ಬೆಂಗಳೂರು: ಮುಡಾ ಹಗರಣಕ್ಕೆ (MUDA Scam) ಸಂಬಂಧಿಸಿ ತಮ್ಮ ವಿರುದ್ಧ ಪ್ರಾಸಿಕ್ಯೂಶನ್ (Prosecution) ಆರಂಭಿಸಲು ಅನುಮತಿ ನೀಡಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Governor Thawar Chand gehlot) ಅವರ ಕ್ರಮವನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ಪ್ರಶ್ನಿಸಿ ಹೈಕೋರ್ಟ್‌ನಲ್ಲಿ (High Court) ಅರ್ಜಿ ಸಲ್ಲಿಸಿದ್ದಾರೆ. ಪ್ರಾಸಿಕ್ಯೂಶನ್‌ಗೆ ಅವರು ತಡೆಯಾಜ್ಞೆ (Stay order) ಕೋರಿದ್ದು, ಅರ್ಜಿಯ ವಿಚಾರಣೆ ಮಧ್ಯಾಹ್ನ 2.30ಕ್ಕೆ ನಡೆಯಲಿದೆ.
ಪ್ರಾಸಿಕ್ಯೂಶನ್‌ಗೆ ತಡೆ ಕೋರಿ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಪೀಠದ ಮುಂದೆ ಸಿಎಂ ಪರ ವಕೀಲ ಶತಭೀಷ್ ಶಿವಣ್ಣ ಅವರಿಂದ ಅರ್ಜಿ ಸಲ್ಲಿಕೆಯಾಯಿತು. ತ್ವರಿತವಾಗಿ ಅರ್ಜಿ ವಿಚಾರಣೆ ನಡೆಸುವಂತೆ ವಕೀಲರು ಮನವಿ ಮಾಡಿಕೊಂಡರು. ನ್ಯಾಯಮೂರ್ತಿಗಳು ವಿಚಾರಣೆಯನ್ನು ಮಧ್ಯಾಹ್ನ 2.30ಕ್ಕೆ ಮುಂದೂಡಿದರು.
ರಾಜ್ಯಪಾಲರ ಅನುಮತಿ ರದ್ದುಪಡಿಸಲು ಕೋರಿ ಸಿದ್ದರಾಮಯ್ಯ ಅವರ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯಪಾಲರ ವಿಶೇಷ ಕಾರ್ಯದರ್ಶಿ, ಮುಖ್ಯ ಕಾರ್ಯದರ್ಶಿ ಹಾಗೂ ಮೂವರು ದೂರುದಾರರನ್ನು ಪ್ರತಿವಾದಿಗಳನ್ನಾಗಿಸಿ ಅರ್ಜಿ ಸಲ್ಲಿಸಲಾಗಿದೆ. ರಾಜ್ಯಪಾಲರು ಅನುಮತಿ ನೀಡುವ ಮುನ್ನ ಕಾನೂನಿನ ಪ್ರಕ್ರಿಯೆ ಪಾಲಿಸಿಲ್ಲ. ಸಚಿವ ಸಂಪುಟದ ಶಿಫಾರಸಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಸಂವಿಧಾನದ 163ನೇ ವಿಧಿಯಂತೆ ಸಚಿವ ಸಂಪುಟದ ಶಿಫಾರಸು ಪಾಲಿಸಬೇಕು. ಅನುಮತಿಗೆ ಮುನ್ನ ದಾಖಲೆಗಳನ್ನು ಪರಿಶೀಲಿಸಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಪರ ಹಿರಿಯ ವಕೀಲ ರವಿವರ್ಮ ಕುಮಾರ್ ವಾದಿಸಿದರು.
ತುರ್ತು ವಿಚಾರಣೆಯ ಅಗತ್ಯವಿದೆ. ಕೇವಿಯಟ್ ಸಲ್ಲಿಸಿದವರಿಗೆ ಮಾಹಿತಿ ನೀಡಲಾಗಿದೆ. ರಾಜ್ಯಪಾಲರ ಕಚೇರಿಗೂ ಅರ್ಜಿಯ ಪ್ರತಿ ಸಲ್ಲಿಸಲಾಗಿದೆ ಎಂದು ವಕೀಲರು ತಿಳಿಸಿದರು. ಮಧ್ಯಾಹ್ನ 2.30ಕ್ಕೆ ವಿಚಾರಣೆ ನಿಗದಿಪಡಿಸಲು ಹೈಕೋರ್ಟ್ ಒಪ್ಪಿಗೆ ನೀಡಿತು.
ಅರ್ಜಿಯಲ್ಲಿ 20 ಅಂಶಗಳು
ರಾಜ್ಯಪಾಲರು ತಮ್ಮ ವಿರುದ್ಧ ಪ್ರಾಸಿಕ್ಯೂಶನ್‌ಗೆ ಕೊಟ್ಟ ನಡೆಯನ್ನು ಪ್ರಶ್ನಿಸಿರುವ ಸಿಎಂ, ಅರ್ಜಿಯಲ್ಲಿ 20 ಅಂಶಗಳನ್ನು ಪ್ರಸ್ತಾಪ ಮಾಡಿದ್ದಾರೆ.
1) ರಾಜ್ಯಪಾಲರು ಕಾನೂನು ಹಾಗೂ ಸಂವಿಧಾನದ ವಿರುದ್ಧ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿದ್ದಾರೆ.
2) ಎಸ್ಓಪಿ ನಿಯಮ ಪಾಲನೆ ಮಾಡಿಲ್ಲ. ಎಸ್ಓಪಿ ಬಗ್ಗೆ ರಾಜ್ಯಪಾಲರಿಗೆ ಅರಿವಿಲ್ಲ. ಕೇಂದ್ರ ಸರ್ಕಾರ ಮಾಡಿರುವ ಹೊಸ ಕಾನೂನಿನ ವಿರುದ್ಧ ನಡೆದುಕೊಂಡಿದ್ದಾರೆ.
3) ಈ ಪ್ರಕರಣದಲ್ಲಿ ನನ್ನ ಪಾತ್ರವೇ ಇಲ್ಲ.
4) ಇದೊಂದು ಸಿವಿಲ್ ಮೊಕದ್ದಮೆಯೇ ಹೊರತು ಕ್ರೈಮ್ ಅಲ್ಲ
5) ಮುಡಾದಲ್ಲಿ ಪಡೆದ ನಿವೇಶನಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ
6) ಅದು ನನ್ನ ಪತ್ನಿಗೆ ಅವರ ಸಹೋದರರಿಂದ ಬಂದ ಗಿಫ್ಟ್
7) ನನ್ನ ಪತ್ನಿಯ ಆಸ್ತಿಯನ್ನು ಮುಡಾ ಅಧಿಕಾರಿಗಳು ಅಕ್ರಮವಾಗಿ ಸ್ವಾಧೀನ ಮಾಡಿದ್ದಾರೆ
8) ಅದಕ್ಕೆ ಮುಡಾದವರು 14 ನಿವೇಶನಗಳನ್ನ ಪರ್ಯಾಯವಾಗಿ ನೀಡಿದ್ದಾರೆ
9) ಇದು ಎಲ್ಲ ಪ್ರಕ್ರಿಯೆ ನಡೆದಿರುವುದು ಬಿಜೆಪಿ ಸರ್ಕಾರದ ಅವಧಿಯಲ್ಲಿ
10) ಇಂತಹ ಆರೋಪ ಬಂದ ತಕ್ಷಣ ಒನ್ ಮ್ಯಾನ್ ಕಮಿಷನ್ ನೇಮಕ ಮಾಡಿದ್ದೇವೆ. ಕಮಿಷನ್ ತನಿಖೆ ಮಾಡ್ತಿದೆ
11) ನ್ಯಾಯಾಂಗ ತನಿಖೆಯ ಸಮಿತಿ ಮಾಹಿತಿ ಸಹ ರಾಜ್ಯಪಾಲರು ಪಡೆದಿಲ್ಲ
12) ದೂರುದಾರರ ಬಗ್ಗೆ ಹಲವು ಅನುಮಾನಗಳಿವೆ
13) ಪ್ರದೀಪ್ ಜೆಡಿಎಸ್ ವಕ್ತಾರ
14) ಅಬ್ರಹಾಂ ಈ ಹಿಂದೆ ಹಲವು ದೂರುಗಳನ್ನು ಕೊಟ್ರೂ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಿಲ್ಲ. ಒಬ್ಬ ಅಧಿಕಾರಿಯನ್ನು ಬ್ಲಾಕ್ ಮೇಲ್ ಮಾಡಿದ ಪ್ರಕರಣದಲ್ಲಿ ಆರೋಪಿ ಆಗಿದ್ದಾರೆ.
15) ಇದೊಂದು ರಾಜಕೀಯ ಪ್ರೇರಿತ ಪ್ರಕರಣ
16) ರಾಜ್ಯ ಸರ್ಕಾರವನ್ನ ಬುಡಮೇಲು ಮಾಡುವ ಹುನ್ನಾರ
17) ದೆಹಲಿ ಸೇರಿದಂತೆ ಇತರೆ ರಾಜ್ಯಗಳಲ್ಲಿ ರಾಜ್ಯಪಾಲರ ಅಧಿಕಾರ ದುರುಪಯೋಗ ಪಡಿಸಿಕೊಂಡು ಸರ್ಕಾರಗಳನ್ನ ಅಭದ್ರ ಮಾಡಿ ಇಲ್ಲಿಯೂ ಅದನ್ನೇ ಮಾಡುವ ಕೆಲಸ ಮಾಡ್ತಿದ್ದಾರೆ
18) ನನ್ನ ವಿರುದ್ಧ ಮಾಜಿ ಪಿಎಂ ಎಚ್‌ಡಿ ದೇವೇಗೌಡ, ಕುಮಾರಸ್ವಾಮಿ ಹಾಗೂ ಬಿಎಸ್‌ವೈ ಸೇರಿದಂತೆ ಬಿಜೆಪಿಯ ಕೇಂದ್ರ ನಾಯಕರು ನನ್ನ ವಿರುದ್ಧ ಮಾಡ್ತಿರುವ ಷಡ್ಯಂತ್ರ
19) ಈ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲದಿದ್ದರೂ ನನ್ನ ವಿರುದ್ಧ ಪ್ರಾಸಿಕ್ಯೂಶನ್‌ಗೆ ಕೊಟ್ಟ ರಾಜ್ಯಪಾಲರ ಆದೇಶ ಸರಿಯಲ್ಲ
20) ಹೀಗಾಗಿ ಪ್ರಾಸಿಕ್ಯೂಶನ್‌ಗೆ ಕೊಟ್ಟ ಕ್ರಮ ಸರಿಯಿಲ್ಲ ಎಂದು ಆದೇಶ ಮಾಡಬೇಕೆಂದು ಮನವಿ.
ಇದನ್ನೂ ಓದಿ: CM Siddaramaiah: ಆ.23ಕ್ಕೆ ಸಿಎಂ ಸಿದ್ದರಾಮಯ್ಯ ದೆಹಲಿಗೆ; ಕಾನೂನು ಹೋರಾಟಕ್ಕೆ ಹೈ ಕಮಾಂಡ್ ಬೆಂಬಲ ಕೋರಲು ಭೇಟಿ