ಸೈಬರ್ ಸೇಫ್ಟಿ: ಅಂಗೈಯಲ್ಲಿ ಅಂತರ್ಜಾಲ (internet) ಬಂದ ಮೇಲೆ ಅಪರಾಧಗಳೂ (cyber crimes) ಅಧಿಕವಾಗ್ತಿದೆ. ಮೋಸ ಹೋಗುವವರು ಇರುವವರೆಗೂ ಮೋಸಮಾಡುವವರು ಇರುತ್ತಾರೆ. ಸೈಬರ್ ಲೋಕವೂ ಇದಕ್ಕೆ ಹೊರತಲ್ಲ. ಇಲ್ಲಿನ ಡಾರ್ಕ್ ವೆಬ್ (dark web) ಮತ್ತು ಡೀಪ್ ವೆಬ್‌ಗಳಲ್ಲಿ (deep web) ಹ್ಯಾಕರ್‌ಗಳು (Hackers) ಸದಾ ಸಕ್ರಿಯರಾಗಿರುತ್ತಾರೆ. ಹೊಸ ತಂತ್ರಜ್ಞಾನ ಅಭಿವೃದ್ಧಿಯಾದಂತೆ ಇವರು ಹೊಸ ಕುತಂತ್ರದೊಂದಿಗೆ ಸನ್ನದ್ಧರಾಗಿರ್ತಾರೆ. ನಾವು ಎಷ್ಟು ಎಚ್ಚರಿಕೆಯಿಂದಿದ್ದರೂ (cyber safety) ಏಮಾರುತ್ತೇವೆ. ಅಂತಹ ಸಂದರ್ಭದಲ್ಲಿ 1930ಗೆ ಕರೆ ಮಾಡುವುದು ಅಥವಾ https://www.cybercrime.gov.in/ ವೆಬ್‌ಸೈಟಿನ ಮೂಲಕ ನಿಮ್ಮ ದೂರನ್ನು ದಾಖಲಿಸುವುದು ಗೊತ್ತಿದೆ ಅಲ್ವಾ? ಹಾಗೆ ದಾಖಲಿಸಿದ ದೂರನ್ನು ಹೇಗೆ ತನಿಖೆ ಮಾಡಲಾಗುತ್ತದೆ ಎಂದು ಸ್ಥೂಲವಾಗಿ ಪರಿಚಯಿಸುತ್ತೇನೆ. ಇದು ಸೈಬರ್ ಪತ್ತೆದಾರಿಯನ್ನು (cyber detectives) ಆಸಕ್ತಿದಾಯಕ ವೃತ್ತಿಯನ್ನಾಗಿ ಪರಿಗಣಿಸಿ ಆಯ್ಕೆ ಮಾಡಲು ಸಹಾಯಕವಾಗಬಹುದು.
ಈ ಅಂಕಣದ ಹಿಂದಿನ ಬರಹದಲ್ಲಿ “ನೈತಿಕ ಹ್ಯಾಕರ್‌ಗಳು” ಅಥವಾ “ಭದ್ರತಾ ಸಂಶೋಧಕರು” ಎಂದು ಕರೆಯಲ್ಪಡುವ ವೈಟ್‌ಹ್ಯಾಟ್ ಹ್ಯಾಕರ್‌ಗಳ ಕಾರ್ಯವೈಖರಿಯ ಬಗ್ಗೆ ತಿಳಿಸಿದ್ದೆ. ಅದರ ಮುಂದಿನ ವಾರ ಡಿಜಿಟಲ್ ಫುಟ್‌ಪ್ರಿಂಟ್ ಜಾಡು ಹಿಡಿದು ಪತ್ತೆ ಮಾಡುವ ʼಸೈಬರ್ ಲೋಕದ ಷರ್ಲಾಕ್ ಹೋಮ್ಸ್: ಸೈಬರ್ ಫೋರೆನ್ಸಿಕ್ಸ್ ಇನ್ವೆಸ್ಟಿಗೇಟರ್ʼ ಬಗ್ಗೆ ಬರೆದಿದ್ದೆ. ಈಗ ನಮ್ಮ ದೂರುಗಳನ್ನು ತನಿಖೆ ಮಾಡಲು ಪೊಲೀಸರು ಬಳಸುವ ತನಿಖಾ ತಂತ್ರಗಳ ಬಗ್ಗೆ ತಿಳಿಯೋಣ.
ಇಂದಿನ ಸಂಪರ್ಕಿತ ಜಗತ್ತಿನಲ್ಲಿ ಸೈಬರ್ ಅಪರಾಧ ಮತ್ತು ಸೈಬರ್ ಕ್ರೈಮ್ ತನಿಖೆಯು ಬಹಳಷ್ಟು ಚರ್ಚಿಸಲ್ಪಡುವ ವಿಷಯವಾಗಿದೆ. ಏಕೆಂದರೆ ಆಧುನಿಕ ಜಗತ್ತಿನಲ್ಲಿ ಮಾಹಿತಿಯನ್ನು ಪಡೆಯಲು ಬಳಸುವ ಡೇಟಾ ಅಥವಾ ದತ್ತಾಂಶವನ್ನು ಅತ್ಯಮೂಲ್ಯ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಇದರ ಕಳ್ಳತನ, ಸೋರಿಕೆ ಮತ್ತು ದುರ್ಬಳಕೆಯಿಂದ ನಮ್ಮ ದೈನಂದದಿನ ಜೀವನದ ಮೇಲೆ ಅನಾಹುತಕಾರಿ ಪರಿಣಾಮಗಳಾಗಬಹದು. ಸೈಬರ್ ಅಪರಾಧ ತನಿಖೆಯು ಅಂತರ್ಜಾಲ ಮತ್ತು ಇತರ ಆನ್‌ಲೈನ್ ನೆಟ್‌ವರ್ಕ್‌ಗಳು ಸೇರಿದಂತೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸಂಭವಿಸಿದ ಅಪರಾಧಗಳ ಪತ್ತೆ ಮಾಡುವ ಪ್ರಕ್ರಿಯೆಯಾಗಿದೆ. ಜೊತೆಗೆ, ದೈಹಿಕ ಅಪರಾಧಗಳನ್ನು ತನಿಖೆ ಮಾಡಲು ಸಹ, ತನಿಖಾಧಿಕಾರಿಗಳು ಸೈಬರ್ ಅಪರಾಧ ಪತ್ತೆಯ ತಂತ್ರಗಳನ್ನು ಬಳಸುತ್ತಾರೆ. ಈ ಪ್ರಕ್ರಿಯೆಯಲ್ಲಿ ತನಿಖಾಧಿಕಾರಿಗಳು ತಾಂತ್ರಿಕ ಮತ್ತು ತಾಂತ್ರಿಕವಲ್ಲದ ವಿಧಾನಗಳನ್ನು ಬಳಸುತ್ತಾರೆ.
ಆನ್‌ಲೈನ್ ಕ್ರಿಮಿನಲ್ ಚಟುವಟಿಕೆಯ ಸಂಕೀರ್ಣ ಜಗತ್ತನ್ನು ಅರ್ಥಮಾಡಿಕೊಳ್ಳುವುದು ಸೈಬರ್ ಅಪರಾಧ ಪತ್ತೆದಾರರ ಪಾತ್ರ ಪ್ರಮುಖವಾಗಿದೆ. ಸೈಬರ್ ಭದ್ರತಾ ತನಿಖಾಧಿಕಾರಿಗಳು ಅವರ ವಿಶೇಷ ಅನುಭವದೊಂದಿಗೆ, ಡಿಜಿಟಲ್ ಅಪಾಯಗಳನ್ನು ಗುರುತಿಸುತ್ತಾರೆ ಮತ್ತು ರಕ್ಷಣೆಯ ಮೊದಲ ಸಾಲಿನಂತೆಯೂ ಕಾರ್ಯನಿರ್ವಹಿಸುತ್ತಾರೆ.
ಖಾಸಗಿ ಸಂವಹನಗಳಿಂದ ಪ್ರಮುಖ ರಾಷ್ಟ್ರೀಯ ಮೂಲಸೌಕರ್ಯಗಳವರೆಗೆ ನಮ್ಮ ಜೀವನದ ಪ್ರತಿಯೊಂದು ಭಾಗಕ್ಕೂ ತಂತ್ರಜ್ಞಾನವು ನುಸುಳುವುದರಿಂದ ಹ್ಯಾಕರ್‌ಗಳಿಗೆ ಹಾಳು ಮಾಡಲು ಹೆಚ್ಚಿನ ಅವಕಾಶವಿದೆ. ಡಿಜಿಟಲ್ ಯುಗದಲ್ಲಿ, ಸೈಬರ್ ಕ್ರೈಮ್ ತನಿಖೆಯು ತನಿಖಾಧಿಕಾರಿಗೆ ಕೇವಲ ಕೆಲಸಕ್ಕಿಂತ ಹೆಚ್ಚಾಗಿರುತ್ತದೆ
ಇವರು ಒಳನುಗ್ಗುವ ಮಾಲ್‌ವೇರ್ ದಾಳಿಗಳೊಂದಿಗೆ ವ್ಯವಹರಿಸುತ್ತಿರಲಿ, ಸೈಬರ್ ಬೇಹುಗಾರಿಕೆಯನ್ನು ಎದುರಿಸುತ್ತಿರಲಿ ಅಥವಾ ಸಂಕೀರ್ಣವಾದ ಹಣಕಾಸಿನ ಹಗರಣಗಳನ್ನು ಪರಿಹರಿಸುತ್ತಿರಲಿ, ಡೀಪ್ ಮತ್ತು ಡಾರ್ಕ್ ವೆಬ್‌ನ ನೆರಳುಗಳಲ್ಲಿ ಬದುಕುವ ಎಲೆಮರೆಯ ಕಾಯಿಗಳು. ಸೈಬರ್ ಲೋಕದ ಹೀರೋಗಳು. ಡಿಜಿಟಲ್ ಫೋರೆನ್ಸಿಕ್ಸ್‌ನಲ್ಲಿ ಅವರ ಪ್ರಾವೀಣ್ಯತೆ ಸುಧಾರಿತ ಸೈಬರ್ ಫೊರೆನ್ಸಿಕ್ಸ್ ಉಪಕರಣಗಳನ್ನು ಬಳಸಿ ಡಿಜಿಟಲ್ ಪುರಾವೆಗಳನ್ನು ಅರ್ಥೈಸುವಲ್ಲಿ, ಅಪರಾಧಿಗಳನ್ನು ಗುರುತಿಸುವಲ್ಲಿ ಮತ್ತು ಅವರನ್ನು ವಿಚಾರಣೆಗೆ ಒಳಪಡಿಸುವಲ್ಲಿ ಬಳಕೆಯಾಗುತ್ತದೆ.
ಸೈಬರ್ ಬೆದರಿಕೆಗಳು ಮತ್ತು ಭದ್ರತಾ ಕಾಳಜಿಗಳು ನಿರಂತರವಾಗಿ ವಿಕಸನಗೊಳ್ಳುತ್ತಿರುವ ಜಗತ್ತಿನಲ್ಲಿ, ಸೈಬರ್ ಅಪರಾಧ ತನಿಖಾಧಿಕಾರಿಗಳು ನಮ್ಮ ಡಿಜಿಟಲ್ ರಕ್ಷಕರಾಗಿ ನಿಲ್ಲುತ್ತಾರೆ. ಈ ವೃತ್ತಿಪರರ ಪ್ರಾಮುಖ್ಯತೆಯನ್ನು ಗುರುತಿಸಲೇ ಬೇಕು. ಅವರು ಅಪರಾಧಗಳನ್ನು ಪರಿಹರಿಸುವುದು ಮಾತ್ರವಲ್ಲದೆ ಭವಿಷ್ಯದ ಸೈಬರ್ ದಾಳಿಗಳನ್ನು ತಡೆಗಟ್ಟಲು ತಂತ್ರಗಳು ಮತ್ತು ತಂತ್ರಜ್ಞಾನಗಳ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡುತ್ತಾರೆ.
ಸೈಬರ್ ಕ್ರೈಮ್ ಪತ್ತೆದಾರರ ಟೂಲ್‌ಕಿಟ್
ಸೈಬರ್ ಪತ್ತೆದಾರರು ಡಿಜಿಟಲ್ ಫೋರೆನ್ಸಿಕ್ಸ್ ಮತ್ತು ಇನ್ಸಿಡೆಂಟಲ್ ರೆಸ್‌ಪಾನ್ಸ್ (DFIR) ಪರಿಕರಗಳ ವಿವಿಧ ಶ್ರೇಣಿಯನ್ನು ಬಳಸುತ್ತಾರೆ. ಡಿಜಿಟಲ್ ಸಾಕ್ಷ್ಯವನ್ನು ಪತ್ತೆ ಮಾಡಲು ಮತ್ತು ವಿಶ್ಲೇಷಿಸಲು ಇವುಗಳನ್ನು ಬಳಸಲಾಗುತ್ತದೆ. ಟೂಲ್‌ಕಿಟ್‌ನ ಕೆಲವು ಪ್ರಮುಖ ಪರಿಕರಗಳು ಇಲ್ಲಿವೆ.
• ಎನ್‌ಕೇಸ್: ಅತ್ಯಂತ ಜನಪ್ರಿಯ ವಿಧಿವಿಜ್ಞಾನ ಸಾಧನವೆಂದರೆ ಎನ್‌ಕೇಸ್, ಇದು ಕಂಪ್ಯೂಟರ್‌ಗಳು ಮತ್ತು ಮೊಬೈಲ್ ಸಾಧನಗಳು ಸೇರಿದಂತೆ ವಿವಿಧ ಮೂಲಗಳಿಂದ ಡಿಜಿಟಲ್ ಪುರಾವೆಗಳನ್ನು ಸಂಗ್ರಹಿಸಲು ಮತ್ತು ವಿಶ್ಲೇಷಿಸಲು ಬಳಸಲಾಗುತ್ತದೆ. ಬುಕ್‌ಮಾರ್ಕಿಂಗ್, ಕೀವರ್ಡ್ ಹುಡುಕಾಟ ಮತ್ತು ವರದಿಯನ್ನೂ ಮಾಡುವಂತಹ ಸಾಮರ್ಥ್ಯ ಇರುವ ಈ ಸಾಫ್ಟ್‌ವೇರ್, ವಿವರವಾದ ಫೋರೆನ್ಸಿಕ್ ಸಂಶೋಧನೆಗೆ ಅತ್ಯುತ್ತಮ ಸಾಧನವಾಗಿದೆ. ಡಿಜಿಟಲ್ ಪುರಾವೆಗಳನ್ನು ಜೋಡಿಸಲು ಇದು ಉಪಯುಕ್ತವಾಗಿದೆ.
• ಫೋರೆನ್ಸಿಕ್ ಟೂಲ್‌ಕಿಟ್ (FTK): ಕಂಪ್ಯೂಟರ್‌ಗಳು ಮತ್ತು ಶೇಖರಣಾ ಸಾಧನಗಳಿಂದ ಡಿಜಿಟಲ್ ಸಾಕ್ಷ್ಯವನ್ನು ಚಿತ್ರಿಸಲು ಮತ್ತು ವಿಶ್ಲೇಷಿಸಲು FTK ಹೆಸರುವಾಸಿಯಾಗಿದೆ. ದೊಡ್ಡ ಡೇಟಾ ವಾಲ್ಯೂಮ್‌ಗಳನ್ನು ಉತ್ತಮ ದಕ್ಷತೆಯೊಂದಿಗೆ ಪ್ರಕ್ರಿಯೆಗೊಳಿಸಬಹುದು. ಎನ್‌ಕ್ರಿಪ್ಟ್ ಮಾಡಿದ ಅಥವಾ ಅಳಿಸಿದ ಫೈಲ್‌ಗಳನ್ನು ಒಳಗೊಂಡಂತೆ ಅನೇಕ ರೀತಿಯ ಡಿಜಿಟಲ್ ಪುರಾವೆಗಳನ್ನು ಮರುಪಡೆಯಬಹುದು.
• ಅಟಾಪ್ಸಿ: ಶವಪರೀಕ್ಷೆ ಎಂದು ಅರ್ಥವಿರುವ ಈ ಸಾಫ್ಟ್‌ವೇರ್ ಮುಕ್ತ-ಮೂಲ (open source) ವೇದಿಕೆಯಾಗಿದ್ದು, ತ್ವರಿತ ಡೇಟಾ ಮರುಪಡೆಯುವಿಕೆ, ಕಾಲಾನುಕ್ರಮದ ವಿಶ್ಲೇಷಣೆ ಮತ್ತು ಆನ್‌ಲೈನ್ ಇರುವಿಕೆಯ ಮೌಲ್ಯಮಾಪನಕ್ಕೆ ಅನುಕೂಲವಾಗುವುದರಿಂದ ಬಹುತೇಕ ತನಿಖಾಧಿಕಾರಿಗಳಿಗೆ ನೆಚ್ಚಿನದ್ದಾಗಿದೆ.
• DRS (ಡೇಟಾ ರಿಕವರಿ ಸಿಸ್ಟಮ್): ಇದು ಸಂಕೀರ್ಣ ಡೇಟಾದ ಮರುಪಡೆಯುವಿಕೆ ಯೋಜನೆಗೆ ಅತ್ಯಗತ್ಯವಾದ ಸಾಧನವಾಗಿದೆ. ಹಾನಿಗೊಳಗಾದ ಡಿಸ್ಕ್‌ಗಳು ಅಥವಾ ಆಳವಾದ ಮರೆಮಾಚುವ ಡೇಟಾವನ್ನು ಒಳಗೊಂಡಿರುವ ಸಂದರ್ಭಗಳಲ್ಲಿ ಇದು ಸಹಾಯಕವಾಗಿದೆ. ಕಳೆದುಹೋದ ಅಥವಾ ಅಳಿಸಿದ ಡೇಟಾವನ್ನು ಹಿಂಪಡೆಯುವಲ್ಲಿ ಇದರ ಬಳಕೆಯಾಗುತ್ತದೆ.
ಸೈಬರ್ ಪತ್ತೆದಾರರ ಕೌಶಲ್ಯಗಳು
- ಫೈಲ್ ಸಿಸ್ಟಮ್ ವಿಶ್ಲೇಷಣೆ ಮತ್ತು ಮೆಮೊರಿ ಫೋರೆನ್ಸಿಕ್ಸ್: ಇದು ಸೈಬರ್ ಅಪರಾಧದ ಬಗ್ಗೆ ಪ್ರಮುಖ ಸುಳಿವುಗಳನ್ನು ಕಂಡುಹಿಡಿಯಲು RAMನಲ್ಲಿನ ಬಾಷ್ಪಶೀಲ ಡೇಟಾವನ್ನು ಪರೀಕ್ಷಿಸಲು ಅವಶ್ಯಕವಾಗಿದೆ. ಫೈಲ್ ಸಿಸ್ಟಮ್ ವಿಶ್ಲೇಷಣೆಯನ್ನು ಬಳಸಿ ಅಳಿಸಿದ, ಎನ್‌ಕ್ರಿಪ್ಟ್ ಮಾಡಿದ ಅಥವಾ ದೋಷಪೂರಿತ ಫೈಲ್ ಮಾಹಿತಿಯನ್ನು ಮರುಪಡೆಯಲು ಅನುವು ಮಾಡಿಕೊಡುತ್ತದೆ.
- ಘಟನೆಯ ಪ್ರತಿಕ್ರಿಯೆ ಸಾಮರ್ಥ್ಯ: ಇದು ಪುರಾವೆಗಳ ನಿಗಾ ಇಡುವುದು ಮತ್ತು ಪಾಲನೆಯ ಸರಪಳಿಯನ್ನು (chain of custody) ಪಾಲಿಸುವುದನ್ನು ಒಳಗೊಳ್ಳುತ್ತದೆ. ಇದು ಉಲ್ಲಂಘನೆಗಳನ್ನು ಪತ್ತೆಹಚ್ಚಿ ಪರಿಹರಿಸುವುದರ ಜೊತೆಗೆ ಕಾನೂನು ಪ್ರಕ್ರಿಯೆಗಳಿಗೂ ಸಹಾಯಕವಾಗಿದೆ.
- ಪ್ರೋಗ್ರಾಮಿಂಗ್ ಮತ್ತು ಸ್ಕ್ರಿಪ್ಟಿಂಗ್ ಭಾಷೆಗಳು: ಪ್ರಕ್ರಿಯೆಗಳನ್ನು ಸ್ವಯಂಚಾಲಿತಗೊಳಿಸಲು, ಬೆಸ್ಪೋಕ್ ಪರಿಕರಗಳನ್ನು ರಚಿಸಲು ಮತ್ತು ಹಾನಿಕಾರಕ ಕೋಡ್‌ನ ನಡವಳಿಕೆಯನ್ನು ಗ್ರಹಿಸಲು, ಪೈಥಾನ್ ಮತ್ತು ಜಾವ ಸ್ಕ್ರಿಪ್ಟ್ ಕಲಿತಿರಬೇಕು.
- ಆಪರೇಟಿಂಗ್ ಸಿಸ್ಟಂಗಳನ್ನು ವಿಶ್ಲೇಷಿಸುವುದು: ವಿವಿಧ ವೇದಿಕೆಗಳಲ್ಲಿ, ಸೈಬರ್ ಅಪರಾಧಗಳು ಸಂಭವಿಸಬಹುದು. ಆದ್ದರಿಂದ, ವಿಂಡೋಸ್, ಲಿನಕ್ಸ್ ಮತ್ತು ಮ್ಯಾಕ್ ಸೇರಿದಂತೆ ಹಲವಾರು ಆಪರೇಟಿಂಗ್ ಸಿಸ್ಟಮ್‌ಗಳನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಹಲವಾರು ಫೈಲ್ ಸಿಸ್ಟಮ್‌ಗಳು ಮತ್ತು ಭದ್ರತಾ ರಚನೆಗಳನ್ನು ನ್ಯಾವಿಗೇಟ್ ಮಾಡುವ ತಿಳುವಳಿಕೆ ಬಹು ಮುಖ್ಯವಾಗಿದೆ.
- ಸಮಸ್ಯೆ-ಪರಿಹರಿಸುವ ಕೌಶಲ್ಯಗಳು: ಇವೆಲ್ಲದರ ಜೊತೆಗೆ ವಿಶ್ಲೇಷಣಾತ್ಮಕ ಮತ್ತು ಸಮಸ್ಯೆ-ಪರಿಹರಿಸುವ ಕೌಶಲ್ಯಗಳು ಅನಿವಾರ್ಯವಾಗಿವೆ. ಪ್ರತಿಯೊಂದು ತನಿಖೆಯು ವಿಶಿಷ್ಟವಾದ ಸವಾಲುಗಳು ಮತ್ತು ಒಗಟುಗಳನ್ನು ಒದಗಿಸುತ್ತದೆ, ಸೈಬರ್ ಅಪರಾಧ ತನಿಖಾಧಿಕಾರಿಯು ವಿಮರ್ಶಾತ್ಮಕವಾಗಿ ಮತ್ತು ಸೃಜನಾತ್ಮಕವಾಗಿ ಯೋಚಿಸುವ ಅಗತ್ಯವಿದೆ.
ಈ ಡಿಜಿಟಲ್ ಯುಗದಲ್ಲಿ ಸೈಬರ್ ಕ್ರೈಮ್ ಪತ್ತೆದಾರರು ಎಂದಿಗಿಂತಲೂ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದ್ದಾರೆ. ಅಂತರ್ಜಾಲದ ಅಂತರಂಗದಲ್ಲಿ ಅಡಗಿರುವ ಅಪಾಯಗಳನ್ನು ಎದುರಿಸಲು ಇವರ ಅವಶ್ಯಕತೆ ಅಧಿಕವಾಗಿದೆ. ಆದರೆ ಇದರ ಬಗ್ಗೆ ಹೆಚ್ಚಿನ ತಿಳುವಳಿಕೆಯುಳ್ಳವರು ಬಹಳ ಕಡಿಮೆ. ಹಾಗಾಗಿ ಇಂದಿನ ಯುವಪೀಳಿಗೆಯವರು ಇದನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಆಯ್ಕೆ ಮಾಡಿ ಯಶಸ್ವಿಯಾಗಬಹದು.
ಇದನ್ನೂ ಓದಿ: ಸೈಬರ್ ಸೇಫ್ಟಿ ಅಂಕಣ: ಅಂತರ್ಜಾಲವನ್ನು ಸಾಮಾಜಿಕಗೊಳಿಸಿದ ಫೇಸ್‌ಬುಕ್‌ಗೆ ಇಪ್ಪತ್ತು ವರ್ಷ