾತ್ಮಕವಾಗಿಯೂ ಹೋರಾಡುತ್ತೇನೆ. ರಾಜ್ಯಪಾಲರ ಆದೇಶ ಪ್ರಶ್ನೆ ಮಾಡಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದೇವೆ. ತಡೆಯಾಜ್ಞೆ ಕೊಡಿ ಅಂತ ಕೇಳಿದ್ದೇವೆ. ನನ್ನ ಪರವಾಗಿ ವಾದಿಸಲು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಬರ್ತಾ ಇದ್ದಾರೆ. ನ್ಯಾಯಾಲಯದ ಮೇಲೆ ಸಂಪೂರ್ಣ ವಿಶ್ವಾಸ ಇದೆ ಎಂದು ಅವರು ತಿಳಿಸಿದರು.

ತನಿಖೆಗೆ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ಕೋರಿದ ಸಿಎಂ, ಇಂದು ಮಧ್ಯಾಹ್ನ ವಿಚಾರಣೆ

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿ ತಮ್ಮ ವಿರುದ್ಧ ಪ್ರಾಸಿಕ್ಯೂಶನ್‌ ಆರಂಭಿಸಲು ಅನುಮತಿ ನೀಡಿರುವ ರಾಜ್ಯಪಾಲರ ಕ್ರಮವನ್ನು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಪ್ರಾಸಿಕ್ಯೂಶನ್‌ಗೆ ಅವರು ತಡೆಯಾಜ್ಞೆ ಕೋರಿದ್ದು, ಅರ್ಜಿಯ ವಿಚಾರಣೆ ಮಧ್ಯಾಹ್ನ 2.30ಕ್ಕೆ ನಡೆಯಲಿದೆ.

ಪ್ರಾಸಿಕ್ಯೂಶನ್‌ಗೆ ತಡೆ ಕೋರಿ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಪೀಠದ ಮುಂದೆ ಸಿಎಂ ಪರ ವಕೀಲ ಶತಭೀಷ್ ಶಿವಣ್ಣ ಅವರಿಂದ ಅರ್ಜಿ ಸಲ್ಲಿಕೆಯಾಯಿತು. ತ್ವರಿತವಾಗಿ ಅರ್ಜಿ ವಿಚಾರಣೆ ನಡೆಸುವಂತೆ ವಕೀಲರು ಮನವಿ ಮಾಡಿಕೊಂಡರು. ನ್ಯಾಯಮೂರ್ತಿಗಳು ವಿಚಾರಣೆಯನ್ನು ಮಧ್ಯಾಹ್ನ 2.30ಕ್ಕೆ ಮುಂದೂಡಿದರು.

ರಾಜ್ಯಪಾಲರ ಅನುಮತಿ ರದ್ದುಪಡಿಸಲು ಕೋರಿ ಸಿದ್ದರಾಮಯ್ಯ ಅವರ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯಪಾಲರ ವಿಶೇಷ ಕಾರ್ಯದರ್ಶಿ, ಮುಖ್ಯ ಕಾರ್ಯದರ್ಶಿ ಹಾಗೂ ಮೂವರು ದೂರುದಾರರನ್ನು ಪ್ರತಿವಾದಿಗಳನ್ನಾಗಿಸಿ ಅರ್ಜಿ ಸಲ್ಲಿಸಲಾಗಿದೆ. ರಾಜ್ಯಪಾಲರು ಅನುಮತಿ ನೀಡುವ ಮುನ್ನ ಕಾನೂನಿನ ಪ್ರಕ್ರಿಯೆ ಪಾಲಿಸಿಲ್ಲ. ಸಚಿವ ಸಂಪುಟದ ಶಿಫಾರಸಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಸಂವಿಧಾನದ 163ನೇ ವಿಧಿಯಂತೆ ಸಚಿವ ಸಂಪುಟದ ಶಿಫಾರಸು ಪಾಲಿಸಬೇಕು. ಅನುಮತಿಗೆ ಮುನ್ನ ದಾಖಲೆಗಳನ್ನು ಪರಿಶೀಲಿಸಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಪರ ಹಿರಿಯ ವಕೀಲ ರವಿವರ್ಮ ಕುಮಾರ್ ವಾದಿಸಿದರು.

ತುರ್ತು ವಿಚಾರಣೆಯ ಅಗತ್ಯವಿದೆ. ಕೇವಿಯಟ್ ಸಲ್ಲಿಸಿದವರಿಗೆ ಮಾಹಿತಿ ನೀಡಲಾಗಿದೆ. ರಾಜ್ಯಪಾಲರ ಕಚೇರಿಗೂ ಅರ್ಜಿಯ ಪ್ರತಿ ಸಲ್ಲಿಸಲಾಗಿದೆ ಎಂದು ವಕೀಲರು ತಿಳಿಸಿದರು. ಮಧ್ಯಾಹ್ನ 2.30ಕ್ಕೆ ವಿಚಾರಣೆ ನಿಗದಿಪಡಿಸಲು ಹೈಕೋರ್ಟ್ ಒಪ್ಪಿಗೆ ನೀಡಿತು.

ಇದನ್ನೂ ಓದಿ: CM Siddaramaiah: ಆ.23ಕ್ಕೆ ಸಿಎಂ ಸಿದ್ದರಾಮಯ್ಯ ದೆಹಲಿಗೆ; ಕಾನೂನು ಹೋರಾಟಕ್ಕೆ ಹೈ ‌ಕಮಾಂಡ್ ಬೆಂಬಲ ಕೋರಲು ಭೇಟಿ

Exit mobile version