ಬೆಂಗಳೂರು: ಬಿಜೆಪಿಗೆ (BJP) ಮಾನನಷ್ಟ (Defamation Case) ಮಾಡಿರುವ ಪ್ರಕರಣದಲ್ಲಿ ಎಸಿಎಂಎಂ ಕೋರ್ಟ್ (ACMM court) ಮುಂದೆ ಇಂದು ಹಾಜರಾದ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಶರತ್ತುಬದ್ಧ ಜಾಮೀನು (Bail) ಪಡೆದರು. ಪ್ರಕರಣದ ಇನ್ನೊಬ್ಬ ಆರೋಪಿ ರಾಹುಲ್ ಗಾಂಧಿ (Rahul Gandhi) ಗೈರು ಹಾಜರಾಗಿರುವ ಕುರಿತು ನ್ಯಾಯಾಧೀಶರು ಗರಂ ಆದರು.
ವಿಧಾನ ಪರಿಷತ್ ಸದಸ್ಯ, ಬಿಜೆಪಿ ರಾಜ್ಯ ಕಾರ್ಯದರ್ಶಿ ಎಸ್. ಕೇಶವ ಪ್ರಸಾದ್ ಅವರು ಸಲ್ಲಿಸಿರುವ ಖಾಸಗಿ ದೂರು ಇಂದು ವಿಚಾರಣೆಗೆ ಬಂದಿದ್ದು, ನ್ಯಾಯಾಧೀಶರ ಮುಂದೆ ಸಿಎಂ, ಡಿಸಿಎಂ ಹಾಜರಾದರು. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಮಾಡಿದ ಆರೋಪಗಳ ಹಿನ್ನೆಲೆಯಲ್ಲಿ ಕೈ ನಾಯಕರ ಮೇಲೆ ಮಾನನಷ್ಟ ಮೊಕದ್ದಮೆ ಹಾಕಲಾಗಿದೆ. ಪ್ರಕರಣದಲ್ಲಿ A1 ಕೆಪಿಸಿಸಿ, A2 ಡಿಕೆ ಶಿವಕುಮಾರ್, A3 ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ A4 ಆರೋಪಿಯಾಗಿದ್ದಾರೆ.
ವಿಚಾರಣೆಗೆ ಮುನ್ನ ಆಗಮಿಸಿದ ಸಿಎಂ ಹಾಗೂ ಡಿಸಿಎಂ, ಕೋರ್ಟ್ ಹಾಲ್ ಮುಂದೆ ಸಾಮಾನ್ಯರಂತೆ, ಜೊತೆಯಾಗಿ ಕುಳಿತರು. ನಂತರ ನ್ಯಾಯಾಲಯಕ್ಕೆ ಆಗಮಿಸಿದ ನ್ಯಾಯಾಧೀಶ ಕೆ. ಎನ್. ಶಿವಕುಮಾರ್ ಮುಂದೆ ಇಬ್ಬರೂ ಹಾಜರಾದರು. ಪಾರ್ಟಿ ಪ್ರೆಸಿಡೆಂಟ್ ಹಾಗೂ ಎರಡನೇ ಆರೋಪಿ ಒಂದೇ ಎಂದು ವಕೀಲರು ತಿಳಿಸಿದರು. ಇಬ್ಬರನ್ನೂ ಹೊರ ಹೋಗಬಹುದೆಂದು ಜಡ್ಜ್ ಸೂಚಿಸಿದರು. ಇಬ್ಬರಿಗೂ ಶರತ್ತುಬದ್ಧ ಜಾಮೀನು ಮಂಜೂರು ಮಾಡಲಾಯಿತು. ಡಿಸಿಎಂ ಪರ ಎಎಜಿ ಎಸ್.ಎ ಅಹಮದ್ ವಾದಿಸಿದರು.
ನಾಲ್ಕನೇ ಆರೋಪಿ ರಾಹುಲ್ ಗಾಂದಿ ದೆಹಲಿಯಲ್ಲಿದ್ದಾರೆ. ಇಂದು ಇಂಡಿಯಾ ಕೂಟದ ಮೀಟಿಂಗ್ ಇದೆ. ಹೀಗಾಗಿ ರಾಹುಲ್ ಗಾಂಧಿ ಹಾಜರಾಗಲಾಗುತ್ತಿಲ್ಲ. ನಾಲ್ಕನೇ ತಾರೀಕು ಚುನಾವಣೆ ರಿಸಲ್ಟ್ ಇದೆ. ಹೀಗಾಗಿ ಕಾಲಾವಕಾಶ ನೀಡುವಂತೆ ವಿನಂತಿಸಿದರು. ಹಾಗಿದ್ದರೆ ಇಂದೇ ಬಂದು ಮುಗಿಸಿಕೊಂಡು ಹೋಗಬಹುದಿತ್ತಲ್ಲ, ದೆಹಲಿಗೆ ಹೋಗೋದಕ್ಕೆ ಐದು ದಿನ ಬೇಕಾಗಿಲ್ಲವಲ್ಲ ಎಂದು ಜಡ್ಜ್ ಪ್ರಶ್ನಿಸಿದರು. ನಂತರ ಮಧ್ಯಾಹ್ನ ಮೂರು ಗಂಟೆಗೆ ತಮ್ಮ ಆದೇಶವನ್ನು ಕಾಯ್ದಿರಿಸಿದರು.
ದೂರುದಾರರ ಪರ ಹಾಜರಾದ ವಕೀಲ ವಿನೋದ್ ಕುಮಾರ್, “ನ್ಯಾಯಾಲಯದಿಂದ ಸಮನ್ಸ್ ಜಾರಿ ಆದಾಗ ಬರಬೇಕು. ಪದೇ ಪದೆ ಕಾರಣ ನೀಡಿದ್ರೆ ಹೇಗೆ? ಎರಡು ಮೂರು ಸಲ ವಿನಾಯಿತಿ ನೀಡಲು ಅವಕಾಶ ಇಲ್ಲ ಎಂದು ಕಾನೂನಿನಲ್ಲಿ ಸ್ಪಷ್ಟವಾಗಿ ಹೇಳಿದೆ. ಮುಂದೆಯೂ ಬೇರೆ ಬೇರೆ ಸಭೆ ಇದೆ ಅಂತ ಹಾಜರಾಗದೇ ಇರಬಹುದು. ಇವತ್ತಿಗೆ ಎಲೆಕ್ಷನ್ ಮುಗಿಯುತ್ತೆ. ರಾಹುಲ್ ಗಾಂಧಿ ರಾಷ್ಟ್ರೀಯ ನಾಯಕರೇ ಆಗಿರಲಿ, ಕಾನೂನಿನ ಮುಂದೆ ಎಲ್ಲರೂ ಒಂದೇ. ಹೀಗಾಗಿ ರಾಹುಲ್ ಗಾಂಧಿಗೆ ವಾರೆಂಟ್ ಜಾರಿ ಮಾಡಿ” ಎಂದು ಮನವಿ ಮಾಡಿದರು.
ಶರತ್ತುಬದ್ಧ ಜಾಮೀನು ಮಂಜೂರು ಹಿನ್ನೆಲೆಯಲ್ಲಿ ಸಿಎಂ ಹಾಗೂ ಡಿಸಿಎಂ ಶ್ಯೂರಿಟಿ ಪತ್ರಗಳಿಗೆ ಸಹಿ ಹಾಕಿ ತೆರಳಿದರು. “ನನಗೂ ಮತ್ತು ಸಿಎಂಗೆ ಸಮನ್ಸ್ ನೀಡಲಾಗಿತ್ತು. ಹೀಗಾಗಿ ಬಂದಿದ್ದೇವೆ. ರಾಹುಲ್ ಗಾಂಧಿ ಅವರು ಸಹ ಬರಬೇಕಿತ್ತು. ಆದರೆ INDIA ಕೂಟದ ಸಭೆ ಇದೆ. ರಾಹುಲ್ ಗಾಂಧಿ ಸಹ ಬರುತ್ತಾರೆ. ಅವರಿಗೆ ನ್ಯಾಯಾಂಗದ ಮೇಲೆ ಗೌರವ ಇದೆ. ನಾವು ಯಾರನ್ನೂ ರಕ್ಷಣೆ ಮಾಡಲ್ಲ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು.
ರಾಹುಲ್ ಗಾಂಧಿ ಅವರಿಗೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡದಂತೆ ಸುಪ್ರೀಂ ಕೋರ್ಟ್ ಆದೇಶ ಉಲ್ಲೇಖಿಸಿ ವಕೀಲ ಬಿ.ಎನ್ ಜಗದೀಶ್ ವಾದ ಮಂಡಿಸಿದರು.
ಏನಿದು ಪ್ರಕರಣ?
08-05-2023ರಂದು 42ನೇ ವಿಶೇಷ ನ್ಯಾಯಾಲಯದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಎಸ್. ಕೇಶವ ಪ್ರಸಾದ್ ಖಾಸಗಿ ದೂರ ದಾಖಲು ಮಾಡಿದ್ದರು. ಪ್ರಕರಣದಲ್ಲಿ A1 ಕೆಪಿಸಿಸಿ, A2 ಡಿಕೆ ಶಿವಕುಮಾರ್, A3 ಆರೋಪಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ A4 ಆರೋಪಿಯಾಗಿ ರಾಹುಲ್ ಗಾಂಧಿ ಅವರನ್ನು ಹೆಸರಿಸಲಾಗಿದೆ.
“ಬಿಜೆಪಿ ಸರ್ಕಾರ 2019ರಿಂದ 2023ರವರೆಗೆ ಭ್ರಷ್ಟ ಆಡಳಿತ ನಡೆಸಿತ್ತು. ಆಗಿನ ಸಿಎಂ ಹುದ್ದೆ ರೂ. 2500 ಕೋಟಿಗೆ ಮಾರಾಟವಾಗಿತ್ತು. ಮಂತ್ರಿಗಳ ಹುದ್ದೆ ರೂ. 500 ಕೋಟಿ ಬಿಜೆಪಿ ಹೈಕಮಾಂಡ್‌ಗೆ ನೀಡಿ ಪಡೆದಿದ್ದಾರೆ. ಈ ಮೂಲಕ ಭ್ರಷ್ಟಾಚಾರ ಮಾಡಿದ್ದಾರೆ. ಇದಲ್ಲದೆ ಕೋವಿಡ್ ಕಿಟ್ ಪೂರೈಕೆ ಟೆಂಡರ್‌ನಲ್ಲಿ 75% ಡೀಲ್ ನಡೆದಿದೆ. ಪಿಡಬ್ಲ್ಯೂಡಿ ಗುತ್ತಿಗೆ ಟೆಂಡರ್‌ಗಳಲ್ಲಿ 40% ಡೀಲ್, ಮಠಕ್ಕೆ ನೀಡುವ ಅನುದಾನದಲ್ಲಿ 30% ಡೀಲ್, ಉಪಕರಣಗಳ ಪೂರೈಕೆಯಲ್ಲಿ 40% ಡೀಲ್, ಮಕ್ಕಳಿಗೆ ನೀಡುವ ಮೊಟ್ಟೆ ಪೂರೈಕೆಯ ಟೆಂಡರ್‌ನಲ್ಲಿ 30% ಡೀಲ್, ರಸ್ತೆ ಕಾಮಗಾರಿಗಳ ಟೆಂಡರ್‌ನಲ್ಲಿ 40% ಡೀಲ್ ನಡೆದಿದೆ” ಎಂದು ಆರೋಪಿಸಿದ್ದರು.
ಪರ್ಸೆಂಟೇಜ್ ಲೆಕ್ಕದಲ್ಲಿ ಕಮಿಷನ್ ಪಡೆದ ಆರೋಪ ಮಾಡಿ ಈ ಬಗ್ಗೆ ಅನೇಕ ಜಾಹೀರಾತುಗಳನ್ನೂ ಕಾಂಗ್ರೆಸ್ ನೀಡಿತ್ತು. ಇದರಿಂದ ಬಿಜೆಪಿ ಪಕ್ಷಕ್ಕೆ ಅಪಮಾನವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡರ ವಿರುದ್ಧ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಕೇಶವ ಪ್ರಸಾದ್ ಐಪಿಸಿ 499, 500 ಅಡಿ ಖಾಸಗಿ ದೂರು ದಾಖಲು ಮಾಡಿದ್ದರು. ಈ ಬಗ್ಗೆ ವಾದ ಆಲಿಸಿ ಆರೋಪಿಗಳನ್ನು ಹಾಜರು ಪಡಿಸಲು ಕೋರ್ಟ್ ಸೂಚಿಸಿತ್ತು.
ಇದನ್ನೂ ಓದಿ: CM Siddaramaiah: ಸಿಎಂ, ಡಿಸಿಎಂ ಕೂಡ ಇಂದು ಕೋರ್ಟ್ ಕಟಕಟೆಯಲ್ಲಿ! ಏನಿದು ಕೇಸ್?