ಅದಕ್ಷತೆ, ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಅವರು ಟೆಲಿಕಮ್ಯುನಿಕೇಷನ್ಸ್ ಇಲಾಖೆಯ 10 ಹಿರಿಯ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ʼಉತ್ತಮ ಆಡಳಿತದ ದಿನʼ ಆಚರಣೆ ಮರುದಿನವೇ ಇಂಥದೊಂದು ಕ್ರಮ ಅಶ್ವಿನಿ ವೈಷ್ಣವ್ ಅವರಿಂದ ಬಂದಿದೆ. ನಿವೃತ್ತಿಗೊಳಿಸಿದವರು ಸಣ್ಣ ಅಧಿಕಾರಿಗಳೇನಲ್ಲ. 10 ಹಿರಿಯ ಅಧಿಕಾರಿಗಳಲ್ಲಿ ಒಂಬತ್ತು ಅಧಿಕಾರಿಗಳು ನಿರ್ದೇಶಕರ ಶ್ರೇಣಿ, ಮತ್ತೊಬ್ಬರು ಜಂಟಿ ಕಾರ್ಯದರ್ಶಿ ರ‍್ಯಾಂಕ್ ಅಧಿಕಾರಿಯಾಗಿದ್ದರು. ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆ, ಅದಕ್ಷ ಅಧಿಕಾರಿಗಳ ವಿರುದ್ಧ ಕ್ರಮದ ಭಾಗವಾಗಿದೆ ಇದು. ಕಳೆದ ಸೆಪ್ಟೆಂಬರ್‌ನಲ್ಲಿ ಅಶ್ವಿನಿ ವೈಷ್ಣವ್ ಅವರ ನೇತೃತ್ವದಲ್ಲಿ ನಡೆದ ಸಭೆಯ ವೇಳೆ ಬಿಎಸ್‌ಎನ್‌ಎಲ್ ಹಿರಿಯ ಅಧಿಕಾರಿಯೊಬ್ಬರು ನಿದ್ದೆ ಮಾಡುತ್ತಿದ್ದ ಕಾರಣಕ್ಕಾಗಿ ಅವರಿಗೂ ಕಡ್ಡಾಯ ನಿವೃತ್ತಿಗೆ ಸೂಚಿಸಲಾಗಿತ್ತು. ರೈಲ್ವೆ ಖಾತೆಯನ್ನೂ ಹೊಂದಿರುವ ಅಶ್ವಿನಿ ವೈಷ್ಣವ್ ಅವರು ಇಂಥದೇ ಕಾರಣಗಳಿಂದಾಗಿ 40 ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿಯ ಶಿಕ್ಷೆ ವಿಧಿಸಿದ್ದಾರೆ. ಇದು ಒಂದು ರೀತಿಯಲ್ಲಿ ಅಪೇಕ್ಷಿತ, ಸ್ವಾಗತಾರ್ಹ ಕ್ರಮ.
ಕಳೆದ ವರ್ಷವೂ ನಾನಾ ಇಲಾಖೆಗಳ ನೂರಕ್ಕೂ ಹೆಚ್ಚು ಕೇಂದ್ರ ಸರ್ಕಾರದ ಅಧಿಕಾರಿಗಳನ್ನು ಕಡ್ಡಾಯ ನಿವೃತ್ತಿಗೊಳಿಸಿ ಮನೆಗೆ ಕಳಿಸಲಾಗಿತ್ತು. ಇಂಥ ಕ್ರಮಗಳಿಂದ ಯಾವ ಸಂದೇಶ ರವಾನೆಯಾಗುತ್ತದೆ ಎಂಬುದನ್ನು ಆಲೋಚಿಸಬೇಕು. ಅದಕ್ಷತೆ, ಅಪ್ರಾಮಾಣಿಕತೆ, ಕರ್ತವ್ಯದಲ್ಲಿ ನಿರ್ಲಕ್ಷ್ಯ, ವಿಳಂಬದ್ರೋಹ ಇವುಗಳನ್ನು ಸಹಿಸಲು ಸಾಧ್ಯವಿಲ್ಲ ಎಂಬ ಕಠಿಣ ಸಂದೇಶವನ್ನಂತೂ ಅಧಿಕಾರಶಾಹಿಗೆ ನೀಡಬೇಕಾದುದು ಅಗತ್ಯ. ಚುರುಕಿನ ಆಡಳಿತದ ನಿಟ್ಟಿನಲ್ಲಿ ಇದು ಅತ್ಯಂತ ಸೂಕ್ತ ಕ್ರಮ. ಕೆಲವೇ ವರ್ಷಗಳ ಹಿಂದೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರ ಆತ್ಮಕತೆ ಬಿಡುಗಡೆಯಾಗಿತ್ತು. ಅದರಲ್ಲಿ ಅವರು ʼʼಭಾರತದ ಜಡ ಅಧಿಕಾರಶಾಹಿ ಅಲ್ಲಿನ ಪ್ರಗತಿಗೆ ದೊಡ್ಡ ತಡೆಯಾಗಿದೆʼʼ ಎಂದು ಬರೆದಿದ್ದರು. ಅವರು ಸತ್ಯವನ್ನೇ ಹೇಳಿದ್ದಾರೆ ಎಂದು ತಿಳಿಯಲು ಹೆಚ್ಚಿನ ಪರಿಶೀಲನೆ ಬೇಕಿಲ್ಲ. ಸರ್ಕಾರಿ ಕಚೇರಿಗೆ ಯಾವುದೇ ಕೆಲಸ ಮಾಡಿಸಲು ಹೋದರೂ ಹತ್ತಾರು ಮೇಜಿಗೆ ಅಲೆಯದೇ ಕೆಲಸ ಮಾಡಿಸಿಕೊಳ್ಳಲು ಶ್ರೀಸಾಮಾನ್ಯರಿಂದ ಸಾಧ್ಯವಿಲ್ಲ. ಅಧಿಕಾರಶಾಹಿಯ ಮೇಲ್ದರ್ಜೆಯಲ್ಲಿ ಭ್ರಷ್ಟತೆಯಿಲ್ಲದೇ ಹೋದರೆ ತಳವರ್ಗದವರೆಗೆ ಅದು ಹಬ್ಬಲು ಸಾಧ್ಯವಿಲ್ಲ.
2024-25ರಲ್ಲಿ ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಬೇಕು ಎಂಬುದು ಕೇಂದ್ರ ಸರ್ಕಾರದ ಕನಸು. ಆದರೆ ಇದು ಚುರುಕಾದ ಆಡಳಿತವಿಲ್ಲದೆ, ಸಕ್ರಿಯವಾದ ಅಧಿಕಾರಶಾಹಿಯಿಲ್ಲದೆ ಸಾಧ್ಯವಿಲ್ಲ. ಭಾರತದಲ್ಲಿ ಹೊಸದಾಗಿ ಉದ್ಯಮ ತೆರೆಯುವ ಯುವಜನತೆಗೆ ತಲೆನೋವು ಎಂದರೆ ಸರ್ಕಾರಿ ಅಧಿಕಾರಿಗಳಿಂದ ಅಗತ್ಯ ಅನುಮತಿಗಳನ್ನು ಪಡೆಯುವುದು, ಕೆಂಪುಪಟ್ಟಿಯಿಲ್ಲದೆ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುವುದು. ಇದು ಸರಿಹೋಗದೆ ನಾವು ಆರ್ಥಿಕತೆಯಲ್ಲಿ ಒಂದಿಂಚಾದರೂ ಮುಂದುವರಿದೇವು ಎಂದು ನಿರೀಕ್ಷಿಸುವುದು ಕಷ್ಟಸಾಧ್ಯ. ಅಧಿಕಾರಿಶಾಹಿಯ ಬದ್ಧತೆ, ದಕ್ಷತೆ ಇಲ್ಲದೇ ಹೋದರೆ 5 ಟ್ರಿಲಿಯನ್ ಡಾಲರ್ ಎಕಾನಮಿ ಕನಸನ್ನು ಬಿಡುವುದೇ ಒಳ್ಳೆಯದು.
ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮ ಸಮರ್ಪಕವಾಗಿದೆ. ಹಾಗೆಂದು ಅಧಿಕಾರಿಗಳನ್ನು ಸರ್ಕಾರ ಅಸ್ಪೃಶ್ಯ ರೀತಿಯಲ್ಲಿ ನಡೆಸಿಕೊಳ್ಳುತ್ತಿಲ್ಲ. ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಿದ, ಪ್ರತಿಭಾವಂತ ಅಧಿಕಾರಿಗಳನ್ನು ಪುರಸ್ಕರಿಸಿ ಸಚಿವ ಸಂಪುಟದಲ್ಲೂ ಸ್ಥಾನ ನೀಡಿದ ನಿದರ್ಶನಗಳನ್ನು (ಜೈಶಂಕರ್) ನಾವು ನೋಡಿದ್ದೇವೆ. ಅದಕ್ಷ ರಾಜಕಾರಣಿಗಳನ್ನು ಕೆಲಸ ಮಾಡದಿದ್ದರೆ ಐದು ವರ್ಷದಲ್ಲಿ ಮತದಾರರು ಮರಳಿ ಆರಿಸದೆ ಮನೆಯಲ್ಲಿ ಕೂರಿಸಿ ಶಿಕ್ಷೆ ಕೊಡುತ್ತಾರೆ. ಆದರೆ ಅದಕ್ಷ ಅಧಿಕಾರಿಗಳಿಗೆ ಯಾವ ಶಿಕ್ಷೆ? ಭ್ರಷ್ಟಾಚಾರದಲ್ಲಿ ಸಿಕ್ಕಿಬಿದ್ದರೆ ಅಮಾನತಾಗಬಹುದು; ಜೈಲುಪಾಲಾಗಬಹುದು. ಆದರೆ ಕೆಲಸವೇ ನಡೆಯದಂತೆ ಕೊಕ್ಕೆ ಹಾಕುವ, ವಿಳಂಬದ್ರೋಹದಿಂದ ವ್ಯವಸ್ಥೆಯೇ ಕುಂಟುವಂತೆ ಮಾಡುವ ಅಧಿಕಾರಿಗಳಿಗೆ ಸೂಕ್ತ ಶಿಕ್ಷೆ ಕೊಡಿಸುವುದು ಸುಲಭವಲ್ಲ. ಇಂಥ ಸಂದರ್ಭದಲ್ಲಿ ಅಧಿಕಾರಸ್ಥ ಜನಪ್ರತಿನಿಧಿಗಳು ಕ್ರಮ ತೆಗೆದುಕೊಳ್ಳಲು ಮುಂದಾಗಲೇಬೇಕು. ಕೇಂದ್ರದಿಂದ ಸಾಧ್ಯವಾಗುವುದು ರಾಜ್ಯ ಸರ್ಕಾರಕ್ಕೆ ಏಕೆ ಸಾಧ್ಯವಾಗದು? ರಾಜ್ಯ ಸರ್ಕಾರದ ಆಡಳಿತ ಅದಕ್ಷ ಮತ್ತು ಭ್ರಷ್ಟ ಅಧಿಕಾರಿಗಳಿಂದಾಗಿ ಹಳಿ ತಪ್ಪುತ್ತಿದೆ. ಗ್ರಾಮ ಪಂಚಾಯಿತಿಯಿಂದ ಸಚಿವಾಲಯದ ತನಕ ಅದಕ್ಷತೆ, ಭ್ರಷ್ಟತೆ ತಾಂಡವವಾಡುತ್ತಿದೆ. ಕೇಂದ್ರ ಸರ್ಕಾರದ ಮಾದರಿಯಲ್ಲಿ ನಿರಾಸಕ್ತ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ನೀತಿ ಜಾರಿಗೆ ಮಾಡಿದರೆ ಮಾತ್ರ ಆಡಳಿತ ಪಾರದರ್ಶಕ ಮತ್ತು ಚುರುಕುಗೊಳ್ಳಲು ಸಾಧ್ಯ.
ಇದನ್ನೂ ಓದಿ | ವಿಸ್ತಾರ ಸಂಪಾದಕೀಯ| ಮತ್ತೆ ಕೋವಿಡ್ ಆತಂಕ: ಸರ್ಕಾರದ ನಿರ್ಧಾರಗಳು ವಿವೇಚನೆಯಿಂದ ಕೂಡಿರಲಿ