Site icon Vistara News

Death News: “ಕಾಂಗ್ರೆಸ್‌ ಶವಯಾತ್ರೆ….” ಭಾಷಣ ಮುಗಿಸಿ ಬಿಜೆಪಿ ನಾಯಕ ಭಾನುಪ್ರಕಾಶ್ ಸ್ಥಳದಲ್ಲೇ ನಿಧನ

death news bhanuprakash petrol diesel price hike

ಶಿವಮೊಗ್ಗ: ಪೆಟ್ರೋಲ್- ಡಿಸೇಲ್ ಬೆಲೆ ಏರಿಕೆ (Petrol Diesel Price hike) ಪ್ರತಿಭಟಿಸಿ ಬಿಜೆಪಿ (BJP protest) ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗಿಯಾದ ಬಿಜೆಪಿ ನಾಯಕ, ವಿಧಾನ ಪರಿಷತ್‌ ಮಾಜಿ ಸದಸ್ಯ ಎಂ.ಬಿ ಭಾನುಪ್ರಕಾಶ್‌ (MB Bhanuprakash) ಅವರು ಭಾಷಣ ಮುಗಿಸಿದ ತಕ್ಷಣವೇ ಹೃದಯಾಘಾತಕ್ಕೊಳಗಾಗಿ (Heart Attack) ಮೃತಪಟ್ಟಿದ್ದಾರೆ (Death News).

ಬಿಜೆಪಿ ಪ್ರತಿಭಟನೆಯಲ್ಲಿ ಅವರು ʼಕಾಂಗ್ರೆಸ್‌ನ ಶವಯಾತ್ರೆ ಮಾಡಬೇಕುʼ ಎಂದು ನೀಡಿದ ಭಾಷಣ ಇದೀಗ ವೈರಲ್‌ (Viral speech) ಆಗುತ್ತಿದೆ. ಶಿವಮೊಗ್ಗದ ಗೋಪಿ ಸರ್ಕಲ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿಧಾನ ಪರಿಷತ್‌ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್‌, ಭಾಷಣ ಮುಗಿಸಿದ ಕೂಡಲೇ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದರು. ಕೂಡಲೇ ಅವರನ್ನು ಶಿವಮೊಗ್ಗದ ಮ್ಯಾಕ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಭಾನುಪ್ರಕಾಶ್‌ ಅವರು ಕೊನೆಯುಸಿರು ಎಳೆದರು.

“ಕಾಂಗ್ರೆಸ್ ಶವಯಾತ್ರೆ ಮಾಡಲು ನೀವು ಇಲ್ಲಿಗೆ ಬರಬೇಕು ಎಂದು ಹೇಳಿದರು. ಯಾವಾಗ, ಎಷ್ಟು ಹೊತ್ತಿಗೆ, ಯಾಕೆ ಡಾಕ್ಟರ್ ಬಳಿ ತೋರಿಸಿಲ್ಲವೆ, ಸಂಬಂಧಿಕರಿಗೆ ತಿಳಿಸಿದ್ದೀರಾ ಎಂದು ಕೇಳಿದೆ. ಶವಯಾತ್ರೆಗೆ ಕಾಂಗ್ರೆಸ್ ಪರವಾಗಿ ಸಿದ್ದು, ಡಿಕೆಶಿ ಬರುತ್ತಾರೆ ಎಂದರು. ಸರ್ಕಾರ ಆರಿಸಿ ಬರಲಿಕ್ಕೆ ಬೇಕಾಗಿ ಭರವಸೆ ಕೊಡುವ ಗ್ಯಾರಂಟಿ ನೀಡಿದರು. ಅದನ್ನು ನಾವು ಸ್ವಾಗತಿಸಿದ್ದೇವೆ. ಅದನ್ನು ಮಾಡಬಾರದು ಎಂದಿದ್ದರೆ ನಾವು ಬಡವರ ವಿರೋಧಿಗಳಾಗುತ್ತಿದ್ದೆವು. ನಾವು ಬಡವರ ಪರ, ನಾವೆಲ್ಲ ದೀನ ದಲಿತರ ಪರವಾಗಿಯೆ ಇದ್ದೆವು. ಆದರೆ ಬರೀ ಬಾಯಿಮಾತಿನಲ್ಲಿ ಹೇಳದೆ ನಾವು ಅದನ್ನು ಮಾಡುತ್ತಾ ಬಂದಿದ್ದೇವೆ” ಎಂದು ಭಾನುಪ್ರಕಾಶ್‌ ಭಾಷಣದಲ್ಲಿ ಹೇಳಿದ್ದರು.

“ಕಾಂಗ್ರೆಸ್‌ ಸರಕಾರ ತುಘ್ಲಕ್‌ ಸರಕಾರದಂತಾಗಿದೆ. ಸಾವಿರಾರು ಜನ ಸತ್ತರೂ ಆತ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಬೆಲೆ ಏರಿಕೆ, ಹಿಂದೂಗಳ ದಮನ ಆಗುತ್ತಿದ್ದರೂ ಕಾಂಗ್ರೆಸ್‌ ಸರಕಾರ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇಂಧನ ಬೆಲೆ‌ ಹೆಚ್ಚುತ್ತಾ ಹೋದಂತೆ ಎಲ್ಲ ವಸ್ತುಗಳ ಬೆಲೆ ಹೆಚ್ಚುತ್ತಾ ಹೋಗುತ್ತದೆ. ಸರಕಾರದಲ್ಲಿನ ವ್ಯಕ್ತಿಗಳ ಬೆಲೆ, ಯೋಗ್ಯತೆ ಇಳಿಯುತ್ತದೆ. ನಾವು ಪ್ರತಿಭಟನೆ ಮೂಲಕ ಕಾಂಗ್ರೆಸ್‌ಗೆ ಕೊನೆಯ ಮೊಳೆ ಹೊಡೆಯುವ ಎಚ್ಚರಿಕೆ ನೀಡುತ್ತಿದ್ದೇನೆ. ಇವತ್ತು ನಡೆದಿರುವುದು ಸಾಂಕೇತಿಕ ಪ್ರತಿಭಟನೆ ಮಾತ್ರ. ನಿಮ್ಮ ಭ್ರಷ್ಟ ಆಡಳಿತ ತೊಲಗಿಸುವ ತನಕ ನಾವು ವಿಶ್ರಮಿಸುವುದಿಲ್ಲ” ಎಂದು ಭಾನುಪ್ರಕಾಶ್‌ ಭಾಷಣ ಮುಗಿಸಿದರು.

ತದನಂತರ ಅವರು ಅಸ್ವಸ್ಥರಾದರು. ಕೂಡಲೇ ಆಸ್ಪತ್ರೆಗೆ ಅವರನ್ನು ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟರು. ಭಾನುಪ್ರಕಾಶ್ ಅವರ ಮೃತದೇಹವನ್ನು ಶಿವಮೊಗ್ಗ ತಾಲೂಕಿನ ಮತ್ತೂರು ಗ್ರಾಮದ ಸ್ವಗೃಹಕ್ಕೆ ಕೊಂಡೊಯ್ಯಲಾಗಿದೆ.

ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

ಬೆಂಗಳೂರು: ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಏರಿಸಿದ (Petrol Diesel Price Hike) ರಾಜ್ಯ ಸರಕಾರದ (Karnataka Govt) ಕ್ರಮವನ್ನು ಖಂಡಿಸಿದ ಪ್ರತಿಪಕ್ಷ ಬಿಜೆಪಿ (BJP protest) ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ (Freedom park) ಬಿಜೆಪಿಯ ರಾಜ್ಯ ಪದಾಧಿಕಾರಿಗಳು ಹಾಗೂ ಇತರ ನಾಯಕರು ಪ್ರತಿಭಟಿಸಿ ಭಾಷಣ ಮಾಡಿದರು. ಪ್ರತಿಭಟನೆ ಮಾಡಿ ಸಿಎಂ ಸಿದ್ದರಾಮ‌ಯ್ಯ (CM Siddarmaiah) ಕಚೇರಿಗೆ ಮುತ್ತಿಗೆ ಹಾಕಲು ಹೊರಟ ಆರ್.‌ ಅಶೋಕ್‌ (R Ashok) ಸೇರಿದಂತೆ ಬಿಜೆಪಿ ನಾಯಕರನ್ನು ಪೊಲೀಸರು ಬಂಧಿಸಿದರು.

ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ಬಳಿಕ ಎತ್ತಿನಗಾಡಿ ಮೂಲಕ ಸಿಎಂ ಸಿದ್ದರಾಮಯ್ಯ ನಿವಾಸ ಕಾವೇರಿಗೆ ಮುತ್ತಿಗೆ ಹಾಕಲು ಹೊರಟ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ. ಅಶೋಕ್ ಮತ್ತು ಇತರ ಕಾರ್ಯಕರ್ತರನ್ನು ಪೊಲೀಸರು ತಡೆದರು. ʼʼಪೆಟ್ರೋಲ್ ರೇಟ್‌ ಹೆಚ್ಚಾಗಿದೆ. ಬಸ್‌ವರೆಗೂ ಎತ್ತಿನಗಾಡಿ ಬಿಡಿ” ಎಂದು ಅಶೋಕ್ ಆಗ್ರಹಿಸಿದರು. ಪೊಲೀಸರು ಮತ್ತು ಅಶೋಕ್ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಬಸ್‌ವರೆಗೂ ಎತ್ತಿನ ಗಾಡಿ ಬಿಟ್ಟು ನಂತರ ಅವರನ್ನು ಬಂಧಿಸಿದ ಪೊಲೀಸರು, ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಕರೆದೊಯ್ದರು.

ವಿಭಿನ್ನ ರೀತಿಯ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಚಟ್ಟ ಕಟ್ಟಿ ರಾಜ್ಯ ಸರ್ಕಾರದ ಹೆಣದ ಮೆರವಣಿಗೆ ಮಾಡಿದರು. ʼಐದು ಗ್ಯಾರಂಟಿಗಳ ಗೋವಿಂದ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಗೋವಿಂದʼ ಎಂದು ಚಟ್ಟ ಹಿಡಿದು ಮೆರವಣಿಗೆ ಮಾಡಿದರು.

ಇದನ್ನೂ ಓದಿ: Petrol Diesel Price Hike: ಬಿಜೆಪಿಯವರು ಪ್ರತಿಭಟನೆ ಮಾಡಬೇಕಿರೋದು ಕೇಂದ್ರದ ವಿರುದ್ಧ: ಸಿಎಂ ತಿರುಗೇಟು

Exit mobile version