ಬೆಂಗಳೂರು: ಮುಡಾ ಹಗರಣ (MUDA Scam) ವಿಚಾರದಲ್ಲಿ ರಾಜ್ಯಪಾಲರು (Governor) ಪ್ರಾಸಿಕ್ಯೂಶನ್‌ಗೆ (Prosecution) ಅನುಮತಿ ನೀಡಿದ್ದರೂ, ಸಿದ್ದರಾಮಯ್ಯ (CM Siddaramaiah) ಅವರು ಸಿಎಂ ಆಗಿ ಮುಂದುವರಿಯಲಿದ್ದಾರೆ. ಇಡೀ ಸಚಿವ ಸಂಪುಟ ಹಾಗೂ ಕಾಂಗ್ರೆಸ್ (Congress) ಪಕ್ಷ ಸಿಎಂ ಅವರ ಹಿಂದೆ ನಿಂತಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM DK Shivakumar) ಹೇಳಿದ್ದಾರೆ.
ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ನಡೆಸಲಾದ ಹತ್ತು ಜನ ಸಚಿವರ ಸಾಮೂಹಿಕ ಸುದ್ದಿಗೋಷ್ಠಿಯ ನೇತೃತ್ವ ವಹಿಸಿ ಅವರು ಮಾತನಾಡಿದರು. ರಾಜ್ಯಪಾಲರ ಕ್ರಮ ಪ್ರಜಾಪ್ರಭುತ್ವಕ್ಕೆ ಮಾರಕವಾದ ನಡೆ. ಸಂವಿಧಾನ ವಿರೋಧಿ ಪತ್ರವನ್ನು ರಾಜ್ಯಪಾಲರು ಕಳುಹಿಸಿಕೊಟ್ಟಿದ್ದಾರೆ ಎಂದು ಅವರು ಆಪಾದಿಸಿದರು.
ದ್ವೇಷದ ಪಿತೂರಿ ಒಳಗೊಂಡ ಪ್ರಾಸಿಕ್ಯೂಶನ್ ಕೋರಿ ಸಲ್ಲಿಸಿರುವ ಅರ್ಜಿ ತಿರಸ್ಕರಿಸುವಂತೆ ಮನವರಿಕೆ ಮಾಡಿಕೊಡುವ ಕೆಲಸವನ್ನು ನಾವು ಮಾಡಿದ್ದೆವು. ಇವು ರಾಜಕೀಯ ಪ್ರೇರಿತ ದೂರುಗಳು ಎಂದು ಹೇಳಿದ್ದೆವು. ನಮ್ಮ ಸಿಎಂ ಅವಧಿಯಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ. ಹೀಗಾಗಿ ಪ್ರಾಸಿಕ್ಯೂಶನ್ ಕೋರಿ ಸಲ್ಲಿಸಿರುವ ಅರ್ಜಿ ತಿರಸ್ಕರಿಸಬೇಕು ಎಂದು ಮನವಿ ಮಾಡಿದ್ದೆವು. ಸಾಮಾನ್ಯ ತನಿಖೆ ನಡೆಸಿ ಪ್ರಾಸಿಕ್ಯೂಶನ್‌ಗೆ ಕೇಳಿದರೆ ಕೊಡುವುದು ನೋಡಿದ್ದೇವೆ. ಆದರೆ ಈ ಪ್ರಕರಣದಲ್ಲಿ ಯಾವುದೇ ತನಿಖೆ ಆಗಿಲ್ಲ. ಆದರೂ ಪ್ರಾಸಿಕ್ಯೂಶನ್‌ಗೆ ಅನುಮತಿ ಕೊಟ್ಟಿದ್ದಾರೆ ಎಂದು ಅವರು ಆಪಾದಿಸಿದರು.
ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಗಣಿಗಾರಿಕೆಗೆ ಅನುಮತಿ ನೀಡಿದ ಪ್ರಕರಣದಲ್ಲಿ ಲೋಕಾಯುಕ್ತದವರೇ ಪ್ರಾಸಿಕ್ಯೂಶನ್‌ಗೆ ಅನುಮತಿ ಕೇಳಿದರೂ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ. ಮುರುಗೇಶ ನಿರಾಣಿ, ಜನಾರ್ದನ ರೆಡ್ಡಿ ವಿರುದ್ಧದ ಪ್ರಕರಣದಲ್ಲೂ ಅನುಮತಿ ತೀರ್ಮಾನ ಮಾಡಿಲ್ಲ. ಆದರೆ ಸಿದ್ದರಾಮಯ್ಯ ಕೇಸ್ ಅನ್ನು ತ್ವರಿತವಾಗಿ ತೀರ್ಮಾನ ತೆಗೆದುಕೊಂಡಿದ್ದಾರೆ. ಇದು ಪ್ರಜಾಪ್ರಭುತ್ವ ಸರ್ಕಾರದ ವಿರುದ್ಧ ತೆಗೆದುಕೊಂಡ ತೀರ್ಮಾನ ಎಂದು ಅವರು ಆರೋಪಿಸಿದರು.
ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರದ ವಿರುದ್ಧ ಗವರ್ನರ್ ಕಚೇರಿಯನ್ನು ಬಿಜೆಪಿ ಉಪಯೋಗಿಸಿಕೊಂಡು ಕೆಲಸ ಮಾಡುತ್ತಿದೆ. ಗವರ್ನರ್ ಕಚೇರಿಯನ್ನು ಬಿಜೆಪಿ ಕಚೇರಿಯನ್ನಾಗಿ ಮಾಡಲು ಮುಂದಾಗಿದ್ದಾರೆ. ಕುಮಾರಸ್ವಾಮಿ ಮಾತಿನಂತೆ ಷಡ್ಯಂತ್ರ ನಡೆಯುತ್ತಿದೆ. ಹತ್ತು ತಿಂಗಳ ಒಳಗೆ ಸರ್ಕಾರ ತೆಗೆಯುತ್ತೇವೆಂದು ಹೇಳಿದ್ದರು. ಈಗ ಹಾಗೆ ಮಾಡಲು ಯತ್ನಿಸುತ್ತಿದ್ದಾರೆ. ಆದರೆ ರಾಜ್ಯದ ಜನ ಸಿಎಂ ಸಿದ್ದರಾಮಯ್ಯ ಪರ ಇದ್ದಾರೆ. ಕಾನೂನಾತ್ಮಕವಾಗಿ ಹಾಗೂ ರಾಜಕೀಯವಾಗಿ ಹೋರಾಟ ಮಾಡುತ್ತೇವೆ ಎಂದು ಡಿಕೆಶಿ ಹೇಳಿದರು.
ಒಬ್ಬ ಹಿಂದುಳಿದ ವರ್ಗಗಳ ನಾಯಕನನ್ನು ಮುಗಿಸುವ ಕೆಲಸ ಮಾಡುತ್ತಿದ್ದಾರೆ. ಇಂಡಿಯಾ ಒಕ್ಕೂಟ ಸಿಎಂ ಪರ ಇದೆ. ಸಿಎಂ ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವುದಿಲ್ಲ. ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯುತ್ತಾರೆ. ಸಿಎಂ ಪರ ಕ್ಯಾಬಿನೆಟ್ ಹಾಗೂ ರಾಜ್ಯದ ಜನ ಇದ್ದಾರೆ ಎಂದು ಡಿಕೆಶಿ ಗುಡುಗಿದರು.
ತನಿಖೆಗೆ ಅನುಮತಿ ನೀಡಿದ ರಾಜ್ಯಪಾಲರು
ಮುಡಾ ಹಗರಣದಲ್ಲಿ (MUDA Scam) ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಸಂಕಷ್ಟ ಬಿಗಡಾಯಿಸಿದೆ. ಪ್ರಾಸಿಕ್ಯೂಶನ್‌ಗೆ (Prosecution) ರಾಜ್ಯಪಾಲರು (Governor) ಇಂದು ಅನುಮತಿ ನೀಡಿದ್ದಾರೆ. ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ (TJ Abraham) ಪ್ರಾಸಿಕ್ಯೂಶನ್‌ಗೆ ಅನುಮತಿ ಕೇಳಿದ್ದರು. ಇವರದೊಂಗಿದೆ ಪ್ರದೀಪ್ ಹಾಗೂ ಸ್ನೇಹಮಯಿ ಕೃಷ್ಣ ಎಂಬವರೂ ದೂರು ಸಲ್ಲಿಸಿದ್ದರು.
ಇತ್ತ ಸಿಎಂ ಸಿದ್ದರಾಮಯ್ಯ ಅವರ 10 ಜನರ ಕಾನೂನು ಟೀಮ್ ಫುಲ್ ಆಕ್ಟೀವ್ ಆಗಿದೆ. ರಾಜ್ಯಪಾಲರ ನಡೆ ಪ್ರಶ್ನೆ ಮಾಡಿ ಕಾನೂನು ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜನಪ್ರತಿನಿಧಿಗಳ ಹಾಗೂ ಲೋಕಾಯುಕ್ತ ಕೋರ್ಟ್‌ನಿಂದ ಸುಪ್ರೀಂ ಕೋರ್ಟ್‌ವರೆಗೂ ಹೋಗಲು ವಕೀಲರ ಟೀಮ್ ರೆಡಿಯಾಗಿದೆ. ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಅವರಿಂದಲೇ ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಯುತ್ತಿದೆ.
ಇದನ್ನೂ ಓದಿ: CM Siddaramaiah: ಮುಡಾ ತನಿಖೆಗೆ ರಾಜ್ಯಪಾಲರ ಗ್ರೀನ್ ಸಿಗ್ನಲ್; ಸಿಎಂಗೆ ಸಂಕಷ್ಟ