Site icon Vistara News

Priest Marriage: 12 ವರ್ಷದ ಬಾಲಕಿಯ ಮದುವೆಯಾದ ಧರ್ಮಗುರು; ಗಲ್ಲಿಗೇರಿಸಲು ಆಗ್ರಹ

Child Marriage In Ghana

Controversy Erupts As 63-Year-Old Priest Marries 12-Year-Old Girl In Ghana

ಆಕ್ರಾ: ಧರ್ಮಗುರು ಎನಿಸಿಕೊಂಡವರು ಸಮಾಜವನ್ನು, ಸಮುದಾಯಗಳನ್ನು ಸರಿದಾರಿಗೆ ತರುವ ಕೆಲಸ ಮಾಡಬೇಕು. ಕೆಲವು ತ್ಯಾಗಗಳನ್ನು, ವೈಭೋಗಗಳನ್ನು ಅವರು ತ್ಯಜಿಸಿರಬೇಕು ಎಂಬ ಕೆಲವು ಸಾಮಾನ್ಯ ಕಟ್ಟುಪಾಡುಗಳು, ಅಲಿಖಿತ ನಿಯಮಗಳಿವೆ. ಧರ್ಮಗುರುಗಳು ಕೂಡ ಹಾಗೆಯೇ ನಡೆದುಕೊಂಡು ಸಮಾಜದಲ್ಲಿ ಗೌರವ ಗಳಿಸಿರುತ್ತಾರೆ. ಆದರೆ, ಘಾನಾ (Ghana) ದೇಶದಲ್ಲಿ 63 ವರ್ಷದ ಧರ್ಮಗುರುವೊಬ್ಬ ಕೇವಲ 12 ವರ್ಷದ ಬಾಲಕಿಯನ್ನು ಮದುವೆಯಾಗುವ (Priest Marriage) ಮೂಲಕ ವಿವಾದಕ್ಕೆ ಗುರಿಯಾಗಿದ್ದಾನೆ. ಈತನ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಈತನನ್ನು ಗಲ್ಲಿಗೇರಿಸಬೇಕು ಎಂಬ ಆಗ್ರಹಗಳು ಕೇಳಿಬರುತ್ತಿವೆ. ಈತನ ವಿರುದ್ಧ ಅಭಿಯಾನಗಳೇ ಆರಂಭವಾಗಿವೆ.

ಹೌದು, ಪಶ್ಚಿಮ ಆಫ್ರಿಕಾದ ಘಾನಾದಲ್ಲಿ ನುಮೊ ಬೋರ್ಕೆಟೆ ಲಾವೆಹ್‌ ಸುರು XXXIII ಎಂಬಾತನು 12 ವರ್ಷದ ಬಾಲಕಿಯನ್ನು ಮದುವೆಯಾಗಿದ್ದಾನೆ. ಕ್ರೊವೊರ್‌ನ ನುಂಗುವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆತನು ಶನಿವಾರ (ಮಾರ್ಚ್‌ 30) ಮದುವೆಯಾಗಿದ್ದಾನೆ. ಬಾಲಕಿಯು ಆರು ವರ್ಷದವಳಿದ್ದಾಗಲೇ ಆತನು ಮದುವೆಯಾಗಲು ನಿಶ್ಚಯಿಸಿದ್ದ. ಈಗ 12 ವರ್ಷ ತುಂಬುತ್ತಲೇ ಆಕೆಯನ್ನು ಸಾಂಪ್ರದಾಯಿಕವಾಗಿ ಮದುವೆಯಾಗಿದ್ದಾನೆ. ಈತನ ಮದುವೆಯ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಲೇ ಭಾರಿ ಆಕ್ರೋಶ ವ್ಯಕ್ತವಾಗಿದೆ. ಈತನನ್ನು ಗಲ್ಲಿಗೇರಿಸಿ ಎಂದೆಲ್ಲ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಾನಾ ದೇಶದ ಬುಡಕಟ್ಟು ಸಮುದಾಯದ ಧರ್ಮಗುರುವಾಗಿರುವ ಈತನ ಮದುವೆ ಕುರಿತು ಆಕ್ರೋಶ ವ್ಯಕ್ತವಾಗುತ್ತಲೇ ಸಮುದಾಯಗಳ ನಾಯಕರು ಧರ್ಮುಗುರುವಿನ ಪರವೇ ಮಾತನಾಡಿದ್ದಾರೆ. “ಘಾನಾ ಸಮುದಾಯಗಳ ಸಂಪ್ರದಾಯಗಳು ಜನರಿಗೆ ಸರಿಯಾಗಿ ಗೊತ್ತಿಲ್ಲ. ಹಾಗಾಗಿ, ಇಷ್ಟೆಲ್ಲ ಟೀಕೆಗಳು ವ್ಯಕ್ತವಾಗುತ್ತಿವೆ. ಅದರೆ, ಸಂಪ್ರದಾಯದ ಪ್ರಕಾರವೇ ನುಮೊ ಬೋರ್ಕೆಟೆ ಲಾವೆಹ್‌ ಸುರು XXXIII ಅವರು ಬಾಲಕಿಯನ್ನು ಮದುವೆಯಾಗಿದ್ದಾರೆ” ಎಂದು ಸಮುದಾಯಗಳ ನಾಯಕರು ಸಮರ್ಥಿಸಿಕೊಂಡಿದ್ದಾರೆ.

ಕಾನೂನು ಏನು ಹೇಳುತ್ತದೆ?

ಇದನ್ನೂ ಓದಿ: ಮತ್ತೊಂದು ಮದುವೆ ಈಗಲೇ ಆಗಿ, ಯುಸಿಸಿ ಬಳಿಕ ಜೈಲು ಎಂದ ಹಿಮಂತ ಬಿಸ್ವಾ ಶರ್ಮಾ!

ಘಾನಾ ದೇಶದಲ್ಲಿ ಹೆಣ್ಣುಮಕ್ಕಳು ಮದುವೆಯಾಗಲು ಅವರಿಗೆ 18 ವರ್ಷ ತುಂಬಿರಬೇಕು ಎಂಬ ನಿಯಮವಿದೆ. ಆದರೆ, ಈ ನಿಯಮಗಳನ್ನು ಜನ ಗಾಳಿಗೆ ತೂರುತ್ತಿದ್ದಾರೆ. ವರದಿಗಳ ಪ್ರಕಾರ, ಘಾನಾ ದೇಶದಲ್ಲಿ ಶೇ.19ರಷ್ಟು ಹೆಣ್ಣುಮಕ್ಕಳು 18 ವರ್ಷ ತುಂಬುವ ಮೊದಲೇ ಮದುವೆಯಾಗುತ್ತಾರೆ. ಶೇ.5ರಷ್ಟು ಹೆಣ್ಣುಮಕ್ಕಳು 15 ವರ್ಷ ತುಂಬುತ್ತಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಮದುವೆ, ಸಂಸಾರ ಎಂಬುದು ಏನು ಎಂಬ ಅರ್ಥವೇ ಆಗದ ವಯಸ್ಸಿನಲ್ಲಿ ಹೆಣ್ಣುಮಕ್ಕಳಿಗೆ ಹೀಗೆ ಮದುವೆ ಮಾಡಿಸುವುದು ಘಾನಾದಲ್ಲಿ ರೂಢಿಯೇ ಆಗಿದೆ. ಈ ಕುರಿತು ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂಬುದು ಜನರ ಆಗ್ರಹವಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version