Site icon Vistara News

ಸಂಪಾದಕೀಯ | ಮತ್ತೆ ಕೋವಿಡ್ ಉಲ್ಬಣ ಸಾಧ್ಯತೆ: ಆತಂಕ ಬೇಡ, ಎಚ್ಚರ ವಹಿಸಿ

Coronavirus

ಕೊರೊನಾ ಎಂಬ ಸಾಂಕ್ರಾಮಿಕ ಕಾಯಿಲೆಯನ್ನು ಮರೆತು ಮುಂದೆ ಹೋಗೋಣ ಎಂದು ನಾವೆಲ್ಲ ಅಂದುಕೊಳ್ಳುತ್ತಿರುವಾಗಲೇ ಅದು ಮತ್ತೆ ಅವತರಿಸಿದೆ. ಚೀನಾದಲ್ಲಿ ಸಾಂಕ್ರಾಮಿಕ ಪರಿಸ್ಥಿತಿ ಭೀಕರವಾಗಿದೆ ಎಂದು ಇದುವರೆಗಿನ ವರದಿಗಳಿಂದ ತಿಳಿದುಬಂದಿದೆ. ಇದುವರೆಗೆ ಅಲ್ಲಿ 3.86 ಲಕ್ಷ ಜನರಿಗೆ ಕೊರೊನಾ ತಗುಲಿದೆ. ಈ ಅಲೆಯಲ್ಲಿ 5,241 ಜನ ಇದುವರೆಗೆ ಮೃತಪಟ್ಟಿದ್ದಾರೆ. ಅಕ್ಟೋಬರ್‌ನಿಂದಲೇ ಅಲ್ಲಿ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಕಳೆದ ಒಂದು ವಾರದಿಂದ ಏಕಾಏಕಿ ಏರಿಕೆ ಪ್ರಮಾಣ ಹೆಚ್ಚಾಗಿದೆ. ನಿತ್ಯ 1 ಸಾವಿರದಿಂದ 5 ಸಾವಿರದವರೆಗೆ ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಇದು ಜಾಗತಿಕವಾಗಿ ಲಭ್ಯವಾದ ಮಾಹಿತಿಯಾದರೂ, ಅಲ್ಲಿನ ವಾಸ್ತವ ಸ್ಥಿತಿ ಯಾರಿಗೂ ಗೊತ್ತಿಲ್ಲ. ಇದರಿಂದ ಇತರ ದೇಶಗಳೂ ಬೆಚ್ಚಿಬಿದ್ದಿದ್ದು, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಭಾರತದಲ್ಲೂ ಮೂವರಿಗೆ ಓಮಿಕ್ರಾನ್‌ ಉಪತಳಿ ದೃಢಪಟ್ಟಿದ್ದು, ಆತಂಕ ಹೆಚ್ಚಾಗಿದೆ. ಗುಜರಾತ್‌ನ ವಡೋದರಾದಲ್ಲಿ ಇಬ್ಬರಿಗೆ ಹಾಗೂ ಒಡಿಶಾದಲ್ಲಿ ಒಬ್ಬರಿಗೆ ಬಿಎಫ್‌.7 ಉಪತಳಿ ದೃಢಪಟ್ಟಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಂಡಾವಿಯ ಅವರು ತುರ್ತು ಸಭೆ ನಡೆಸಿದ್ದು, ಅಗತ್ಯ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಸೂಚಿಸಿದ್ದಾರೆ. ಭಾರತದ ವಿಮಾನ ನಿಲ್ದಾಣಗಳಿಗೆ ಆಗಮಿಸುವ ವಿದೇಶಿ ಪ್ರಯಾಣಿಕರ ತಪಾಸಣೆಗೆ ಸೂಚಿಸಲಾಗಿದೆ.

ಚೀನಾದ ಕೊರೊನಾ ಪರಿಸ್ಥಿತಿ ಬಗ್ಗೆ ವೈರಾಣು ತಜ್ಞರು ನೀಡಿರುವ ವರದಿಯಲ್ಲಿ, ಅಲ್ಲಿ ಮುಂದಿನ ಮೂರು ತಿಂಗಳಲ್ಲಿ ಶೇ.60ರಷ್ಟು ಜನರಿಗೆ ಸೋಂಕು ತಗುಲಲಿದೆ. ಹಾಗೆಯೇ, ಸುಮಾರು 9.6 ಲಕ್ಷ ಜನ ಸೋಂಕಿಗೆ ಬಲಿಯಾಗಲಿದ್ದಾರೆ. ತೀವ್ರತರ ಪ್ರಸರಣದಿಂದಾಗಿ ಜಗತ್ತಿನ ಶೇ.10ರಷ್ಟು ಜನರನ್ನು ಸೋಂಕು ಬಾಧಿಸಲಿದೆ ಎಂದು ಎಚ್ಚರಿಸಿದ್ದಾರೆ. ಇದು ಆತಂಕದ ಮೂಲ. ಚೀನಾದ ವುಹಾನ್‌ನಲ್ಲಿ ಪತ್ತೆಯಾದ ಒಂದೇ ಒಂದು ಕೋವಿಡ್‌ ವೈರಸ್‌ ರಕ್ತಬೀಜಾಸುರನಂತೆ ಬೆಳೆದು ಇಡೀ ಜಗತ್ತನ್ನೇ ಕಂಗೆಡಿಸಿದ್ದನ್ನು ನಾವು ಕಂಡಿದ್ದೇವೆ. ಹೀಗಾಗಿ ಈಗ ಯಾವುದೇ ಎಚ್ಚರಿಕೆಯನ್ನು ಕಡೆಗಣಿಸುವಂತೆಯೇ ಇಲ್ಲ. ಭಾರತದಲ್ಲಿ ಸದ್ಯದ ಕೊರೊನಾ ಪ್ರಕರಣಗಳ ನಿಯಂತ್ರಣದಲ್ಲಿವೆ. ಹಾಗೆಂದು ಮೈಮರೆಯುವಂತೆಯೂ ಇಲ್ಲ. ದೇಶದಲ್ಲಿ ಸದ್ಯ 3,490 ಸಕ್ರಿಯ ಪ್ರಕರಣಗಳಿವೆ. ಇವುಗಳಲ್ಲಿ ಕರ್ನಾಟಕದಲ್ಲಿ 1,275 ಹಾಗೂ ಕೇರಳದಲ್ಲಿ 1,448 ಸಕ್ರಿಯ ಕೇಸ್‌ಗಳಿವೆ. ಕಳೆದ 24 ಗಂಟೆಗಳಲ್ಲಿ 69 ಹೊಸ ಕೇಸ್‌ ದಾಖಲಾಗಿವೆ. ಇದೀಗ ಚೀನಾದ ಹಿನ್ನೆಲೆಯಲ್ಲಿ, ಹೆಚ್ಚಿನ ಜನ ಸೇರುವ ಪ್ರದೇಶದಲ್ಲಿ ಮಾಸ್ಕ್‌ ಧರಿಸಬೇಕು, ಬೂಸ್ಟರ್‌ ಡೋಸ್‌ ಹಾಕಿಸಿಕೊಳ್ಳಬೇಕು ಎಂದು ಮಾರ್ಗಸೂಚಿ ಪ್ರಕಟಿಸಲಾಗಿದೆ.

ಹೋಲಿಸಿ ನೋಡಿದರೆ ಚೀನಾಕ್ಕಿಂತಲೂ ಭಾರತ ಕೊರೊನಾವನ್ನು ವ್ಯವಸ್ಥಿತವಾಗಿ ಎದುರಿಸಿದೆ. ಚೀನಾದ ಎರಡನೇ ಅಲೆಯ ಸಂದರ್ಭದಲ್ಲಿ ತೀವ್ರಗತಿಯ ಏರಿಕೆಯಿಂದಾಗಿ ಆರೋಗ್ಯ ವ್ಯವಸ್ಥೆ ತುಸು ಏರುಪೇರಾಗಿದ್ದು ನಿಜ. ಆದರೆ ಇದು ಅಮೆರಿಕದಂಥ ಸರ್ವಾಧುನಿಕ ದೇಶಗಳಲ್ಲೂ ಸಂಭವಿಸಿದೆ. ಈ ಹಿಂದಿನ ಅಲೆಗಳನ್ನು ಕಠಿಣ ಲಾಕ್‌ಡೌನ್‌ ಮೂಲಕ ಎದುರಿಸಿದ ಚೀನಾ ಕಡೆಗೂ ಈ ವೈರಸ್‌ ಅನ್ನು ಎದುರಿಸಬೇಕಾಗಿ ಬಂದಿದೆ; ಪ್ರತೀ ವ್ಯಕ್ತಿಯೂ ಈ ವೈರಸ್‌ ಅನ್ನು ಎದುರಿಸಲೇಬೇಕಾಗಿದೆ ಎಂಬುದೇ ಇದರ ಅರ್ಥ. ಜನಸಮೂಹದಲ್ಲಿ ಬೆಳೆಯುವ ಪ್ರತಿಕಾಯಗಳೇ ಈ ವೈರಸ್ಸನ್ನು ಶಾಶ್ವತವಾಗಿ ಎದುರಿಸುವ ಅಸ್ತ್ರ. ನಮ್ಮಲ್ಲಿ ಬಹುತೇಕ ಜನ ಎರಡು ಲಸಿಕೆ ಹಾಕಿಕೊಂಡಿದ್ದಾರೆ. ಕೆಲವರು ಇದರ ಜತೆಗೆ ಬೂಸ್ಟರ್ ಡೋಸ್ ಕೂಡ ಹಾಕಿಕೊಂಡಿದ್ದಾರೆ. ಹಾಗಾಗಿ ನಮ್ಮಲ್ಲಿ ಆತಂಕ ಪಡಬೇಕಿಲ್ಲ. ಕಳೆದ ಬಾರಿಯ ಪಾಠ, ಅನುಭವ ನಮ್ಮೊಂದಿಗಿದೆ. ಸರಕಾರ ಕೂಡ ಕಳೆದ ಬಾರಿಯ ಲೋಪಗಳಿಂದ ಪಾಠ ಕಲಿತು ಪ್ರಮಾದ ಆಗದಂತೆ ಈ ರೋಗವನ್ನು ನಿಭಾಯಿಸಬೇಕು. ಆಕ್ಸಿಜನ್‌ ಪೂರೈಕೆಯ ಕೊರತೆಯಾಗದಂತೆ, ಹಿರಿಯ ನಾಗರಿಕರು ಕ್ಷೇಮವಾಗಿರುವಂತೆ ನೋಡಿಕೊಳ್ಳಬೇಕು. ವಿದೇಶಿ ಪ್ರವಾಸಿಗರನ್ನು ಸಂಪೂರ್ಣವಾಗಿ ತಪಾಸಣೆಗೆ ಒಳಪಡಿಸಬೇಕು. ಲಾಕ್‌ಡೌನ್, ಶಾಲೆ ಬಂದ್ ಇತ್ಯಾದಿ ಕ್ರಮ ಜಾರಿ ಮಾಡುವಾಗ ಆತುರ ಮಾಡದೆ, ಅವು ಜನತೆಯ ಜೀವ ಹಿಂಡುವಂತಾಗದೆ, ಎಲ್ಲ ಕೋನಗಳಿಂದ ಪರಿಶೀಲನೆ ನಡೆಸಬೇಕು. ಅಂದೇ ನಾವು ಕಲಿತಿರುವ ಕೈಗಳ ಸ್ವಚ್ಛತೆ, ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಇತ್ಯಾದಿ ಸರಳ ನಿಯಮ ಪಾಲನೆಗಳ ಮೂಲಕ ನಾವು ಈ ಸಾಂಕ್ರಾಮಿಕ ರೋಗದಿಂದ ದೂರ ಇರಲು ಸಾಧ್ಯವಿದೆ. ಆತಂಕ ಹಬ್ಬಿಸುವ ಕೆಲಸವನ್ನಂತೂ ಯಾರೂ ಮಾಡಲೇಬಾರದು.

ಇದನ್ನೂ ಓದಿ | ಸಂಪಾದಕೀಯ | ಕಬ್ಬು ಬೆಳೆಗಾರರ ಸಮಸ್ಯೆಗೆ ಸರ್ಕಾರ ಸ್ಪಂದಿಸಲಿ

Exit mobile version