Site icon Vistara News

Covishield: ಭಾರತದಲ್ಲೂ ಎಲ್ಲಾ ಕೋವಿಡ್ ಲಸಿಕೆಗಳ ಸೈಡ್‌ ಎಫೆಕ್ಟ್‌ ಪರಿಶೀಲಿಸಿ: ವೈದ್ಯರ ಒತ್ತಾಯ

Covishield Vaccine

ಹೊಸದಿಲ್ಲಿ: ಔಷಧೀಯ ದಿಗ್ಗಜ ಆಸ್ಟ್ರಾಜೆನೆಕಾ (AstraZeneca) ತನ್ನ ಕೋವಿಡ್ ಲಸಿಕೆ (Covid Vaccine) ಅಪರೂಪದ ಸಂದರ್ಭಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ (Blood clotting) ಕಾರಣವಾಗಬಹುದು ಎಂದು ಯುಕೆ ನ್ಯಾಯಾಲಯದಲ್ಲಿ ಒಪ್ಪಿಕೊಂಡ ಹಿನ್ನೆಲೆಯಲ್ಲಿ, ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಕೋವಿಶೀಲ್ಡ್ ಲಸಿಕೆಯ (Covishield Vaccine) ಸುರಕ್ಷತೆಯ ಬಗ್ಗೆಯೂ ಭಾರತೀಯ ವೈದ್ಯರ ಗುಂಪು ತೀವ್ರ ಕಳವಳ ವ್ಯಕ್ತಪಡಿಸಿದೆ.

ʼಅವೇಕನ್ ಇಂಡಿಯಾ ಮೂವ್‌ಮೆಂಟ್ʼ (ಎಐಎಂ) ಬ್ಯಾನರ್‌ನಡಿಯಲ್ಲಿ ಒಗ್ಗೂಡಿರುವ ವೈದ್ಯರು, ಎಲ್ಲಾ ಕೋವಿಡ್ ಲಸಿಕೆಗಳ ಹಿಂದಿನ ವೈಜ್ಞಾನಿಕತೆಯನ್ನು ಪರಿಶೀಲಿಸಲು, ಅವುಗಳ ವಾಣಿಜ್ಯೀಕರಣದ ಪ್ರಮಾಣವನ್ನು ಲೆಕ್ಕ ಹಾಕಲು, ಜೊತೆಗೆ ಲಸಿಕೆಯ ಅಡ್ಡ ಪರಿಣಾಮಗಳ (side effects) ಮೇಲೆ ನಿಗಾ ಇಡಲು ಸಕ್ರಿಯ ಕಣ್ಗಾವಲು ಮತ್ತು ಮೇಲ್ವಿಚಾರಣೆ ಕಾರ್ಯವಿಧಾನ ರೂಢಿಸಿಕೊಳ್ಳಲು ಸರ್ಕಾರವನ್ನು ಒತ್ತಾಯಿಸಿದ್ದಾರೆ.

“ಸರ್ಕಾರವು ಕೋವಿಡ್ ಲಸಿಕೆ ನೀಡುವಿಕೆಯ ನಂತರದ ದುರಂತ ಸಾವಿನ ಪ್ರಕರಣಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ವೈಜ್ಞಾನಿಕ ತನಿಖೆ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರದ ಮೂಲ ಪರಿಶೀಲಿಸದೆ ಕೋವಿಡ್ ಲಸಿಕೆಗಳನ್ನು ʼಸುರಕ್ಷಿತ ಮತ್ತು ಪರಿಣಾಮಕಾರಿʼ ಎಂದು ಪ್ರಚಾರ ಮಾಡುವುದನ್ನು ಮುಂದುವರೆಸಿದೆ” ಎಂದು ವಿಕಿರಣಶಾಸ್ತ್ರಜ್ಞ ಮತ್ತು ತರುಣ್ ಕೊಠಾರಿ ಹೇಳಿದ್ದಾರೆ.

ಥ್ರಂಬೋಸಿಸ್ ವಿತ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (ಟಿಟಿಎಸ್) ಎಂಬ ಕೋವಿಡ್ ಲಸಿಕೆಯ ಅಡ್ಡ ಪರಿಣಾಮದ ಬಗ್ಗೆ ಈಗ ಜಗತ್ತು ತಿಳಿಯುತ್ತಿದೆ. ಕೋವಿಡ್-19 ಲಸಿಕೆಗಳನ್ನು ನೀಡುತ್ತಿರುವಾಗ, ಹಂತ-3 ಪ್ರಯೋಗಗಳನ್ನು ಪೂರ್ಣಗೊಳಿಸದೆಯೇ ಇದನ್ನು ಮಾಡಲಾಗುತ್ತಿದೆ ಎಂದು ಅನೇಕ ಜನರಿಗೆ ತಿಳಿದಿರಲಿಲ್ಲ. ಕೋವಿಡ್-19 ಲಸಿಕೆಗಳ ತಯಾರಕರು ಅಲ್ಪಾವಧಿಯ ಅಥವಾ ದೀರ್ಘಾವಧಿಯ ಅಡ್ಡಪರಿಣಾಮಗಳು ಅಥವಾ ಸಾವುಗಳ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ಡೇಟಾವನ್ನು ಹೊಂದಿರದೆ ಲಸಿಕೆ ನೀಡಲು ಪ್ರಾರಂಭಿಸಿದ್ದರು ಎಂದು ಸ್ತ್ರೀರೋಗತಜ್ಞ ಮತ್ತು ಆಂಕೊಲಾಜಿಸ್ಟ್ ಡಾ ಸುಜಾತಾ ಮಿತ್ತಲ್ ಹೇಳಿದ್ದಾರೆ.

ಲಸಿಕೆ ಬಳಿಕ ಸಾವಿರಾರು ಮಹಿಳೆಯರು ತಮ್ಮ ಋತುಚಕ್ರದಲ್ಲಿ ಅಸಹಜತೆಗಳನ್ನು ವರದಿ ಮಾಡಿದ್ದಾರೆ. ಇದು ಸೆಪ್ಟೆಂಬರ್ 2022ರಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಕಂಡುಬಂದಿದೆ ಎಂದು ಅವರು ಹೇಳಿದರು.

“ಅವೇಕನ್ ಇಂಡಿಯಾ ಮೂವ್‌ಮೆಂಟ್ (ಎಐಎಂ) ಭಾರತದಲ್ಲಿ ಕೋವಿಡ್ ಲಸಿಕೆ ಸಾವಿನ ವಿವರಗಳನ್ನು ಸಂಗ್ರಹಿಸುತ್ತಿದೆ. ಲಸಿಕೆ ಪ್ರಾರಂಭವಾದ 2021ರಿಂದ ದೇಶದ ವಿವಿಧ ಉನ್ನತ ಅಧಿಕಾರಿಗಳಿಂದ ಈ ಮಾಹಿತಿಯನ್ನು ಪಡೆಯುತ್ತಿದೆ. ಸರ್ಕಾರ ನಮಗೆ ಪ್ರತಿಕ್ರಿಯಿಸಲು ವಿಫಲವಾಗಿದೆ” ಎಂದು ಡಾ. ಕೊಥಾರಿ ಹೇಳಿದರು.

ಲಸಿಕೆ ತಯಾರಕ ಕಂಪನಿಗಳನ್ನೂ ಹೊಣೆಯಾಗಿಸಿಕೊಂಡು, ಕೋವಿಡ್ ಲಸಿಕೆಗಳ ಬಲಿಪಶುಗಳ ಕುಟುಂಬ ಸದಸ್ಯರಿಗೆ ಪರಿಹಾರವನ್ನು ನೀಡುವಂತೆ AIM ಭಾರತ ಸರ್ಕಾರವನ್ನು ಒತ್ತಾಯಿಸಿದೆ. “ಲಸಿಕೆಯಿಂದ ಅಸ್ವಸ್ಥಗೊಂಡವರು ಮತ್ತು ಅವರ ಕುಟುಂಬಗಳಿಗೆ ತ್ವರಿತ ನ್ಯಾಯ ಒದಗಿಸಲು ತ್ವರಿತ ನ್ಯಾಯಾಲಯಗಳು ಮತ್ತು ಲಸಿಕೆ ನ್ಯಾಯಾಲಯಗಳನ್ನು ಸ್ಥಾಪಿಸಲು ನಾವು ಒತ್ತಾಯಿಸುತ್ತೇವೆ” ಎಂದು ಡಾ. ಮಿತ್ತಲ್ ಹೇಳಿದರು.

ಲಸಿಕೆ ಅಡ್ಡ ಪರಿಣಾಮ ಘಟನೆಗಳನ್ನು ಸಾಧ್ಯವಾದಷ್ಟು ಬೇಗ ಗುರುತಿಸಲು ಸಕ್ರಿಯ ಕಣ್ಗಾವಲು ಮತ್ತು ಮೇಲ್ವಿಚಾರಣಾ ಕಾರ್ಯವಿಧಾನಗಳನ್ನು ಅಳವಡಿಸಬೇಕು. ಆರಂಭಿಕ ಚಿಕಿತ್ಸಾ ಪ್ರೋಟೋಕಾಲ್‌ಗಳನ್ನು ರೂಪಿಸಬೇಕು ಮತ್ತು ವ್ಯಾಪಕವಾಗಿ ಪ್ರಚಾರ ಮಾಡಬೇಕು. ಇದರಿಂದ ಜೀವಗಳನ್ನು ಉಳಿಸಬಹುದು ಎಂದು ಅವರು ಹೇಳಿದರು.

ಬ್ರಿಟನ್‌ ಅಸ್ಟ್ರಾಜೆನೆಕಾ ತನ್ನ ಕೋವಿಶೀಲ್ಡ್‌ ಲಸಿಕೆಯನ್ನು ಜಾಗತಿಕವಾಗಿ ಹಿಂತೆಗೆದುಕೊಳ್ಳಲು ಪ್ರಾರಂಭಿಸಿದೆ. ಇದನ್ನು ಭಾರತದಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಹಭಾಗಿತ್ವದಲ್ಲಿ ʼಕೋವಿಶೀಲ್ಡ್’ ಎಂದು ಒದಗಿಸಲಾಗಿದೆ. ಇದು ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪ್ಲೇಟ್‌ಲೆಟ್‌ಗಳನ್ನು ಕಡಿಮೆ ಮಾಡುವ ಅಪರೂಪದ ಅಡ್ಡಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ಕಂಪನಿ ಒಪ್ಪಿಕೊಂಡಿದೆ.

ಭಾರತದಲ್ಲಿ, ಕಂಪನಿಯ ಪಾಲುದಾರ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಡಿಸೆಂಬರ್ 2021ರಿಂದ ಕೋವಿಶೀಲ್ಡ್‌ನ ಹೆಚ್ಚುವರಿ ಡೋಸ್‌ಗಳ ತಯಾರಿಕೆ ಮತ್ತು ಪೂರೈಕೆಯನ್ನು ನಿಲ್ಲಿಸಿದೆ ಎಂದು ಹೇಳಿದೆ. ಆದರೆ 2021ರಲ್ಲಿಯೇ ಲಸಿಕೆಯ ಪ್ಯಾಕೇಜಿಂಗ್ ಇನ್ಸರ್ಟ್‌ನಲ್ಲಿ TTS ಸೇರಿದಂತೆ ಎಲ್ಲಾ ಅಪರೂಪದ ಮತ್ತು ಅತ್ಯಂತ ಅಪರೂಪದ ಅಡ್ಡಪರಿಣಾಮಗಳನ್ನು ತಿಳಿಸಲಾಗಿದೆ ಎಂದು ಪುನರುಚ್ಚರಿಸಿದೆ. ಕೋವಿಶೀಲ್ಡ್‌ ಲಸಿಕೆಯನ್ನು ಅಸ್ಟ್ರಾಜೆನೆಕಾ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದೊಂದಿಗೆ ಸೇರಿ ಅಭಿವೃದ್ಧಿಪಡಿಸಿದೆ. ಇದನ್ನು ಯುರೋಪ್‌ನಲ್ಲಿ ವ್ಯಾಕ್ಸ್‌ಜೆವ್ರಿಯಾ ಎಂದು ಮಾರಾಟ ಮಾಡಲಾಯಿತು.

ಇದನ್ನೂ ಓದಿ: Covishield: ಭಾರತದಲ್ಲಿ ಕೋವಿಶೀಲ್ಡ್‌ ಸೈಡ್‌ ಎಫೆಕ್ಟ್‌ನ ಎಲ್ಲ ಮಾಹಿತಿ ಬಹಿರಂಗ ಎಂದ ಕಂಪನಿ, ಉತ್ಪಾದನೆಯೂ ಸ್ಥಗಿತ!

Exit mobile version