Site icon Vistara News

ವಿಸ್ತಾರ ಸಂಪಾದಕೀಯ: ಕಲುಷಿತ ನೀರಿನಿಂದ ಸಾವು, ಉಚಿತ ಸ್ಕೀಮ್ ಗಿಮಿಕ್‌ ಬಿಟ್ಟು ಮೂಲ ಸೌಕರ್ಯ ಕಲ್ಪಿಸಿ

Drinking Water

ರಾಜ್ಯದೆಲ್ಲೆಡೆ ವಿದ್ಯುತ್ ಉಚಿತ ಸಿಗುತ್ತದೆಯೇ, ಬಸ್‌ ಪ್ರಯಾಣ ಯಾವಾಗ ಫ್ರೀ ಮಾಡುತ್ತಾರೆ, ಮಾಸಿಕ ದುಡ್ಡು ಸಿಗುತ್ತದೆಯೇ ಎಂಬ ವಿಷಯಗಳೇ ನಿತ್ಯ ಚರ್ಚೆಯಾಗುತ್ತಿವೆ. ಸ್ವಾತಂತ್ರ್ಯ ನಂತರದ 75 ವರ್ಷಗಳಲ್ಲಿ ರಾಜಕೀಯ ಪಕ್ಷಗಳು ಇಂಥ ಅಗ್ಗದ ಯೋಜನೆಗಳ ಆಮಿಷ ತೋರಿಸಿಯೇ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿವೆ; ಅಧಿಕಾರಕ್ಕೆ ಏರುತ್ತಿವೆ. ಜನ ಕೂಡ ಅಗ್ಗದ ಆಮಿಷಗಳ ಬಲೆಗೆ ಬೀಳುತ್ತ ಬಂದಿದ್ದಾರೆ. ಆದರೆ ಇನ್ನೊಂದೆಡೆ, ತಮಗೆ ದಶಕಗಳ ಹಿಂದೆಯೇ ಸಿಗಬೇಕಾಗಿದ್ದ ಕನಿಷ್ಠ ಮೂಲಸೌಕರ್ಯಗಳೂ ಸಿಗದೆ ಜೀವ ತೆರುತ್ತಿದ್ದಾರೆ. ಇದಕ್ಕಿಂತ ವಿಪರ್ಯಾಸ ಮತ್ತೊಂದಿಲ್ಲ.

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಜನ ಕಲುಷಿತ ನೀರು ಕುಡಿದು ಅನ್ಯಾಯವಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ನಿತ್ಯವೂ ಒಂದಲ್ಲ ಕಡೆ ಇಂಥ ಘಟನೆಗಳು ನಡೆಯುತ್ತಲೇ ಇರುತ್ತವೆ. ಶೌಚಾಲಯದ ನೀರು, ಚರಂಡಿಯ ನೀರು ಕುಡಿಯುವ ನೀರಿಗೆ ಸೇರಿ, ಜನ ಆ ನೀರೇ ಕುಡಿಯುವಂಥ ಸ್ಥಿತಿ ಎದುರಾಗಿರುವುದು ಅತ್ಯಂತ ಶೋಚನೀಯವಾಗಿದೆ. ವರ್ಷಗಳಿಂದ ಈ ಸಮಸ್ಯೆ ಇದ್ದರೂ ಸರ್ಕಾರ ಈ ದುರವಸ್ಥೆಗೆ ಪರಿಹಾರ ಕಂಡು ಹಿಡಿಯದಿರುವುದು ನಾಚಿಕೆಗೇಡಿನ ಸಂಗತಿ. ಭಾರತ ಸ್ವತಂತ್ರವಾದ 75ನೇ ವರ್ಷದ ಸಂದರ್ಭದಲ್ಲಿ ನೂತನ ಸಂಸತ್‌ ಭವನ ಭಾನುವಾರ ಇಡೀ ಜಗತ್ತೇ ಕಣ್ಣರಳಿಸಿ ನೋಡುವಂತೆ ವೈಭವಯುತವಾಗಿ, ಅದ್ಧೂರಿಯಾಗಿ ಉದ್ಘಾಟನೆಯಾಗಿದೆ. ಅದೇ ಹೊತ್ತಿನಲ್ಲಿ ನಮ್ಮ ರಾಯಚೂರಿನ ಜನ ಮಲ ಮಿಶ್ರಿತ ನೀರು ಕುಡಿದು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿರುವುದು ಪ್ರಜಾಪ್ರಭುತ್ವದ ಅಣಕ ಎನ್ನಬಹುದು. ರಾಯಚೂರು ಮಾತ್ರವಲ್ಲ, ದೇಶದ ಹಲವು ಭಾಗಗಳಲ್ಲಿ ಇಂಥದ್ದೇ ಪರಿಸ್ಥಿತಿ ಇರಬಹುದು.

ನಿರ್ದಿಷ್ಟವಾಗಿ ರಾಯಚೂರು ಜಿಲ್ಲೆಯ ಪ್ರಕರಣಗಳ ಬಗ್ಗೆ ಹೇಳುವುದಾದರೆ, ಏಷ್ಯಾದಲ್ಲೇ ಅತ್ಯಂತ ಹಿಂದುಳಿದ ತಾಲೂಕು ಎಂದು ಗುರುತಿಸಿಕೊಂಡಿರುವ ದೇವದುರ್ಗದ ರೇಕಲಮರಡಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 5 ವರ್ಷದ ಮಗು ಪ್ರಾಣಬಿಟ್ಟರೆ 30ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ. ಮತ್ತೊಬ್ಬ ಬಾಲಕಿ ಗಂಭೀರ ಸ್ಥಿತಿಯಲ್ಲಿದ್ದಾಳೆ. ಇನ್ನು ಲಿಂಗಸಗೂರು ತಾಲೂಕಿನ ಗೊರೆಬಾಳ ಗ್ರಾಮದಲ್ಲಿ 25ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ. ಮೂವರ ಕಿಡ್ನಿ ವೈಫಲ್ಯ ಕಂಡಿದ್ದು, ಅವರ ಸ್ಥಿತಿಯೂ ಗಂಭೀರವಾಗಿದೆ. ಈ ಸಮಸ್ಯೆ ಕೇವಲ ರಾಯಚೂರಿಗೆ ಮಾತ್ರವೇ ಸಿಮೀತವಾಗಿಲ್ಲ. ಕಳೆದ ಆರೇಳು ತಿಂಗಳಗಳ ಮಾಹಿತಿಯನ್ನು ನೋಡಿದರೆ, ವಿಶೇಷವಾಗಿ ಕಲ್ಯಾಣ ಕರ್ನಾಟಕದ ಬೀದರ್, ಯಾದಗಿರಿ, ಕಲಬುರಗಿ, ರಾಯಚೂರು ಜಿಲ್ಲೆಗಳಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗುತ್ತಿರುವ ಪ್ರಕರಣಗಳು ಸರಾಸರಿ ಹದಿನೈದು ದಿನಕ್ಕೆ ಒಂದರಂತೆ ನಡೆದಿರುವ ಸಾಧ್ಯತೆ ಇದೆ. ಹೀಗಿದ್ದೂ, ಅಲ್ಲಿನ ಸ್ಥಳೀಯ ಆಡಳಿತಗಳಾಗಲೀ, ಸರ್ಕಾರದ ಮಟ್ಟದಲ್ಲಾಗಲಿ ಇದು ಗಂಭೀರ ವಿಷಯವಾಗಿ ಚರ್ಚೆಯಾಗುತ್ತಿಲ್ಲ. ಜನರು ಜೀವ ಕಳೆದುಕೊಳ್ಳುವುದೂ ನಿಲ್ಲುತ್ತಿಲ್ಲ.

ಕೇಂದ್ರ ಸರ್ಕಾರವು ಜಲ್ ಜೀವನ್ ಮಿಷನ್, ರಾಜ್ಯ ಸರ್ಕಾರವು ಶುದ್ಧ ಕುಡಿಯುವ ನೀರು ಪೂರೈಕೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಹಾಗಿದ್ದೂ, ಕಲುಷಿತ ನೀರು ಸೇವನೆಯ ಪ್ರಕರಣಗಳು ಏಕೆ ಹೆಚ್ಚಾಗುತ್ತಿವೆ ಎಂಬುದಕ್ಕೆ ಉತ್ತರ ತೀರಾ ಕಷ್ಟವಲ್ಲ. ಯೋಜನೆಯ ಜಾರಿಯಲ್ಲಾಗುತ್ತಿರುವ ವೈಫಲ್ಯಗಳು, ಅಧಿಕಾರಿಗಳ ನಿರಾಸಕ್ತಿಯು, ಕುಡಿಯುವ ನೀರಿನ ಟ್ಯಾಂಕುಗಳ ಸೂಕ್ತ ನಿರ್ವಹಣೆ ಕೊರತೆ, ಒಳ ಚರಂಡಿಗಳ ಕಳಪೆ ಕಾಮಗಾರಿ ಹಾಗೂ ಈ ಎಲ್ಲ ಕಾಮಗಾರಿಗಳಲ್ಲಿ ರಾಜಕಾರಣಿಗಳು ಹಸ್ತಕ್ಷೇಪವನ್ನು ಕಾರಣವಾಗಿ ನೀಡಬಹುದು. ಪ್ರತಿಯೊಬ್ಬರ ಜೀವ ಅಮೂಲ್ಯ. 21ನೇ ಶತಮಾನದಲ್ಲೂ ಕಲುಷಿತ ನೀರು ಕುಡಿದು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆಂಬುದೇ ಅತ್ಯಂತ ಅಮಾನವೀಯ ಸಂಗತಿಯಾಗಿದೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ನೂತನ ಸಂಸತ್ ಕಟ್ಟಡ ಪ್ರಜಾತಂತ್ರವನ್ನು ಮತ್ತಷ್ಟು ಮೆರೆಸಲಿ

ಸರ್ಕಾರಗಳು ಚುನಾವಣೆ ವೇಳೆ ಜಾರಿ ಮಾಡಲು ಸಾಧ್ಯವಾಗದ ಉಚಿತ ಯೋಜನೆಗಳ ಆಮಿಷ ಒಡ್ಡುವುದಕ್ಕಿಂತ, ಜನಸಾಮಾನ್ಯರಿಗೆ ಸೂಕ್ತ ಮೂಲಸೌಕರ್ಯ ಕಲ್ಪಿಸಿ ಅವನ ಜೀವನಮಟ್ಟವನ್ನು ಏರಿಸಲಿ. ರಾಜ್ಯದಲ್ಲಿ ಹೊಸದಾಗಿ ಅಧಿಕಾರಕ್ಕೆ ಏರಿರುವ ಕಾಂಗ್ರೆಸ್ ಸರ್ಕಾರವು ಈ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ಕೊಟ್ಟು ಕೆಲಸ ಮಾಡಲಿ. ಕಲ್ಯಾಣ ಕರ್ನಾಟಕದಲ್ಲಿ ಕಲುಷಿತ ನೀರು ಸೇವನೆ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಲಿ. ಈ ಘಟನೆಗಳಿಗೆ ಕಾರಣರಾದವರನ್ನು ಶಿಕ್ಷಿಸುವ ಕೆಲಸವನ್ನು ಮಾಡಬೇಕು. ಜತೆಗೆ, ಶುದ್ಧ ಕುಡಿಯುವ ನೀರು ಪೂರೈಸುವ ಸಂಬಂಧ ಅಗತ್ಯ ಬಿದ್ದರೆ ಹೊಸ ಯೋಜನೆಯನ್ನಾದರೂ ಜಾರಿ ಮಾಡಲು ಹಿಂಜರಿಯಬಾರದು.

Exit mobile version