Site icon Vistara News

DK Shivakumar: ದೊಡ್ಡವರು ಚನ್ನಪಟ್ಟಣ ಜನರ ಸಮಸ್ಯೆ ಬಗೆಹರಿಸಿಲ್ಲ, ಹೀಗಾಗಿ ಬಂದಿದ್ದೇನೆ: ಎಚ್‌ಡಿಕೆಗೆ ಡಿಕೆಶಿ ತಿರುಗೇಟು

DK Shivakumar

ಚನ್ನಪಟ್ಟಣ: ಚನ್ನಪಟ್ಟಣದಲ್ಲಿ ಅಧಿಕಾರದಲ್ಲಿದ್ದ ದೊಡ್ಡವರು, ಅನುಭವಿ ನಾಯಕರು ಇಲ್ಲಿನ ಜನರ ಸಮಸ್ಯೆ ಬಗೆಹರಿಸುತ್ತಾರೆ ಎಂದು ನಾನು ಭಾವಿಸಿದ್ದೆ. ಆದರೆ ಸಮಸ್ಯೆ ಬಗೆಹರಿದಿಲ್ಲ. ಹೀಗಾಗಿ ನಾನು ಬಂದಿದ್ದೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು.

ಚನ್ನಪಟ್ಟಣ ಈಗ ನೆನಪಾಗಿದೆಯೇ ಎಂಬ ಕುಮಾರಸ್ವಾಮಿ ಅವರ ಟೀಕೆಗೆ ಚನ್ನಪಟ್ಟಣದಲ್ಲಿ ಸೋಮವಾರ ಆಯೋಜಿಸಿದ್ದ ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ ಕಾರ್ಯಕ್ರಮದ ಬಳಿಕ ಅವರು ಪ್ರತಿಕ್ರಿಯಿಸಿದ್ದಾರೆ.

ಇಷ್ಟು ದಿನ ಈ ಕ್ಷೇತ್ರ ಖಾಲಿ ಇರಲಿಲ್ಲ. ಇಲ್ಲಿ ಅನುಭವಿಗಳು ದೊಡ್ಡವರು ಇದ್ದರು. ಅವರು ಜನರ ಸಮಸ್ಯೆಗೆ ಸ್ಪಂದಿಸಿ, ಪರಿಹಾರ ನೀಡುತ್ತಾರೆ ಎಂದು ಭಾವಿಸಿದ್ದೆ. ಇತ್ತೀಚೆಗೆ ಅಧಿಕಾರಿಗಳ ಸಭೆ ಮಾಡಿದ ಬಳಿಕ ಪರಿಸ್ಥಿತಿ ತಿಳಿಯಿತು. ಇಲ್ಲಿ ಏನೂ ಆಗಿಲ್ಲ ಎಂಬುದು ನನ್ನ ಗಮನಕ್ಕೆ ಬಂದಿದೆ. ಅದಕ್ಕೆ ನಮ್ಮ ಶೈಲಿಯಲ್ಲಿ ನಾವು ಕಾರ್ಯಕ್ರಮ ಮಾಡುತ್ತಿದ್ದೇವೆ. ರಾಮನಗರ, ಕನಕಪುರ, ಬೆಂಗಳೂರಿನಲ್ಲೂ ಈ ಕಾರ್ಯಕ್ರಮ ಮಾಡಿದ್ದೇವೆ” ಎಂದು ತಿಳಿಸಿದರು.

ಮಾಧ್ಯಮಗಳನ್ನು ಹೊರಗಿಟ್ಟು ಸಭೆ ಮಾಡಿ ಅಧಿಕಾರಿಗಳನ್ನು ಎದುರಿಸಿದ್ದೀರಿ ಎಂದು ಆರೋಪ ಮಾಡುತ್ತಿದ್ದಾರೆ ಎಂದು ಕೇಳಿದಾಗ, “ಯಾರಿಗಾದರೂ ಬೆದರಿಕೆ ಹಾಕಿದ್ದರೆ ದೂರು ನೀಡಲಿ” ಎಂದು ತಿಳಿಸಿದರು.

ಇದನ್ನೂ ಓದಿ | Parliament Session 2024: ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದ ಎಚ್‌ಡಿಕೆ, ಶೋಭಾ ಕರಂದ್ಲಾಜೆ; Video ಇಲ್ಲಿದೆ

DK Suresh

ಮತದಾರರ ಪಟ್ಟಿಯಲ್ಲಿ ಬಿಟ್ಟುಹೋಗಿರುವ ಹೆಸರು ಸೇರ್ಪಡೆಗೆ ಸೂಚನೆ

ಹೊಸ ಮತದಾರರ ಸೇರ್ಪಡೆಗೆ ಸೂಚಿಸಿದ್ದೀರಾ ಎಂದು ಕೇಳಿದಾಗ, “ಲೋಕಸಭಾ ಚುನಾವಣೆ ಸಮಯದಲ್ಲಿ ಮುಸಲ್ಮಾನ ಸಮುದಾಯದವರ ಹೆಸರು ತೆಗೆದು ಹಾಕಲಾಗಿದೆ ಎಂದು ದೂರುಗಳು ಬಂದಿದ್ದವು. ಹೀಗಾಗಿ ಜಿಲ್ಲಾಧಿಕಾರಿಗಳಿಗೆ ಮತ್ತೆ ಈ ಮತದಾರರ ಮನೆಗೆ ಭೇಟಿ ನೀಡಿ ಅವರ ಹೆಸರನ್ನು ಮತ್ತೆ ಸೇರಿಸಲು ಸೂಚಿಸಿದ್ದೇನೆ. ಹೊರಗಿನಿಂದ ಬೇರೆಯವರನ್ನು ತಂದು ಇಲ್ಲಿನ ಮತದಾರರ ಪಟ್ಟಿಯಲ್ಲಿ ಸೇರಿಸಲು ಆಗುವುದಿಲ್ಲ. ಇಲ್ಲಿ ಹೊಸದಾಗಿ ಸೇರಿಸಬೇಕು ಎಂದರೆ ಹಳೇ ಬೇರೆ ಕಡೆ ಇರುವ ಮತದಾರರ ಹೆಸರನ್ನು ಅಳಿಸಬೇಕು. ಹೀಗಾಗಿ ಹೊಸ ತಂತ್ರಜ್ಞಾನದಲ್ಲಿ ಈ ರೀತಿ ಬೇರೆಯವರನ್ನು ತಂದು ಸೇರಿಸಲು ಆಗುವುದಿಲ್ಲ” ಎಂದು ತಿಳಿಸಿದರು.

ಡಿ.ಕೆ. ಶಿವಕುಮಾರ್ ಚುನಾವಣಾ ಅಕ್ರಮ ಮಾಡುತ್ತಿದ್ದು ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತೇನೆ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ಕೇವಲ ಪತ್ರ ಯಾಕೆ ಬರೆಯುತ್ತಾರೆ. ಚುನಾವಣಾ ಆಯೋಗದ ಕಚೇರಿಗೆ ಹಾಸಿಗೆ, ದಿಂಬು ತೆಗೆದುಕೊಂಡು ಹೋಗಿ ಮಲಗಲಿ” ಎಂದು ತಿಳಿಸಿದರು.

ಶಿವಕುಮಾರ್ ಅವರ ಚನ್ನಪಟ್ಟಣ ಪ್ರವೇಶ ಮೈತ್ರಿನಾಯಕರನ್ನು ಭಯ ಬೀಳಿಸಿದೆಯೇ ಎಂದು ಕೇಳಿದಾಗ, “ಅಲ್ಲಿ ದೊಡ್ಡ ದೊಡ್ಡ ನಾಯಕರು ಇದ್ದಾರೆ. ಹೀಗಾಗಿ ಅವರು ಭಯ ಯಾಕೆ ಬೀಳುತ್ತಾರೆ” ಎಂದರು.

ಕುಮಾರಸ್ವಾಮಿ ಅವರು ಶಾಸಕರಾಗಿ ಇಲ್ಲಿ ಕೆಲಸ ಮಾಡಿಲ್ಲವೇ ಎಂದು ಕೇಳಿದಾಗ, “ಅವರು ಕೆಲಸ ಮಾಡಿದ್ದಾರೋ ಇಲ್ಲವೋ ಎಂದು ಜನ ತೀರ್ಮಾನ ಮಾಡುತ್ತಾರೆ” ಎಂದು ತಿಳಿಸಿದರು.

ಪಕ್ಷದಲ್ಲಿ ಮೂವರು ಡಿಸಿಎಂ ಹುದ್ದೆ ಬೇಡಿಕೆ ಬಗ್ಗೆ ಕೇಳಿದಾಗ, “ಆ ಬಗ್ಗೆ ಪಕ್ಷದ ಹೈಕಮಾಂಡ್ ನಾಯಕರು ತೀರ್ಮಾನ ಮಾಡುತ್ತಾರೆ” ಎಂದು ತಿಳಿಸಿದರು.

ಜನರು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ತೀರ್ಮಾನ

ಉಪಚುನಾವಣೆಗೆ ಸಚಿವ ಚೆಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಸಮಿತಿ ರಚನೆ ಬಗ್ಗೆ ಕೇಳಿದಾಗ, “ಪಕ್ಷದಲ್ಲಿ ಒಂದು ಪದ್ಧತಿ ಇರುತ್ತದೆ. ಮತದಾರರು ಹಾಗು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುತ್ತೇವೆ. ನಂತರ ನಾನು, ಮುಖ್ಯಮಂತ್ರಿಗಳು ಹಾಗೂ ಪ್ರದಾನ ಕಾರ್ಯದರ್ಶಿಗಳು ಕೂತು ಚರ್ಚೆ ಮಾಡುತ್ತೇವೆ. ನಮ್ಮ ಪಕ್ಷದ ಚುನಾವಣಾ ಸಮಿತಿಯೂ ಚರ್ಚೆ ಮಾಡಿ ಯಾರು ಸ್ಪರ್ಧೆ ಮಾಡಬೇಕು ಎಂದು ತೀರ್ಮಾನ ಕೈಗೊಳ್ಳುತ್ತದೆ” ಎಂದು ತಿಳಿಸಿದರು.

ಸಮಿತಿ ನಿಮ್ಮ ಹೆಸರು ಸೂಚಿಸಿದರೆ ನೀವು ಸ್ಪರ್ಧೆ ಮಾಡುತ್ತೀರಾ ಎಂದು ಕೇಳಿದಾಗ, “ಪಕ್ಷ ಹೇಳಿದಂತೆ ನಾವು ಕೇಳಬೇಕು” ಎಂದು ತಿಳಿಸಿದರು.”

ಕನಕಪುರದ ಹೆದರಿಕೆ, ಬೆದರಿಕೆ, ಭ್ರಷ್ಟಾಚಾರದ ಮಾದರಿ ನಮಗೆ ಬೇಡ ಎಂಬ ಯೋಗೇಶ್ವರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಕನಕಪುರದಲ್ಲಿ ಭ್ರಷ್ಟಾಚಾರದ ಬಗ್ಗೆ ಏನಾದರೂ ದೂರು ಬಂದಿದೆಯೇ?” ಎಂದು ಕೇಳಿದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಲೋಕಸಭಾ ಚುನಾವಣೆ ಫಲಿತಾಂಶದ ಬಗ್ಗೆ ಕೇಳಿದಾಗ, “ಜನ ನಮಗೆ ತಿದ್ದಿಕೊಳ್ಳಲು ಅವಕಾಶ ನೀಡಿದ್ದಾರೆ. ಸುರೇಶ್ ಅವರಿಗೆ ವಿಶ್ರಾಂತಿ ಪಡೆಯಲು ಹೇಳಿದ್ದಾರೆ. ನೂತನ ಸಂಸದರಾಗಿ ಆಯ್ಕೆಯಾಗಿರುವ ಡಾ.ಮಂಜುನಾಥ್ ಅವರು ಸುರೇಶ್ ಅವರಿಗಿಂತ ಹೆಚ್ಚಿನ ಕೆಲಸ ಮಾಡಲಿ” ಎಂದರು.

ಸುರೇಶ್ ಅವರು ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದು, ಪಕ್ಷ ಅವರನ್ನು ಸ್ಪರ್ಧಿಸಲು ಸೂಚಿಸಿದರೆ ಅವರು ನಿಲ್ಲುತ್ತಾರಾ ಎಂದು ಕೇಳಿದಾಗ, “ಪಕ್ಷ ಹೇಳಿದರೆ ನಾನಾಗಲಿ, ಸುರೇಶ್ ಆಗಲಿ ಕೇಳಬೇಕು. ಸುರೇಶ್ ಅವರಿಗೆ ಸಂಸತ್ ಚುನಾವಣೆಗೂ ಸ್ಪರ್ಧೆ ಮಾಡುವ ಆಸಕ್ತಿ ಇರಲಿಲ್ಲ. ಕಾರ್ಯಕರ್ತರ ಒತ್ತಾಯದ ಮೇರೆಗೆ ಅವರು ಸ್ಪರ್ಧೆ ಮಾಡಿದ್ದಾರೆ. ಅವರು ಎಂದಿಗೂ ಅಧಿಕಾರಕ್ಕೆ ಆಸೆ ಪಟ್ಟವರಲ್ಲ” ಎಂದು ತಿಳಿಸಿದರು.

ಕುಮಾರಸ್ವಾಮಿ ಅವರು ನಿನ್ನೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿರುವ ಬಗ್ಗೆ ಕೇಳಿದಾಗ, “ಬಹಳ ಸಂತೋಷ, ಅವರಿಗೆ ಒಳ್ಳೆಯದಾಗಲಿ” ಎಂದು ತಿಳಿಸಿದರು.

ರಾಮನಗರ ಅಭಿವೃದ್ಧಿ ಮಾಡಿದ್ದು ನಾನು, ಅವರು ಕಲ್ಲು ಹೊಡೆಯುತ್ತಿದ್ದರು ಎಂಬ ಕುಮಾರಸ್ವಾಮಿ ಟೀಕೆ ಬಗ್ಗೆ ಕೇಳಿದಾಗ, “ಹೌದು, ಕಲ್ಲು ಒಡೆಯುತ್ತಿದ್ದೇವೆ. ಈಗಲೂ ಒಡೆಯುತ್ತಿದ್ದೇವೆ” ಎಂದು ಲೇವಡಿ ಮಾಡಿದರು.

ನಮ್ಮನ್ನು ಸ್ಮರಿಸದಿದ್ದರೆ ಕುಮಾರಸ್ವಾಮಿ ರಾಜಕಾರಣ ನಡೆಯಲ್ಲ: ಡಿ.ಕೆ. ಸುರೇಶ್

DK Suresh

ಬೆಂಗಳೂರು: “ಡಿ.ಕೆ. ಶಿವಕುಮಾರ್ ಹಾಗು ನನ್ನನ್ನು ಸ್ಮರಿಸದಿದ್ದರೆ ಕುಮಾರಸ್ವಾಮಿ ಅವರ ರಾಜಕಾರಣ ಹಾಗು ದಿನಚರಿ ನಡೆಯಲ್ಲ” ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ವಾಗ್ದಾಳಿ ನಡೆಸಿದರು.

ಸದಾಶಿವನಗರ ನಿವಾಸದ ಬಳಿ ಡಿ.ಕೆ. ಸುರೇಶ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು. ಡಿ.ಕೆ. ಸಹೋದರರ ಗುಲಾಮರಾಗಬೇಡಿ ಎಂದು ಕುಮಾರಸ್ವಾಮಿ ಅವರು ಚನ್ನಪಟ್ಟಣದ ಅಧಿಕಾರಿಗಳಿಗೆ ತಿಳಿಸಿರುವ ಬಗ್ಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅವರು ಪ್ರತಿ ವಿಚಾರದಲ್ಲೂ ನಮ್ಮ ಹೆಸರನ್ನು ಎಳೆದುತರುತ್ತಾರೆ. ಚನ್ನಪಟ್ಟಣ ತ್ಯಜಿಸಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದಾರೆ. ಅವರು ಚನ್ನಪಟ್ಟಣದಲ್ಲಿ ಮಾಡಿರುವ ಕೆಲಸ ಕಾರ್ಯಗಳ ಬಗ್ಗೆ, ಸಭೆಗಳ ಬಗ್ಗೆ ಮಾಧ್ಯಮಗಳಲ್ಲಿ ದಾಖಲೆಗಳಿವೆ. ಅವರು ಚನ್ನಪಟ್ಟಣ ಎಷ್ಟು ಬಾರಿ ಬಂದಿದ್ದಾರೆ ಎಂಬ ದಾಖಲೆ ನಿಮ್ಮ ಬಳಿ ಇದೆ. ನೀವೇ ಪರಿಶೀಲನೆ ಮಾಡಿ ಜನರ ಮುಂದೆ ಇಡಿ” ಎಂದು ಮನವಿ ಮಾಡಿದರು.

ಸುಳ್ಳು ಹೇಳಿ ದಾರಿತಪ್ಪಿಸುವುದನ್ನು ಕಡಿಮೆ ಮಾಡಲಿ

ಮುಂದೆ ನಮ್ಮ ಸರ್ಕಾರ ಬರುತ್ತದೆ ಎಂದು ಅಧಿಕಾರಿಗಳಿಗೆ ಬೆದರಿಸಿರುವ ಬಗ್ಗೆ ಕೇಳಿದಾಗ, “ಜನ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಆಶೀರ್ವಾದ ಮಾಡಿದ್ದು ಕುಮಾರಸ್ವಾಮಿ ಅವರು ಕೇಂದ್ರ ಮಂತ್ರಿಯಾಗಿದ್ದಾರೆ. ಅವರು ಜನರನ್ನು ಹಾಗು ಅಧಿಕಾರಿಗಳನ್ನು ಮೊದಲಿನಿಂದಲೂ ಬೆದರಿಸಿಕೊಂಡು ಬಂದಿದ್ದು, ಈಗಲೂ ಅದನ್ನೇ ಮಾಡುತ್ತಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ. ಅವರು ಸುಳ್ಳು ಹೇಳಿ ಜನರ ದಾರಿತಪ್ಪಿಸುವುದನ್ನು ಕಡಿಮೆ ಮಾಡಿಕೊಳ್ಳಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ” ಎಂದು ತಿಳಿಸಿದರು.

ಜನರ ತೀರ್ಮಾನದಂತೆ ಉಪಚುನಾವಣೆ ಅಭ್ಯರ್ಥಿ

ಚನ್ನಪಟ್ಟಣ ಉಪಚುನಾವಣೆಯಲ್ಲಿ ಯಾರು ಅಭ್ಯರ್ಥಿಯಾಗಬೇಕು ಎಂದು ಕೇಳಿದಾಗ, “ಜನ ಯಾರನ್ನು ಬಯಸುತ್ತಾರೋ ಅವರು ಸ್ಪರ್ಧಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ತೀರ್ಪು ಅಂತಿಮ. ಅವರ ಸೂಚನೆಯಂತೆ ಪಕ್ಷ ನಡೆಯುತ್ತದೆ. ರಾಮನಗರ ಜಿಲ್ಲೆ ನಮ್ಮ ಸ್ವಂತ ಜಿಲ್ಲೆ. ಪಕ್ಷದ ಅಧ್ಯಕ್ಷರಾಗಿ, ಉಪಮುಖ್ಯಮಂತ್ರಿಯಾಗಿ ಶಿವಕುಮಾರ್ ಅವರ ಮೇಲೆ ಜವಾಬ್ದಾರಿ ಇದೆ. ಕ್ಷೇತ್ರದಲ್ಲಿ ಶಾಸಕರು ಇಲ್ಲದ ಕಾರಣ ಶಿವಕುಮಾರ್ ಅವರು ಜನರ ಸಮಸ್ಯೆ ಆಲಿಸುತ್ತಿದ್ದಾರೆ. ಜನ ಕೂಡ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾರೆ” ಎಂದು ತಿಳಿಸಿದರು.

ನಿಮ್ಮ ಮುಂದಿನ ನಡೆ ಏನು ಎಂದು ಕೇಳಿದಾಗ, “ಸಾಮಾನ್ಯ ಕಾರ್ಯಕರ್ತನಾಗಿ, ಕ್ಷೇತ್ರದ ಜನರ ಕಷ್ಟಸುಖ ಕೇಳುತ್ತಾ, ರಾಜ್ಯದ ಹಿತದೃಷ್ಟಿಯಿಂದ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ” ಎಂದು ತಿಳಿಸಿದರು.

ಸೋತು ಒಂದು ತಿಂಗಳೂ ಆಗಿಲ್ಲ, ಮತ್ತೆ ಸ್ಪರ್ಧೆ ಮಾಡಿದರೆ ಜನ ನಗುತ್ತಾರೆ

ಚನ್ನಪಟ್ಟಣದಲ್ಲಿ ಸುರೇಶ್ ಅವರು ಸ್ಪರ್ಧೆ ಮಾಡುವುದಿಲ್ಲವೇ ಎಂದು ಕೇಳಿದಾಗ, “ಜನ ನನ್ನನ್ನು ತಿರಸ್ಕಾರ ಮಾಡಿದ್ದಾರೆ. ನಾನು ಸೋತು ಇನ್ನು ಒಂದು ತಿಂಗಳೂ ಕಳೆದಿಲ್ಲ. ಮತ್ತೆ ಚುನಾವಣೆ ಸ್ಪರ್ಧೆ ಮಾಡಿದರೆ ಜನ ನಗುತ್ತಾರೆ. ಜನ ಹೇಳಬಹುದು. ಆದರೆ ಸ್ಪರ್ಧಿಸುವ ಮನಸ್ಥಿತಿ ನಮಗೂ ಇರಬೇಕು. ಜನ ನನಗೆ ವಿಶ್ರಾಂತಿ ಪಡೆಯಲು ಹೇಳಿದ್ದು, ಬೇರೆಯವರಿಗೆ ಕೆಲಸ ಮಾಡಲು ಹೇಳಿದ್ದಾರೆ. ಬೇರೆಯವರು ಕೆಲಸ ಮಾಡಲಿ, ನಾವು ಅವರಿಗೆ ಸಹಕಾರ ನೀಡುತ್ತೇವೆ. ಚನ್ನಪಟ್ಟಣದ ಜನ ನಮ್ಮ ಸ್ವಂತ ಜನ. ಮೊದಲಿಂದಲೂ ಅವರ ಜತೆ ಒಡನಾಟವಿದೆ. ವಿಶೇಷವಾಗಿ ಲೋಕಸಭೆಯಲ್ಲಿ ಈ ಜನ ಉತ್ತಮ ಬೆಂಬಲ ನೀಡಿದ್ದಾರೆ. ಚನ್ನಪಟ್ಟಣದಲ್ಲಿ ಪಕ್ಷಕ್ಕೆ ನೆಲೆ ಇದೆ. ಆದರೆ ಅಧಿಕಾರದ ಆಸೆಗೆ ಪಕ್ಷಾಂತರ ಮಾಡಿದ ಪರಿಣಾಮ ನಮಗೆ ಹಿನ್ನಡೆ ಆಗುತ್ತಿತ್ತು” ಎಂದು ತಿಳಿಸಿದರು.

ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡಿದರೆ ತಪ್ಪಾಗುತ್ತದೆ

ಸೂರಜ್ ರೇವಣ್ಣ ಅವರ ಪ್ರಕರಣದ ಬಗ್ಗೆ ಕೇಳಿದಾಗ, “ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ವಿಚಾರ. ಅವರ ಬಗ್ಗೆ ನಾವು ಮಾತನಾಡಿದರೆ ತಪ್ಪಾಗುತ್ತದೆ. ಹೀಗಾಗಿ ನೀವು ಮಾತನಾಡಬೇಡಿ. ರಾಜ್ಯದ ಜನ ಗಮನಿಸುತ್ತಿದ್ದು, ಕಾನೂನು ಕ್ರಮ ಕೈಗೊಳ್ಳಲಿದೆ” ಎಂದು ತಿಳಿಸಿದರು.

ಇದನ್ನೂ ಓದಿ | LKG UKG in Anganwadis: ಅಂಗನವಾಡಿಗಳಲ್ಲೇ ಎಲ್‌ಕೆಜಿ, ಯುಕೆಜಿ ಆರಂಭಿಸಲು ಸಿಎಂ ಸಹಮತ

ಷಡ್ಯಂತ್ರಕ್ಕೆ ಹೆದರಲ್ಲ, ಓಡಿಹೋಗಲ್ಲ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ಯಾವ ಕಾರಣಕ್ಕೆ, ಯಾರನ್ನು ಉದ್ದೇಶಿಸಿ ಹೇಳಿದ್ದಾರೆ ಗೊತ್ತಿಲ್ಲ. ಅವರ ರಕ್ಷಣೆಗಾಗಿ ಬೇರೆಯವರ ಮೇಲೆ ಹೇಳುವುದು ಅಭ್ಯಾಸವಾಗಿದೆ. ಬೇರೆಯವರ ಹೆಸರು ಹೇಳಿ ತಾವು ರಕ್ಷಣೆ ಪಡೆಯುವ ಕೆಲಸ ಮಾಡುತ್ತಿದ್ದಾರೆ” ಎಂದು ತಿಳಿಸಿದರು.

Exit mobile version