ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಅವರನ್ನು ಮತ್ತೆ 14 ದಿನ ನ್ಯಾಯಾಂಗ ಬಂಧನಕ್ಕೆ (Judicial Custody) ಒಪ್ಪಿಸಿ ದೆಹಲಿ ಅವೆನ್ಯೂ ಕೋರ್ಟ್ (Dehli avenue Court) ಆದೇಶ ನೀಡಿದೆ. ಸಿಬಿಐ ನಡೆಸುತ್ತಿರುವ ದೆಹಲಿ ಮದ್ಯ ನೀತಿ (Delhi Excise policy) ಪ್ರಕರಣದಲ್ಲಿ, ಅವರಿಗೆ ನೀಡಲಾಗಿದ್ದ ಜಾಮೀನನ್ನು ಪ್ರಶ್ನಿಸಲಾಗಿತ್ತು.
ತನಿಖೆ ಮತ್ತು ಮುಕ್ತ ನ್ಯಾಯಾಂಗ ಪ್ರಕ್ರಿಯೆಯ ದೃಷ್ಟಿಯಿಂದ ಕೇಜ್ರಿವಾಲ್ ಅವರನ್ನು ಕಸ್ಟಡಿಗೆ ಪಡೆಯುವುದು ಅಗತ್ಯವಿದೆ ಎಂದು ಸಿಬಿಐ ಹೇಳಿದೆ. ಮೂರು ದಿನಗಳ ಸಿಬಿಐ ಕಸ್ಟಡಿ ಅಂತ್ಯಗೊಂಡ ನಂತರ ಕೇಜ್ರಿವಾಲ್ ಅವರನ್ನು ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಆದೇಶವನ್ನು ವಿಶೇಷ ನ್ಯಾಯಾಧೀಶ ಸುನೇನಾ ಶರ್ಮಾ ಕಾಯ್ದಿರಿಸಿದ್ದರು. ಕೇಜ್ರಿವಾಲ್ ತನಿಖೆಗೆ ಸಹಕಾರ ನೀಡುತ್ತಿಲ್ಲ, ಸರಿಯಾದ ಉತ್ತರಗಳನ್ನು ಕೊಡುತ್ತಿಲ್ಲ ಎಂದು ಸಿಬಿಐ ರಿಮಾಂಡ್ ಅರ್ಜಿಯಲ್ಲಿ ಆರೋಪಿಸಿದೆ.
2021-22 ರ ದೆಹಲಿಯ ಹೊಸ ಅಬಕಾರಿ ನೀತಿಯ ಅಡಿಯಲ್ಲಿ ಸಗಟು ವ್ಯಾಪಾರಿಗಳ ಲಾಭದ ಪ್ರಮಾಣವನ್ನು ಶೇಕಡಾ 5 ರಿಂದ 12 ಕ್ಕೆ ಹೆಚ್ಚಿಸಿರುವ ಬಗ್ಗೆ ಯಾವುದೇ ಸಮರ್ಥನೆ ಅಥವಾ ಸತ್ಯವಾದ ವಿವರಣೆ ನೀಡಿಲ್ಲ ಎಂದು ಸಿಬಿಐ ಆರೋಪಿಸಿದೆ. ಕೋವಿಡ್‌ನ ಎರಡನೇ ಅಲೆಯ ಸಂದರ್ಭದಲ್ಲಿ ದಕ್ಷಿಣ ಭಾರತದ ಪ್ರಮುಖರು ದೆಹಲಿಯಲ್ಲಿ ಮೊಕ್ಕಾಂ ಹೂಡಿದಾಗ, ಪರಿಷ್ಕೃತ ಅಬಕಾರಿ ನೀತಿಗೆ ಕ್ಯಾಬಿನೆಟ್ ಅನುಮೋದನೆಯನ್ನು ಒಂದೇ ದಿನದಲ್ಲಿ ತರಾತುರಿಯಲ್ಲಿ ಚಲಾವಣೆ ಮಾಡುವ ಮೂಲಕ ಏಕೆ ಪಡೆಯಲಾಯಿತು ಎಂಬುದನ್ನು ವಿವರಿಸಲು ಅವರಿಗೆ ಸಾಧ್ಯವಾಗಿಲ್ಲ ಎಂದಿದೆ. ಕೇಜ್ರಿವಾಲ್ ಅವರು ಪ್ರಕರಣದ ಆರೋಪಿಗಳಾದ ಮಾಗುಂಟ ಶ್ರೀನಿವಾಸಲು ರೆಡ್ಡಿ, ಅರ್ಜುನ್ ಪಾಂಡೆ ಮತ್ತು ಮೂತ ಗೌತಮ್ ಅವರನ್ನು ಭೇಟಿಯಾದ ಬಗ್ಗೆ ಸರಿಯಾದ ವಿವರಣೆಯನ್ನು ಕೊಟ್ಟಿಲ್ಲ ಎಂದು ಸಿಬಿಐ ಹೇಳಿದೆ.
ಕೇಜ್ರಿವಾಲ್ ಪ್ರಮುಖ ರಾಜಕಾರಣಿ ಮತ್ತು ದೆಹಲಿಯ ಮುಖ್ಯಮಂತ್ರಿಯಾಗಿರುವುದರಿಂದ, ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿರುವುದರಿಂದ, ಕಸ್ಟಡಿ ವಿಚಾರಣೆಯ ಸಮಯದಲ್ಲಿ ಅವರು ಈಗಾಗಲೇ ಬಹಿರಂಗಪಡಿಸಿದ ಸಾಕ್ಷಿಗಳು ಮತ್ತು ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಬಹುದು. ಇನ್ನೂ ಪರಿಶೀಲಿಸಬೇಕಾದವರು, ಮತ್ತಷ್ಟು ಸಂಗ್ರಹಿಸಬೇಕಾದ ಪುರಾವೆಗಳನ್ನು ಹಾಳು ಮಾಡಿ ಮತ್ತು ನಡೆಯುತ್ತಿರುವ ತನಿಖೆಗೆ ಅಡ್ಡಿಯಾಗಬಹುದು ಎಂದು ಸಿಬಿಐ ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಿದೆ.
2021-22ರ ದೆಹಲಿ ಮದ್ಯ ನೀತಿಯನ್ನು ರೂಪಿಸುವಾಗ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಮಾರ್ಚ್ 21ರಂದು ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಮೊದಲು ಬಂಧಿಸಿತ್ತು. ಕೇಜ್ರಿವಾಲ್ ಅವರು ಎಎಪಿಯ ಸಂಚಾಲಕರಾಗಿದ್ದರಿಂದ ಗೋವಾದಲ್ಲಿ ಪಕ್ಷದ ಪ್ರಚಾರಕ್ಕೆ ಹಣ ನೀಡಲು ಮದ್ಯ ಮಾರಾಟಗಾರರಿಂದ ಪಡೆದ ಹಣವನ್ನು ಬಳಸಲಾಗಿದೆ ಎಂದು ಇಡಿ ಆರೋಪಿಸಿದೆ. ಕೇಜ್ರಿವಾಲ್ ಮತ್ತು ಇತರ ಪ್ರಮುಖ ಆಮ್ ಆದ್ಮಿ ಪಾರ್ಟಿ ನಾಯಕರಿಗೆ ಕೇಂದ್ರ ಸರ್ಕಾರ ತನ್ನ ಏಜೆನ್ಸಿಗಳನ್ನು ಬಳಸಿಕೊಂಡು ಸುಳ್ಳು ಪ್ರಕರಣಗಳನ್ನು ದಾಖಲಿಸಿ ಕಿರುಕುಳ ನೀಡುತ್ತಿದೆ ಎಂದು ಪಕ್ಷದ ನಾಯಕರು ಆರೋಪಿಸಿದ್ದಾರೆ.
ಇದನ್ನೂ ಓದಿ: Arvind Kejriwal: ಪ್ಯಾಂಟ್ ಲೂಸ್ ಆಗಿದೆ, ಒಂದು ಬೆಲ್ಟ್ ಕೊಡಿ; ಕೋರ್ಟ್‌ಗೆ ಅರವಿಂದ್ ಕೇಜ್ರಿವಾಲ್ ಮನವಿ