Site icon Vistara News

ದಶಮುಖ ಅಂಕಣ: ಮಸಣದಲ್ಲಿ ಕೆಲವು ಕ್ಷಣ

graveyard

ಈ ಅಂಕಣವನ್ನು ಇಲ್ಲಿ ಆಲಿಸಿ:

https://vistaranews.com/wp-content/uploads/2024/02/WhatsApp-Audio-2024-02-27-at-10.32.16-AM.mp3

ದಶಮುಖ ಅಂಕಣ: ಒಂದಿಷ್ಟು ಮಕ್ಕಳು ಕಥೆ ಕೇಳುತ್ತಿದ್ದರು. ಕಥೆಯೊಂದರ ನಡುವೆ ಸ್ಮಶಾನದ ಪ್ರಸ್ತಾಪ ಬಂತು. ಮಕ್ಕಳೆಲ್ಲರೂ ಮುಂದೇನಾಗುವುದೆಂದು ಗೊತ್ತಿರುವವರಂತೆ, ʻಯಬ್ಬಾ…!ʼ ಎಂದು ಕಣ್ಣು-ಬಾಯಿ ಬಿಡುತ್ತಾ ಹುಬ್ಬೇರಿಸಿದರು. ಅಲ್ಲೊಂದು ಭೂತ ಬರುತ್ತದೆಂದು ಅವರಾಗಲೇ ನಿರ್ಧರಿಸಿಬಿಟ್ಟಿದ್ದರು. ಹಾಗಾಗಿ ಉಸಿರು ಹಿಡಿದು, ಪಕ್ಕದಲ್ಲಿ ಕೂತವರ ಕೈಯೂ ಹಿಡಿದು, ಭೂತಚೇಷ್ಟೆಗೆ ತಯಾರಾಗಿಯೇ ಕಥೆಯಲ್ಲಿರುವ ಸ್ಮಶಾನ ಹೊಕ್ಕಿದ್ದರು. ಕಥೆಯಲ್ಲಿ ಭೂತ ಬಂತಾ, ಬಂದೇನು ಮಾಡಿತು ಇತ್ಯಾದಿಗಳು ನಮಗಿಲ್ಲಿ ಬೇಡದಿದ್ದರೂ, ಅವರ ವರ್ತನೆಗಳು ಒಂದಿಷ್ಟು ಚಿಂತನೆಗೆ ಹಚ್ಚಿದ್ದು ಹೌದು. ಸ್ಮಶಾನವೆಂದರೆ ನಾವಷ್ಟು ಇರಿಸುಮುರುಸು ಮಾಡಿಕೊಳ್ಳುತ್ತೇವಲ್ಲ, ಯಾಕೆ? ಆ ಮಕ್ಕಳ ಹಾಗೆ, ಸ್ಮಶಾನದೊಂದಿಗೆ ನಮ್ಮ ಭಾವಕೋಶದಲ್ಲಿ ಅಡಗಿ ಹೆದರಿಸುವ ಭೂತಕ್ಕೋ ಅಥವಾ ವ್ಯಕ್ತಿಗಳೇ ಸತ್ತು ಭೂತಕಾಲ ಸೇರುತ್ತಾರೆಂಬ ಸತ್ಯಕ್ಕೋ? ಯಾವುದು ನಮಗೆ ಹೆಚ್ಚು ಅಹಿತವಾಗುವ ವಿಷಯ ಮತ್ತು ಯಾಕೆ?

ಬದುಕು ಎಷ್ಟು ನಶ್ವರ ಎಂಬುದನ್ನು ಇಲ್ಲಿ ಹೇಳುತ್ತಿಲ್ಲ; ಸಾವಿನ ಬಗ್ಗೆ ಚರ್ಚಿಸುವುದಕ್ಕೆ ಇಲ್ಲಿ ಖಂಡಿತಕ್ಕೂ ಕುಳಿತಿಲ್ಲ; ಈ ಬಗ್ಗೆ ಮಾತಾಡಲಿ ಬಿಡಲಿ, ಅದೊಂದು ನಿತ್ಯ ಸತ್ಯ ಎಂಬುದು ಎಲ್ಲರಿಗೂ ತಿಳಿದಿದ್ದೇ. ಸ್ಮಶಾನದ ಬಗ್ಗೆ, ಅಲ್ಲಿದೆಯೆಂದು ಭಾವಿಸಲಾದ ಸಾವಿನಾಚೆಯ ಬದುಕುಗಳ ಬಗ್ಗೆ ಹೇಳಿ ಬೆದರಿಸುವ ಉದ್ದೇಶವಂತೂ ಮೊದಲೇ ಇಲ್ಲ. ಹಾಗಾದರೆ ಸ್ಮಶಾನದ ಬಗೆಗಿನ ಪ್ರಸ್ತಾಪ ಬಂದಿದ್ದೇಕೆ? ನಮಗೆಷ್ಟೇ ಅಹಿತವಾದ ವಿಷಯಗಳೂ ಬದುಕಿನಲ್ಲಿ ನಮಗರಿವಿಲ್ಲದಂತೆಯೇ ಹಾಸುಹೊಕ್ಕಾಗಿ ಬರುತ್ತವಲ್ಲ ಎಂಬ ಸೋಜಿಗವೊಂದು ನಿಶ್ಚಿತವಾಗಿ ಇದರ ಹಿಂದಿದೆ. ನಮಗಿಷ್ಟವಾಗದ ವಿಷಯವನ್ನೇ ಮಣಮಣಿಸುತ್ತಿದ್ದರೆ ಆ ಕುರಿತ ನಮ್ಮ ಸಹಿಷ್ಣುತೆ ಹೆಚ್ಚಾದೀತೇ ಎಂಬ ಜಿಜ್ಞಾಸೆಯೂ ಈ ಲಹರಿಗೆ ಕಾರಣವಾಗಿರಬಹುದು.

ಹದಿನೆಂಟನೇ ಶತಮಾನದ ಕೆಲವು ಇಂಗ್ಲಿಷ್‌ ಕವಿಗಳು ನೆನಪಾಗುತ್ತಿದ್ದಾರೆ. ಸ್ಮಶಾನ ಕವಿಗಳು ಅಥವಾ ಗ್ರೇವ್‌ಯಾರ್ಡ್‌ ಪೊಯೆಟ್ಸ್‌ ಎಂದೆಲ್ಲಾ ಕರೆಯಲಾಗುತ್ತಿತ್ತು ಇವರನ್ನು. ಬದುಕಿನ ನಶ್ವರತೆಯನ್ನು ಬಿಂಬಿಸುತ್ತಾ ಅಧ್ಯಾತ್ಮದೆಡೆಗಿನ ತುಡಿತವನ್ನು ಹೇಳುವಂಥ ಕವಿತೆಗಳು ಈ ಸಾಹಿತ್ಯ ಪ್ರಕಾರದಲ್ಲಿದ್ದವು. ಮುಖ್ಯವಾಗಿ ನೋವು, ದುಃಖ, ವಿಯೋಗದಂಥ ಭಾವತೀವ್ರತೆಯ ವಿಷಯಗಳ ಬಗ್ಗೆ ಹೇಳುವುದಕ್ಕೆ ಸ್ಮಶಾನ, ಗೋರಿ, ಶವಪೆಟ್ಟಿಗೆ ಇತ್ಯಾದಿಗಳನ್ನು ರೂಪಕಗಳಂತೆ ಈ ಕವಿಗಳು ಬಳಸಿಕೊಂಡಿದ್ದರು. ರಾಬರ್ಟ್‌ ಬ್ಲೇರ್‌, ಥಾಮಸ್‌ ಗ್ರೇ, ಎಡ್ವರ್ಡ್‌ ಯಂಗ್ ಮುಂತಾದ ಹೆಸರಾಂತ ಕವಿಗಳು ಸ್ಮಶಾನ ಮತ್ತು ಸಾವನ್ನು ತಮ್ಮ ಅಭಿವ್ಯಕ್ತಿ ರೂಪಕವಾಗಿ ಬಳಸಿದ್ದಾರೆ.

ಇಂಗ್ಲಿಷ್‌ ಕವಿಗಳು ಮಾತ್ರವೇ ಅಲ್ಲ, ನಮ್ಮದೇ ನೆಲದ ಕವಿಗಳು ಸಹ ಸ್ಮಶಾನದ ಉಲ್ಲೇಖಗಳನ್ನು ಬಳಸಿದ್ದಾರೆ. ಈ ನಿಟ್ಟಿನಲ್ಲಿ ಫಕ್ಕನೆ ನೆನಪಾಗುವುದು ರಾಘವಾಂಕ ಕವಿಯ ʻಹರಿಶ್ಚಂದ್ರ ಕಾವ್ಯʼ. ಮಡಿದ ಮಗನಿಗಾಗಿ ವಿಲಪಿಸುತ್ತಾ, ಆತನನ್ನು ಸ್ಮಶಾನಕ್ಕೆ ಹೊತ್ತು ತರುತ್ತಾಳೆ ಆತನ ತಾಯಿ, ಹರಿಶ್ಚಂದ್ರನ ಮಡದಿ ಚಂದ್ರಮತಿ. ರಾತ್ರಿಯ ಆ ಹೊತ್ತು ಸ್ಮಶಾನ ಹೇಗಿತ್ತು ಎಂಬುದನ್ನು ರಾಘವಾಂಕ ಹೀಗೆ ವರ್ಣಿಸುತ್ತಾನೆ-

“ಹಸಿಯ ತೊಗಲುಡಿಗೆ ಹಿಂಡಿಲುಗರುಳ ಚಲ್ಲಣದ/ ಕುಸುರಿಗಂಡದ ತೊಂಡಲಸ್ಥಿಗಳ ತೊಡಿಗೆ ದ/ ಟ್ಟಿಸುವ ರಕ್ತದ ಭಾರಿಗಣ್ಣಾಲಿಗಳ ಸೊಡರು ಕಾಳಿಜದ ಚರುಗುಗಡುಬು|| ಸಸಿದು ಕೊಬ್ಬಿದ ಮಿದುಳ ರಾಸಿಗೂಳೆಸೆಯೆ ಮಾ/ ಮಸಕದಿಂ ಚಾಮುಂಡಿ ಕಮಲಾಕ್ಷಿಯರ ನಡುವೆ/ ಹೊಸತನಿಕ್ಕುವ ಭೂತವೇತಾಳರಾಡಿದರು ಮಾನಿನಿಯ ಮನ ಬೆದರಲು||”

(ಸ್ಥೂಲಾರ್ಥದಲ್ಲಿ ಹೇಳುವುದಾದರೆ- ಹಸಿ ಚರ್ಮದ ಉಡಿಗೆ, ಕರುಳುಗೊಂಚಲಿನ ಕುಸುರಿಯ ಆಭರಣ, ಅಸ್ಥಿ ಕಿರೀಟದ ತೊಡಿಗೆ, ರಕ್ತಗೆಂಪು ಬಣ್ಣದ ಸೊಡರಿನಂಥ ಕಣ್ಣು, ಪಿತ್ತಜನಕಾಂಗದ ಬಲಿ ಪಡೆದ, ಕೊಬ್ಬಿದ ಮಿದುಳಿನ ರಾಶಿಗಳನ್ನೇ ಊಟವಾಗಿಸಿಕೊಂಡಿರುವ ಕಡುಕೋಪದ ಚಾಮುಂಡಿ ಕಮಲಾಕ್ಷಿಯರ ನಡುವೆ ಹೊಸದಾಗಿ ಸೇರಿದ್ದ ಭೂತಬೇತಾಳಗಳು ಮಾನಿನಿಯನ್ನು ಬೆದರಿಸುವಂತೆ ವರ್ತಿಸುತ್ತಿದ್ದವು)

ಇಲ್ಲೀಗ ಹೆದರಿಸುವಂಥ ವರ್ಣನೆಗಳು ಮಾತ್ರವೇ ಅಲ್ಲ, ಭಯಾನಕ, ಭೀಕರ, ಭೀಭತ್ಸ ಎನಿಸುವಂಥ ಬಣ್ಣನೆಗಳು ಕಾಣುತ್ತವೆ. ಖಂಡಿತಕ್ಕೂ ಇಂಥವನ್ನು ಕವಿ ಖುದ್ದಾಗಿ ಕಂಡಿರಲಾರ. ಆದರೆ ಈ ವರ್ಣನೆಗಳನ್ನು ನೋಡಿದಾಗ, ಸ್ಮಶಾನವೆಂಬ ಕಲ್ಪನೆ ಭೀಕರವೋ, ಅದು ತನ್ನೊಳಗೆ ಹುದುಗಿಸಿಕೊಳ್ಳುವ ಸಾವು ಭೀಕರವೋ ಎಂಬುದೇ ತಿಳಿಯದೆ ಗೊಂದಲಕ್ಕೆ ಬಿದ್ದರೆ ಅಚ್ಚರಿಯಿಲ್ಲ.

ಕುವೆಂಪು ಅವರ ʻಶ್ಮಶಾನ ಕುರುಕ್ಷೇತ್ರʼ ನಾಟಕವನ್ನೂ ಇಲ್ಲಿ ಉಲ್ಲೇಖಿಸಬಹುದು. ಮೊದಲ ಮಹಾಯುದ್ಧದ ನಂತರ ಬರೆದಂಥ ಈ ನಾಟಕವು, ಯುದ್ಧಗಳು ಹೇಗೆ ವಿಶಾಲವಾದ ಸ್ಮಶಾನಗಳನ್ನು ಹುಟ್ಟು ಹಾಕುತ್ತವೆ ಎಂಬುದನ್ನು ವಿಸ್ತರಿಸುತ್ತದೆ. ವಿನಾಶದ ಪರಿಕಲ್ಪನೆಗೆ ಪರ್ಯಾಯವಾಗಿ ಸ್ಮಶಾನವೆಂಬ ಪ್ರತಿಮೆ ಇಲ್ಲಿ ರೂಪುಗೊಂಡಿದೆ. ಆದರೆ ಇದಕ್ಕೆ ರೂಪಕವಾಗಿ ನಾಟಕದಲ್ಲಿ ಮೂಡಿಬಂದಿರುವುದು ಮಹಾಭಾರತದ ಕುರುಕ್ಷೇತ್ರ. ಯುದ್ಧಭೂಮಿಗಳ ಭೀಕರತೆಯನ್ನು ವಿವರಿಸುವುದಕ್ಕೆ ಭೂತಬೇತಾಳಗಳ ಕಲ್ಪನೆಯನ್ನು ಪಂಪನಾದಿಯಾಗಿ ಹಲವಾರು ಕವಿಗಳು ಬಳಸಿದ್ದಾರೆ.

ಥೋ! ಇದೆಂಥಾ ಸುಡುಗಾಡು ವರ್ಣನೆಗಳು, ಮಾಡೋಕೆ ಬೇರೆ ಕೆಲಸ ಇಲ್ವೇ ಎಂದು ಬೈಯ್ದುಕೊಂಡರೆ… ವಿಷಯ ಸುಡುಗಾಡಿನದ್ದೇ ಅಲ್ಲವೆ! ಈ ಕಠೋರ ವರ್ಣನೆಗಳನ್ನು ಬಿಟ್ಟು ಜನಮಾನಸದಲ್ಲಿ ಸ್ಮಶಾನದ ಬಗೆಗಿನ ಕಲ್ಪನೆಗಳನ್ನು ಗಮನಿಸೋಣ. ಜನಪದರಲ್ಲಿ ಬೈಗುಳಕ್ಕೆ ಅತಿ ಪ್ರಿಯವಾದ ವಿಷಯವೆಂದರೆ ಸ್ಮಶಾನ ಮತ್ತು ಹೆಣ! ಯಾವುದಕ್ಕೂ ಸಲ್ಲದವನನ್ನು ʻಮನೆಗೆ ಮನುಷ್ಯನಲ್ಲ, ಮಸಣಕ್ಕೆ ಹೆಣವಲ್ಲʼ ಎಂದು ಮೂದಲಿಸುವುದಿದೆ. ಪ್ರಾಂತ್ಯಾವಾರು ಮಟ್ಟದಲ್ಲಿ ಬೈಗುಳಗಳನ್ನು ವಿಂಗಡಿಸಿದರೆ, ಹಳೆ ಮೈಸೂರಿನ ಜನ ಈ ವಿಷಯದಲ್ಲಿ ಗಟ್ಟಿಗರು. (ಉತ್ತರ ಕರ್ನಾಟಕದ ಬೈಗುಳದ ರೀತಿಗಳೇ ಬೇರೆ. ಅದಿಲ್ಲಿ ಬೇಡ ಬಿಡಿ) ʻಅವ್ನ ಹೆಣ ಎತ್ತʼ ಎನ್ನುವುದರಿಂದ ಶುರು ಮಾಡಿದರೆ, ʻಮುಖಾ ಮುಚ್ಚ, ಹೆಜ್ಜೆ ಅಳಸ, ಹೊಗೆ ಹಾಕ, ಹೊತ್ಗಂಡ್ಹೋಗ, ಬಾಯಿಗ್‌ ಮಣ್ಹಾಕ, ಕರಿನಾಗ ಕಚ್ಚ, ಮನೆ ಮಶಾಣಾಗ, ಎಕ್ಕುಟ್ಹೋಗ (ಎಕ್ಕ-ಹುಟ್ಟಿ-ಹೋಗ, ಅಂದರೆ ನಾಶವಾಗು), ಸೀಮೆ ಸುಡುಗಾಡಾಗ…ʼ ಎಂದು ಸಹಸ್ರನಾಮಾವಳಿಯಂತೆ ಸಾವಿನ ಶಾಪಾವಳಿಯನ್ನೇ ಕರೆಯಬಲ್ಲರು. ಅದರಲ್ಲೂ ಕೆಲವು ಹಳೆಯ ತಲೆಮಾರಿನವರು ರಾಗವಾಗಿ ಬೈಗುಳ ಪ್ರಾರಂಭಿಸಿದರೆಂದರೆ ತಾಸುಗಟ್ಟಲೆ ತಡೆ ರಹಿತವಾಗಿ ಬೈಯಬಲ್ಲರು. ಈ ಬೈಗುಳಗಳು ಹಾರೈಸುವುದು ಸಾವು, ನಾಶವನ್ನೇ ಹೊರತು ಮತ್ತೇನಲ್ಲ.

ಯಾವುದೇ ಜನಪದ ಕಲ್ಪನೆಗಳಲ್ಲಿ, ಮಕ್ಕಳ ಕಥೆಗಳಲ್ಲಿ ಸ್ಮಶಾನಕ್ಕೂ, ಹುಣಸೇಮರಕ್ಕೂ, ಭೂತಕ್ಕೂ, ಒಂಥರಾ ನಂಟು. ಊರಾಚೆಗೊಂದು ಸ್ಮಶಾನ, ಅಲ್ಲೊಂದು ಭೂತದಂಥ ಒಂಟಿ ಹುಣಸೆಮರ, ಅದರಲ್ಲೊಂದು ನೇತಾಡುವ ದೆವ್ವ… ಇಂಥ ಕಲ್ಪನೆಯ ಕಥೆಗಳನ್ನು ಬಾಲ್ಯದಲ್ಲಿ ಲೆಕ್ಕವಿಲ್ಲದಷ್ಟು ಕೇಳಿದ್ದಿದೆ. ʻಒಂದಾನೊಂದು ಊರಿನ ಹೊರಗೆ ಭಾರೀ ಹುಣಸೆಮರ/ ಅದರಲ್ಲಿತ್ತು ಒಂದಾನೊಂದು ದೆವ್ವ ಹುಚ್ಚಿ ಥರʼ ಎಂಬ ಎಚ್‌.ಎಸ್‌. ವೆಂಕಟೇಶಮೂರ್ತಿಗಳ ಕವನ ಮಕ್ಕಳಿಗೆ ಕಚುಗುಳಿ ಇಡುವಂತಿದೆ.

ಈ ಹೊತ್ತಿನಲ್ಲಿ ಸುಡುಗಾಡು ಸಿದ್ಧರು ನೆನಪಾಗುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಹಳ್ಳಿಗಳಲ್ಲಿ ಜಾದೂಗಾರರಂತೆ ಕಂಡು ಬರುತ್ತಿದ್ದ ಅಲೆಮಾರಿ ಜನಾಂಗವಿದು. ಈಗ ಇವರ ಮುಂದಿನ ತಲೆಮಾರುಗಳು ವಿದ್ಯಾಭ್ಯಾಸದೆಡೆಗೆ ಹೊರಳಿರುವುದರಿಂದ ಇವರ ಜೀವನಕ್ರಮ ಬದಲಾಗುತ್ತಿದೆ. ಹಣೆಗೆ ಬೂದಿ ಬಳಿದುಕೊಂಡು, ಕೊರಳಿಗೆ ರುದ್ರಾಕ್ಷಿ ಧರಿಸಿ, ಶುಭಾಶುಭಗಳ ಭವಿಷ್ಯ ಹೇಳುತ್ತಾ, ಇಂದ್ರಜಾಲಿಕರಂತೆ ಏನೇನೋ ಜಾದೂ ಮಾಡುವ ಇವರು, ಸುಡುಗಾಡುಗಳಲ್ಲಿದ್ದು ಸಿದ್ಧಿಗಳನ್ನು ಕರಗತ ಮಾಡಿಕೊಳ್ಳುತ್ತಾರೆಂಬ ಪ್ರತೀತಿಯಿದೆ. ಸುಡುಗಾಡುಗಳೆಂದರೆ ಬರೀ ಇಂಥ ಭಾವಗಳೇ ಬರಬೇಕಿಲ್ಲ ಎಂಬಂತೆ, ಶಿರಸಿಯ ʻನೆಮ್ಮದಿ ಕುಟೀರʼ ಕೆಲಸ ಮಾಡಬಹುದು; ʻಸ್ಮಶಾನವೇ ನಮ್ಮ ನಿತ್ಯ ಭೇಟಿಯ ತಾಣʼ ಎನ್ನುವ ಗೆಳೆಯರ ಬಳಗವೂ ಇರಬಹುದು.

ಇದನ್ನೂ ಓದಿ: ದಶಮುಖ ಅಂಕಣ: …. ನೋಡಲಿಕ್ಕೆ ಹೋಗೋಣು ಬಾರೆ!

ಭಾಷೆಯ ಜಾಯಮಾನದಲ್ಲೂ ಇದರ ಬಗ್ಗೆ ಸಾಕಷ್ಟು ವಿಚಾರಗಳು ಚಾಲ್ತಿಯಲ್ಲಿವೆ. ಭಯಾನಕ ನಿಶ್ಶಬ್ದವನ್ನು ʻಸ್ಮಶಾನ ಮೌನʼ, ಸತ್ತಾಗ ಹುಟ್ಟುವ ವೈರಾಗ್ಯವನ್ನು ʻಸ್ಮಶಾನ ವೈರಾಗ್ಯʼ, ಭೀಕರವಾದ ಅವಸ್ಥೆಯನ್ನು ʻಸ್ಮಶಾನ ಸದೃಶ್ಯʼ, ಯಾರಿಗೂ ಬೇಡದ್ದನ್ನು ʻಮಸಣದ ಹೂವುʼ, ಕಡೆಯ ಯಾತ್ರೆಯನ್ನು ʻಸ್ಮಶಾನ ಯಾತ್ರೆʼ… ನೋಡಿ, ನಮಗೆ ಅಹಿತವಾಗುವ ವಿಷಯವನ್ನೇ ಎಷ್ಟೆಲ್ಲ ರೀತಿಯಲ್ಲಿ ಬಳಸಿಕೊಳ್ಳುತ್ತೇವೆ ನಾವು.

ಇಷ್ಟು ಹೇಳಿದ ಮೇಲೆ ಸ್ಮಶಾನವಾಸಿಯ ಬಗ್ಗೆ ಹೇಳದಿದ್ದರೆ ವಿಷಯವೇ ಅಪೂರ್ಣ. ಮೊದಲೆಲ್ಲ ಊರಿನ ದಕ್ಷಿಣ ದಿಕ್ಕಿನಲ್ಲಿ ಸ್ಮಶಾನಗಳು ಇರುತ್ತಿದ್ದುದರಿಂದ ಈ ದಿಕ್ಕೇ ಅಶುಭ ಎನ್ನುವ ಕಲ್ಪನೆ ಜನಮಾನಸದಲ್ಲಿದೆ. ಹಾಗೆಂದು ʻಆತʼ ದಕ್ಷಿಣ ದಿಕ್ಕಿನ ಒಡೆಯ. ಹೆಸರು ರುದ್ರ, ಇರುವುದು ರುದ್ರಭೂಮಿಯಲ್ಲಿ. ರುಂಡಮಾಲಿ, ಕಪಾಲಿ, ಭೂತಗಣಗಳ ನಾಥ, ಬೂದಿಬಡುಕ… ಇಂಥ ಹಲವು ಹೆಸರುಗಳು ಆತನಿಗೆ. ಜಗತ್ತಿನಲ್ಲಿ ಸೃಷ್ಟಿ ಮತ್ತು ಸ್ಥಿತಿಯನ್ನು ಕಾಪಾಡುವ ಹೊಣೆ ಬ್ರಹ್ಮ ಮತ್ತು ವಿಷ್ಣುವಿಗಿದ್ದರೆ ಈತನಿಗೆ ಲಯದ ಕೆಲಸ. ಹೌದು, ಲಯಕರ್ತನಾದ ಶಿವನ ಬಗೆಗಿನ ಮಾತಿದು. ಇನ್ನೇನು ಬರಲಿರುವ ಶಿವರಾತ್ರಿಯ ಹಿನ್ನೆಲೆಯಲ್ಲಿ ʻಲಯʼ ಎನ್ನುವುದಕ್ಕಿರುವ ಘನತೆಯನ್ನು ಗಮನಿಸಬೇಕಿದೆ ನಾವು. ಜಗತ್ತಿನ ಮುಂದುವರಿಕೆಗೆ ಇದು ಅಗತ್ಯ. ಹಾಗೆಂದೇ ʻಇಲ್ಲʼ ಎನ್ನುವುದಕ್ಕೆ ನಮ್ಮ ಭಾವಕೋಶದಲ್ಲಿ ಯಾವುದೇ ಅರ್ಥವಿದ್ದರೂ, ಅದಕ್ಕೊಂದು ದೈವತ್ವವನ್ನು ಕಲ್ಪಿಸಿದ್ದೇವೆ; ಅದಕ್ಕೊಂದು ಅಧ್ಯಾತ್ಮವನ್ನೂ ಸೃಷ್ಟಿಸಿದ್ದೇವೆ. ʻಮದುವೆಗೋ ಮಸಣಕೋ ಹೋಗೆಂದ ಕಡೆ ಹೋಗು/ ಪದ ಕುಸಿಯೆ ನೆಲವಿಹುದು ಮಂಕುತಿಮ್ಮʼ ಎಂಬುದರ ಅರ್ಥವನ್ನು ಈ ಹಿನ್ನೆಲೆಯಲ್ಲೂ ಗ್ರಹಿಸಬಹುದೇ.

ಇದನ್ನೂ ಓದಿ: ದಶಮುಖ ಅಂಕಣ: ಬಾಗಿಲನು ತೆರೆದು…

Exit mobile version