ಬೆಂಗಳೂರು: ಡೆಂಗ್ಯು ಜ್ವರಕ್ಕೆ (Dengue Fever) ಅಡ್ಮಿಟ್ ಆದವರಿಗೆ, ಕೋವಿಡ್ (Covid 19) ಸಂದರ್ಭದಲ್ಲಿ ಯಾವ ರೀತಿ ಉಚಿತ ಚಿಕಿತ್ಸೆ ನೀಡಲಾಯಿತೋ ಅದೇ ರೀತಿ ಕನಿಷ್ಠ ಮಾನದಂಡದಲ್ಲಿ ಉಚಿತ ಚಿಕಿತ್ಸೆ ನೀಡಬೇಕು ಎಂದು ಬೆಂಗಳೂರು ಗ್ರಾಮಾಂತರ (Bangalore Rural) ಸಂಸದ ಡಾ. ಸಿಎನ್ ಮಂಜುನಾಥ್ (Dr CN Manjunath) ಹೇಳಿದ್ದಾರೆ.
ಇದು ಸರ್ಕಾರಕ್ಕೆ ನನ್ನ ಸಲಹೆ. ಡೆಂಗ್ಯೂ ಫಿವರ್ ನಿಯಂತ್ರಣ ಅಂದರೆ ಸೊಳ್ಳೆ ನಿಯಂತ್ರಣ. ಸೊಳ್ಳೆ ನಿಯಂತ್ರಣ ಆದರೆ ಮಾತ್ರ ಡೆಂಗ್ಯು ನಿಯಂತ್ರಣ ಆಗಲಿದೆ. ಮಳೆಗಾಲ ಪ್ರಾರಂಭದಲ್ಲಿ ಸೊಳ್ಳೆಯಿಂದ ಹರಡುವ ಕಾಯಿಲೆ ಬರುತ್ತದೆ. ಡೆಂಗ್ಯು ತಡೆಗಟ್ಟದಿದ್ರೆ ಚಿಕನ್ ಗುನ್ಯ, ಜೀಕಾ ವೈರಸ್ ಬರಬಹುದು. ಕೋವಿಡ್ ಪ್ಯಾಂಡಮಿಕ್ ಅಂದೆವು. ಡೆಂಗ್ಯು ಎಂಡಮಿಕ್ ಆಗಿದೆ. ಎಂಡೆಮಿಕ್ ಅಂದರೆ ರಾಜ್ಯಾದ್ಯಂತ ಹರಡಿರೋದು. ಇದಕ್ಕೆ ತುರ್ತು ಚಿಕಿತ್ಸೆ ಅಗತ್ಯವಿದೆ. ಮೆಡಿಕಲ್ ಎಮರ್ಜೆನ್ಸಿ ಘೋಷಣೆ ಮಾಡಬೇಕು ಎಂದು ಮಂಜುನಾಥ್ ಹೇಳಿದ್ದಾರೆ.
ಸರಕಾರ ಡೆಂಗ್ಯುಗೆ ದರ ನಿಗದಿ ಮಾಡಿದೆ. ಡಯೋಗ್ನಾಸಿಸ್‌ಗಳು ಹೆಚ್ಚು ವಸೂಲಿ ಮಾಡಿದರೆ, ಅವುಗಳ ಬಾಗಿಲು ಮುಚ್ಚಿಸಬೇಕು. ಡೆಂಗ್ಯು ಹರಡಲು ಕಾರಣ ಮಳೆಗಾಲದಲ್ಲಿ ನೀರು ನಿಲ್ಲೋದರಿಂದ. ಹಲವೆಡೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಅಲ್ಲಿ ಸೊಳ್ಳೆಗಳು ಉತ್ಪತ್ತಿ ಆಗುತ್ತಿವೆ. ಈಡಿಸ್ ಈಜಿಪ್ಟೈ ಸೊಳ್ಳೆಯಿಂದ ಕಾಯಿಲೆ ಹರಡುತ್ತಿದೆ. ರಾಜ್ಯದಲ್ಲಿ ಮೆಡಿಕಲ್ ಎಮರ್ಜೆನ್ಸಿ ಘೋಷಣೆ ಆಗಬೇಕು. ಪ್ರತ್ಯೇಕ ಟಾಸ್ಕ್ ಫೋರ್ಸ್ ರಚನೆ ಮಾಡಬೇಕು. ಮಳೆಗಾಲ ಆರಂಭವಾದ ಮೇಲೆ ಎಚ್ಚೆತ್ತುಕೊಂಡಿದ್ದಾರೆ. ಈಗ ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕಿದೆ. ಸರ್ಕಾರ ಮತ್ತು ಸಾರ್ವಜನಿಕರು ಇಬ್ಬರದ್ದೂ ಜವಾಬ್ದಾರಿ ಇದೆ ಎಂದು ಡಾ. ಮಂಜುನಾಥ್ ಎಚ್ಚರಿಸಿದ್ದಾರೆ.
ಡೆಂಗ್ಯು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರ್ತಿದೆ. ಶಾಲೆಗಳಿಗೆ ಸರ್ಕ್ಯೂಲರ್ ಹೊರಡಿಸಬೇಕು. ಮಕ್ಕಳಲ್ಲಿ ಆರೋಗ್ಯ ಹದಗೆಟ್ಟಿದ್ದರೆ ಕ್ರಮ ತೆಗೆದುಕೊಳ್ಳಬೇಕು. ಈಗಾಗಲೇ ಏಳೆಂಟು ಜನ ಸಾವನ್ನಪ್ಪಿದ್ದಾರೆ. ಸೊಳ್ಳೆ ನಿಯಂತ್ರಣ ಮಾಡೋದ್ರಲ್ಲಿ ಸರ್ಕಾರ ಎಡವಿದೆ. ಏನೇನೋ ಫ್ರೀ ಕೊಡ್ತೀವಿ, ಯಾವುದನ್ನೋ ಉಚಿತ ಕೊಡ್ತಿದ್ದಾರೆ. ಅದರ ಜೊತೆಗೆ ಸ್ಲಂಗಳಲ್ಲಿ, ವಠಾರದಲ್ಲಿ ವಾಸವಾಗಿದ್ದವರ ಮನೆಗೆ ಸೊಳ್ಳೆಪರದೆಯನ್ನು ಉಚಿತವಾಗಿ ನೀಡಬೇಕು. ಇದರಿಂದ ಬಹಳಷ್ಟು ರೋಗ ನಿಯಂತ್ರಣ ಆಗಲಿದೆ ಎಂದು ಮಂಜುನಾಥ್ ಸೂಚಿಸಿದ್ದಾರೆ.
ಡೆಂಗ್ಯು ಬಂದು ಮತ್ತೆ ಹುಷಾರಾಗುವಾಗ ಪ್ಲೇಟ್ ಲೆಟ್ಸ್ ಕಡಿಮೆ ಆಗುತ್ತೆ. ಜೊತೆಗೆ ದೇಹದಲ್ಲಿ ನೀರು ತುಂಬಿಕೊಳ್ಳುತ್ತದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವರ ಗಮನಕ್ಕೂ ನಾನು ತರಲಿದ್ದೇನೆ. ಅವಶ್ಯಕತೆ ಇರುವವರಿಗೆ ಮೊದಲೇ ಚಿಕಿತ್ಸೆ ನೀಡಬೇಕು. ಡೆಂಗ್ಯೂ ಕಾಯಿಲೆಗೆ ಬೇಕಾದ ಮಾತ್ರೆಗಳ ಕೊರತೆ ಕೂಡ ಎದುರಾಗಿದೆ. ವಾರ್ ರೂಮ್ ಮೂಲಕ ಮಾನಿಟರ್ ಮಾಡಬೇಕು. ಮುಂದುವರೆದ ದೇಶಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಕಾಯಿಲೆ ತಡೆದಿದ್ದಾರೆ. ಮಸ್ಕ್ಯೂಟೋ ರೆಪೆಲೆಂಟ್ಸ್ ಅಂತ ಸ್ಟಿಕರ್ ಬರುತ್ತಿದ್ದು. ಅದನ್ನ ಇಲ್ಲೂ ಹಾಕಬೇಕು. ಇದರಿಂದ ಮಕ್ಕಳಿಗೆ ಸೊಳ್ಳೆ ಕಡಿತ ತಪ್ಪಿಸಬಹುದು ಎಂದು ಅವರು ಹೇಳಿದರು.
ಜಪಾನ್, ಸಿಂಗಾಪುರ್, ಅಮೇರಿಕಾದಲ್ಲಿ ಡೆಂಗ್ಯೂ ಕಾಯಿಲೆಗೆ ಬೇಕಾದ ಮೆಡಿಸಿನ್ ಇದೆ. ಅವುಗಳನ್ನು ರಾಜ್ಯ ಸರ್ಕಾರ ತರಿಸಿಕೊಳ್ಳಬೇಕು. ಇಲ್ಲ ಅಲ್ಲಿ ನೀರು ನಿಲ್ಲೋದನ್ನ ತಡೆಗಟ್ಟಬೇಕು. ಸೊಳ್ಳೆ ನಿಯಂತ್ರಣ ಮಾಡಲು ಸ್ಪ್ರೇ ಮಾಡುವವರು ಕಾಣುತ್ತಿಲ್ಲ. ಬಿಬಿಎಂಪಿ ಎಚ್ಚೆತ್ತುಕೊಳ್ಳಬೇಕು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Dengue Fever: ಸಿಲಿಕಾನ್ ಸಿಟಿಯಲ್ಲಿ ಡೆಂಗ್ಯು ಜ್ವರಕ್ಕೆ ಬಾಲಕ ಬಲಿ, ರಾಜಧಾನಿಯಲ್ಲಿ 2ನೇ ಸಾವು