ಹೊಸದಿಲ್ಲಿ: ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಲೋಕಸಭೆ ಚುನಾವಣೆ (Lok Sabha Election 2024) ಪ್ರಚಾರದ ವೇಳೆ ವ್ಯಕ್ತಿಯೊಬ್ಬ ಪಿಸ್ತೂಲ್ (Gun) ಸೊಂಟಕ್ಕೆ ಸಿಕ್ಕಿಸಿಕೊಂಡು ಹೋಗಿ, ಸಿಎಂ ಸೇರಿದಂತೆ ಮುಖಂಡರಿಗೆ ಹಾರ ಹಾಕಿದ ಪ್ರಕರಣದಲ್ಲಿ, ಏನು ಕ್ರಮ ತೆಗೆದುಕೊಳ್ಳಬೇಕು ಎಂಬ ಗೊಂದಲ ಪೊಲೀಸರಲ್ಲಿ ಸೃಷ್ಟಿಯಾಗಿದೆ.
ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ (Bangalore south) ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ರೋಡ್ ಶೋ (Road show) ನಡೆಸುವ ವೇಳೆ ಸೊಂಟದಲ್ಲಿ ಗನ್ ಇಟ್ಟುಕೊಂಡಿದ್ದ ವ್ಯಕ್ತಿ ಸಿಎಂಗೆ ಹಾರ ಹಾಕಿದ್ದ. ಈತ ಸೈಯದ್ ರಿಯಾಜ್ ಎಂದು ಗುರುತಿಸಲಾಗಿದೆ. ಪೊಲೀಸರು ಸದ್ಯ ಈತನನ್ನು ವಶಕ್ಕೆ ಪಡೆದಿದ್ದು, ಠಾಣೆಯಲ್ಲಿ ಇರಿಸಿಕೊಂಡಿದ್ದಾರೆ.
ಮುಖ್ಯಮಂತ್ರಿ @siddaramaiah ಅವರಿಗೆ ಹಾರ ಹಾಕುವವರು ಸನ್ಮಾನ ಮಾಡುವವರು ಗೂಂಡಾಗಳು, ರೌಡಿಗಳು, ಬೀದಿ ಪುಂಡರು ಎನ್ನುವುದು ಸಾಬೀತಾಗಿದೆ.
— BJP Karnataka (@BJP4Karnataka) April 8, 2024
ಇಷ್ಟುದಿನ ಹುಟ್ಟುಹಬ್ಬದ ಫ್ಲೆಕ್ಸ್ಗಳಲ್ಲಿ ಕಾಣಿಸುತ್ತಿದ್ದ ಗನ್ ಹಿಡಿದ ರೌಡಿಗಳು, ಇದೀಗ ಸಿಎಂ, ಡಿಸಿಎಂ ಅವರ ರ್ಯಾಲಿಗಳಲ್ಲಿ ರಾಜಾರೋಷವಾಗಿ ಗನ್ ಹಿಡಿದು ಹಾರ ಹಾಕಿ ಸಮಾಜದ ಮುಂದೆ ಪೋಸ್… pic.twitter.com/r9paiEgw15
ಈತ ಯಾವ ಉದ್ದೇಶದಿಂದ ಗನ್ ತಂದಿದ್ದ ಎಂದು ಪ್ರಶ್ನಿಸಲಾಗುತ್ತಿದೆ. ನಿನ್ನೆ ತಡರಾತ್ರಿವರೆಗೂ ರಿಯಾಜ್ ವಿಚಾರಣೆ ಮುಂದುವರಿದಿದೆ. ಸಿದ್ಧಾಪುರ ಠಾಣೆ ಇನ್ಸ್‌ಪೆಕ್ಟರ್ ಗಿರೀಶ್ ಅವರಿಂದ ವಿಚಾರಣೆ ನಡೆಸಲಾಗುತ್ತಿದೆ. ಇದೇ ವೇಳೆ, ರಿಯಾಜ್ ಮೇಲೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಲ್ಲಿ ಗೊಂದಲ ಮೂಡಿದೆ. ಯಾಕೆಂದರೆ, ಗನ್ ಇಟ್ಟುಕೊಳ್ಳಲು ರಿಯಾಜ್ ಅನುಮತಿ ಪಡೆದಿದ್ದಾನೆ.
2019ರಲ್ಲಿ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈತನ ಮೇಲೆ ಎಸ್‌ಡಿಪಿಐ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಹೀಗಾಗಿ ಜೀವ ಬೆದರಿಕೆ ಇದೆ ಎಂಬ ಕಾರಣ ನೀಡಿ, ಗನ್ ಇಟ್ಟುಕೊಳ್ಳಲು ಲೈಸೆನ್ಸ್‌ಗೆ ಅರ್ಜಿ ಹಾಕಿದ್ದ. ದಕ್ಷಿಣ ವಿಭಾಗ ಡಿಸಿಪಿ ಅರ್ಜಿ ಪರಿಶೀಲಿಸಿ ಗನ್ ಇಟ್ಟುಕೊಳ್ಳಲು ಅನುಮತಿ ನೀಡಿದ್ದರು. ರಿಯಲ್ ಎಸ್ಟೇಟ್ ಬ್ಯೂಸಿನೆಸ್ ಮಾಡ್ತಿದ್ದ ಸೈಯದ್ ರಿಯಾಝ್ ಮೇಲೆ ಅಟ್ಯಾಕ್ ನಡೆದಿತ್ತು. ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸದ್ಯ ಅದೇ ಗನ್ ಈಗ ವಿವಾದಕ್ಕೆ ಕಾರಣವಾಗಿದೆ.
ಅನುಮತಿ ಪಡೆದಿದ್ದಾನೆ
“ಸದ್ಯ ರಿಯಾಜ್ ಎಂಬಾತನನ್ನ ವಿಚಾರಣೆ ಮಾಡ್ತಿದ್ದೇವೆ. ಈ ಹಿಂದೆ ತನ್ನ ಮೇಲೆ ಅಟ್ಯಾಕ್ ಆಗಿದೆ ಎಂದು ದೂರು ನೀಡಿದ್ದ. ಆ ಬಳಿಕ ತನಗೆ ಜೀವ ಬೆದರಿಕೆ ಇದೆ ಮನವಿ ಮಾಡಿದ್ದ. ಚುನಾವಣೆ ಸಂದರ್ಭದಲ್ಲೂ ಸಹ ಜೀವಭಯವನ್ನು ಉಲ್ಲೇಖಿಸಿ ಅನುಮತಿ ಪಡೆದಿದ್ದ. ಸದ್ಯ ಭದ್ರತಾ ವೈಫಲ್ಯ ಹಾಗೂ ಗನ್ ಪಡೆದು ಸಿಎಂ ಬಳಿ ಹೋದ ಬಗ್ಗೆ ತನಿಖೆ ಮಾಡ್ತಿದ್ದೇವೆ” ಎಂದು ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್ ಭರಮಪ್ಪ ಹೇಳಿಕೆ ನೀಡಿದ್ದಾರೆ.
ಗನ್ ಇಟ್ಟುಕೊಳ್ಳಲು ಆತ ಅನುಮತಿ ಪಡೆದಿರುವುದರಿಂದ ಅದನ್ನು ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ ಗೊಂದಲವಿದೆ. ಈತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿದ್ದು, ಯಾವುದೇ ಕ್ರಮಕ್ಕೆ ಪೊಲೀಸರು ಮುಂದಾದರೂ ಆಡಳಿತ ಪಕ್ಷದವರೇ ಅಥವಾ ಆಡಳಿತದಲ್ಲಿ ಇರುವವರೇ ತಡೆ ಹಾಕುವ ಸಾಧ್ಯತೆ ಇದೆ. ಆದರೆ ಈತನ ಸೊಂಟದ ಗನ್‌ನ ದೃಶ್ಯಗಳ ವಿಡಿಯೋ ವೈರಲ್ ಆಗಿರುವುದರಿಂದ, ಪ್ರಕರಣ ಮರೆಮಾಚಲೂ ಸಾಧ್ಯವಿಲ್ಲದಾಗಿದೆ. ಪ್ರತಿಪಕ್ಷಗಳು ಈಗಾಗಲೇ ಈ ವಿಚಾರದಲ್ಲಿ ವಾಗ್ದಾಳಿ ನಡೆಸಲು ಆರಂಭಿಸಿದ್ದಾರೆ.
ಆದ್ದರಿಂದ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಕ್ರಮ ಕೈಗೊಳ್ಳಲು ಪೊಲೀಸರು ನಿರ್ಧರಿಸಿದ್ದು, ಸದ್ಯ ರಿಯಾಜ್‌ನನ್ನು ಠಾಣೆಯಲ್ಲಿ ಇರಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇದೇ ವೇಳೆ, “ಗನ್ ಲೈಸೆನ್ಸ್ ಇದ್ದರೆ ಸಿಎಂ ಸಭೆಗೆ ಬೇಕಾಬಿಟ್ಟಿಯಾಗಿ ಗನ್ ತೆಗೆದುಕೊಂಡು ಹೇಗಬಹುದಾ? ನಾವೂ ಹಾಗೇ ಗನ್ ತಂದರೆ ಪೊಲೀಸರು ಬಿಡುತ್ತಾರಾ?” ಎಂದು ಬಿಜೆಪಿ ನಾಯಕರು ಪ್ರಶ್ನಿಸಿದ್ದಾರೆ.
ಆರ್ ಅಶೋಕ್ ತರಾಟೆ
ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ನಾಯಕರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್‌ನದ್ದು ಗೂಂಡಾ ರಾಜ್ಯ, ಪೊಲೀಸ್ ಇಲಾಖೆ ಸತ್ತಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ (R Ashok) ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಸಹ ಆಕ್ರೋಶ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಎಂಥವರನ್ನು ಕಟ್ಟಿಕೊಂಡು ಚುನಾವಣೆ ನಡೆಸಲು ಹೊರಟಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿ ಒದಗಿಸಿದೆ ಎಂದು ಹೇಳಿದ್ದಾರೆ.
ಚುನಾವಣೆಯ ಸಂದರ್ಭದಲ್ಲಿ ಒಂದು ತಿಂಗಳು ಮುಂಚಿತವಾಗಿ ಗನ್ ವಾಪಸ್ ಕೊಡಬೇಕಾಗಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ ಎಂಬ ಕಾರಣಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರ ಮೇಲೆ ಒತ್ತಡ ಹಾಕಿ ಗನ್ ಅನ್ನು ಜೇಬಿನಲ್ಲಿ ಇಟ್ಟುಕೊಂಡು ಓಡಾಡುತ್ತಿದ್ದಾರೆ. ಇದು ಕಾಂಗ್ರೆಸ್ ಕಾರ್ಯಕರ್ತರೇ ಮಾಡುತ್ತಿರುವ ರೌಡಿಸಂ. ಅಂತಹವರು ಮುಖ್ಯಮಂತ್ರಿಗಳಿಗೆ ಹಾರ ಹಾಕುವ ಮೂಲಕ ನಾವು ಕಾನೂನು ಪಾಲನೆ ಮಾಡಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಇದೇ ಕಾಂಗ್ರೆಸ್ಸಿನ ಗೂಂಡಾ ರಾಜ್ಯ ಎಂದು ಆರ್. ಅಶೋಕ್ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: Lok Sabha Election 2024: ಗನ್ ಇಟ್ಟುಕೊಂಡು ಸಿಎಂಗೆ ಹಾರ ಹಾಕಿದ ಕೇಸ್; ಸರ್ಕಾರಕ್ಕೆ ಆರ್. ಅಶೋಕ್, ವಿಜಯೇಂದ್ರ ಕ್ಲಾಸ್