Site icon Vistara News

Dengue cases in Karnataka: ರಾಜ್ಯದಲ್ಲಿಂದು 175 ಡೆಂಗ್ಯೂ ಕೇಸ್‌ಗಳು ಪತ್ತೆ; ಸಕ್ರಿಯ ಪ್ರಕರಣಗಳ ಸಂಖ್ಯೆ 352ಕ್ಕೆ ಏರಿಕೆ!

Dengue cases in Karnataka

ಬೆಂಗಳೂರು: ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 175 ಡೆಂಗ್ಯೂ ಕೇಸ್‌ಗಳು ಪತ್ತೆಯಾಗಿವೆ. ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯಲ್ಲೇ 115 ಹೊಸ ಕೇಸ್‌ಗಳು ವರದಿಯಾಗಿದ್ದು, ಒಟ್ಟಾರೆ ರಾಜ್ಯದಲ್ಲಿ (Dengue cases in Karnataka) 352 ಸಕ್ರಿಯ ಡೆಂಗ್ಯೂ ಪ್ರಕರಣಗಳು ಇವೆ. ಡೆಂಗ್ಯೂ ಸೋಂಕಿನಿಂದ ಜನವರಿಯಿಂದ ಈವರೆಗೆ ಒಟ್ಟು 6 ಮಂದಿ ಮೃತಪಟ್ಟಿದ್ದಾರೆ.

ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 753 ಮಂದಿಗೆ ಡೆಂಗ್ಯೂ ಟೆಸ್ಟ್‌ ನಡೆಸಿದ್ದು, ಈ ಪೈಕಿ 175 ಮಂದಿಗೆ ಸೋಂಕು ದೃಢವಾಗಿದೆ. ಜಿಲ್ಲಾವಾರು ನೋಡುವುದಾದರೆ ಬೆಂಗಳೂರಿನಲ್ಲಿ 115, ಬೆಂಗಳೂರು ಗ್ರಾಮಾಂತರ 2, ವಿಜಯಪುರ 9, ಗದಗ 8, ಉತ್ತರ ಕನ್ನಡ 1, ಬಳ್ಳಾರಿ 1, ಮಂಡ್ಯ 26, ಉಡುಪಿ 2, ಕೊಡಗು ಜಿಲ್ಲೆಯಲ್ಲಿ 11 ಪ್ರಕರಣ ಪತ್ತೆಯಾಗಿವೆ. ಸದ್ಯ ಇರುವ 325 ಸಕ್ರಿಯ ಪ್ರಕರಣಗಳ ಪೈಕಿ 45 ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜನವರಿಯಿಂದ ಈವರೆಗೆ ರಾಜ್ಯದಲ್ಲಿ ಒಟ್ಟು 7,006 ಡೆಂಗ್ಯೂ ಕೇಸ್‌ಗಳು ವರದಿಯಾಗಿದ್ದು, ಒಟ್ಟು 6 ಮಂದಿ ಮೃತಪಟ್ಟಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿಯೇ 1,908 ಸೋಂಕು ಪ್ರಕರಣಗಳು ದಾಖಲಾಗಿವೆ.

ಶಿರಸಿಯಲ್ಲಿ ಶಂಕಿತ ಡೆಂಗ್ಯೂ ಜ್ವರದಿಂದ ವಿದ್ಯಾರ್ಥಿನಿ ಸಾವು

ಕಾರವಾರ: ಶಂಕಿತ ಡೆಂಗ್ಯೂ ಜ್ವರದಿಂದ (Dengue fever) ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಶಿರಸಿಯ ಕಸ್ತೂರಬಾ ನಗರದ ಸುಹಾನಾ ಮಹ್ಮದ್ ಶಫಿ (12) ಮೃತ ದುರ್ದೈವಿ. ಡೆಂಗ್ಯೂ ಲಕ್ಷಣಗಳು ಕಂಡುಬಂದಿದ್ದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಜ್ವರಕ್ಕೆ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದಳು. ಚಿಕಿತ್ಸೆ ಫಲಿಸದ ಹಿನ್ನೆಲೆಯಲ್ಲಿ ಬಾಲಕಿ ಕೊನೆಯುಸಿರೆಳೆದಿದ್ದಾಳೆ.

ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿರಸಿ ನಗರದ ಮಹಾಲಕ್ಷ್ಮಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಬಾಲಕಿ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಇದುವರೆಗೆ 122 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ಅಬ್ಬರ

ಉತ್ತರ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ಅಬ್ಬರಿಸುತ್ತಿದೆ. ಇದುವರೆಗೆ ಜಿಲ್ಲೆಯಲ್ಲಿ 122 ಮಂದಿಗೆ ಡೆಂಗ್ಯೂ ದೃಢವಾಗಿದ್ದು, 1692 ಡೆಂಗ್ಯೂ ಶಂಕಿತರನ್ನು ಪತ್ತೆ ಹಚ್ಚಲಾಗಿದೆ. 1499 ಮಂದಿ ಡೆಂಗ್ಯೂ ಶಂಕಿತರಿಗೆ ಪರೀಕ್ಷೆ ನಡೆಸಲಾಗಿದೆ.

ಜಿಲ್ಲೆಯ ಅಂಕೋಲಾ, ಹೊನ್ನಾವರ ತಾಲೂಕುಗಳಲ್ಲಿ 30ಕ್ಕೂ ಅಧಿಕ ಡೆಂಗ್ಯೂ ಸೋಂಕಿತರು ಪತ್ತೆಯಾಗಿದ್ದಾರೆ. ಹೀಗಾಗಿ ಡೆಂಗ್ಯೂ ಕುರಿತು ಮನೆ ಮನೆಗೆ ತೆರಳಿ ಆಶಾಕಾರ್ಯಕರ್ತೆಯರು ಜಾಗೃತಿ ಮೂಡಿಸುತ್ತಿದ್ದಾರೆ. ನೀರು ಖಾಲಿ‌ ಮಾಡಲು ಸಾಧ್ಯವಾದ ಸ್ಥಳಗಳಲ್ಲಿ ಲಾರ್ವಾ ನಾಶಕ ಔಷಧ ಸಿಂಪಡಣೆಗೆ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ | Dengue fever: ಹಾವೇರಿಯಲ್ಲಿ ಶಂಕಿತ ಡೆಂಗ್ಯೂಗೆ 9 ವರ್ಷದ ಮಗು ಬಲಿ

ಆರೋಗ್ಯ ಇಲಾಖೆಯಿಂದಲೂ ಜಾಗೃತಿ‌ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದ್ದು, ವಾರಕ್ಕೊಮ್ಮೆ ಮನೆ ಮನೆಗೆ ಭೇಟಿ ನೀಡಿ ಆಶಾಕಾರ್ಯಕರ್ತೆಯರಿಂದ ಮಾಹಿತಿ ಸಂಗ್ರಹ ಕಾರ್ಯ ನಡೆಯುತ್ತಿದೆ. ಜ್ವರ ಬಂದಾಗ ನಿರ್ಲಕ್ಷ್ಯ ತೋರದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಸೂಚನೆ ನೀಡಲಾಗುತ್ತಿದೆ ಎಂದು ಕಾರವಾರ ತಾಲೂಕು ಆರೋಗ್ಯಾಧಿಕಾರಿ ಡಾ.ರಮೇಶ ರಾವ್ ಮಾಹಿತಿ ನೀಡಿದ್ದಾರೆ.

Exit mobile version