Site icon Vistara News

Dengue Fever: ಇನ್ನೂ ಏರಲಿದೆ ಡೆಂಗ್ಯು ಕೇಸ್‌ ಎಂದ ಆರೋಗ್ಯ ಸಚಿವರು; ಇದುವರೆಗೆ 6 ಸಾವು

dengue fever Dinesh Gundu Rao

ಬೆಂಗಳೂರು: ಇದುವರೆಗೆ ರಾಜ್ಯದಲ್ಲಿ ಡೆಂಗ್ಯು ಜ್ವರದಿಂದಾಗಿ (Dengue Fever) 6 ಜನ ಸತ್ತಿದ್ದಾರೆ. ಸೆಪ್ಟೆಂಬರ್‌ನಲ್ಲಿ ಡೆಂಗ್ಯು ಜ್ವರ ಪ್ರಕರಣಗಳು (Dengue Positive) ಇನ್ನೂ ಏರಬಹುದು ಎಂದು ಆರೋಗ್ಯ ಸಚಿವ (Health Minister) ದಿನೇಶ್‌ ಗುಂಡೂರಾವ್‌ (dinesh Gundu Rao) ಎಚ್ಚರಿಸಿದ್ದಾರೆ.

ಡೆಂಗ್ಯು ಹರಡುವಿಕೆ ನಿಯಂತ್ರಣದ ಬಗ್ಗೆ ವಿವಿಧ ಇಲಾಖೆಗಳ ಜೊತೆ ಸಭೆ ಮಾಡಿದ ಬಳಿಕ ಅವರು ಸುದ್ದಿಗೋಷ್ಠಿ ನಡೆಸಿದರು. ಡೆಂಗ್ಯು ಕಳೆದ ವರ್ಷಕ್ಕಿಂತ ಈ ಬಾರಿ ದುಪ್ಪಟ್ಟಾಗಿದೆ. ಇಲ್ಲಿಯವರೆಗೂ ರಾಜ್ಯದಲ್ಲಿ 6187 ಪ್ರಕರಣ ದಾಖಲಾಗಿದೆ. 6 ಜನ ಸತ್ತಿದ್ದಾರೆ. ಇದರಲ್ಲಿ ಕೋಮಾರ್ಬಿಡಿಟೀಸ್‌ (ಬಿಪಿ, ಮಧುಮೇಹ, ಹೃದಯ ಕಾಯಿಲೆ) ಇದ್ದ ಮೂವರೂ ಸೇರಿದ್ದಾರೆ ಎಂದು ಸಚಿವರು ತಿಳಿಸಿದರು.

ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ಬಾರಿ ಪ್ರಕರಣಗಳು ಡಬಲ್ ಆಗಿವೆ. ಜನವರಿಯಿಂದ ಜುಲೈ 1ರ ತನಕ ಒಟ್ಟು 6187 ಕೇಸ್ ಪಾಸಿಟಿವ್ ಇದೆ. ಕಳೆದ ವರ್ಷ 2903 ಇತ್ತು. ಇಷ್ಟೇ ಅಲ್ಲ ರಾಜ್ಯದಲ್ಲಿ ಮತ್ತಷ್ಟು ಡೆಂಗ್ಯು ಕೇಸ್ ಇರಬಹುದು. 47% ಟೆಸ್ಟಿಂಗ್ ರೇಟ್ ಹೆಚ್ಚಳ ಮಾಡಲಾಗಿದೆ. ಸದಾ ಮಳೆ ಬರುತ್ತಿದ್ದರೆ ಡೆಂಗ್ಯು ಸೊಳ್ಳೆ ಬರುವುದಿಲ್ಲ. ಮಳೆ ಬಿಟ್ಟು ಬಿಟ್ಟು ಬರುವ ಹಿನ್ನೆಲೆಯಲ್ಲಿ ಡೆಂಗ್ಯುವಿಗೆ ಅನುಕೂಲ ವಾತಾವರಣ ಇದೆ. ನಿಂತು ಬೀಳುವ ಮಳೆಯಿಂದಾಗಿ ಸೊಳ್ಳೆ ಹರಡುವಿಕೆ ಹೆಚ್ಚಾಗುತ್ತದೆ. ಇದು ಅನುಕೂಲ ಮಾಡಿಕೊಡುತ್ತದೆ. ಹವಾಮಾನ ಬದಲಾವಣೆಯಿಂದ ರೋಗ ಉಲ್ಬಣಗೊಳ್ಳುತ್ತಿದೆ ಎಂದು ಸಚಿವರು ತಿಳಿಸಿದರು.

ರಾಜ್ಯದಲ್ಲಿ ಒಟ್ಟು 6187 ಪ್ರಕರಣಗಳು ಇವೆ. 3463 ಪ್ರಕರಣ ನಗರ ಪ್ರದೇಶಗಳಲ್ಲಿ ಕಂಡು ಬಂದಿವೆ. 56% ನಗರ ಪ್ರದೇಶದಲ್ಲಿ, 44% ಗ್ರಾಮೀಣ ಪ್ರದೇಶದಲ್ಲಿ ಪೊಸಿಟಿವ್‌ ಬಂದಿವೆ. ಒಂದು ವರ್ಷದ ಒಳಗಿನ 123 ಮಕ್ಕಳಿಗೆ, 1-18 ವರ್ಷದ 2301 ಮಂದಿಗೆ, 19- 60 ವರ್ಷದ 3313 ಮಂದಿಗೆ, 61 ವರ್ಷ ಮೇಲಿನ 450 ಮಂದಿಗೆ ಪಾಸಿಟಿವ್‌ ಬಂದಿದೆ ಎಂದು ಮಾಹಿತಿ ನೀಡಿದರು.

ಡೆಂಗ್ಯು ಜ್ವರ ಇನ್ನಷ್ಟು ಹೆಚ್ಚಾಗಬಹುದು. ಸೆಪ್ಟಂಬರ್‌ನಲ್ಲಿ ಮತ್ತೆ ಹೆಚ್ಚಾಗುವ ಸಾಧ್ಯತೆ ಇದೆ. ಮುಖ್ಯಮಂತ್ರಿಗಳು ಮುಂಜಾಗ್ರತಾ ಕ್ರಮಕ್ಕೆ ಸೂಚಿಸಿದ್ದಾರೆ. ಟೆಸ್ಟಿಂಗ್ ಕಿಟ್ ಹೆಚ್ಚುವರಿ ಇರಿಸಲಾಗಿದೆ. ಪ್ಲೇಟ್‌ಲೆಟ್ಸ್‌ ಕೊಡುವುದಕ್ಕೆ ತಿಳಿಸಿದ್ದೇವೆ. ಡೆಂಗ್ಯುವಿಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಪ್ಲೇಟ್ ಲೆಟ್ಸ್ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ. ಬ್ಲಡ್ ಯೂನಿಟ್‌ಗಳ ಜತೆ ಮಾತುಕತೆ ಮಾಡಲಾಗಿದೆ. ಐವಿ ಫ್ಲೂವಿಡ್‌ಗಳನ್ನು ಕೊಡಲಾಗುತ್ತದೆ. ಇದು ನಮ್ಮ ಬಳಿ ಸಾಕಷ್ಟು ಇದೆ. ಆರಂಭದಲ್ಲಿ ಪ್ಯಾರಸಿಟಮಲ್ ಕೊಟ್ಟರೆ ಸಾಕಾಗುತ್ತದೆ ಎಂದು ತಿಳಿಸಿದರು.

ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ

ಖಾಸಗಿ ಆಸ್ಪತ್ರೆಗಳು ಡೆಂಗ್ಯು ಕೇಸ್ ರಿಪೋರ್ಟ್ ಮಾಡುತ್ತಿಲ್ಲ. ಕೆಪಿಎಂ ಆಕ್ಟ್ ಪ್ರಕಾರ ಖಾಸಗಿ ಆಸ್ಪತ್ರೆಗಳು ಡೆಂಗ್ಯು ಕೇಸ್ ರಿಪೋರ್ಟ್ ಮಾಡುವುದು ಕಡ್ಡಾಯ. IHIPಯಲ್ಲಿ ಅನೇಕ ಖಾಸಗಿ ಆಸ್ಪತ್ರೆಗಳು ಅಪ್ಲೋಡ್ ಮಾಡುತ್ತಿಲ್ಲ. ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕು. ಖಾಸಗಿ ಆಸ್ಪತ್ರೆಯಲ್ಲಿ ಡೆಂಗ್ಯು ತಪಾಸಣೆಗೆ ದರ ನಿಗದಿ ಮಾಡುವ ಬಗ್ಗೆ ಚರ್ಚೆ ಮಾಡಿಲ್ಲ. ಆ ಬಗ್ಗೆ ಮುಂದೆ ಚರ್ಚೆ ಮಾಡುತ್ತೇವೆ ಎಂದು ಅವರು ತಿಳಿಸಿದರು.

ನಮ್ಮ ವೆಬ್‌ಸೈಟಿನಲ್ಲಿ ಡೆಂಗ್ಯು ಬುಲೆಟಿನ್ ಬಿಡುಗಡೆ ಮಾಡುತ್ತೇವೆ. ಪ್ರತಿ ದಿನ ಎಷ್ಟು ಕೇಸ್ ಬಂದಿದೆ ಎನ್ನುವ ಮಾಹಿತಿ ಹಾಕುತ್ತೇವೆ. ದಿನ ನಿತ್ಯ ಡೆಂಗ್ಯು ಬುಲೆಟಿನ್ ಕೊಡಲಾಗುತ್ತದೆ. ಬೆಂಗಳೂರು ನಗರದಲ್ಲಿ ಬಿಬಿಎಂಪಿ ಎಲ್ಲಾ ಮನೆಗಳ ಸರ್ವೆ ಮಾಡುತ್ತಿದೆ. ಸೂಕ್ಷ್ಮ ಪ್ರದೇಶಗಳು ಮಾತ್ರವಲ್ಲ ಎಲ್ಲಾ ಮನೆಗಳ ಸರ್ವೆ ನಡೆಸಲು ನಾನು ಬಿಬಿಎಂಪಿಗೆ ಸೂಚನೆ ನೀಡಿದ್ದೇನೆ. ಮನೆ ಮನೆಗೆ ಭೇಟಿ ಕೊಡಲು ಸೂಚಿಸಿದ್ದೇನೆ. ರಾಜ್ಯಾದ್ಯಂತ ಡೆಂಗ್ಯು ಬಗ್ಗೆ ಕಟ್ಟೆಚ್ಚರ ವಹಿಸಲು ಸೂಚನೆ ಕೊಡಲಾಗಿದೆ. ಪ್ರತಿ ಶುಕ್ರವಾರ ಡೆಂಗ್ಯು ವಿಚಾರದಲ್ಲಿ ಫೀಲ್ಡ್‌ನಲ್ಲಿ ಇದ್ದು, ಮಾನಿಟರ್ ಮಾಡಲು ಸೂಚಿಸಿದ್ದೇನೆ. ಪ್ರತಿ ಶುಕ್ರವಾರ ಮನೆ ಮನೆ ಸಮೀಕ್ಷೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಎಲ್ಲೆಲ್ಲಿ ಪಾಸಿಟಿವ್ ಕೇಸ್ ಬರುತ್ತದೆಯೋ ಅಲ್ಲಿ ತೀವ್ರ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಲಾರ್ವ ನಾಶ, ಫಾಗಿಂಗ್ ಸೇರಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. RWA, ಕ್ರೆಡೈ ಸೇರಿ ಕಟ್ಟಡ ಮಾಲೀಕರು ಸೇರಿ ಅವರನ್ನು ಒಳಗೊಂಡು ಸಭೆ ನಡೆಸಲು ತೀರ್ಮಾನಿಸಿದ್ದೇವೆ. ಮೆಡಿಕಲ್ ಆಫೀಸರ್, MOH, ಸೈನ್ಸ್ ಟೀಚರ್ಸ್‌ಗೆ ಡೆಂಗ್ಯು ವಿಚಾರದಲ್ಲಿ ವಿಶೇಷ ತರಬೇತಿ ನೀಡಲಾಗಿದೆ. ಮಕ್ಕಳಿಗೆ ಡೆಂಗ್ಯು ಕುರಿತು ತಿಳಿವಳಿಕೆ ನೀಡಲಾಗಿದೆ. ಡಿಪೋಗಳಲ್ಲಿ ಟಯರ್‌ಗಳಲ್ಲಿ ಸೊಳ್ಳೆ ಉತ್ಪತ್ತಿ ಆಗುತ್ತಿರುವುದು ಕಂಡು ಬಂದಿದೆ. ಡಿಪೋಗಳಿಂದ ಸ್ಯಾಂಪಲ್ ಕಲೆಕ್ಟ್ ಮಾಡಲಾಗಿದೆ. ಹೆಚ್ಚು ಸಕ್ರಿಯ ಪ್ರಕರಣಗಳು ಕಂಡು ಬರ್ತಿದೆ. ಹೀಗಾಗಿ ಎಚ್ಚರಿಕೆ ವಹಿಸಲು ಸಾರಿಗೆ ಇಲಾಖೆಗೆ ಸೂಚಿಸಿದ್ದೇವೆ. ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಜನರಿಗೆ ಅರಿವು ಮೂಡಿಸುವಂತೆ ತಿಳಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Dengue fever: ಮಾರಕ ಡೆಂಗ್ಯು ಜ್ವರಕ್ಕೆ ಬಾಲಕಿ ಬಲಿ

Exit mobile version