Site icon Vistara News

ವಿಸ್ತಾರ ಸಂಪಾದಕೀಯ: ಕೋವಿಶೀಲ್ಡ್‌ ಲಸಿಕೆಯ ಅಡ್ಡ ಪರಿಣಾಮ ಆತಂಕಕಾರಿ

Covishield Vaccine

ಕೊರೊನಾ ಸೋಂಕು (coronavirus, Covid 19) ಎದುರಿಸಲು ನಾವು ನೀವೆಲ್ಲ ತೆಗೆದುಕೊಂಡ ಕೋವಿಶೀಲ್ಡ್‌ ಲಸಿಕೆ (Covishield Vaccine) ಅಡ್ಡ ಪರಿಣಾಮವನ್ನು (Side effects) ಹೊಂದಿದೆ ಎಂದು ಸ್ವತಃ ಅದನ್ನು ತಯಾರಿಸಿದ ಕಂಪನಿಯೇ ಇದೀಗ ಒಪ್ಪಿಕೊಂಡಿದೆ. ಇದರೊಂದಿಗೆ, ಕೊರೊನಾ ನಂತರದ ದಿನಗಳ ಅಸ್ವಸ್ಥತೆ, ಹೃದಯಾಘಾತಗಳ ಬಗ್ಗೆ ಮೂಡಿದ್ದ ಆತಂಕಕ್ಕೆ ಇನ್ನಷ್ಟು ಆಧಾರ ದೊರೆತಿದೆ. ಬ್ರಿಟಿಷ್ ಫಾರ್ಮಾ ದೈತ್ಯ ಅಸ್ಟ್ರಾಜೆನೆಕಾ (AstraZeneca) ತನ್ನ ಕೋವಿಡ್ ಲಸಿಕೆ ಕೋವಿಶೀಲ್ಡ್‌ ಅಪರೂಪವಾಗಿ ಅಡ್ಡ ಪರಿಣಾಮವನ್ನು ಉಂಟುಮಾಡಬಹುದು ಎಂದು ನ್ಯಾಯಾಲಯದಲ್ಲಿ ಒಪ್ಪಿಕೊಂಡಿದೆ. ರಕ್ತ ಹೆಪ್ಪುಗಟ್ಟುವಿಕೆ ಮತ್ತು ರಕ್ತದಲ್ಲಿ ಪ್ಲೇಟ್‌ಲೆಟ್ ಕಡಿಮೆಯಾಗುವ ಪರಿಸ್ಥಿತಿಯನ್ನು ಉಂಟುಮಾಡಬಹುದು ಎಂದು ಲಸಿಕೆ ತಯಾರಕರು ಹೇಳಿದ್ದಾರೆ. ಆದರೆ ಇದು ಅಪರೂಪದ ಸಂದರ್ಭಗಳಲ್ಲಿ ಆಗಬಹುದು ಎಂದಿದ್ದಾರೆ.

ಸಾಂಕ್ರಾಮಿಕ ಸಮಯದಲ್ಲಿ ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ಅಭಿವೃದ್ಧಿಪಡಿಸಲಾದ ಕೋವಿಶೀಲ್ಡ್ ಅನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸಿತ್ತು. ಭಾರತದಲ್ಲಿ ವ್ಯಾಪಕವಾಗಿ ಬಳಕೆಯಾದ ಲಸಿಕೆ ಇದೇ ಆಗಿದೆ. ಅಸ್ಟ್ರಾಜೆನೆಕಾ ಯುಕೆಯಲ್ಲಿ ತನ್ನ ಲಸಿಕೆಯು ಹಲವಾರು ಪ್ರಕರಣಗಳಲ್ಲಿ ಸಾವುಗಳು ಮತ್ತು ತೀವ್ರ ಅಸ್ವಸ್ಥತೆಗೆ ಕಾರಣವಾಯಿತು ಎಂಬ ಆರೋಪದ ಮೇಲೆ ಮೊಕದ್ದಮೆಯನ್ನು ಎದುರಿಸುತ್ತಿದೆ. 51 ಪ್ರಕರಣಗಳಲ್ಲಿ ಸಂತ್ರಸ್ತರು ಲಕ್ಷಗಟ್ಟಲೆ ಪೌಂಡ್‌ ನಷ್ಟ ಪರಿಹಾರ ಬಯಸಿದ್ದಾರೆ. ಅಸ್ಟ್ರಾಜೆನೆಕಾ ಒಪ್ಪಿಕೊಂಡಿರುವ ಆರೋಗ್ಯ ಸಮಸ್ಯೆಯ ಹೆಸರು ಥ್ರಂಬೋಸಿಸ್ ವಿಥ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (Thrombosis with Thrombocytopenia Syndrome– TTS). ಇದರಲ್ಲಿ ದೇಹದಲ್ಲಿನ ಅಸಾಮಾನ್ಯ ಸ್ಥಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಉಂಟಾಗುತ್ತದೆ. ರಕ್ತದಲ್ಲಿನ ಪ್ಲೇಟ್‌ಲೆಟ್‌ಗಳ ಸಂಖ್ಯೆಯು ಕಡಿಮೆಯಾಗುತ್ತದೆ. ಪ್ಲೇಟ್‌ಲೆಟ್‌ಗಳು ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುವ ಸಣ್ಣ ಕೋಶಗಳು. ಆದ್ದರಿಂದ ಅವು ತುಂಬಾ ಕಡಿಮೆ ಇರುವುದು ಅಪಾಯಕಾರಿ. ದೇಹದ ರೋಗನಿರೋಧಕ ವ್ಯವಸ್ಥೆಯು ಲಸಿಕೆಗೆ ಪ್ರತಿಕ್ರಿಯಿಸಿ, ರಕ್ತದ ಹೆಪ್ಪುಗಟ್ಟುವಿಕೆಯಲ್ಲಿ ಒಳಗೊಂಡಿರುವ ಪ್ರೋಟೀನ್ ಮೇಲೆ ದಾಳಿ ಮಾಡುವ ಪ್ರತಿಕಾಯಗಳನ್ನು ತಯಾರಿಸುವುದರಿಂದ TTS ಸಂಭವಿಸುತ್ತದೆ.

ಕೋವಿಡ್‌ ನಂತರದ ದಿನಗಳಲ್ಲಿ ಯುವಜನರಲ್ಲಿಯೂ ವಿವರಿಸಲಾಗದ ತೀವ್ರ ಅಸ್ವಸ್ಥತೆ, ಹೃದಯಸ್ತಂಭನ ಮುಂತಾದವುಗಳು ಕಂಡುಬಂದಿವೆ. ಭಾರತದಲ್ಲಿಯೂ ಹಲವಾರು ಪ್ರಕರಣಗಳು ನಡೆದಿದ್ದು, ಕೋವಿಡ್‌ ಹಾಗೂ ಅದರ ಲಸಿಕೆಯ ಬಗ್ಗೆ ಅನುಮಾನ ಮೂಡಿಸಿದ್ದವು. ಕಳೆದ ವರ್ಷ ಕೇಂದ್ರ ಸರ್ಕಾರ, “ಕೊರೊನಾ ವೇಳೆ ಸಾವು ಗೆದ್ದು ಬಂದವರು ಜಾಸ್ತಿ ಕೆಲಸ ಮಾಡಬಾರದು” ಎಂದು ಸೂಚಿಸಿತ್ತು. “ಕೊರೊನಾ ಸೋಂಕು ತಗುಲಿ, ಐಸಿಯುನಲ್ಲಿ ಚಿಕಿತ್ಸೆ ಪಡೆಯುವುದು ಸೇರಿ ಆರೋಗ್ಯ ಸ್ಥಿತಿ ಗಂಭೀರವಾಗಿ, ಬದುಕಿ ಬಂದವರು ಯಾವುದೇ ಕಾರಣಕ್ಕೂ ಹೆಚ್ಚು ದಣಿಯುವ ಕೆಲಸ ಮಾಡಬಾರದು. ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ICMR) ಅಧ್ಯಯನ ವರದಿ ಪ್ರಕಾರ, ಹೃದಯಾಘಾತದ ಭೀತಿ ಇರುವ ಕಾರಣ ಒಂದಷ್ಟು ಸಮಯದವರೆಗೆ ಕೊರೊನಾ ಸೋಂಕಿತರು ಹೆಚ್ಚು ಸಮಯದವರೆಗೆ ಅಥವಾ ಹೆಚ್ಚು ಭಾರ ಹೊರುವ ಕೆಲಸ ಮಾಡಬಾರದು. ಒಂದು ವರ್ಷ ಅಥವಾ ಎರಡು ವರ್ಷಗಳವರೆಗೆ ಇಂತಹ ವ್ಯಕ್ತಿಗಳು ಅತಿಯಾದ ವ್ಯಾಯಾಮ, ಜಿಮ್‌ನಲ್ಲಿ ವರ್ಕೌಟ್‌ ಕೂಡ ಮಾಡಬಾರದು” ಎಂದು ಅಧ್ಯಯನ ವರದಿ ಉಲ್ಲೇಖಿಸಿ ಕೇಂದ್ರ ಆರೋಗ್ಯ ಸಚಿವರು ತಿಳಿಸಿದ್ದರು.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಭಾರತದ ಉತ್ಪನ್ನಗಳ ರಫ್ತಿಗೆ ಕುಖ್ಯಾತಿ ಅಂಟದಿರಲಿ

ಕೊರೊನಾ ಸೋಂಕಿನ ನಂತರ ಹೃದಯಾಘಾತ ಪ್ರಮಾಣ ಏರಿಕೆಯಾಗಿರುವುದನ್ನು ಜಾಗತಿಕ ವರದಿಗಳೇ ದೃಢಪಡಿಸಿವೆ. ಜಾಗತಿಕ ವರದಿಯೊಂದರ ಪ್ರಕಾರ, ಸಾಂಕ್ರಾಮಿಕದ ನಂತರ 24-45 ವರ್ಷದೊಳಗಿನವರಲ್ಲಿ ಹೃದಯಾಘಾತ ಪ್ರಮಾಣ ಶೇ.30ರಷ್ಟು ಏರಿಕೆಯಾಗಿದೆ. ಆ ಮೂಲಕ ಅಂತಾರಾಷ್ಟ್ರೀಯವಾಗಿಯೂ ಕೊರೊನಾ ನಂತರ ಹೃದಯಾಘಾತ ಪ್ರಮಾಣ ಹೆಚ್ಚಾಗಿದೆ ಎಂಬುದು ದೃಢಪಟ್ಟಿದೆ. ಕೊರೊನಾ ನಂತರ ಹೃದಯಾಘಾತ ಪ್ರಮಾಣ ಶೇ.3ರಿಂದ ಶೇ.5ರಷ್ಟು ಏರಿಕೆಯಾಗಿದೆ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕರಾಗಿದ್ದ ಡಾ.ಸಿ.ಎನ್.ಮಂಜುನಾಥ್‌ ಕೂಡ ಹೇಳಿದ್ದರು. ಈಗ ಯುವಕರಿಗೂ ಹೃದಯಾಘಾತ ಹೆಚ್ಚುತ್ತಿದೆ. ಅಧಿಕ ಒತ್ತಡ, ಜೀವನ ಶೈಲಿ, ಆಹಾರ ಶೈಲಿ ಇದಕ್ಕೆ ಕಾರಣವಾಗಿದೆ ಎಂದಿದ್ದಾರೆ. ಇದರ ಜೊತೆಗೆ ಕೋವಿಶೀಲ್ಡ್‌ ಲಸಿಕೆಯ ಅಡ್ಡ ಪರಿಣಾಮ ಕೂಡ ಸೇರಿಕೊಂಡಿರುವುದು ಆತಂಕಕಾರಿ.

ಇವೆಲ್ಲ ಕಾರಣಗಳಿಂದಾಗಿ, ಕೊರೊನಾದಿಂದಾಗಿ ಪೀಡಿತರಾದವರು ಈ ಬಗ್ಗೆ ಅತೀವ ಎಚ್ಚರ ವಹಿಸಲೇಬೇಕಿದೆ. ಸೂಕ್ತ ಆಹಾರ ಸೇವನೆ, ವ್ಯಾಯಾಮ ಸೇರಿದಂತೆ ಆರೋಗ್ಯಕರ ಜೀವನಶೈಲಿಯನ್ನು ಬರಮಾಡಿಕೊಳ್ಳಬೇಕು. ಸರ್ಕಾರ ಎಷ್ಟೇ ಆರೋಗ್ಯಸೇವೆ ನೀಡಿದರೂ ವ್ಯಕ್ತಿ ತನ್ನ ಆರೋಗ್ಯವನ್ನು ನೋಡಿಕೊಳ್ಳದಿದ್ದರೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಕೋವಿಡ್‌ ಹಾಗೂ ಲಸಿಕೆಯಿಂದ ಉಂಟಾಗಿರಬಹುದಾದ ಆರೋಗ್ಯ ಸಮಸ್ಯೆಗಳನ್ನೂ ಇನ್ನೊಂದು ತುರ್ತುಸ್ಥಿತಿ ಎಂದೇ ತಿಳಿದು ಸರ್ಕಾರ ಕೂಡ ಕಾರ್ಯಪ್ರವೃತ್ತವಾಗಬೇಕು.

Exit mobile version