Site icon Vistara News

ವಿಸ್ತಾರ ಸಂಪಾದಕೀಯ: ವೈರಲ್‌ಗಾಗಿ ಅಶ್ಲೀಲತೆ, ಹುಚ್ಚಾಟ; ಕಠಿಣ ಕ್ರಮ ಅಗತ್ಯ

Viral News

ವೈರಲ್ ವಿಡಿಯೋ ಎಂಬುದೊಂದು ಆಧುನಿಕ ಗೀಳು. ಇದಕ್ಕಾಗಿ ಏನು ಬೇಕಾದರೂ ಮಾಡುವ ಮನಸ್ಥಿತಿ ಶುರುವಾಗಿದೆ. ಬಹಳಷ್ಟು ಸಲ ಹೀಗೆ ವೈರಲ್ ಆಗಲೆಂದೇ ಮಾಡುವ ವಿಡಿಯೋಗಳಲ್ಲಿ ಅಶ್ಲೀಲತೆ, ಹುಚ್ಚಾಟ, ಹುಚ್ಚು ಸಾಹಸ ಇತ್ಯಾದಿಗಳಿರುತ್ತವೆ. ಪ್ರಾಣದ ಜೊತೆಗೆ ಹುಡುಗಾಟ, ಸಾರ್ವಜನಿಕವಾಗಿ ಅಸಭ್ಯ ವರ್ತನೆ ಇವೆಲ್ಲ ಸೇರಿಕೊಳ್ಳುತ್ತವೆ. ಹೀಗೆ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯತೆ ತೋರಿದ ಎರಡು ಪ್ರಕರಣಗಳಲ್ಲಿ ಪೊಲೀಸರು ಬಿಗಿ ಕ್ರಮ ಕೈಗೊಂಡಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ತೊಂದರೆ ಮತ್ತು ಅಶ್ಲೀಲತೆಯನ್ನು ಸೃಷ್ಟಿಸಿದ ಆರೋಪದ ಮೇಲೆ ನೋಯ್ಡಾ ಪೊಲೀಸರು ಗುರುವಾರ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಅದೇ ರೀತಿ ಡೆಲ್ಲಿ ಮೆಟ್ರೋದಲ್ಲಿ ರಂಗಿನ ಓಕುಳಿ ಆಡಿದವರೂ ಜೈಲು ಕಂಬಿ ಎಣಿಸುವಂತಾಗಿದೆ. ಈ ಎರಡೂ ವಿಡಿಯೊಗಳನ್ನು ನೋಡಿರುವ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು “ಅಶ್ಲೀಲ” ಎಂದು ಟೀಕಿಸಿದರೆ, ನೋಯ್ಡಾ ಸಂಚಾರ ಪೊಲೀಸರು ರಸ್ತೆ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸ್ಕೂಟರ್ ಮಾಲೀಕರಿಗೆ ಒಟ್ಟು 80,500 ರೂ.ಗಳ ದಂಡವನ್ನು ವಿಧಿಸಿದ್ದರು. ಐಪಿಸಿ ಸೆಕ್ಷನ್ 279 (ಮಾನವ ಜೀವಕ್ಕೆ ಅಪಾಯವನ್ನುಂಟು ಮಾಡುವ ಅತಿವೇಗದ / ನಿರ್ಲಕ್ಷ್ಯದ ಚಾಲನೆ), 290 (ಸಾರ್ವಜನಿಕ ಉಪದ್ರವ), 294 (ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲತೆ), 336 ಮತ್ತು 337 (ಇತರರ ಜೀವಕ್ಕೆ ಅಪಾಯವನ್ನುಂಟು ಮಾಡುವ ಅಥವಾ ಅದರಿಂದ ನೋವನ್ನುಂಟುಮಾಡುವ ಕೃತ್ಯಕ್ಕೆ ಸಂಬಂಧಿಸಿದ) ಅಡಿಯಲ್ಲಿ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರತ್ಯೇಕ ಎಫ್ಐಆರ್ ದಾಖಲಿಸಲಾಗಿದೆ.

ನೋಯ್ಡಾದಲ್ಲಿ ಕಳೆದ ಸೋಮವಾರ ಯುವಕ ಸ್ಕೂಟರ್ ಚಾಲನೆ ಮಾಡುತ್ತಿದ್ದರೆ, ಹುಡುಗಿಯರು ಚಲಿಸುತ್ತಿರುವ ಸ್ಕೂಟರ್​ನಲ್ಲಿ ಪರಸ್ಪರ ಎದುರು ಬದುರಾಗಿ ಕುಳಿತು ಅಶ್ಲೀಲ ನೃತ್ಯ ಮಾಡಿದ್ದಾರೆ. ದೆಹಲಿಯ ಮೆಟ್ರೋದಲ್ಲಿಯೂ ಇಬ್ಬರು ಯುವತಿಯರು ಹೋಳಿ ಆಚರಣೆ ಮಾಡುವ ನೆಪದಲ್ಲಿ ರೊಮ್ಯಾನ್ಸ್‌ ಮಾಡಿದ ವಿಡಿಯೊ ವೈರಲ್‌ ಆಗಿದೆ. ಚಲಿಸುವ ಮೆಟ್ರೋದಲ್ಲಿಯೇ ಪರಸ್ಪರ ಬಣ್ಣ ಹಚ್ಚುವ ಯುವತಿಯರು, ತಬ್ಬಿ ಮುದ್ದಾಡಿದ ವಿಡಿಯೊ ವೈರಲ್‌ ಆಗುತ್ತಲೇ ಜನ ಆಕ್ರೋಶ ವ್ಯಕ್ತಪಡಿಸಿದ್ದರು. ಇವರ ಮೇಲೂ ಪೊಲೀಸ್ ಕ್ರಮ ಆಗಿದೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಡಿಜಿಟಲ್‌ ಇಂಡಿಯಾ ಬಗೆಗೆ ಬಿಲ್‌ ಗೇಟ್ಸ್‌ ಪ್ರಶಂಸೆ ಸ್ಫೂರ್ತಿದಾಯಕ

ವೈರಲ್‌ಗಾಗಿ ರೀಲ್‌ಗಳನ್ನು ಮಾಡುವ ಈ ಹುಚ್ಚಾಟ ಈಗಲಾದರೂ ಕೊನೆಯಾಗಬೇಕು. ಕಳೆದ ವರ್ಷ ಪಶ್ಚಿಮ ಘಟ್ಟದ ಜಲಪಾತವೊಂದರಲ್ಲಿ ಬಂಡೆಯ ಅಂಚಿಗೆ ನಿಂತ ಯುವಕನೊಬ್ಬ ಕಾಲು ಜಾರಿ‌ ನೀರುಪಾಲಾಗಿದ್ದ. ಹಲವು ದಿನಗಳ ಹುಡುಕಾಟದ ಬಳಿಕ ಶವ ದೊರೆತಿತ್ತು. ವಿಡಿಯೋಗಾಗಿ ಜೀವವನ್ನೂ ಗಂಡಾಂತರಕ್ಕೊಡ್ಡುವ ಇಂಥ ಸಾಹಸದಿಂದ ಏನು ಸಿಕ್ಕಿದಂತಾಯಿತು? ವಿಡಿಯೋವೇನೋ ವೈರಲ್ ಆಗಿರಬಹುದು. ಆದರೆ ಅದನ್ನು ನೋಡಲು ವ್ಯಕ್ತಿಯೇ ಇಲ್ಲ. ಇದೀಗ ಸಾರ್ವಜನಿಕವಾಗಿ ಪ್ರಣಯಕೇಳಿಯಾಡಿದ ಯುವತಿಯರೂ ಭಾರಿ ದಂಡ ಕಟ್ಟುವ ಹಾಗೂ ಕೇಸ್‌ಗಾಗಿ ಅಲೆದಾಡುವ ಪರಿಸ್ಥಿತಿ ಬಂದಿದೆ.

ಸಾರ್ವಜನಿಕ‌ ಸಭ್ಯತೆ ಎಂಬುದೊಂದು ಮೌಲ್ಯ. ಅದೊಂದು‌ ಶ್ರೇಷ್ಠ ಗುಣವೂ ಹೌದು. ಒಬ್ಬಿಬ್ಬರು ಹದ ತಪ್ಪಿದರೆ ಇಡೀ ವ್ಯವಸ್ಥೆ ಹದಗೆಡುತ್ತದೆ. ಕಾನೂನಾತ್ಮಕವಾಗಿ ಮಾತ್ರವೇ ಇದನ್ನು ಪಾಲಿಸಿದರೆ ಸಾಲದು. ಆಂತರಿಕವಾಗಿಯೂ ಈ ಮೌಲ್ಯ ರೂಢವಾದರೆ ಒಟ್ಟಾರೆ ವ್ಯವಸ್ಥೆ ಸೊಗಸಾಗಿರುತ್ತದೆ. ಇಲ್ಲವಾದರೆ ಕೆಲವರು ಸೃಷ್ಟಿಸುವ ಮುಜುಗರ ಒಟ್ಟಾರೆ ಸಾರ್ವಜನಿಕ ಬದುಕಿಗೇ ಮಾರಕವಾಗುತ್ತದೆ.

Exit mobile version