Site icon Vistara News

Corrupt Countries List: ಅತ್ಯಂತ ಹೆಚ್ಚು ಭ್ರಷ್ಟಾಚಾರ ಹೊಂದಿರುವ ದೇಶಗಳ ಪಟ್ಟಿ ಬಿಡುಗಡೆ; ಭಾರತಕ್ಕೆ ಎಷ್ಟನೇ ಸ್ಥಾನ?

corruption

corruption

ನವದೆಹಲಿ: ವಿಶ್ವದ ಅತ್ಯಂತ ಭ್ರಷ್ಟ ರಾಷ್ಟ್ರಗಳ ಪಟ್ಟಿ (Corrupt Countries List) ಬಿಡುಗಡೆಯಾಗಿದೆ. ಟ್ರಾನ್ಸ್ಪರೆನ್ಸಿ ಇಂಟರ್‌ನ್ಯಾಷನಲ್‌ (Transparency International) ಬಿಡುಗಡೆ ಮಾಡಿರುವ 2023ರ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ (Corruption Perceptions Index) ಪ್ರಕಾರ 180 ದೇಶಗಳ ಪೈಕಿ ಸೋಮಾಲಿಯಾ ಕೊನೆಯ ಸ್ಥಾನ ಪಡೆದು ಅತ್ಯಂತ ಭ್ರಷ್ಟ ರಾಷ್ಟ್ರ ಎನಿಸಿಕೊಂಡಿದೆ. ಮೊದಲ ರ‍್ಯಾಂಕ್‌ ಪಡೆದ ಡೆನ್ಮಾರ್ಕ್‌ ಕಡಿಮೆ ಭ್ರಷ್ಟಾಚಾರ ಹೊಂದಿರುವ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತ 93ನೇ ಸ್ಥಾನದಲ್ಲಿದೆ. ಸಿಪಿಐ 100ರಲ್ಲಿ ಅಂಕ ನೀಡಿದೆ. ಈ ಪಟ್ಟಿಯಲ್ಲಿರುವ ಮೂರನೇ ಎರಡರಷ್ಟು ದೇಶಗಳು 50ಕ್ಕಿಂತ ಕಡಿಮೆ ಅಂಕಗಳನ್ನು ಗಳಿಸಿವೆ.

ಅತ್ಯಂತ ಕಡಿಮೆ ಭ್ರಷ್ಟಾಚಾರ ಹೊಂದಿದ ರಾಷ್ಟ್ರಗಳು

ಡೆನ್ಮಾರ್ಕ್​ 90 ಅಂಕ ಪಡೆದು ಸತತ 6ನೇ ವರ್ಷವೂ ಮೊದಲ ಸ್ಥಾನದಲ್ಲಿದ್ದು, ಅತ್ಯಂತ ಕಡಿಮೆ ಭ್ರಷ್ಟಾಚಾರ ಹೊಂದಿದ ರಾಷ್ಟ್ರ ಎನಿಸಿಕೊಂಡಿದೆ. ಇಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುವ ನ್ಯಾಯ ವ್ಯವಸ್ಥೆ ಇದೆ ಎಂದು ವರದಿ ಹೇಳಿದೆ. ಅದರ ಅದ್ಭುತ ಕಾರ್ಯಕ್ಷಮತೆಯಿಂದಾಗಿ ಈ ಸಾಧನೆ ಸಾಧ್ಯವಾಗಿದೆ ಎನ್ನಲಾಗಿದೆ. ಇನ್ನು 87 ಅಂಕ ಪಡೆದ ಫಿನ್‌ಲ್ಯಾಂಡ್‌ ಎರಡು ಮತ್ತು 85 ಅಂಕ ಪಡೆದ ನ್ಯೂಜಿಲ್ಯಾಂಡ್‌ ಮೂರನೇ ಸ್ಥಾನ ಪಡೆದುಕೊಂಡಿದೆ.

ಅತ್ಯಂತ ಹೆಚ್ಚು ಭ್ರಷ್ಟಾಚಾರ ಹೊಂದಿದ ರಾಷ್ಟ್ರಗಳು

ರ‍್ಯಾಂಕಿಂಗ್‌ ಪ್ರಕಾರ ಸೊಮಾಲಿಯಾ ಕೊನೆಯ ಸ್ಥಾನದಲ್ಲಿದೆ. ಸೂಚ್ಯಂಕದಲ್ಲಿ ಇದು 11 ಅಂಕ ಗಳಿಸಿದೆ. ಇನ್ನು ತಲಾ 13 ಅಂಕ ಪಡೆದ ವೆನಿಜುಲಾ, ಸಿರಿಯಾ, ದಕ್ಷಿಣ ಸುಡಾನ್‌ 177ನೇ ಸ್ಥಾನದಲ್ಲಿವೆ. ಜಗತ್ತಿನ ಹಲವು ದೇಶಗಳಲ್ಲಿ ಭ್ರಷ್ಟಾಚಾರದ ವಿರುದ್ಧ ನಡೆಯುತ್ತಿರುವ ಸಮರಗಳು ಹೆಚ್ಚು ಪರಿಣಾಮ ಬೀರಿದಂತೆ ಕಾಣುತ್ತಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದ ಸ್ಥಾನ

ಇನ್ನು ಭಾರತ 39 ಅಂಕಗಳೊಂದಿಗೆ ಪಟ್ಟಿಯಲ್ಲಿ 93ನೇ ಸ್ಥಾನದಲ್ಲಿದೆ. ಈ ಮೂಲಕ ಕಳಪೆ ಪ್ರದರ್ಶನ ತೋರಿದೆ. 2022ರಲ್ಲಿ ನಮ್ಮ ದೇಶ 40 ಅಂಕಗಳೊಂದಿಗೆ 85ನೇ ಸ್ಥಾನದಲ್ಲಿತ್ತು. ಈ ಬಾರಿ ಶ್ರೇಯಾಂಕದಲ್ಲಿ ಕುಸಿತ ದಾಖಲಾಗಿದೆ. ಇನ್ನು ನೆರೆಯ ಪಾಕಿಸ್ಥಾನ 29 ಅಂಕದೊಂದಿಗೆ 133ನೇ ಸ್ಥಾನದಲ್ಲಿದ್ದರೆ ಅಫ್ಘಾನಿಸ್ತಾನ 20 ಅಂಕಗಳೊಂದಿಗೆ 162ನೇ ಸ್ಥಾನದಲ್ಲಿದೆ. ಶ್ರೀಲಂಕಾ 34 ಅಂಕ ಪಡೆದಿದೆ. ಇತ್ತ ಚೀನಾ 76 ಅಂಕ ಪಡೆದು 42ನೇ ರ‍್ಯಾಂಕ್‌ ಪಡೆದು ಭಾರತದಿಂದ ಉತ್ತಮ ಸ್ಥಾನದಲ್ಲಿದೆ.

ಕಡಿಮೆ ಭ್ರಷ್ಟಾಚಾರ ಹೊಂದಿದ ಟಾಪ್‌ 10 ದೇಶಗಳು

ರ‍್ಯಾಂಕ್‌ದೇಶ
1ಡೆನ್ಮಾರ್ಕ್‌
2ಫಿನ್‌ಲ್ಯಾಂಡ್‌
3ನ್ಯೂಜಿಲ್ಯಾಂಡ್‌
4ನಾರ್ವೆ
5ಸಿಂಗಾಪುರ
6ಸ್ವೀಡನ್‌
6ಸ್ವಿಜರ್‌ಲ್ಯಾಂಡ್‌
8ನೆದರ್‌ಲ್ಯಾಂಡ್‌
9ಜರ್ಮನಿ
9ಲಕ್ಸಂಬರ್ಗ್‌

ಹೆಚ್ಚು ಭ್ರಷ್ಟಾಚಾರ ಹೊಂದಿದ ಟಾಪ್‌ 10 ದೇಶಗಳು

ರ‍್ಯಾಂಕ್‌ದೇಶ
180 ಸೋಮಾಲಿಯಾ
177ವೆನಿಜುಲಾ
177ಸಿರಿಯಾ
177ದಕ್ಷಿಣ ಸುಡಾನ್‌
176ಯೆಮನ್‌
172ಉತ್ತರ ಕೊರಿಯಾ
172ನಿಕಾರಗುವಾ
172ಹೈಟಿ
172ಇಕ್ವಟೋರಿಯಲ್‌ ಗಿನಿ
170ತುರ್ಕಮೆನಿಸ್ತಾನ್

ಇದನ್ನೂ ಓದಿ: Mohamed Muizzu: ಮುಹಮ್ಮದ್ ಮುಯಿಝು ಭಾರತದ ಜನತೆ, ಮೋದಿಯ ಕ್ಷಮೆ ಕೇಳಲು ಆಗ್ರಹ

Exit mobile version